ಯಾವುದೇ ರೋಗ ಹೇಳಿಕೇಳಿ ಬರೋದಿಲ್ಲ. ಆದ್ರೆ ಕೆಲ ರೋಗಕ್ಕೆ ನಾವೇ ಮುಖ್ಯ ಕಾರಣವಾಗಿರ್ತೇವೆ. ನಮ್ಮ ಅಭ್ಯಾಸ ಹಾಗೂ ನಿರ್ಲಕ್ಷ್ಯ ಸಾವಿನಂಚಿಗೆ ತಂದು ನಿಲ್ಲಿಸಿರುತ್ತದೆ. ಈ ಮಧ್ಯೆ ನಮ್ಮ ಆರೋಗ್ಯಕ್ಕೆ ನಮ್ಮ ಬ್ಲಡ್ ಗ್ರೂಪ್ ಕೂಡ ಮುಖ್ಯ ಕಾರಣ.
ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆ (Disease) ಗಳಲ್ಲಿ ಕ್ಯಾನ್ಸರ್ (Cancer) ಒಂದು. ಈ ಗಂಭೀರ ಕಾಯಿಲೆಯಿಂದ ಪ್ರತಿ ವರ್ಷ ಲಕ್ಷಾಂತರ ಜನರು (People ) ಸಾಯ್ತಿದ್ದಾರೆ. 2020 ರಲ್ಲಿ ವಿವಿಧ ರೀತಿಯ ಕ್ಯಾನ್ಸರ್‌ನಿಂದ 10 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರೋಗವನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚದಿರುವುದು ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ (Treatment ) ಸಿಗದೆ ಹೋಗುವುದು ಸಾವಿಗೆ ಮುಖ್ಯ ಕಾರಣವಾಗ್ತಿದೆ.
ದುರದೃಷ್ಟವಶಾತ್ ಭಾರತ (India) ದಲ್ಲಿ ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು, ಕೊನೆಯ ಹಂತದಲ್ಲಿ ಪತ್ತೆಯಾಗ್ತಿವೆ. ಇದೇ ದೇಶದಲ್ಲಿ ಕ್ಯಾನ್ಸರ್ ರೋಗಿಗಳು ಸಾಯಲು ಮುಖ್ಯ ಕಾರಣವಾಗ್ತಿದೆ. ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ (Pancreatic Cancer) ಸದ್ಯ ವೇಗವಾಗಿ ಬೆಳೆಯುತ್ತಿದೆ. ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಗುರುತಿಸಿದ ನಂತ್ರ ಬದುಕುಳಿಯುವ ಅವಧಿ ಸಾಮಾನ್ಯವಾಗಿ ಐದು ವರ್ಷಗಳು ಎನ್ನುತ್ತಾರೆ ತಜ್ಞರು. ಸಕಾಲಿಕ ಪತ್ತೆಯ ಕೊರತೆಯೇ ಈ ಕ್ಯಾನ್ಸರ್ ನಿಂದ ಆಗ್ತಿರುವ ಸಾವಿಗೆ ಕಾರಣ. ಅಧ್ಯಯನವೊಂದರಲ್ಲಿ ರಕ್ತದ ಗುಂಪಿನ ಆಧಾರದ ಮೇಲೆ ಈ ಗಂಭೀರ ಖಾಯಿಲೆಯ ಸ್ಥಿತಿ ಕಂಡುಹಿಡಿಯಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ನಿಮ್ಮ ರಕ್ತದ ಗುಂಪಿನ ಆಧಾರದ ಮೇಲೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯ ಎಷ್ಟು ಎಂದು ಹೇಳಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಕ್ಯಾನ್ಸರ್ಗೆ ಅನೇಕ ಕಾರಣವಿದೆ. ತಂಬಾಕು-ಮದ್ಯ ಸೇವನೆ, ಅನಾರೋಗ್ಯಕರ ಆಹಾರ, ದೈಹಿಕ ನಿಷ್ಕ್ರಿಯತೆ ಮತ್ತು ವಾಯು ಮಾಲಿನ್ಯವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಂತೆಯೇ ಕೆಲವು ರಕ್ತ ಗುಂಪುಗಳನ್ನು ಹೊಂದಿರುವ ಜನರಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ.
ವಯಸ್ಸು 40, ಗಂಡಸು, ಸೆಕ್ಸ್‌ನಲ್ಲಿ ಅನಾಸಕ್ತಿ, ಆಯಾಸ, ಇದ್ಯಾವುದರ ಲಕ್ಷಣ?
ಈ ರಕ್ತದ ಗುಂಪಿನವರಿಗೆ ಕ್ಯಾನ್ಸರ್ ಅಪಾಯ : PLOS One ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆ ವರದಿಯಲ್ಲಿ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ರಕ್ತದ ಗುಂಪು-ಎಗೆ ಹೋಲಿಸಿದರೆ ಬಿ ರಕ್ತದ ಗುಂಪಿನ ಜನರಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್‌ನ ಅಪಾಯವು ಕಡಿಮೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
ಮತ್ತೊಂದು ಸಂಶೋಧನೆಯಲ್ಲಿ, ಇತರ ರಕ್ತದ ಗುಂಪಿನ ಜನರಿಗಿಂತ B ರಕ್ತದ ಗುಂಪು ಹೊಂದಿರುವ ಜನರು ಕೊಲೊನ್ ಮತ್ತು ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಹೊಂದಿದ್ದಾರೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕೆಲವು ಅಧ್ಯಯನಗಳಲ್ಲಿ O ರಕ್ತದ ಗುಂಪಿನ ಜನರು ಅನೇಕ ರೀತಿಯ ಕ್ಯಾನ್ಸರ್ ಅಪಾಯಗಳಿಂದ ರಕ್ಷಿಸಲ್ಪಡುತ್ತಾರೆಂದು ಹೇಳಲಾಗಿದೆ.
HEALTH TIPS: ಮಾವಿನ ಹಣ್ಣಿನ ಸಿಪ್ಪೆಯೂ ಬೇಕು ದೇಹಕ್ಕೆ, ವಿಷವಿರಾಬರಷ್ಟೇ!
ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವನ್ನು ತಿಳಿಯಲು ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳ ಪ್ರಕಾರ, O ರಕ್ತದ ಗುಂಪು ಹೊಂದಿರುವ ಜನರು ಈ ರೀತಿಯ ಕ್ಯಾನ್ಸರ್‌ನಿಂದ ಹೆಚ್ಚು ಸುರಕ್ಷಿತವೆಂದು ಪರಿಗಣಿಸಬಹುದು. ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳಲ್ಲಿ, O ರಕ್ತದ ಗುಂಪಿನವರಿಗಿಂತ A, B ಅಥವಾ AB ರಕ್ತದ ಗುಂಪುಗಳನ್ನು ಹೊಂದಿರುವ ಜನರು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಹೇಳಿದ್ದಾರೆ. ಅಧ್ಯಯನದ ಪ್ರಕಾರ, ಟೈಪ್ ಎ ಹೊಂದಿರುವ ಜನರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಶೇಕಡಾ 32ರಷ್ಟಿದ್ದರೆ ಎಬಿ ಹೊಂದಿರುವ ಜನರು ಶೇಕಡಾ 51 ಮತ್ತು ಟೈಪ್ ಬಿ ಹೊಂದಿರುವ ಜನರು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಶೇಕಡಾ 72ರಷ್ಟಿರುತ್ತದೆ. ಆದ್ರೆ ಇದು ಎಲ್ಲ ಸಮಯದಲ್ಲಿಯೂ ಅನ್ವಯಿಸುವುದಿಲ್ಲ. ಆರೋಗ್ಯ ಮತ್ತು ಪ್ರಾದೇಶಿಕ ವೈವಿದ್ಯತೆಯೂ ಇದರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ರೋಗ ಲಕ್ಷಣ ಕಂಡು ಬಂದ್ರೂ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯೋದು ಉತ್ತಮ.