Health Tips: ಸದಾಕಾಲ ಓವರ್ ಟೈಮ್ ಕೆಲ್ಸ ಮಾಡ್ತೀರಾ? ಆರೋಗ್ಯಕ್ಕೆ ದುಬಾರಿಯಾಗ್ಬೋದು ಎಚ್ಚರ

By Suvarna News  |  First Published Jul 29, 2023, 6:08 PM IST

ಓವರ್ ಟೈಮ್ ಕೆಲಸ ಮಾಡುವ ಅಭ್ಯಾಸ ನಿಮಗಿದ್ದರೆ ಅದರಿಂದ ಆರೋಗ್ಯದ ಮೇಲೆ ಭಾರೀ ಪರಿಣಾಮ ಉಂಟಾಗುವ ಅಪಾಯ ಹೆಚ್ಚು. ನಿರಂತರವಾಗಿ ಓವರ್ ಟೈಮ್ ಕೆಲಸ ಮಾಡುವುದರಿಂದ ಜೀವನ ನಿರ್ವಹಣೆ ಸುಲಭವಾಗುವುದಕ್ಕಿಂತ ಹೆಚ್ಚಾಗಿ ಕಷ್ಟವಾಗಿಬಿಡಬಹುದು.
 


ಜೀವನ ನಿರ್ವಹಣೆಗೆ ಉದ್ಯೋಗ ಮಾಡುವುದು ಅಗತ್ಯ. ಜೀವನದ ಅಗತ್ಯಗಳ ಪೂರೈಕೆಗೆ ಎಷ್ಟು ದುಡಿದರೂ ಸಾಲುವುದಿಲ್ಲ ಎನ್ನುವುದೂ ಸತ್ಯ. ಈಗಂತೂ ಎಲ್ಲ ಬೆಲೆಗಳಲ್ಲಿ ಏರಿಕೆಯಾಗಿದೆ. ಅಕ್ಕಿ, ಧಾನ್ಯ, ಬೇಳೆಕಾಳು, ಎಣ್ಣೆ ಸೇರಿದಂತೆ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಈ ಸಮಯದಲ್ಲಂತೂ ಉದ್ಯೋಗದಿಂದ ದೊರೆಯುವ ಸಂಬಳ ಸಂಸಾರದ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೆ ಸಾಲದು ಎನ್ನುವಂತಿರುವುದು ಸಹಜ. ಹೀಗಾಗಿ ನೀವು ಕಚೇರಿಯಲ್ಲಿ ಓವರ್ ಟೈಮ್ ಕೆಲಸ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದೀರಾ? ಬೆಳಗಿನಿಂದ ಸಂಜೆಯವರೆಗೆ ಹಾಗೂ ಸಂಜೆಯಿಂದ ರಾತ್ರಿಯವರೆಗೆ ಕೆಲಸ ಮಾಡುವುದು ನಿಮ್ಮ ಅಭ್ಯಾಸವಾ? ಅದರಿಂದ ದೊರೆಯುವ ಹೆಚ್ಚುವರಿ ಹಣ ನಿಮ್ಮ ಜೀವನಕ್ಕೆ ಅಗತ್ಯ ಎಂದು ಹೀಗೆ ಮಾಡುತ್ತಿರುವುದಾ ಅಥವಾ ಹೆಚ್ಚು ಜವಾಬ್ದಾರಿ ವಹಿಸಿಕೊಂಡು ದಿನವಿಡೀ ಕಚೇರಿಯಲ್ಲಿ ಕಳೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೀರಾ? ಏನೇ ಆದರೂ ಇದರಿಂದ ನಿಮ್ಮ ಆರೋಗ್ಯ ಹದಗೆಡುವುದು ನಿಶ್ಚಿತ. ಪ್ರತಿದಿನವೂ ಓವರ್ ಟೈಮ್ ಕೆಲಸ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಅಲ್ಲದೆ, ಕೆಲವು ವೃತ್ತಿಗಳೂ ಸಹ ಅಧಿಕ ಸಮಯದ ಕೆಲಸವನ್ನು ಹೊಂದಿರುತ್ತವೆ. ಆದರೂ ಆರೋಗ್ಯದ ದೃಷ್ಟಿಯಿಂದ ಹೇಗಾದರೂ ಮ್ಯಾನೇಜ್ ಮಾಡಿಕೊಳ್ಳುವುದೇ ಪರಿಹಾರ. 

ಡಬಲ್ ಶಿಫ್ಟ್ ನಲ್ಲಿ ಕೆಲಸ ಮಾಡುವವರಿಗೆ ಸೂರ್ಯನ ಕಿರಣಗಳ ಸಂಪರ್ಕವೇ ಇಲ್ಲದಂತಾಗುತ್ತದೆ. ಬೆಳಗಿನಿಂದ ಸಂಜೆಯವರೆಗೆ ಕೆಲಸ ಮಾಡುವವರಿಗೂ ಇದೇ ಕತೆಯಾದರೂ ಪ್ರಯತ್ನಿಸಿದರೆ ಬೆಳಗಿನ ಸೂರ್ಯರಶ್ಮಿಗೆ ದೇಹವನ್ನು ಒಡ್ಡಲು ಸ್ವಲ್ಪವಾದರೂ ಸಮಯವಿರುತ್ತದೆ. ಆದರೆ, ಎರಡು ಶಿಫ್ಟ್ ಗಳ ಕೆಲಸ ಮಾಡುತ್ತಿದ್ದರೆ ಸಹಜವಾಗಿ ಬೆಳಗ್ಗೆ ಏಳಲು ತಡವಾಗಿ ಯಾವುದೇ ಕಾರಣಕ್ಕೂ ವಾತಾವರಣದ ಸಂಪರ್ಕ ಲಭ್ಯವಾಗುವುದಿಲ್ಲ. ಇಂತಹ ಜನ ಸುಲಭವಾಗಿ ರೋಗಗಳಿಗೆ ತುತ್ತಾಗುತ್ತಾರೆ. ಇವರ ಜೀರ್ಣಕ್ರಿಯೆಯೂ ಮಂದವಾಗಿರುತ್ತದೆ.

Latest Videos

undefined

ಹೊಸ ಬಟ್ಟೆ ಕೊಂಡು ತೊಳೆಯದೇ ಬಳಸೋ ಅಭ್ಯಾಸ ಸರೀನಾ?

ರೋಗಗಳಿಗೆ ತುತ್ತಾಗುವ ಅಪಾಯ 
ಅಧಿಕ ಸಮಯ (Over Time) ಕೆಲಸ (Work) ಮಾಡುವವರ ದೇಹದ ಬಯಾಲಾಜಿಕಲ್ ಕ್ಲಾಕ್ (Biological Clock) ನಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದ ನಿದ್ರೆಗೆ (Sleep) ಸಂಬಂಧಿಸಿದ ಸಮಸ್ಯೆಗಳೂ ಆರಂಭವಾಗುತ್ತವೆ. ಇದರಿಂದಲೂ ರೋಗಗಳಿಗೆ (Disease) ತುತ್ತಾಗುವ ಅಪಾಯ ಹೆಚ್ಚುತ್ತದೆ. 

ದೈಹಿಕ ನೋವು
ಕಚೇರಿಯಲ್ಲಿ (Office) ಹೆಚ್ಚು ಸಮಯ ಕಳೆಯುವ ಜನರಿಗೆ ಸೊಂಟ ಮತ್ತು ಬೆನ್ನು ನೋವು ಹೆಚ್ಚು ಎನ್ನುವುದು ಈಗಾಗಲೇ ಸಾಬೀತಾಗಿರುವ ಸಂಗತಿ. ದಿನವಿಡೀ ಕುಳಿತುಕೊಂಡೇ ಮಾಡುವ ಕೆಲಸದಿಂದಾಗಿ ಒಂದೇ ಭಂಗಿಯಲ್ಲಿ ಕುಳಿತುಕೊಂಡು ಬೆನ್ನುಮೂಳೆಯ ಮೇಲೆ ಭಾರೀ ಪರಿಣಾಮ ಉಂಟಾಗುತ್ತದೆ. ಮಾಂಸಖಂಡಗಳು (Muscles) ಬಿರುಸಾಗುತ್ತವೆ. ಇದರಿಂದಲೂ ನೋವು (Pain) ಕಂಡುಬರುತ್ತದೆ. ಅತ್ತಿತ್ತ ಓಡಾಡುವುದು, ನಿಂತುಕೊಂಡು ಕೆಲಸ ಮಾಡುವವರಾಗಿದ್ದರೂ ಅಧಿಕ ಸಮಯದ ಕಾರ್ಯ ದೇಹಕ್ಕೆ (Body) ಹೊರೆಯಾಗುತ್ತದೆ.

ದೌರ್ಬಲ್ಯ
ದಿನದಲ್ಲಿ ಒಂದೇ ಶಿಫ್ಟ್ (Shift) ಕೆಲಸ ಮಾಡುವವರಿಗಿಂತ ಹೆಚ್ಚು ಸಮಯ ಕೆಲಸ ಮಾಡುವವರಲ್ಲಿ ಸಹಜವಾಗಿ ಸುಸ್ತು ಹೆಚ್ಚು. ಕ್ರಮೇಣ ಇವರಲ್ಲಿ ವಿವಿಧ ರೀತಿಯ ದೌರ್ಬಲ್ಯ (Weakness) ಕಾಣಿಸಿಕೊಳ್ಳುತ್ತದೆ. ಇದರಿಂದ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಉಂಟಾಗುತ್ತದೆ. 
ದೈಹಿಕ ಚಟುವಟಿಕೆ (Physical Activity) ಕುಂಠಿತವಾಗುವುದು ಅಥವಾ ಅತಿಯಾದ ಚಟುವಟಿಕೆ ಎರಡೂ ದೇಹಕ್ಕೆ ಹಾನಿ ತರುತ್ತದೆ. ದಿನದ ಬಹುತೇಕ ಸಮಯ ಕುಳಿತುಕೊಂಡು ಕೆಲಸ ಮಾಡುವವರಲ್ಲಿ ಮಧುಮೇಹದ (Diabetes) ಸಮಸ್ಯೆ ಹೆಚ್ಚು. ಹಾಗೆಯೇ ಬೊಜ್ಜು ಉಂಟಾಗಬಹುದು, ಕ್ರಮೇಣ ಅಧಿಕ ರಕ್ತದೊತ್ತಡವೂ ಕಂಡುಬರಬಹುದು.

Health Tips: ಅಕ್ಕಿಯಿಂದ ತೂಕ ಹೆಚ್ಚುವ ಭಯ ಬೇಡ್ವೇ ಬೇಡ: ಕೆಂಪಕ್ಕಿ ಆರೋಗ್ಯಕ್ಕೆ ಬೇಕು

ಒತ್ತಡ (Stress)
ದಿನದ ಬಹಳಷ್ಟು ಸಮಯ ಕೆಲಸದಲ್ಲೇ ಕಳೆದು ಹೋದರೆ ನೀವು ಸಾಮಾಜಿಕವಾಗಿ (Socially) ಚಟುವಟಿಕೆರಹಿತರಾಗುತ್ತೀರಿ. ಕುಟುಂಬದೊಂದಿಗೂ ಸರಿಯಾಗಿ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಸ್ನೇಹಿತರು, ನೆಂಟರಿಷ್ಟರ ಒಡನಾಟ (Interaction) ದೊರೆಯುವುದಿಲ್ಲ. ಸಾಮಾಜಿಕ ಒಡನಾಟ ಇಲ್ಲವಾದಾಗ ಒತ್ತಡ ಹೆಚ್ಚುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ವರದಿ ಪ್ರಕಾರ, ಒಂದೇ ರೀತಿಯ ಕೆಲಸ ಮಾಡುವ ಜನರಲ್ಲಿ ಒತ್ತಡದ ಪ್ರಮಾಣ ಹೆಚ್ಚು. ಇದರ ನಿವಾರಣೆಗೆ ದಿನದಲ್ಲಿ ಬೇರೆ ಬೇರೆ ಕಾರ್ಯಗಳಲ್ಲಿ ತೊಡಗಬೇಕಾಗುತ್ತದೆ. 

click me!