
ಬೆಂಗಳೂರು (ಆ.13): ರಾಜ್ಯದಲ್ಲಿ ಅಂಗಾಂಗ ವೈಫಲ್ಯಕ್ಕೀಡಾದವರ ಪೈಕಿ 5,740 ಮಂದಿಯು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಾಗಿ ಜೀವಸಾರ್ಥಕತೆ ಟ್ರಸ್ಟ್‌ಗೆ ನೋಂದಣಿಯಾಗಿದ್ದು, ದಾನಿಗಳಿಗೆ ಎದುರು ನೋಡುತ್ತಿದ್ದಾರೆ. ಆರೋಗ್ಯ ಇಲಾಖೆಯ ನೋಂದಾಯಿತ ಸಂಸ್ಥೆಯಾದ ಜೀವಸಾರ್ಥಕತೆಯ ರಾಜ್ಯದಲ್ಲಿ ಅಂಗಾಂಗದಾನ ಕಾರ್ಯಕ್ರಮ ನಿರ್ವಹಣೆ ಮಾಡುತ್ತದೆ. ಅನಾರೋಗ್ಯ ಕಾರಣಗಳಿಂದ ಅಂಗಾಂಗ ವೈಫಲ್ಯಕ್ಕೀಡಾಗಿ ಕಸಿ ಶಸ್ತ್ರಚಿಕಿತ್ಸೆ ಅಗತ್ಯವಿರುವವರು ಈ ಸಂಸ್ಥೆಯಲ್ಲಿ ನೋಂದಣಿ ಮಾಡಬೇಕು. ಆ ಬಳಿಕ ದಾನಿಗಳಿಂದ ಲಭಿಸಿದ ಅಂಗಾಂಗಗಳನ್ನು ನೋಂದಣಿ ಜೇಷ್ಠತೆ ಆಧಾರದ ಮೇಲೆ ನೀಡಲಾಗುತ್ತದೆ. ಸದ್ಯ ರಾಜ್ಯದಲ್ಲಿ ಮೂತ್ರಪಿಂಡ, ಯಕೃತ್, ಹೃದಯ, ಶ್ವಾಸಕೋಶ ಸೇರಿದಂತೆ ವಿವಿಧ ಅಂಗಾಂಗಳ ವೈಫಲ್ಯದಿಂದ ಬಳಲುತ್ತಿರುವ 5,740 ಮಂದಿ ಕಸಿ ಶಸ್ತ್ರಚಿಕಿತ್ಸೆಗೆಂದು ನೋಂದಣಿಯಾಗಿದ್ದಾರೆ. ಯಾವ ಅಂಗಾಂಗಕ್ಕೆ ಎಷ್ಟುಮಂದಿ ನೋಂದಣಿ?: ಮೂತ್ರಪಿಂಡ (ಕಿಡ್ನಿ) 4388, ಯಕೃತ್ (ಲಿವರ್) 1153, ಹೃದಯ 92, ಶ್ವಾಸಕೋಶ 36, ಹೃದಯ ಮತ್ತು ಶ್ವಾಸಕೋಶ 22, ಯಕೃತ್ ಮತ್ತು ಮೂತ್ರಪಿಂಡ 31, ಮೂತ್ರಪಿಂಡ ಮತ್ತು ಮೇದೋಜಿರಕ ಗ್ರಂಥಿ 17, ಸಣ್ಣ ಕರಳು 1.
ಯಾರು ದಾನ ನೀಡಬಹುದು?: ಮೆದುಳು ನಿಷ್ಕ್ರಿಯವಾದ ವ್ಯಕ್ತಿಯು ಅಂಗಾಂಗ ದಾನ ಮಾಡಬಹುದು. ಒಬ್ಬ ದಾನಿಯಿಂದ 8 ಜೀವಗಳನ್ನು ಉಳಿಸಬಹುದು. ಹೃದಯ, ಎರಡು ಮೂತ್ರಪಿಂಡಗಳು, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶಗಳನ್ನು ದಾನ ಮಾಡಬಹುದು. ಅದೇ ದಾನಿಯು ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳು ಅಂಗಾಂಶ ದಾನದ ಮೂಲಕ 50 ಕ್ಕೂ ಹೆಚ್ಚು ಜನರ ಜೀವನವನ್ನು ಉಳಿಸಬಹುದು ಎನ್ನುತ್ತಾರೆ ಜೀವಸಾರ್ಥಕತೆ ಟ್ರಸ್ಟ್ ಅಧಿಕಾರಿಗಳು.
ಅಂಗಾಂಗ ದಾನ ಕೂಡ ಶ್ರೇಷ್ಠದಾನ. ಆದರೆ, ದೇಶದಲ್ಲಿ 10 ಲಕ್ಷ ಸಾವುಗಳಾದರೆ, 0.08 ಜನರಿಂದ ಮಾತ್ರ ಅಂಗಾಂಗ ದಾನವಾಗುತ್ತಿದೆ. ಸ್ಪೇನ್‌ನಲ್ಲಿ ಈ ಪ್ರಮಾಣ ಶೇ.40 ಆಗಿದೆ. ಕೆಲ ಸಾಮಾಜಿಕ, ಧಾರ್ಮಿಕ ಹಿನ್ನೆಲೆಯಿಂದಲೂ ಅಂಗಾಂಗ ದಾನಕ್ಕೆ ತೊಡಕುಂಟಾಗುತ್ತಿದೆ. ಈ ತೊಡಕು ನಿವಾರಣೆಗೆ ಜನರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಬೇಕಿದೆ. ರಾಜ್ಯದಲ್ಲಿ ಅಂಗಾಂಗ ದಾನಕ್ಕೆ ಸೊಟ್ಟೊಕರ್ನಾಟಕ ಎಂಬ ಸಂಸ್ಥೆ ಇದ್ದು ಇಲ್ಲಿ ಆನ್‌ಲೈನ್ ನೋಂದಣಿಗೆ ಅವಕಾಶವಿದೆ. ಇದರಲ್ಲಿ 11 ಸಾವಿರ ಜನರು ಇದುವರೆಗೆ ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
ಚಾಮರಾಜನಗರ: ಸಾವಿನಲ್ಲೂ ಸಾರ್ಥಕತೆ, ಮಗನ ಅಂಗಾಂಗ ದಾನ ಮಾಡಿದ ತಂದೆ-ತಾಯಿ
ಅಂಗಾಂಗ ದಾನ-ಕಸಿಗೆ ಏರ್ ಆಂಬ್ಯುಲೆನ್ಸ್ ಸೌಲಭ್ಯ: ಅಂಗಾಂಗ ದಾನ ಮತ್ತು ಕಸಿಗೆ ಕಾಲಮಿತಿ ಇರುವುದರಿಂದ ಇದರಿಂದ ಯಾವುದೇ ವೈಪಲ್ಯಗಳಾಗದಂತೆ ತಡೆಯಲು ಏರ್ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲು ಬಗ್ಗೆಯೂ ಸರ್ಕಾರ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಇದೇ ವೇಳೆ ಸಚಿವ ಸುಧಾಕರ್ ತಿಳಿಸಿದರು.
ಇಂದು ಅಂಗಾಂಗ ದಾನಕ್ಕೆ ಸಿಎಂ, ಸಚಿವರಿಂದ ಹೆಸರು ನೋಂದಣಿ: ಸಚಿವ ಸುಧಾಕರ್
ವ್ಯಕ್ತಿ ಮೃತಪಟ್ಟ6 ಗಂಟೆಯೊಳಗೆ ಅಂಗಾಗ ದಾನ ಮಾಡಬೇಕಾಗುತ್ತದೆ. ದೂರದ ಸ್ಥಳಗಳಲ್ಲಿ ಯಾವುದಾದರೂ ಅಪಘಾತ ಅಥವಾ ಇನ್ಯಾವುದೇ ಕಾರಣದಿಂದ ವ್ಯಕ್ತಿ ಮೃತಪಟ್ಟರೆ ಅವರ ಕುಟುಂಬದವರು ಮೃತ ವ್ಯಕ್ತಿಯ ಅಂಗಾಗ ದಾನ ಮಾಡಿದರೆ ಸಮಯಕ್ಕೆ ಸರಿಯಾಗಿ ಅದನ್ನು ಬಳಸಿಕೊಳ್ಳಲು ಏರ್ ಆಂಬ್ಯುಲೆನ್ಸ್ ಸೌಲಭ್ಯ ಬೇಕಾಗುತ್ತದೆ. ಈ ಬಗ್ಗೆ ಚಿಂತನೆ ನಡೆದಿದೆ ಎಂದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.