
ಬೆಲ್ಲ ಉತ್ತಮ ಆರೋಗ್ಯಕ್ಕೆ ಒಳ್ಳೆಯದು. ಸಕ್ಕರೆ ಬದಲು ನೀವು ಬೆಲ್ಲವನ್ನು ಯಾವುದೇ ಭಯವಿಲ್ಲದೆ ಬಳಕೆ ಮಾಡಬಹುದು. ಆಯುರ್ವೇದದ ಅನೇಕ ಔಷಧಿಗಳ ತಯಾರಿಕೆಯಲ್ಲಿ ಬೆಲ್ಲವನ್ನು ಬಳಸಲಾಗುತ್ತದೆ. ಬೆಲ್ಲ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಅನೇಕ ಆರೋಗ್ಯ ಸಮಸ್ಯೆಗೆ ಮದ್ದಾಗಿ ಕೆಲಸ ಮಾಡುತ್ತದೆ. ಎದೆ ಸಮಸ್ಯೆ, ಉಸಿರಾಟದ ಸಮಸ್ಯೆ ಮತ್ತು ಹೊಟ್ಟೆಯ ಕಾಯಿಲೆಗಳು ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತವೆ. ಚಳಿಗಾಲದಲ್ಲಿ ಮನೆಯ ಆಹಾರ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡ್ತಾರೆ. ಶುದ್ಧ ಹಾಗೂ ಆರೋಗ್ಯಕರ ಆಹಾರದಲ್ಲಿ ಬೆಲ್ಲ ಕೂಡ ಸೇರಿರುತ್ತದೆ.
ಈ ಬೆಲ್ಲ (Jaggery) ನೈಸರ್ಗಿಕ ಸಿಹಿಯನ್ನು ಹೊಂದಿದೆ. ಇದಲ್ಲದೆ ಬೆಲ್ಲದಲ್ಲಿ ಕಬ್ಬಿಣ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ನ ಹೆಚ್ಚಿನ ಪ್ರಮಾಣದಲ್ಲಿ ಇದೆ. ಬಹುತೇಕರು ಹೊಸ ಬೆಲ್ಲಕ್ಕೆ ಆದ್ಯತೆ ನೀಡ್ತಾರೆ. ಮಾರುಕಟ್ಟೆ (Market) ಯಲ್ಲಿ ಹೊಸ ಬೆಲ್ಲ ಖರೀದಿ ಮಾಡ್ತಾರೆ. ಆದ್ರೆ ಆಯುರ್ವೇದ (Ayurveda) ತಜ್ಞರ ಪ್ರಕಾರ, ಹೊಸ ಬೆಲ್ಲಕ್ಕಿಂತ ಒಂದು ವರ್ಷ ಹಳೆ ಬೆಲ್ಲ ಹೆಚ್ಚಿನ ಆರೋಗ್ಯ ಪ್ರಯೋಜನವನ್ನು ಹೊಂದಿದೆ.
ಬೆಲ್ಲ ಸೇವನೆ ಮಾಡುವುದ್ರಿಂದ ಯಕೃತ್ತು (Liver) ಕಾಯಿಲೆಗಳಿಂದ ದೂರವಿರಬಹುದು. ಹೃದಯ ಮತ್ತು ವಾತ ದೋಷವನ್ನು ಸಮತೋಲನಗೊಳಿಸಲು ಬೆಲ್ಲ ಒಳ್ಳೆಯದು. ಅದ್ರಲ್ಲೂ ನೀವು ಹಳೆ ಬೆಲ್ಲವನ್ನು ಬಳಕೆ ಮಾಡಿದ್ರೆ ಬಹಳ ಉತ್ತಮ. ಈ ಹಳೆ ಬೆಲ್ಲ ದೇಹದ ಚಾನಲ್‌ಗಳನ್ನು ನಿರ್ಬಂಧಿಸುವುದಿಲ್ಲ. ರಕ್ತವನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸುತ್ತದೆ. ಹೊಸ ಬೆಲ್ಲವನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಹುಳುಗಳ ಸೋಂಕು ಉಂಟಾಗುತ್ತದೆ. ಕರುಳಿನ ಆರೋಗ್ಯ ಹಾಳಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ದೇಹದಲ್ಲಿರುವ ಕಫದ ಸಮತೋಲನ ಹದಗೆಡುತ್ತದೆ. ಇದರಿಂದಾಗಿ ಕೆಮ್ಮು ಮತ್ತು ಶೀತ ನಮ್ಮನ್ನು ಕಾಡುತ್ತದೆ.
ಹಳೆ ಬೆಲ್ಲದ ಪತ್ತೆ ಹೇಗೆ?: ಹಳೆ ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು, ಆದ್ರೆ ಅದನ್ನು ಹೇಗೆ ಪತ್ತೆ ಮಾಡಬೇಕು ಎನ್ನುವವರು, ಹಳೆ ಬೆಲ್ಲದ ರುಚಿಯನ್ನು ನೀವು ನೋಡಬೇಕು. ಹಳೆ ಬೆಲ್ಲ ಸ್ವಲ್ಪ ಉಪ್ಪು ರುಚಿಯನ್ನು ಹೊಂದಿರುತ್ತದೆ. ಅಲ್ಲದ ಬೆಲ್ಲದ ಬಣ್ಣ ಗಾಢ ಬಣ್ಣದಿಂದ ಕೂಡಿರುತ್ತದೆ. ಬೆಲ್ಲದ ರುಚಿ ಹೆಚ್ಚು ಉಪ್ಪಿನಿಂದ ಕೂಡಿದ್ದರೆ ಅದು ಕಲಬೆರಿಕೆ ಬೆಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬಹುದು.
ಆಹಾರದಲ್ಲಿ ಮುಸುಕಿನ ಜೋಳ ಸೇರಿಸಿ ಆರೋಗ್ಯ ಲಾಭ ಪಡೆದುಕೊಳ್ಳಿ
ಶುದ್ಧ ಬೆಲ್ಲವನ್ನು ಗುರುತಿಸುವುದು ಹೇಗೆ?: ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುವೂ ಕಲಬೆರಕೆಯಾಗಿ ಬರ್ತಿದೆ. ಈ ರಾಸಾಯನಿಕ ಬೆರೆಸಿದ ಬೆಲ್ಲ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಬೆಲ್ಲದ ಬಣ್ಣ ಆಕರ್ಷಕವಾಗಿರಬೇಕು ಎನ್ನುವ ಕಾರಣಕ್ಕೆ ಅದಕ್ಕೆ ಸೋಡಿಯಂ ಬೈಕಾರ್ಬನೇಟ್ ಮತ್ತು ಕ್ಯಾಲ್ಸಿಯಂ ಬೈಕಾರ್ಬನೇಟ್ ಅನ್ನು ಸೇರಿಸಲಾಗುತ್ತದೆ. ಶುದ್ಧ ಬೆಲ್ಲವನ್ನು ಗುರುತಿಸಲು ನೀವು ಒಂದು ಲೋಟ ನೀರಿಗೆ ಒಂದು ಸಣ್ಣ ತುಂಡು ಬೆಲ್ಲವನ್ನು ಹಾಕಬೇಕು. ಬೆಲ್ಲ ಕಲಬೆರಕೆಯಾಗಿದ್ದರೆ, ಲೋಟದ ತಳ ಭಾಗದಲ್ಲಿ ಬಿಳಿ ಪುಡಿ ಸೇರಲು ನೆಲೆಗೊಳ್ಳುತ್ತದೆ. ಶುದ್ಧ ಬೆಲ್ಲವಾಗಿದ್ದರೆ ನೀರಿನಲ್ಲಿ ಕರಗುತ್ತದೆ.
ವಿಟಮಿನ್ ಡಿ, ತೂಕ ಹೆಚ್ಚಾಗುವುದಕ್ಕೆ ಏನಾದ್ರೂ ಲಿಂಕ್ ಇದೆಯಾ?
ಬೆಲ್ಲದ ಬಳಕೆ: ನೀವು ಬೆಲ್ಲವನ್ನು ಸಕ್ಕರೆಗೆ ಪರ್ಯಾಯವಾಗಿ ಬಳಕೆ ಮಾಡಬಹುದು. ಟೀಯಿಂದ ಹಿಡಿದು ಖೀರ್ ವರೆಗೆ ನೀವು ಬೆಲ್ಲವನ್ನು ಬಳಸಬಹುದು. ಆದ್ರೆ ಅನೇಕರು ಹಾಲಿಗೆ ಬೆಲ್ಲ ಬೆರೆಸಿ ಕುಡಿಯುತ್ತಾರೆ. ಆಯುರ್ವೇದ ತಜ್ಞರ ಪ್ರಕಾರ, ಹಾಲಿಗೆ ಬೆಲ್ಲ ಹಾಕಿ ಸೇವನೆ ಮಾಡುವುದು ಒಳ್ಳೆಯದಲ್ಲ. ಹಾಲು ಹಾಗೂ ಬೆಲ್ಲ ಪರಸ್ಪರ ವಿರುದ್ಧವಾಗಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಬೆಲ್ಲ ಸೇವನೆ ಮಾಡುವುದ್ರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ದೇಹದ ಶಕ್ತಿ ಹೆಚ್ಚಾಗುತ್ತದೆ. ಮೂಳೆ ಬಲಗೊಳ್ಳುವ ಜೊತೆಗೆ ಕಣ್ಣಿನ ದೃಷ್ಟಿ ಹೆಚ್ಚಿಸಲು ಬೆಲ್ಲ ಪ್ರಯೋಜನಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.