ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಮಾಡಿದರೆ ಏನೆಲ್ಲ ಲಾಭಗಳಿರಬಹುದು?

By Suvarna NewsFirst Published Mar 10, 2020, 4:55 PM IST
Highlights

ಸಕ್ಕರೆ ವ್ಯಕ್ತಿಯನ್ನು ದಪ್ಪವಾಗಿಸಿ, ಕುರೂಪವಾಗಿಸಿ, ಬೇಗ ವಯಸ್ಸಾದಂತೆ ಕಾಣಿಸುವಂತೆ ಮಾಡುತ್ತದೆ ಎನ್ನುತ್ತಾರೆ ಆಹಾರತಜ್ಞರು. ಹಾಗಾದರೆ, ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಮಾಡಿದರೆ ಏನೆಲ್ಲ ಲಾಭಗಳಿರಬಹುದು? ಅಷ್ಟಕ್ಕೂ ಈ ಶುಗರ್ ಡಿಟಾಕ್ಸ್ ಮಾಡುವುದು ಹೇಗೆ? ಸಕ್ಕರೆ ತಿನ್ನೋದ ಬಿಡುವುದರಿಂದ ನಿಮ್ಮ ಮನಸ್ಸು, ಆರೋಗ್ಯದಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆ?

ಸಿಹಿ ಎಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಊಟವಾಗುತ್ತಿದ್ದಂತೆಯೇ, ಬಾಕ್ಸ್‌ನಲ್ಲಿರುವ ಬರ್ಫಿ ಕೈಬೀಸಿ ಕರೆದು ಬಾಯಲ್ಲಿ ನೀರು ತರಿಸುತ್ತದೆ. ಸಂಜೆ ಹೊತ್ತಿಗಾಗಲೇ ಒಂದು ಚಾಕೋಲೇಟ್ ತಿನ್ನುವ ಬಯಕೆ ಧುತ್ತೆಂದು ಎದ್ದು ಕೂರುತ್ತದೆ. ಯಾರದಾದರೂ ಬರ್ತ್‌ಡೇ ಎಂದು ತಿಳಿದರೂ ಸಾಕು, ಅವರು ಕೊಡುವ ಕೇಕ್ ಅಥವಾ ಸ್ವೀಟ್‌ಗಾಗಿ ಕಾಯುತ್ತಾ ಕುಳಿತಿರುತ್ತೀರಿ ಅಲ್ಲವೇ? ಹಾಗಿದ್ದರೆ ನೀವು ಸ್ವಲ್ಪ ಮಟ್ಟಿಗೆ ಶುಗರ್ ಅಡಿಕ್ಟ್ಸ್ ಇರಬೇಕು. 

ಸಕ್ಕರೆ ಎಂಬ ಹಿತಶತ್ರು
ಸ್ವೀಟ್, ಜ್ಯೂಸ್, ಪ್ಯಾಕೇಜ್ಡ್ ಆಹಾರಗಳು, ಕಾಫಿ, ಟೀ, ಡ್ರಿಂಕ್ ಮಿಕ್ಸ್‌ಗಳು, ಕೋಲ್ಡ್ ಡ್ರಿಂಕ್ ಮತ್ತಿತರೆ ಆಹಾರ ಸೇವನೆಯಿಂದಾಗಿ ಭಾರತದಲ್ಲಿ ವ್ಯಕ್ತಿಯೊಬ್ಬ ವರ್ಷಕ್ಕೆ ಸರಾಸರಿ 18.5 ಕೆಜಿ ಸಕ್ಕರೆ ಸೇವಿಸುತ್ತಾನೆ ಎನ್ನುತ್ತದೆ ಅಂಕಿಅಂಶ. 2015ನೇ ವರ್ಷಕ್ಕೆ ಹೋಲಿಸಿದರೆ ಸಧ್ಯ ಸಕ್ಕರೆ ಸೇವನೆ ಪ್ರತಿ ವ್ಯಕ್ತಿಯ ಲೆಕ್ಕದಲ್ಲಿ 2 ಕೆಜಿಯಷ್ಟು ಇಳಿಕೆಯಾಗಿದೆ ಎಂಬುದೊಂದು ಸಮಾಧಾನ. ಆದರೂ ಕೂಡಾ ಜಗತ್ತಿನ ಸಕ್ಕರೆ ಕಾಯಿಲೆಯ ರಾಜಧಾನಿ ಎಂಬ ಕೆಟ್ಟ ಹೆಸರು ಪಡೆದಿರುವ ಭಾರತದಲ್ಲಿ ಸುಮಾರು 6.2 ಕೋಟಿಯಷ್ಟು ಜನರು ಟೈಪ್ 2 ಡಯಾಬಿಟೀಸ್‌ನಿಂದ ಬಳಲುತ್ತಿದ್ದಾರೆ. ಸುಮಾರು 10 ಲಕ್ಷ ಜನ ವಾರ್ಷಿಕ ಡಯಾಬಿಟೀಸ್ ಸಂಬಂಧಿ ಸಮಸ್ಯೆಗಳಿಂದ ಸಾಯುತ್ತಿದ್ದಾರೆ. 

ಏನೋ ಮಾಡಲು ಹೋಗಿ ಮತ್ತೇನೋ ಆಗಿ ಜನ್ಮ ಪಡೆದ ತಿಂಡಿಗಳ ಕತೆ...


ಅಷ್ಟೇ ಅಲ್ಲ, ಸಕ್ಕರೆ ಬಾಯಿಗೆ ಸಿಹಿ ಎಂಬುದು ಬಿಟ್ಟರೆ ದೇಹಕ್ಕೆ ಕೆಟ್ಟದೇ. ಅದು ವ್ಯಕ್ತಿಯನ್ನು ದಪ್ಪಗಾಗಿಸಿ, ಕುರೂಪವಾಗಿಸಿ ಬೇಗ ವಯಸ್ಸಾದಂತೆ ಕಾಣಿಸುವಂತೆ ಮಾಡುತ್ತದೆ ಎನ್ನುತ್ತಾರೆ ಅಮೆರಿಕದ ಡಯಟಿಶಿಯನ್ ಬ್ರೂಕ್ ಆಲ್ಪರ್ಟ್. ಈ ಕುರಿತು ಪುಸ್ತಕವನ್ನೇ ರಚಿಸಿದ್ದಾರೆ ಅವರು. ಸಕ್ಕರೆಯು ತೂಕ ಹೆಚ್ಚಿಸಿ ಹೃದಯದ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ, ಚರ್ಮಕ್ಕೆ ಮಾರಕವಾಗಿದೆ. ತಕ್ಷಣ ಎನರ್ಜಿ ನೀಡಿದಂತೆನಿಸಿದರೂ, ಸಕ್ಕರೆಯಿಂದಾಗಿ ದೇಹ ಸುಸ್ತಾಗಿ ಸೋಮಾರಿಯಾಗಿರುವುದೇ ಹೆಚ್ಚು. ಇದನ್ನೆಲ್ಲ ನೋಡಿದರೆ ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಎಂಬುದು ಎಷ್ಟು ಅಗತ್ಯ ಎಂದು ಅರಿವಾದೀತು. 

ಶುಗರ್ ಡಿಟಾಕ್ಸ್
ಕೇವಲ ಜ್ಯೂಸ್ ಸೇವಿಸುವುದು, ತರಕಾರಿ ಡಯಟ್ ಇತ್ಯಾದಿ ಟ್ರೆಂಡ್‌ಗಳನ್ನು ಸ್ಟ್ರಿಕ್ಟ್ ಆಗಿ ಫಾಲೋ ಮಾಡಿದರೆ ದೇಹಕ್ಕೆ ಎಲ್ಲ ಪೋಷಕಸತ್ವಗಳೂ ದೊರೆಯದೆ, ನೆಗೆಟಿವ್ ಪರಿಣಾಮ ಬೀರುತ್ತದೆ. ಆದರೆ, ಸಕ್ಕರೆಯ ವಿಷಯ ಹಾಗಲ್ಲ. ನೀವು ಸಕ್ಕರೆಯನ್ನು ಡಿಟಾಕ್ಸ್ ಮಾಡಿದಷ್ಟೂ ಪಾಸಿಟಿವ್ ಪರಿಣಾಮಗಳನ್ನು ಸ್ವತಃ ಗಮನಿಸುತ್ತೀರಿ ಎನ್ನುವುದು ಆಹಾರತಜ್ಞರ ಅಭಿಪ್ರಾಯ. ಹಾಗಿದ್ದರೆ ಮತ್ತೇಕೆ ತಡ, ಆರಂಭದಲ್ಲಿ 1 ತಿಂಗಳ ಕಾಲ ಸಂಪೂರ್ಣ ಶುಗರ್ ಡಿಟಾಕ್ಸ್ ಮಾಡಿ ನೋಡಿ. ನಂತರ ಅದು ದಿನಚರಿಯೇ ಆಗಿಬಿಡುತ್ತದೆ.

ಯಂಗ್ ಆಗ ಕಾಣಬೇಕೆಂದರೆ ಸಕ್ಕರೆಗೆ ಹೇಳಿ ಗುಡ್ ಬೈ

ಆದರೆ ಶುಗರ್ ಡಿಟಾಕ್ಸ್ ಎನ್ನುವುದು ಹೇಳಿದಷ್ಟು ಸುಲಭವಲ್ಲ. ಸಕ್ಕರೆ ಕೂಡಾ ಇತರೆ ಡ್ರಗ್ಸ್‌ನಂತೆ ಬಳಕೆ ಹೆಚ್ಚಾದಷ್ಟೂ ಅದರ ಮೇಲೆ ಅವಲಂಬನೆ ಹೆಚ್ಚಾಗುತ್ತದೆ, ಚಟವಾಗುತ್ತದೆ. ಹಾಗಾಗಿ, ಈ ಚಟದಿಂದ ಮುಕ್ತಿ ಹೊಂದುವುದು ಸರಳವಿಲ್ಲ. ಐಸ್ ಕ್ರೀಂನಲ್ಲಿ ಸಕ್ಕರೆಯಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಟೊಮ್ಯಾಟೋ ಸಾಸ್, ಬ್ರೆಡ್, ಸಲಾಡ್ ಡ್ರೆಸ್ಸಿಂಗ್ಸ್ ಮುಂತಾದ ಆಹಾರಗಳಲ್ಲಿ ಸಕ್ಕರೆಯ ಇರುವಿಕೆ ಬಹುತೇಕರ ಅರಿವಿಗೆ ಬರುವುದಿಲ್ಲ. ಹಾಗಾಗಿಯೇ ಜನರು ಗೊತ್ತೋ ಗೊತ್ತಿಲ್ಲದೆಯೋ ಇಡೀ ದಿನ ಸಕ್ಕರೆ ಸೇವಿಸುತ್ತಲೇ ಇರುತ್ತಾರೆ. ಆದ್ದರಿಂದ, ಶುಗರ್ ಡಿಟಾಕ್ಸ್ ಡಯಟ್ ಆರಂಭಿಸುವ ಮುನ್ನ ಸಕ್ಕರೆ ಯಾವುದರಲ್ಲೆಲ್ಲ ಇರುತ್ತದೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. 

ಮಕ್ಕಳಿಂದಲೇ ಆರಂಭಿಸಿ
ಗುಡ್ ನ್ಯೂಸ್ ಎಂದರೆ ನೀವು ಸಕ್ಕರೆ ಅಡಿಕ್ಟ್ ಅಲ್ಲದಿದ್ದರೂ ಶುಗರ್ ಡಿಟಾಕ್ಸ್‌ನಿಂದ ನಿಮಗೆ ಲಾಭವಿದ್ದೇ ಇದೆ. ಡಯಟ್‌ನಲ್ಲಿ ಸಕ್ಕರೆಯನ್ನು ಕಡಿಮೆ ಮಾಡಿದಂತೆಲ್ಲ ತೂಕ ಇಳಿಕೆಯಾಗುತ್ತದೆ, ಅದರಲ್ಲೂ ಹೊಟ್ಟೆಯ ಬೆಲ್ಟ್ ಕರಗುತ್ತದೆ. ಮೂಡ್ ಚೆನ್ನಾಗಾಗುತ್ತದೆ, ಹೆಚ್ಚು ಸಂತೋಷವಾಗಿರಲು ಸಾಧ್ಯವಾಗುತ್ತದೆ, ಕಣ್ಣುಗಳ ದೃಷ್ಟಿ ಹೆಚ್ಚುತ್ತದೆ, ಜೊತೆಗೆ ಚರ್ಮ ಕಾಂತಿ ಪಡೆದುಕೊಳ್ಳುತ್ತದೆ. ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ. ಶುಗರ್ ಬಿಟ್ಟಿದ್ದರಿಂದ ಲಾಭವಾಗಿಲ್ಲ ಎನ್ನುವವರು ಒಬ್ಬರೂ ಸಿಗಲು ಸಾಧ್ಯವಿಲ್ಲ ಎನ್ನುತ್ತಾರೆ ಡಯಟಿಶಿಯನ್ ಲುಸ್ಟಿಗ್. ಮಕ್ಕಳಲ್ಲಿ ಬೊಜ್ಜಿದ್ದರೆ ಕೇವಲ 9 ದಿನಗಳ ಕಾಲ ಸಕ್ಕರೆ ಪದಾರ್ಥಗಳಿಂದ ಅವರನ್ನು ದೂರವಿರಿಸಿ ನೋಡಿ. ಅವರ ತೂಕ ಇಳಿಯದಿದ್ದರೂ, ಮೆಟಾಬಾಲಿಕ್ ಚಟುವಟಿಕೆ ಬಹಳ ಉತ್ತಮಗೊಳ್ಳುತ್ತದೆ. ಉದಾಸೀನತೆ, ಸುಸ್ತು ತಗ್ಗುತ್ತದೆ. ಹಾಗಿದ್ದರೆ ಆರಂಭದಲ್ಲಿ ಸಕ್ಕರೆಯನ್ನು ಕಡಿಮೆ ಮಾಡಿದರೆ ಸಾಕೇ ಎಂದರೆ, ಪೂರ್ತಿ ದೂರವಿದ್ದು ನೋಡಿ ಎನ್ನುತ್ತಾರೆ ಲುಸ್ಟೆಗ್. 

ಸಕ್ಕರೆ ಮೇಲೆ ಅಕ್ಕರೆ ಹೆಚ್ಚಾದ್ರೆ ಹೆಚ್ಚೀತು ಖಿನ್ನತೆ, ಜೋಕೆ

ಹೀಗೆ ಸಕ್ಕರೆಯನ್ನು ಸಂಪೂರ್ಣ ದೂರವಿರಿಸಿದ ಬಳಿಕವಷ್ಟೇ ನಿಮಗೆ ಹಣ್ಣುಗಳು, ತರಕಾರಿ, ಡೈರಿ ಉತ್ಪನ್ನಗಳು ನೈಸರ್ಗಿಕವಾಗಿಯೇ ಸಿಹಿ ಹೊಂದಿರುವ ಅರಿವು ಬರಲು ಸಾಧ್ಯ. ಸಕ್ಕರೆಗೆ ಬದಲಿಯಾಗಿ ಡಯಟ್‌ನಲ್ಲಿ ಪ್ರೋಟೀನ್, ತರಕಾರಿಗಳು, ಹೆಲ್ದೀ ಫ್ಯಾಟ್ಸ್ ಹೆಚ್ಚಿಸಿ ಎಂಬುದು ಅವರ ಸಲಹೆ. ಹಾಗಾಗಿ, ಶುಗರ್ ಡಿಟಾಕ್ಸ್ ಮಾಡುವುದಾದರೆ, ತಾಜಾ ಹಣ್ಣುಗಳ ರಸವನ್ನಷ್ಟೇ ಜ್ಯೂಸ್ ಆಗಿ ಸೇವಿಸಿ. ಬ್ಲ್ಯಾಕ್ ಕಾಫಿ, ಗ್ರೀನ್ ಟೀ ಅಭ್ಯಾಸ ಒಳ್ಳೆಯದು. ಆರ್ಟಿಫಿಶಿಯಲ್ ಸ್ವೀಟ್ನರ್ ಹಾಕಿದ ಯಾವುದೇ ಆಹಾರ ಪದಾರ್ಥಕ್ಕೂ ನೋ ಎನ್ನಿ. ಡಾರ್ಕ್ ಚಾಕೋಲೇಟ್ ಬಿಟ್ಟರೆ ಕ್ಯಾಂಡಿಗಳು, ಐಸ್ ಕ್ರೀಂ, ಪ್ಯಾಕೇಜ್ಡ್ ತಿಂಡಿಗಳಿಂದ ದೂರವುಳಿಯಿರಿ. ಸ್ವೀಟ್ ತಿನ್ನಲೇಬೇಕೆನಿಸಿದಲ್ಲಿ ಬೆಲ್ಲದಿಂದ ತಯಾರಿಸಿದ ಆಹಾರಗಳ ಸೇವನೆ ಅಭ್ಯಾಸ ಮಾಡಿಕೊಳ್ಳಬಹುದು. ಡಯಟ್‌ನಲ್ಲಿ ಹೆಲ್ದೀ ಫ್ಯಾಟ್ಸ್ ಸೇರಿಸುವುದರಿಂದ ಶುಗರ್ ಕ್ರೇವಿಂಗ್ಸ್ ತಗ್ಗುತ್ತದೆ. 
 

click me!