‘ಫೆರೋಮೋನ್’ ಎಂದಾಕ್ಷಣ ಏನು ನೆನಪಿಗೆ ಬರುತ್ತದೆ? ಆಕರ್ಷಣೆ, ಲೈಂಗಿಕತೆ, ನಿಯಂತ್ರಣ ಕಳೆದುಕೊಳ್ಳುವುದು! ಆ್ಯಂಡ್ರೋಸ್ಟಿನಾಲ್, ಆ್ಯಂಡ್ರೋಸ್ಟಿನಾನ್, ಎಂಬೆಲ್ಲಾ ಹೆಸರುಗಳಿಂದ ಅಂತರ್ಜಾಲದಲ್ಲಿ ಮಾರಾಟಕ್ಕೆ ಸಿಗುವ, ಮಾನವ ದೇಹದ ರಾಸಾಯನಿಕಗಳು ಇವು ! ಹಾಗಿದ್ದರೆ ನಿಜವಾಗಿ ಈ ರಾಸಾಯನಿಕಗಳು ಮಾನವ ದೇಹದಲ್ಲಿ ಉತ್ಪತ್ತಿಯಾಗುತ್ತವೆಯೇ?
ಫೇರೋಮೋನ್ಸ್ ಎಂಬ ಕಣಗಳು ನಮ್ಮ ದೇಹದ ವಾಸನೆಗೆ ಸಂಬಂಧಿಸಿದವು. ನಾವು ‘ಸಸ್ತನಿ’ ಎಂಬ ಪ್ರಾಣಿ ವರ್ಗಕ್ಕೆ ಸೇರಿದವರಾದ್ದರಿಂದ, ನಮ್ಮ ದೇಹ ಕೆಲವು ಸಾವಿರದಷ್ಟುಕಣಗಳು ಸ್ರವಿಸುತ್ತವೆ. ವಾಸನೆ ಎನ್ನುವುದಂತೂ ಮನುಷ್ಯರಲ್ಲಿಯೂ ಪ್ರಾಣಿಗಳಷ್ಟೇ ಮುಖ್ಯ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಸಂಬಂಧಗಳಿಗೂ ಇದು ಮುಖ್ಯವೇ. ಮಗುವಿನ ನೆತ್ತಿಯನ್ನು ಆಘ್ರಾಣಿಸುವುದು, ಸಾಂಪ್ರದಾಯಿಕವಾಗಿಯೂ ರೂಢಿಯಲ್ಲಿದೆ. ಚಕ್ರವರ್ತಿ ನೆಪೋಲಿಯನ್ ಬೊನಾಪಾರ್ಟೆ ಯುದ್ಧಗಳಿಂದ ಹಿಂತಿರುಗಿ ಬರುವ ದಾರಿಯಲ್ಲಿ ತನ್ನ ಪ್ರಿಯತಮೆ ಜೋಸೆಫಿನ್‌ಗೆ ಓಲೆ ಕಳುಹಿಸಿದನಂತೆ ‘ಸ್ನಾನ ಮಾಡಬೇಡ, ನಾನು ಮನೆಗೆ ಬರುತ್ತಿದ್ದೇನೆ !’ ಆದರೂ ದೇಹದಿಂದ ಬರುವ ಸಹಜ ವಾಸನೆಗಳ ಬಗೆಗೆ ಏನೂ ತಿಳಿಯದೆ, ನಾವು ಅವನ್ನು ಹೊಡೆದೋಡಿಸಲು, ಮರೆಮಾಚಲು ಮಾಡುವ ಸಾಹಸಗಳು ಕಡಿಮೆಯಲ್ಲ. ಹಾಗಿದ್ದರೆ ‘ಫೆರೋಮೋನ್’ ಎಂಬ ರಾಸಾಯನಿಕಗಳು ಆರೋಗ್ಯಕ್ಕೆ ಅಗತ್ಯವೆ? ಅವುಗಳಿಂದ ಮನುಷ್ಯರಿಗೆ ಆಗುವ ಉಪಯೋಗವಾದರೂ ಏನು?
ತುಂಬಾ ಬೆವರುತ್ತೀರಾ? ಚಿಂತಿಸಬೇಡಿ ನಿಮ್ಮಷ್ಟು ಬ್ಯೂಟಿಫುಲ್ ಯಾರಿಲ್ಲ!
undefined
ಪ್ರಾಣಿಗಳಲ್ಲಿ ಫೆರೋಮೋನ್‌ಗಳ ಪ್ರಾಮುಖ್ಯ ದೃಢಪಟ್ಟಿರುವಷ್ಟುಮಾನವರಲ್ಲಿ ‘ಫೆರೋಮೋನ್’ಗಳ ಬಗೆಗೆ ನಮಗೆ ಮಾಹಿತಿಯಿಲ್ಲ. ಪ್ರಾಣಿಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣ. ಪುರಾತನ ಕಾಲದಲ್ಲಿ ಗ್ರೀಕರು ನಾಯಿಗಳು ತಮ್ಮ ಮಧ್ಯೆ ಅದೃಶ್ಯ ಸಂಕೇತವೊಂದರಿಂದ ಸಂವಾದ ನಡೆಸುತ್ತವೆ ಎಂದು ಕಂಡುಹಿಡಿದಿದ್ದರು. ಹೆಣ್ಣು ನಾಯಿ ಲೈಂಗಿಕ ಉದ್ರೇಕಕ್ಕೆ ಒಳಗಾದಾಗ, ಗಂಡು ನಾಯಿಯನ್ನು ಆಕರ್ಷಿಸಲು ಮೈಲುಗಟ್ಟಲೆ ದೂರ ಹರಡುವ ಸಂಕೇತ ಕಳಿಸುತ್ತಿತ್ತು. ಇದು ಶಬ್ದ ಸಂಕೇತವಲ್ಲ! ವಾಸನೆಯ ಸಂಕೇತ. ಬಟ್ಟೆಯೊಂದಕ್ಕೆ ಹೆಣ್ಣು ನಾಯಿಯ ದೇಹದ ವಾಸನೆ ತಗುಲಿಸಿ, ಹಿಡಿದರೆ ಗಂಡು ನಾಯಿ ಆ ಬಟ್ಟೆಯ ಹಿಂದೆ ಓಡಿ ಬರುತ್ತಿತ್ತು. ಆದರೆ ಈ ವಾಸನೆಗೆ ಕಾರಣವಾದ ‘ರಾಸಾಯನಿಕ’ ವನ್ನು ಬೇರ್ಪಡಿಸಲು ಸಾಧ್ಯವಾಗಿರಲೇ ಇಲ್ಲ. 1959ರಲ್ಲಿ ಮೊದಲ ಬಾರಿಗೆ ಸುಮಾರು 20 ವರ್ಷಗಳ ದೀರ್ಘ ಅಧ್ಯಯನದ ನಂತರ ರೇಷ್ಮೆ ಹುಳದಲ್ಲಿ ಈ ‘ಸೆಕ್ಸ್ ಫೆರೋಮೋನ್’ನ್ನು ಬೇರ್ಪಡಿಸಿ, ಅದರ ರಾಸಾಯನಿಕ ಕಣವನ್ನು ‘ನಿರ್ದಿಷ್ಟ’ ಪ್ರಾಣಿ ಪಂಗಡಕ್ಕೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಪ್ರಯೋಗಾತ್ಮಕವಾಗಿ ನಿರೂಪಿಸಲಾಯಿತು. ಜಲಚರಗಳಲ್ಲಿ, ಸಸ್ತನಿಗಳಲ್ಲಿ ಫೆರೋಮೋನ್‌ಗಳನ್ನು ಕಂಡುಹಿಡಿಯಲಾಗಿದೆ.
ಈಗ ಮನುಷ್ಯರ ಮಾತಿಗೆ ಬರೋಣ. ನಾವೂ ಸಸ್ತನಿಗಳಾದ್ದರಿಂದ ನಮ್ಮ ದೇಹಗಳಿಂದ ವಾಸನೆ ಹೊರಬರುತ್ತದೆ. ನಾವು ಸಾಕುವ ನಾಯಿಗಳಿಗೆ ಹೇಗೆ ‘ಅಪಾರ ವಾಸನೆ’ ಎಂದು ದೂರುತ್ತೇವೆಯೋ, ಹಾಗೆಯೇ ನಮ್ಮ ಮೈಗಳಿಂದಲೂ ವಾಸನೆ ಹೊರಸೂಸುತ್ತದೆ! ಆದರೆ ಈ ವಾಸನೆ ಜೀವನದ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಎನ್ನುವುದು ಗಮನಾರ್ಹ. ಚಿಕ್ಕ ಮಗುವಿನ ಮೈ ವಾಸನೆಗೂ, ಹದಿಹರೆಯದ ಮಕ್ಕಳ ಮೈವಾಸನೆಗೂ ವ್ಯತ್ಯಾಸವಿದೆ. ಕಾರಣ ಸ್ಪಷ್ಟ. ಕಂಕುಳು -ಜನನಾಂಗಗಳಲ್ಲಿ ಕೂದಲು, ಹೊಸ ಗ್ರಂಥಿಗಳ ಬೆಳವಣಿಗೆ, ಸ್ರವಿಸುವಿಕೆ ವಾಸನೆಯ ಬದಲಾವಣೆಗೆ ಕಾರಣ. ಆದರೆ ಈ ಮಾಹಿತಿಯ ನಂತರ ಹೆಚ್ಚು ವಿಷಯ ಸಂಶೋಧನೆಯಾಗಿಲ್ಲ. ಅದಕ್ಕೆ ಕಾರಣ ನಮ್ಮ ಸಂಸ್ಕೃತಿಯೂ ಹೌದು ! ಕೀಟ-ಪ್ರಾಣಿಗಳು ಯಾವುದು ಒಳ್ಳೆಯ ವಾಸನೆ, ಯಾವುದು ಕೆಟ್ಟದು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಮನುಷ್ಯರು? 4ನೇ ವಯಸ್ಸಿನವರೆಗೆ ಯಾವುದೇ ವಾಸನೆಯೂ ಆಕರ್ಷಕ ಎನಿಸುತ್ತದೆ. ಮಕ್ಕಳು ಜನನಾಂಗಗಳಲ್ಲಿ ಬೆರಳು ತೂರಿಸಿ, ವಾಸನೆ ನೋಡುವ ನಡವಳಿಕೆ ಸಾಮಾನ್ಯ! ಅಪ್ಪ -ಅಮ್ಮಂದಿರ ಗದರಿಕೆಯಿಂದಲೇ, ಮಗು ಕ್ರಮೇಣ ‘ಇದು ಸಾಮಾಜಿಕವಾಗಿ ಸ್ವೀಕೃತ ನಡವಳಿಕೆಯಲ್ಲ’ ಎಂಬುದನ್ನು ಕಲಿಯುತ್ತದೆ.
ಬೆವರಿನ ಕಿರಿಕಿರಿ; ಆಯುರ್ವೇದದಲ್ಲಿದೆ ಚಿಕಿತ್ಸೆ!
ಮತ್ತೊಂದು ಮುಖ್ಯ ಅಂಶ ವಾಸನೆಯ ಗ್ರಹಿಕೆಯ ಸಾಮರ್ಥ್ಯ. ಉಳಿದೆಲ್ಲಾ ಇಂದ್ರಿಯಗಳ ಬಗೆಗಿನ ಸಂಶೋಧನೆಗಳಿಗಿಂತ ವಾಸನೆಯ ಬಗೆಗಿನ ಏನು, ಹೇಗೆ ಎಂಬ ಪ್ರಶ್ನೆಗಳು ನಿರೂಪಿಸಲ್ಪಟ್ಟಿದ್ದು ಸುಮಾರು 16 ವರ್ಷಗಳ ಹಿಂದಷ್ಟೇ! 2004ರಲ್ಲಿ ಆ್ಯಕ್ಸೆಲ್ ಮತ್ತು ಬಕ್ ‘ವಾಸನೆ ಹೇಗೆ ಗ್ರಹಿಸಲಾಗುತ್ತದೆ’ ಎಂಬುದಕ್ಕೆ ನೊಬೆಲ್ ಪಾರಿತೋಷಕ ಪಡೆದದ್ದು. ಸರಳವಾಗಿ ಹೇಳಬೇಕೆಂದರೆ ಮಿದುಳಿನಿಂದ ನರಗಳು ಮೂಗಿಗೆ ಸಂಪರ್ಕ ಹೊಂದಿವೆ. ಹೊರಗಿನ ಗಾಳಿಯಿಂದ ವಾಸನೆಯ ಕಣಗಳು ಈ ನರಗಳ ತುದಿಯ ಮೇಲಿರುವ ‘ಗ್ರಾಹಕ’ಗಳಿಗೆ ಕೊಂಡಿ ಹಾಕಿದಾಗ, ನರಗಳ ಮೂಲಕ ಸಂಕೇತ ಮಿದುಳಿಗೆ ರವಾನೆಯಾಗುತ್ತದೆ. ಮಾನವರಲ್ಲಿ ಇಂತಹ 400 ಬಗೆಯ ಬೇರೆ ಬೇರೆ ರಿಸೆಪ್ಟಾರ್‌ಗಳಿವೆ. ವ್ಯಕ್ತಿಯಿಂದ ವ್ಯಕ್ತಿಗೆ ಈ ರಿಸೆಪ್ಟಾರ್ ವಿಧಗಳಲ್ಲಿಯೂ ಭಿನ್ನತೆಯಿರಲು ಸಾಧ್ಯವಿದೆ.
ಫೆರೋಮೋನ್‌ಗಳ ವಿಷಯ ಬಂದಾಗ ಕಂಕುಳಿನ ಬಗೆಗೆ ಮಾತನಾಡದಿರಲು ಸಾಧ್ಯವೇ ಇಲ್ಲ. ಕಂಕುಳಿನಲ್ಲಿರುವ ಬೆವರು ಸ್ರವಿಸುವ ಗ್ರಂಥಿಗಳು ರಾಸಾಯನಿಕವನ್ನು ಹೊರ ಹಾಕಿದಾಗ ಅವುಗಳಿಗೆ ವಾಸನೆಯಿರುವುದಿಲ್ಲ. ಸುತ್ತಲಿರುವ ಕೂದಲಿನಲ್ಲಿರುವ ಬ್ಯಾಕ್ಟೀರಿಯಾಗಳು ಅವುಗಳಿಗೆ ರಾಸಾಯನಿಕಗಳನ್ನು ಸೇರಿಸಿ, ವಾಸನೆ ಹೊರಹೊಮ್ಮುವಂತೆ ಮಾಡುತ್ತವೆ. ಕಂಕುಳಿನ ಕೂದಲು ತೆಗೆದು ಹಾಕಿದಾಗ, ಬೆವರುವುದು ನಿಲ್ಲುವುದಿಲ್ಲ. ಆದರೆ ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಯುವುದರಿಂದ, ವಾಸನೆಯೂ ಕಡಿಮೆಯಾಗುತ್ತದೆ. ಜಗತ್ತಿನ 20% ಜನಸಂಖ್ಯೆ ವಾಸನಾಮಯ ಕಂಕುಳನ್ನು ಹೊಂದಿರುವುದಿಲ್ಲ! ಚೀನಾ, ಜಪಾನ್, ಕೊರಿಯಾ, ಈಶಾನ್ಯ ರಾಜ್ಯಗಳ ಸಣ್ಣ ಕಣ್ಣಿನ, ತೆಳು ಮೈಯ, ರೋಮರಹಿತ ಜನರ ಕಂಕುಳುಗಳಲ್ಲಿ ಬ್ಯಾಕ್ಟೀರಿಯಾಗಳಿಗೆ ಕೆಲಸವೇ ಇಲ್ಲ !
ಆದರೆ ‘ಫೆರೋಮೋನ್’ಗಳ ಬಗೆಗೆ ಇನ್ನಷ್ಟುಸಂಶೋಧನೆಗಳನ್ನು ಮಾಡುವ ಉಪಯೋಗವಾದರೂ ಏನು? ಮಗು ತಾಯಿಯ ಎದೆಹಾಲು ಕುಡಿಯುವಾಗ, ಆಕೆಯ ಮೊಲೆತೊಟ್ಟು ಮಗುವಿನ ತಲೆಯಿಂದ ಮರೆಯಾಗಿರುತ್ತದೆಯಷ್ಟೆ. ಅಲ್ಲಿ ಗಮನಿಸಿ ನೋಡಿದರೆ ಒಂದು ಬಿಳೀ ಹನಿ ಕಾಣಿಸುತ್ತದೆ. ‘ಏರಿಯೋಲಾರ್’ ಗ್ರಂಥಿಯಿಂದ ಬರುವ ಹನಿಯಿದು. ಎಲ್ಲರ (ಸ್ತ್ರೀ-ಪುರುಷರು-ಇಬ್ಬರ) ಸ್ತನಗಳ ಮೊಲೆ ತೊಟ್ಟಿನ ಸುತ್ತ ಈ ಏರಿಯೋಲಾರ್ ಗ್ರಂಥಿಗಳಿರುತ್ತವೆ. ಚಿಕ್ಕ ಚಿಕ್ಕ ಗಂಡು ಸೂಜಿಯ ತಲೆಗಳಂತೆ ಅವು ಕಾಣುತ್ತವೆ. ಹೆರಿಗೆಯಾದ ತಕ್ಷಣ ಇವುಗಳಿಂದ ಹಾಲಿನಂತಹದೇ ದ್ರವ ಹೊರಬರುತ್ತದೆ. ಇದರ ಪರಿಣಾಮದ ಬಗೆಗೆ ಪ್ರಯೋಗವೊಂದನ್ನು ಮಾಡಲಾಯಿತು. ಒಂದು ಸ್ವಚ್ಛ ಗಾಜಿನ ಕಡ್ಡಿ (ಲ್ಯಾಬ್‌ನಲ್ಲಿ ಉಪಯೋಗಿಸುವಂತಹದ್ದು) ಮಲಗಿರುವ ಶಿಶುವಿನ ಮುಂದೆ ಹಿಡಿದರೆ ಮಗು ಲಕ್ಷ್ಯ ಹರಿಸಲೇ ಇಲ್ಲ. ಅದೇ ಯಾವುದೇ ಹಾಲೂಡಿಸುವ ತಾಯಿಯ ಬಳಿ ಹೋಗಿ, ಏರಿಯೋಲಾರ್ ಗ್ರಂಥಿಯಿಂದ ಬರುವ ಈ ದ್ರವವನ್ನು ತೆಗೆದುಕೊಂಡು ಅದೇ ಗಾಜಿನ ಕಡ್ಡಿಯನ್ನು ಮಗುವಿನ ಮೂಗಿನ ಬಳಿ ಹಿಡಿದರೆ, ಮಗು ನಾಲಿಗೆ ಹೊರ ಚಾಚಿ ‘ಲೊಚಲೊಚನೆ’ ಹಾಲು ಕುಡಿಯುವಂತೆ ಚಪ್ಪರಿಸತೊಡಗಿತು. ಇದು ಯಾವ ತಾಯಿಯದ್ದಾದರೂ ಪರವಾಗಿಲ್ಲ ಎನ್ನುವುದು ವಿಶೇಷ. ಇದೂ ಒಂದು ಫೆರೋಮೋನ್ !
ಇದು ಸ್ವಾರಸ್ಯಕರವಷ್ಟೇ ಅಲ್ಲ, ಬಹು ಉಪಯುಕ್ತ ಮಾಹಿತಿಯೂ ಹೌದು. ಮಹಿಳೆಯರಿಗೆ ಇರುವ ಏರಿಯೋಲಾರ್ ಗ್ರಂಥಿಗಳ ಸಂಖ್ಯೆಗೂ, ಎಷ್ಟುಸುಲಭವಾಗಿ ಮಗು ಮೊಲೆ ಚೀಪುತ್ತದೆ ಎಂಬುದಕ್ಕೂ ಸಂಬಂಧವಿದೆ. ವಾಸನಾಯುಕ್ತ ದ್ರವ ಹೆಚ್ಚು ಸ್ರವಿಸಿದಷ್ಟೂ, ಮಗು ಬೇಗ, ಶಕ್ತಿಯುತವಾಗಿ ಹಾಲು ಕುಡಿಯುತ್ತದೆ. ಸಸ್ತನಿಗಳಲ್ಲಿ ಜೀವಾಪಾಯ ಅತಿ ಹೆಚ್ಚು ಯಾವಾಗ? ಹುಟ್ಟಿದಾಕ್ಷಣದ ಕೆಲವು ಗಳಿಗೆಗಳಲ್ಲಿ. ಆಗ ಆಹಾರ ಸಿಗದಿದ್ದರೆ ಮಿದುಳಿಗೆ, ಜೀವಕ್ಕೆ ಅಪಾಯ. ಪ್ರಿಮೆಚೂರ್ ಶಿಶುಗಳಲ್ಲಿ, ಬೇಕಾದ ಪ್ರಚೋದನೆ ನೀಡುವ ಶಕ್ತಿ ಈ ರಾಸಾಯನಿಕದಿಂದ ದೊರೆಯುತ್ತದೆ ಎಂಬುದು ಗಮನಾರ್ಹ. ಈ ರಾಸಾಯನಿಕವನ್ನು ಬೇರ್ಪಡಿಸಿ, ನಮಗೆ ಅದನ್ನು ಉತ್ಪಾದಿಸುವುದು ಸಾಧ್ಯವಾದರೆ, ಆಗ ಶಿಶುಮರಣವನ್ನು ನಾವು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಅಂದರೆ ಫೆರೋಮೋನ್‌ಗಳು ಕೇವಲ ‘ಶಂಗಾರ’ಕ್ಕೆ ಸಂಬಂಧಿಸಿದವಲ್ಲ. ಅವು ದೇಹದ ವಾಸನೆಗೆ ಕಾರಣವಾದ, ರಾಸಾಯನಿಕಗಳಷ್ಟೇ ಅಲ್ಲ, ಅವುಗಳಿಂದ ಉಪಯುಕ್ತತೆಗಳೂ ಇವೆ. ಅಧ್ಯಯನಗಳು ನಡೆದರೆ ಅವುಗಳ ಇನ್ನಷ್ಟುಸಾಧ್ಯತೆಗಳು ಹೊರಬೀಳುತ್ತವೆ.