ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿ ವರ್ಗಾವಣೆಗೊಂಡು 20 ದಿನಗಳು ಕಳೆದಿದ್ದರೂ ಬದಲಿ ವ್ಯವಸ್ಥೆ ಇಲ್ಲದ ಕಾರಣ, ಬಿಪಿ, ಶುಗರ್ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಗುಂಡ್ಲುಪೇಟೆ (ಆ.16): ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ರ ತವರು ಹೋಬಳಿ ಕೇಂದ್ರವಾದ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿ ವರ್ಗಾವಣೆಗೊಂಡು 20 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಬಿಪಿ, ಶುಗರ್, ಹೃದಯ ಸಂಬಂಧಿ, ಶ್ವಾಸಕೋಶ, ನರ, ಮೆದುಳು ರೋಗಿಗಳಿಗೆ ಚಿಕಿತ್ಸೆಯೇ ಸಿಗದೆ ರೋಗಿಗಳು ಪರದಾಡುತ್ತಿರುವ ಪರಿಸ್ಥಿತಿ ಎದುರಾಗಿದೆ.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿ ಫಿಜಿಷಿಯನ್ ಡಾ.ಶಿವಸ್ವಾಮಿ ವರ್ಗಾವಣೆಗೊಂಡು 20 ದಿನಗಳು ಕಳೆದಿದ್ದರೂ ಅಂದಿನಿಂದ ಇಂದಿನವರೆಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರವಳಿಕೆ, ಮಕ್ಕಳು, ದಂತ, ಹೆರಿಗೆ ವೈದ್ಯರೇ ಆಸ್ಪತ್ರೆಗೆ ಬಂದ ರೋಗಿಗಳಿಗೆ ತಮಗೆ ತಿಳಿದಷ್ಟು ಔಷಧೋಪಚಾರ ಮಾಡಿಕೊಂಡು ಬರುತ್ತಿದ್ದಾರೆ.
undefined
ಇದರಿಂದ ಆಸ್ಪತ್ರೆಗೆ ಶುಗರ್, ಬಿಪಿ, ಹೃದಯ ಸಂಬಂಧಿ, ಶ್ವಾಸಕೋಶ, ನರ, ಮೆದುಳು ಸಮಸ್ಯೆ ಹೊತ್ತು ಬರುವ ರೋಗಿಗಳಿಗೆ ಚಿಕಿತ್ಸೆ ಸಿಗದೆ ನಗರ ಪ್ರದೇಶಗಳ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಬೇಕಾಗಿದ್ದು, ಬಡವರಿಗೆ ತೀವ್ರ ಅನಾನುಕೂಲವಾಗಿದೆ.
ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರವಳಿಕೆ ವೈದ್ಯ ಡಾ.ಪ್ರಜ್ವಲ್ ಕುಮಾರ್, ಮಕ್ಕಳ ವೈದ್ಯೆ ಡಾ.ವಸೂಧ, ಹೆರಿಗೆ ವೈದ್ಯೆ ಡಾ.ಲೀನಾ, ದಂತ ವೈದ್ಯ ಡಾ.ವಿಕ್ರಂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೃದಯ ಸಂಬಂಧಿ, ಬಿಪಿ, ಶುಗರ್, ಶ್ವಾಸಕೋಶ, ನರ, ಮೆದುಳು ಕಾಯಿಲೆಗಳ ಬಗ್ಗೆ ಅರಿವು ಇಲ್ಲದಿದ್ದರೂ ಆಸ್ಪತ್ರೆಗೆ ಬಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಅರವಳಿಕೆ, ಮಕ್ಕಳ, ಹೆರಿಗೆ, ದಂತ ವೈದ್ಯರ ಕೆಲಸವೇ ಬೇರೆ, ಫಿಜಿಷಿಯನ್ ವೈದ್ಯರ ಕೆಲಸವೇ ಬೇರೆ ಹಾಗಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರಕಬೇಕಿದೆ. ಹಾಗಾಗಿ ಹಿರಿಯ ವೈದ್ಯಾಧಿಕಾರಿ ನೇಮಿಸುವ ಕೆಲಸ ಜಿಲ್ಲಾಡಳತ ಮಾಡಲಿ ಎಂಬುದು ಕನ್ನಡಪ್ರಭದ ಕಳಕಳಿ.
ಸಿಎಚ್‌ಸಿನಲ್ಲಿ ಫಿಜಿಷಿಯನ್ ಹುದ್ದೇನೇ ಇಲ್ಲ!: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫಿಜಿಷಿಯನ್ ವೈದ್ಯರ ಹುದ್ದೆಯೆ ಇಲ್ಲ. ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫಿಜಿಷಿಯನ್ ಆಗಿದ್ದ ಡಾ.ಶಿವಸ್ವಾಮಿ ಅವರನ್ನು ಬೇಗೂರು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಎಂಬ ಕಾರಣಕ್ಕಾಗಿ ಆರೋಗ್ಯ ಇಲಾಖೆ ನೇಮಿಸಿತ್ತು. ಹಲವು ವರ್ಷಗಳ ಕಾಲ ಸೇವೆ ಕೂಡ ಸಲ್ಲಿಸಿದ್ದರು. ಆಸ್ಪತ್ರೆಯಲ್ಲಿ ಫಿಜಿಷಿಯನ್ ಹುದ್ದೆ ಇಲ್ಲದ ಬೇಗೂರು ಆಸ್ಪತ್ರೆಯಲ್ಲಿದ್ದ ಫಿಜಿಷಿಯನ್ ಡಾ.ಶಿವಸ್ವಾಮಿ ಅವರನ್ನು ಸಿಮ್ಸ್ ಗೆ ವರ್ಗಾಯಿಸಲಾಗಿದೆ. ಆದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಫಿಜಿಷಿಯನ್ ಹುದ್ದೆ ಇಲ್ಲದೆ ಇದ್ದರೆ ಆಸ್ಪತ್ರೆ ಇದ್ದೂ ಇಲ್ಲದಂತಾಗಲಿದೆ.
ಬೇಗೂರು ಆಸ್ಪತ್ರೆಯಲ್ಲಿದ್ದ ಫಿಜಿಷಿಯನ್ ವೈದ್ಯರು ವರ್ಗಾವಣೆಯಾಗಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಫಿಜಿಷಿಯನ್ ಹುದ್ದೇ ಇಲ್ಲ. ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ವೈದ್ಯರು ಬರಬೇಕಿದೆ. ಅಲ್ಲಿ ಇರುವ ವೈದ್ಯರೇ ತಪಾಸಣೆ, ಚಿಕಿತ್ಸೆ ನೀಡಲಿದ್ದಾರೆ. ನಾನು ಕೂಡ ಆಗಾಗ್ಗೆ ಭೇಟಿ ನೀಡುವೆ.
-ಅಲೀಂಪಾಶ, ತಾಲೂಕು ಆರೋಗ್ಯಾಧಿಕಾರಿ