
ಕಾರವಾರ (ಡಿ.30) : ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೋವಿಡ್ ಸೋಂಕು ಕಡಿಮೆಯಾಯಿತು ಎಂದು ಜನರು ನಿಟ್ಟುಸಿರು ಬಿಡುತ್ತಿರುವಾಗಲೇ ಮತ್ತೆ ಹಲವೆಡೆ ಈ ಕಾಯಿಲೆ ಆತಂಕ ಉಂಟಾಗಿದೆ. ಕೋವಿಡ್‌ನಿಂದ ಪಾರಾಗಲು ಜನತೆ ಪುನಃ ಲಸಿಕೆಗೆ ಮುಗಿಬೀಳುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ 500 ಡೋಸ್ ಕೋವ್ಯಾಕ್ಸಿನ್(Covaccin) ಮಾತ್ರ ಇದೆ. ಕೋವಿಶೀಲ್ಡ್ ಲಸಿಕೆ(Covishield vaccine) ಇಲ್ಲವೇ ಇಲ್ಲ. ಜನರು ಲಸಿಕೆ ತೆಗೆದುಕೊಳ್ಳಲು ಆಸಕ್ತಿ ತೋರದ ಕಾರಣ ಲಸಿಕೆಯನ್ನು ಆರೋಗ್ಯ ಇಲಾಖೆಯು ತರಿಸುತ್ತಿಲ್ಲ. ಒಂದು ಬಾಟಲಿ ತೆರೆದರೆ 10-12 ಜನರಿಗೆ ನೀಡಬಹುದಾಗಿದ್ದು, ಅದನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲ. ಹೀಗಾಗಿ ಒಂದಿಬ್ಬರು ಆಸಕ್ತರು ಲಸಿಕೆ ತೆಗೆದುಕೊಳ್ಳಲು ಬಂದರೆ ಅವರಿಗೆ ನೀಡಲು ಆಗುತ್ತಿಲ್ಲ.
Covid Omicron BF.7 variant: ಧಾರವಾಡ ಜಿಲ್ಲಾಡಳಿತ ಹೈ ಅಲರ್ಟ್!
ಈ ಹಿಂದೆ ಸೋಂಕು ಉಲ್ಬಣಿಸಿದ್ದಾಗ ಲಸಿಕೆ ಪಡೆಯಲು ಜನರು ಮುಗಿಬಿದ್ದಿದ್ದರು. ಬೆಳ್ಳಂಬೆಳಗ್ಗೆಯೇ ಲಸಿಕಾ ಕೇಂದ್ರಗಳಿಗೆ ಹಾಜರಾಗಿ ಲಸಿಕೆ ಪಡೆದುಕೊಳ್ಳುತ್ತಿದ್ದರು. ಪ್ರಾರಂಭದಲ್ಲಿ ಲಸಿಕೆ ಪೂರೈಕೆ ಕಡಿಮೆ ಇದ್ದುದರಿಂದ ಲಸಿಕಾ ಕೇಂದ್ರಕ್ಕೆ ಬಂದ ಎಲ್ಲರಿಗೂ ಲಸಿಕೆ ಸಿಗದೇ ಅಧಿಕಾರಿಗಳ ಜತೆಗೆ ವಾಗ್ವಾದ ಕೂಡ ಉಂಟಾಗಿತ್ತು. ಆರಂಭದಲ್ಲಿ ಲಸಿಕೆ ಉತ್ಪಾದನೆ ಕಡಿಮೆ ಇರುವುದರಿಂದ ವೈದ್ಯಕೀಯ, ಪೊಲೀಸ್ ಒಳಗೊಂಡು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹಂತ ಹಂತವಾಗಿ ಲಸಿಕೆಯನ್ನು ನೀಡುತ್ತಾ ಬರಲಾಗಿತ್ತು. ಬಳಿಕ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಿತ್ತು.
ಕೋವಿಡ್(Covid-19) ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಲಸಿಕೆ ಬಗ್ಗೆ ನಿರ್ಲಕ್ಷ್ಯ ತಾಳಿದ್ದು, ಜಿಲ್ಲೆಯಲ್ಲಿ ಇರುವ 11 ಲಕ್ಷ ಜನರಲ್ಲಿ ಬೂಸ್ಟರ್ ಡೋಸ್ ಕೇವಲ 2 ಲಕ್ಷ ಜನರು ತೆಗೆದುಕೊಂಡಿದ್ದಾರೆ. ಆದರೆ ಮತ್ತೆ ಕೋವಿಡ್ ಆತಂಕ ಮನೆ ಮಾಡಿದ್ದು, ಬೂಸ್ಟರ್ ಡೋಸ್‌ಗೆ ಬೇಡಿಕೆ ಬರುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ 15.45 ಲಕ್ಷ ಜನರಿದ್ದಾರೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದ್ದು, ಅವರಲ್ಲಿ 12 ವರ್ಷ ಮೇಲ್ಪಟ್ಟವರು 11.76 ಲಕ್ಷ ಜನರಾಗಿದ್ದಾರೆ. ಇವರಲ್ಲಿ 11.76 ಲಕ್ಷ ಜನರು ಮೊದಲ, 11.87 ಲಕ್ಷ ಜನರು ಎರಡನೇ ಡೋಸ್ (ಇತರ ಜಿಲ್ಲೆಯ ಕೆಲವರೂ ಸೇರಿ) ಪಡೆದುಕೊಂಡಿದ್ದಾರೆ.
ಭಾರತಕ್ಕೆ ಕೋವಿಡ್ 4ನೇ ಅಲೆ ಭೀತಿ, ಹೊಸ ವರ್ಷದ ಆರಂಭದಿಂದ ನಿರ್ಬಂಧ ಜಾರಿ!
ತಾಲೂಕಾವಾರು ಗಮನಿಸುವುದಾದರೆ ಅಂಕೋಲಾ 11985, ಭಟ್ಕಳ 10074, ಹಳಿಯಾಳ 29906, ಹೊನ್ನಾವರ 20796, ಜೋಯಿಡಾ 5444, ಕಾರವಾರ 40468, ಕುಮಟಾ 34080, ಮುಂಡಗೋಡ 28168, ಸಿದ್ದಾಪುರ 9113, ಶಿರಸಿ 31705, ಯಲ್ಲಾಪುರ 10764 ಜನರು ಮಾತ್ರ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಸೋಂಕು ಉಲ್ಬಣಿಸಿದ ನಂತರ ಎಚ್ಚೆತ್ತು ಲಸಿಕೆ ತೆಗೆದುಕೊಳ್ಳಲು ಮುಂದಾಗುವ ಬದಲು ಈಗಲೇ ಮುಂಜಾಗ್ರತೆ ವಹಿಸಿ ಬೂಸ್ಟರ್ ಡೋಸ್ ಪಡೆದುಕೊಳ್ಳುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.