
ಬೆಂಗಳೂರು (ಡಿ.22): ಜಾಗತಿಕ ಮಟ್ಟದಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ವರದಿಯನ್ನು ಅಧ್ಯಯನ ಮಾಡಲಾಗಿದೆ. ಅದರ ಆಧಾರದಲ್ಲಿ ರಾಜ್ಯದಲ್ಲಿರುವ ಎಲ್ಲ ವಿವಿಧ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರು (ಐಎಲ್ ಐ) ಹಾಗೂ ಉಸಿರಾಟ ಸಮಸ್ಯೆ ಇರುವವರು (ಸಾರಿ) ಇರುವ ಎಲ್ಲ ಪ್ರಕರಣಗಳನ್ನು ಕಡ್ಡಾಯ ಟೆಸ್ಟಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ. ಜೊತೆಗೆ, ಎಲ್ಲ ಒಳಾಂಗಣ ಪ್ರದೇಶದ ಮಾಸ್ಕ್ ಧರಿಸಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸಲಹೆಯನ್ನು ನೀಡಿದ್ದು, ಅದನ್ನು ಮಾರ್ಗಸೂಚಿಯಾಗಿ ಜಾರಿಗೊಳಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್ ಅವರು, ಈಗಾಗಲೇ ಕೋವಿಡ್ ಸೋಂಕು ಹರಡುವ ಕುರಿತು ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದ್ದಾರೆ. ವಿವಿಧ ದೇಶಗಳಲ್ಲಿರುವ ಸೋಂಕು ಹರಡುವಿಕೆ ಪ್ರಮಾಣ ಮತ್ತು ಅದರಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ಇದರ ಆಧಾರದಲ್ಲಿ ಐಎಲ್ ಐ ಹಾಗೂ ಸಾರಿ ಇರುವ ಎಲ್ಲ ಪ್ರಕರಣಗಳನ್ನು ಕಡ್ಡಾಯ ಟೆಸ್ಟಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ. ಜೊತೆಗೆ ಒಳಾಂಗಣ ಪ್ರದೇಶದ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ಆತಂಕದ ಬೆನ್ನಲ್ಲೇ ಪ್ರಧಾನಿ ಮೋದಿ ತುರ್ತು ಸಭೆ, ಮಹತ್ವದ ಸೂಚನೆ!
ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ: ಜಾಗತಿಕವಾಗಿ ವಿವಿಧ ವಿದೇಶಗಳು ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ರ್ಯಾಂಡಮ್ ಆಗಿ ಟೆಸ್ಟಿಂಗ್ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಹೊರಡಿಸಿದೆ. ಇದರ ಅನ್ವಯ ಕಾರ್ಯ ನಿರ್ವಹಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಕಾರ್ಯನಿರ್ವಹಣೆ ಬಗ್ಗೆ ತಾಂತ್ರಿಕ ಪರಿಶೀಲನೆ. ಸುಗಮ ಕೆಲಸ ಮಾಡುವ ನಿಟ್ಟಿನಲ್ಲಿ ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಗೆ ಹಾಸಿಗೆ ಮೀಸಲು ಇಡಲು ಸೂಚನೆ ನೀಡಲಾಗಿದೆ. ಮತ್ತೊಂದೆಡೆ, ಖಾಸಗಿ ಆಸ್ಪತ್ರೆಗಳಿಗೂ ಕೋವಿಡ್ ಪ್ರತ್ಯೇಕ ಬೆಡ್ ಮೀಸಲಿಡಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಶೇ.100 ಬೂಸ್ಟರ್ ಡೋಸ್ ನೀಡಲು ಕ್ರಮ: ಬೂಸ್ಟರ್ ಡೋಸ್ ಲಸಿಕೆಗೆ ವಿಶೇಷ ಪ್ರಾಶಸ್ತ್ಯ ಕೊಡಲಾಗಿದೆ. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕಿನಲ್ಲಿ ವಿಶೇಷ ಲಸಿಕೆ ಕ್ಯಾಂಪ್ ನಡೆಸಲು ನಿರ್ಧಾರ ಮಾಡಲಾಗಿದೆ. ಮೂರನೇ ಡೊಸ್ ಶೇ.100 ಟಾರ್ಗೆಟ್ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತಿದೆ. ರಾಜ್ಯದಲ್ಲಿ ಅಗತ್ಯ ಲಸಿಕೆ ಸಂಗ್ರಹ ಮಾಡಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಸರ್ವ ರೀತಿಯಲ್ಲಿ ಸಿದ್ಧತೆ ಕೈಗೊಳ್ಳುತ್ತಿದೆ. ಮೂರನೇ ಡೋಸ್ ಆದಷ್ಟು ಶೀಘ್ರವಾಗಿ ಕೈಗೊಳ್ಳಬೇಕು. ಈ ಬಗ್ಗೆ ಉದಾಸೀನತೆ ಬೇಡ. ಮೂರನೇ ಡೋಸ್ ನಿಂದ ಯಾವುದೇ ಅಪಾಯ ಇಲ್ಲ. ಲಸಿಕೆಯಿಂದ ಅಪಾಯ ಆಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ವರದಿ ಇಲ್ಲ. ಲಸಿಕೆ ತೆಗೆದುಕೊಳ್ಳುವ ಮೂಲಕ ರಕ್ಷಣೆ ಮಾಡಿಕೊಳ್ಳಬೇಕು. ಮಾಸ್ಕ್ ಧರಿಸುವ ಮೂಲಕ ಕೋವಿಡ್ ತಡೆಗಟ್ಟಬಹುದು. ಯಾವುದೇ ಆತಂಕ ಸೃಷ್ಟಿ ಆಗುವುದು ಬೇಡ ಎಂದು ತಿಳಿಸಿದರು.
ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕೊರೋನಾ ಆತಂಕ: ಬೆಂಗಳೂರಿನಲ್ಲಿ ಅಲರ್ಟ್
ಬಿಎಫ್ 7 ಸೋಂಕು ಬರುವ ಸಾಧ್ಯತೆಯಿದೆ: ಈಗಾಘಲೇ ಚೀನಾದಲ್ಲಿ ಬಿಎಫ್ 7 ರೂಪಾಂತರಿ ಕೋವಿಡ್ ವೈರಸ್ ತೀವ್ರ ಸಮಸ್ಯೆಯನ್ನು ಉಂಟುಮಾಡಿತ್ತು. ಈ ಅಪಾಯಕಾರಿ ಸೋಂಕು ಯಾವುದೇ ಕ್ಷಣಕ್ಕೂ ನಮ್ಮ ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ. ಆದ್ದರಿಂದ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಹೊಸ ವರ್ಷ ಆಚರಣೆ ವಿಚಾರ ಹೊರಾಂಗಣ ಪ್ರದೇಶದಲ್ಲಿ ದೊಡ್ಡ ಸಮಸ್ಯೆ ಆಗಲ್ಲ. ಆದರೆ, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಮೆಟ್ರೋ, ಶಾಪಿಂಗ್ ಮಾಲ್‌ಗಳಲ್ಲಿ ಮಾಸ್ಕ್ ಕಡ್ಡಾಯ: ಇನ್ನು ರಾಜ್ಯ ಸರ್ಕಾರ ಎಸಿ ಇರುವಂತಹ ಎಲ್ಲ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆಯಾದ ಮೆಟ್ರೋ, ಬಸ್ಸು, ಆಟೋ, ಟ್ಯಾಕ್ಸಿ, ಶಾಪಿಂಗ್ ಸಾರ್ವಜನಿಕ ಪ್ರದೇಶಗಳಾದ ಮಾಲ್‌ಗಳಲ್ಲಿ, ಮಾರುಕಟ್ಟೆಗಳಲ್ಲಿ, ಚಿತ್ರಮಂದಿರಗಳು, ಹೋಟೆಲ್‌ಗಳು, ಧಾರ್ಮಿಕ ಕೇಂದ್ರಗಳಲ್ಲಿ ಮಾಸ್ಕ್ ಕಡ್ಡಾಯ ಮಾಡುವ ಸಾಧ್ಯತೆಯಿದೆ. ಜೊತೆಗೆ, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡುವುದನ್ನು ಕೂಡ ಕಡ್ಡಾಯ ಮಾಡುವ ಸಾಧ್ಯತೆಯಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.