ನೆರೆಯ ಕೇರಳದಲ್ಲಿ ಕೊರೋನಾದ ಹೊಸ ರೂಪಾಂತರಿ ಪತ್ತೆ ಮತ್ತು ದೇಶಾದ್ಯಂತ ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗರ್ಭಿಣಿ, ಬಾಣಂತಿ ಯರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಮಾಸ್ಜ್ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಕೇರಳ-ತಮಿಳುನಾಡು ಗಡಿ ಜಿಲ್ಲೆಗಳಲ್ಲಿ ಪರೀಕ್ಷೆ ಹೆಚ್ಚಳ ಮಾಡಲು ರಾಜ್ಯ ಆರೋಗ್ಯ ಇಲಾಖೆ ತೀರ್ಮಾನಿಸಿದೆ. ದಿನದಿಂದ ದಿನಕ್ಕೆ ಕೇರಳದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆ ಸೋಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸುತ್ತೋಲೆ ಹೊರಡಿಸಿದೆ.
ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ
ಕೇರಳ ಮತ್ತು ತಮಿಳುನಾಡು ಗಡಿ ಭಾಗದ ಜಿಲ್ಲೆಗಳಲ್ಲಿ ವಿಶೇಷವಾಗಿ ಸರ್ವೇಕ್ಷಣೆ ಹೆಚ್ಚಳ, ನಿರ್ಬಂಧ ಹೇರುವ ಅವಶ್ಯಕತೆಯಿಲ್ಲ. ಆದರೂ, ಮುನ್ನೆಚ್ಚರಿಕೆ ಕೇರಳ, ತಮಿಳುನಾಡು ಗಡಿಭಾಗ ಜಿಲ್ಲೆಗಳಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅಗತ್ಯ ಸಂಖ್ಯೆಯಲ್ಲಿ ಪರೀಕ್ಷೆ ಮಾಡಬೇಕು ಎಂದು ಸೂಚಿಸಲಾಗಿದೆ. ಸರ್ಕಾರಿ, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಎಲ್ಲ ತೀವ್ರವಾದ ಸೋಂಕಿನ ಪ್ರಕರಣಗಳು ಹಾಗೂ 20 ಇನ್‌ಫ್ಲುಯೆನ್ಜಾ ರೀತಿಯ ಕಾಯಿಲೆ (ಐಎಲ್‌ಐ) ಪ್ರಕರಣಗಳ ಪೈಕಿ ಒಂದು ಐಎಲ್‌ಐ ಪ್ರಕರಣವನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ.
ಮಕ್ಕಳಲ್ಲಿ ದಿಢೀರ್ ನ್ಯುಮೋನಿಯಾಕ್ಕೆ ಪರಿಚಿತ ವೈರಸ್ ಕಾರಣ ಎಂದ ಚೀನಾ
ಆತಂಕ ಬೇಡ, ಎಚ್ಚರದಿಂದಿರಿ
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಕೊರೋನ್ ಆತಂಕವಿಲ್ಲದಿದ್ದರೂ ಪಕ್ಕದ ಕೇರಳ ರಾಜ್ಯದಲ್ಲಿ ಕೊರೋನಾ ಉಪತಳಿ ಜೆಎನ್ 1 ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ವಹಿಸ ಬೇಕಾದ ಮುನ್ನೆಚ್ಚರಿಕೆ ಕುರಿತಂತೆ ಆರೋಗ್ಯ ಇಲಾಖೆ ಕೆಲ ಸಲಹೆ ನೀಡಿದೆ. ಚಳಿಗಾಲ,ಕ್ರಿಸ್‌ಮಸ್ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೊರೋನಾ ಹೆಚ್ಚಾಗಲಿದ್ದು, ಅದಕ್ಕಾಗಿ ಜನರು ಮುನ್ನೆಚ್ಚರಿಕೆ ವಹಿಸಬೇಕು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಜತೆಗೆ ಗರ್ಭಿಣಿಯರು, ಬಾಣಂತಿ ಯರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಹೆಚ್ಚು ಜನಸಂದಣಿಯ ಪ್ರದೇಶಗಳಿಗೆ ಹೋಗಬಾರದು. ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಇನ್ನಿತರ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿರುವವರು ಕೂಡಲೇ ವೈದ್ಯಕೀಯ ಸಲಹೆ ಪಡೆಯಬೇಕು ಹಾಗೂ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಲಾಗಿದೆ.
ಡಬ್‌ಲ್ಯೂ ಜಿಎಸ್ ಪರೀಕ್ಷೆಗೆ ಸೂಚನೆ
ರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯಿದ್ದು, ಕೋವಿಡ್ 19 ಸೋಂಕಿನ ಲಕ್ಷಣ ಹೊಂದಿರುವವರು, ಗುಂಪಾಗಿ ವರದಿಯಾಗುವ ಪ್ರಕರಣಗಳು, ತೀವ್ರ ಸ್ವರೂಪದ ರೋಗ ಲಕ್ಷಣ ಹೊಂದಿದವರು, ಆಸ್ಪತ್ರೆಗೆ ದಾಖಲಾದ ಪ್ರಕರಣಗಳು, ಈ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಮತ್ತೊಮ್ಮೆ ಕೊರೋನಾ ಸೋಂಕಿಗೆ ಒಳಗಾದವರು, ಎರಡು ಡೋಸ್ ಕೊರೋನಾ ಲಸಿಕೆ ಪಡೆದಿದ್ದರೂ ಕೋವಿಡ್ 19 ಸೋಂಕಿಗೆ ತುತ್ತಾದವರು ಹಾಗೂ ಕೋವಿಡ್ 19ನಿಂದ ಮೃತಪಟ್ಟ ಪ್ರಕರಣ ಗಳನ್ನು ಸಂಪೂರ್ಣ ಜೀನೋಮ್ ಅನುಕ್ರಮ ಪರೀಕ್ಷೆಗೊಳಪಡಿಸುವಂತೆ ಸೂಚನೆ ನೀಡಿದೆ.
ಕೊರೊನಾ ಮಾದರಿಯಲ್ಲೇ ಮತ್ತೊಂದು ಮಾರಕ ಚೀನಾ ವೈರಸ್ ಪತ್ತೆ: ದಿಢೀರ್ ತಜ್ಞರ ಸಭೆ ಕರೆದ ಸರ್ಕಾರ
ಆಸ್ಪತ್ರೆಗಳಲ್ಲಿ ಸಿದ್ಧತೆ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗುವ 25ಕ್ಕಿಂತ ಕಡಿಮೆ ಕಟ್-ಆಫ್ (ಸಿಟಿ) ಮೌಲ್ಯ ಇರುವ ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಬೇಕು. ಕೊರೋನಾ ಪ್ರಕರಣಗಳು ಹೆಚ್ಚಾದರೆ ಅದನ್ನು ಸಮರ್ಪಕವಾಗಿ ನಿಭಾಯಿಸಲು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಜ್ವರ ಬಂದರೆ ವೈದ್ಯರ ಸಲಹೆ ಪಡೆಯಿರಿ
• 60 ಮೇಲ್ಪಟ್ಟವರು, ಗರ್ಭಿಣಿಯರು, ಬಾಣಂತಿ ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
• ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಗೆ ತೆರಳುವುದನ್ನು ನಾಗರಿಕರು ತಪ್ಪಿಸಬೇಕು
• ಜ್ವರ, ಕೆಮ್ಮು ನೆಗಡಿ ಸೇರಿ ಇತರೆ ಉಸಿರಾಟ ಸೋಂಕು ಲಕ್ಷಣ ಇದ್ದರೆ ವೈದ್ಯರನ್ನು ಕಾಣಬೇಕು
• ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು
• ವಿಮಾನ ನಿಲ್ದಾಣ ಹಾಗೂ ವಿಮಾನದ ಒಳಗೆ ಮಾಸ್ಕ್ ಧರಿಸಬೇಕು: ಆರೋಗ್ಯ ಇಲಾಖೆ ಸಲಹೆ
• ಇಂದು ಕೋವಿಡ್ ಮಾರ್ಗಸೂಚಿ ಪ್ರಕಟ ಸಾಧ್ಯತೆ