Male Infertility: ಪುರುಷರ ಬಂಜೆತನ ಪತ್ತೆ ಮಾಡೋ ಪರೀಕ್ಷೆಗಳಿವು!

By Suvarna NewsFirst Published Jul 16, 2022, 11:12 AM IST
Highlights

ಬಂಜೆತನದ ಸಮಸ್ಯೆ ಮಹಿಳೆಯರಲ್ಲಿ ಮಾತ್ರವೇ ಕಂಡುಬರುವುದಿಲ್ಲ. ಜೀವನಶೈಲಿ, ಒತ್ತಡದ ಕಾರಣದಿಂದ ಪುರುಷರಲ್ಲೂ ಇತ್ತೀಚೆಗೆ ಬಂಜೆತನ ಹೆಚ್ಚಾಗುತ್ತಿದೆ. ಕೆಲವು ಪರೀಕ್ಷೆಗಳ ಮೂಲಕ ಪುರುಷರಲ್ಲಿ ಕಂಡುಬರುವ ಬಂಜೆತನದ ಮೂಲಕಾರಣಗಳನ್ನು ಅರಿತುಕೊಳ್ಳಬಹುದು.

ಮದುವೆಯಾದ ಒಂದೆರಡು ವರ್ಷಗಳಲ್ಲಿ ಮಗುವಾಗದಿದ್ದರೆ ಸಾಮಾನ್ಯವಾಗಿ ಎಲ್ಲರೂ ಮಹಿಳೆಯನ್ನು ಪ್ರಶ್ನಿಸುತ್ತಾರೆ. ಸಂಬಂಧಿಸಿದ ಪರೀಕ್ಷೆಗಳನ್ನು ಮಾಡುವುದಕ್ಕೆ ಸಲಹೆ ನೀಡುತ್ತಾರೆ. ಸಮಾಜದ ಸಾಮಾನ್ಯ ಗ್ರಹಿಕೆ ಎಂದರೆ, ಬಂಜೆತನದ ಸಮಸ್ಯೆ ಹೆಚ್ಚಾಗಿ ಮಹಿಳೆಯರಲ್ಲೇ ಇರುತ್ತದೆ ಎನ್ನುವುದು. ಆದರೆ, ಈ ಸಮಸ್ಯೆ ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಮಾತ್ರ ಕಂಡುಬರುವುದಿಲ್ಲ. ಪುರುಷರಲ್ಲೂ ಅಷ್ಟೇ ಪ್ರಮಾಣದಲ್ಲಿ ಕಂಡುಬರುತ್ತಿದೆ. ಜೀವನಶೈಲಿ, ಒತ್ತಡದ ಬದುಕು, ಆಹಾರ ಪದ್ಧತಿಯಲ್ಲಿ ಆಗಿರುವ ಆಮೂಲಾಗ್ರ ಬದಲಾವಣೆಯಿಂದ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ, ಮಹಿಳೆಯಾಗಲೀ, ಪುರುಷರಾಗಲೀ ಸಂತಾನೋತ್ಪತ್ತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಅನಿವಾರ್ಯ. ಕೆಲ ತಿಂಗಳು ಅಥವಾ ಸಮಯದಿಂದ ಮಗುವಿಗೆ ಪ್ರಯತ್ನ ಪಡುತ್ತಿದ್ದರೂ ಗರ್ಭ ಧರಿಸಲು ಸಾಧ್ಯವಾಗದಿದ್ದರೆ ವೈದ್ಯರ ಬಳಿ ತೆರಳಿ ಇಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಲ್ಲಿ ಯಾವುದೇ ಮುಜುಗರ ಪಡುವ ಅಗತ್ಯವಿಲ್ಲ. ಮಹಿಳೆಯೊಬ್ಬಳೇ ಪರೀಕ್ಷೆಗೆ ಒಳಗಾಗಬೇಕು ಎನ್ನುವ ಧೋರಣೆಯನ್ನು ಬದಲಿಸಿಕೊಂಡು ಪುರುಷರೂ ವಿವಿಧ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಕೆಲವು ನಿರ್ದಿಷ್ಟ ಪರೀಕ್ಷೆಗಳ ಮೂಲಕ ಪುರುಷರಲ್ಲೂ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಇವೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬಹುದು.

ಮಗುವಾಗುತ್ತಿಲ್ಲ ಎನ್ನುವ ಸಮಸ್ಯೆ ಇಟ್ಟುಕೊಂಡು ವೈದ್ಯರ ಬಳಿಗೆ ಹೋದಾಗ ಸಾಮಾನ್ಯವಾಗಿ ಅವರು ಪುರುಷರು ಮತ್ತು ಮಹಿಳೆಯರಿಬ್ಬರಿಗೂ (Woman) ಕೆಲವು ಪರೀಕ್ಷೆಗಳನ್ನು ಹೇಳೇ ಹೇಳುತ್ತಾರೆ. ಇನ್ನು, ಪುರುಷರಲ್ಲಿ ನಿಮಿರುವಿಕೆ (Erecting) ಸಮಸ್ಯೆಯಂತಹ ತೊಂದರೆ ಇದ್ದಾಗ ಮಗುವಿಗಾಗಿ ಪ್ರಯತ್ನಿಸುವುದಕ್ಕೂ ಮುನ್ನವೇ ಪರೀಕ್ಷೆ (Test) ಮಾಡಿಸಿಕೊಳ್ಳಬೇಕಾಗುತ್ತದೆ. ಅವುಗಳ ಬಗ್ಗೆ ಸ್ವತಃ ನಮಗೂ ಪ್ರಾಥಮಿಕ ಮಾಹಿತಿ (Information) ಇದ್ದರೆ ಅನುಕೂಲ. ಪುರುಷರಲ್ಲಿ (Male) ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಮಾಡುವ ಕೆಲವು ಪರೀಕ್ಷೆಗಳು ಯಾವುವು ಎನ್ನುವುದನ್ನು ಅರಿತುಕೊಳ್ಳಿ.

ಇದನ್ನೂ ಓದಿ: ಸಿಲಿಕಾನ್ ಚಿಪ್ ಬಳಸಿ ವೀರ್ಯ, ಇಸ್ರೇಲ್ ವಿಜ್ಞಾನಿಗಳ ಸಾಧನೆ

·       ವೈದ್ಯಕೀಯ ಇತಿಹಾಸದ ಮೌಲ್ಯಮಾಪನ (Medical History Assessment)
ವ್ಯಕ್ತಿಯ ವೈದ್ಯಕೀಯ ಇತಿಹಾಸದ ಮೌಲ್ಯಮಾಪನ ಮಾಡಿದರೆ ವೈದ್ಯರು ಅವರಿಗೆ ಬಂಜೆತನದ (Infertility) ಸಮಸ್ಯೆ ಇದೆಯೇ ಇಲ್ಲವೇ ಎನ್ನುವುದನ್ನು ಹೇಳಿಬಿಡಬಲ್ಲರು. ಏಕೆಂದರೆ, ಪುರುಷರಲ್ಲಿ ಬಂಜೆತನಕ್ಕೆ ಹಲವು ಕಾರಣಗಳಿರಬಹುದು. ಅಪಘಾತ (Accident), ರೋಗ (Dieasese), ಶಸ್ತ್ರಚಿಕಿತ್ಸೆ (Operation) ಸೇರಿದಂತೆ ಜೀವನಶೈಲಿ(Lifestyle)ಯೂ ಪುರುಷರ ನಪುಂಸಕತನಕ್ಕೆ ಕಾರಣವಾಗಬಲ್ಲವು. ವೈದ್ಯರು ಇಂತಹ ಕಾರಣಗಳನ್ನು ಗುರುತಿಸಿ ಪರಿಹಾರ ನೀಡಬಲ್ಲರು.

·       ವೀರ್ಯ ಪರೀಕ್ಷೆ (Semen Test)
ಇದು ಸಾಮಾನ್ಯವಾಗಿ ಎಲ್ಲರಿಗೂ ನಡೆಸುವಂತಹ ಪರೀಕ್ಷೆ. ಇದರಲ್ಲಿ ವೀರ್ಯವನ್ನು ವಿಮರ್ಶೆ ಮಾಡಲಾಗುತ್ತದೆ. ಅಂದರೆ, ವೀರ್ಯದ ಗುಣಮಟ್ಟ (Quality), ಸಂಖ್ಯೆ (Number), ವೃದ್ಧಿಯಾಗುವ ಸಾಮರ್ಥ್ಯ, ವೀರ್ಯದ ಆಕಾರ, ವೀರ್ಯದ ಚಲನೆ(Movement)ಗಳನ್ನು ಅರಿಯಲಾಗುತ್ತದೆ.

·       ವಂಶವಾಹಿ ಪರೀಕ್ಷೆ (Genetic Testing)
ವೀರ್ಯದ ಪರೀಕ್ಷೆಯಲ್ಲಿ ಒಂದೊಮ್ಮೆ ವೀರ್ಯದ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಕಂಡುಬಂದರೆ ಇದಕ್ಕೆ ನಿಮ್ಮ ವಂಶವಾಹಿಯೂ ಕಾರಣವಾಗಿರಬಲ್ಲದು. ಅಂದರೆ, ಹಿರಿಯರ ಮೂಲಕ ಈ ಸಮಸ್ಯೆ ನಿಮಗೆ ಬಂದಿರಬಹುದು. ಇಂತಹ ಸಮಯದಲ್ಲಿ ವಂಶವಾಹಿ ಪರೀಕ್ಷೆ ಮಾಡಿಸುವ ಮೂಲಕ ಸ್ಥಿತಿಯನ್ನು ಅರಿಯಬಹುದು.

ಇದನ್ನೂ ಓದಿ: ಪುರುಷರ ವೀರ್ಯ ಕಡಿಮೆ ಮಾಡೋ ಆಹಾರಗಳಿವು

·       ಹಾರ್ಮೋನ್ ಮಟ್ಟದ ರಕ್ತ ಪರೀಕ್ಷೆ (Hormone Level Blood Test)
ಹಾರ್ಮೋನುಗಳು ನಮ್ಮ ದೇಹದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಅವುಗಳಿಂದಲೇ ನಮ್ಮ ದೇಹದ ಆಗುಹೋಗುಗಳು ಸರಿಯಾಗಿ ಜರುಗುವುದು. ಹಾರ್ಮೋನುಗಳು ವೀರ್ಯದ ಉತ್ಪತ್ತಿಗೂ ಪ್ರಧಾನ ಕಾರಣವಾಗಿವೆ. ವೀರ್ಯದ ಉತ್ಪಾದನೆಯ ಮೇಲೆ ಅವು ನಿಯಂತ್ರಣ ಹೊಂದಿರುತ್ತವೆ. ಹಾರ್ಮೋನುಗಳ ವ್ಯತ್ಯಾಸದಿಂದ ಬಂಜೆತನ ಉಂಟಾಗುತ್ತದೆ. ಹಾರ್ಮೋನುಗಳಿಂದ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲು ಸಹ ಸಮಸ್ಯೆ ಆಗಬಹುದು. ಸಂತಾನೋತ್ಪತ್ತಿಗೆ ಎರಡು ರೀತಿಯ ಹಾರ್ಮೋನುಗಳು ಬಹಳ ಮುಖ್ಯ. ಅವುಗಳೆಂದರೆ, ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (FSH) ಹಾಗೂ ಟೆಸ್ಟಾಸ್ಟಿರೋನ್ (Testosterone) ಹಾರ್ಮೋನ್. ಇವುಗಳ ಮಟ್ಟವನ್ನು ಪರೀಕ್ಷೆ ಮಾಡುವುದರಿಂದ ಬಂಜೆತನದ ಸಮಸ್ಯೆಯ ಮೂಲವನ್ನು ಅರಿತುಕೊಳ್ಳಬಹುದು. ಹೀಗಾಗಿ, ಪುರುಷರು ಸಹ ಯಾವುದೇ ಕಾರಣಕ್ಕೆ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕಬಾರದು. ಏಕೆಂದರೆ, ಸಮಸ್ಯೆ (Problem) ಅರಿತರೆ ಪರಿಹಾರ (Solve) ಕಂಡುಕೊಳ್ಳುವುದು ಸುಲಭವಾಗುತ್ತದೆ.

click me!