ಮಕ್ಕಳಿಗೆ ಮಂಕಿಪಾಕ್ಸ್ ವೈರಸ್ ಅತ್ಯಂತ ಅಪಾಯಕಾರಿ ಎಂದು ಏಮ್ಸ್ ವೈದ್ಯರು ಎಚ್ಚರಿಸಿದ್ದಾರೆ. ಭಾರತದಲ್ಲಿ ಈಗಾಗಲೇ ಮಂಕಿಪಾಕ್ಸ್ ವೈರಸ್ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.
ನವದೆಹಲಿ(ಜು.16): ಕೋವಿಡ್ ಪ್ರಕರಣಗಳ ಏರಿಕೆ ಬೆನ್ನಲ್ಲೇ ಭಾರತದಲ್ಲಿ ಮಂಕಿ ಪಾಕ್ಸ್ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಕೇರಳ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ತೀವ್ರ ನಿಗಾವಹಿಸಲು ಸೂಚಿಸಲಾಗಿದೆ. ಮಂಕಿಪಾಕ್ಸ್ ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ಏಮ್ಸ್ ವೈದ್ಯರು ಮಹತ್ವದ ಸೂಚನೆ ನೀಡಿದ್ದಾರೆ. ಮಂಕಿಪಾಕ್ಸ್ ಪ್ರಕರಣದ ಕುರಿತು ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ಆದರೆ ಮಕ್ಕಳಿಗೆ ಮಂಕಿಪಾಕ್ಸ್ ಮಾರಕವಾಗಬಹುದು. ಮಕ್ಕಳಿಗೆ ಈ ವೈರಸ್ ಕೋವಿಡ್‌ಗಿಂತ ಅಪಾಯಕಾರಿಯಾಗಿದೆ ಎಂದು ಏಮ್ಸ್‌ನ ಮೆಡಿಸಿನ್ ಅಡೀಶನಲ್ ಪ್ರೊಫೆಸರ್ ಪಿಯೂಷ್ ರಂಜನ್ ಹೇಳಿದ್ದಾರೆ. ವಯಸ್ಕರು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಭಾರತದಲ್ಲಿ ಮಂಕಿಪಾಕ್ಸ್ ಹರಡುವಿಕೆ ಪ್ರಮಾಣ ಕಡಿಮೆ ಎಂದಿದ್ದಾರೆ. ಇದು ಕೊಂಚ ಸಮಾಧಾನ ತಂದಿದೆ. ಮಂಕಿಪಾಕ್ಸ್ ಕಾಣಿಸಿಕೊಂಡ ವ್ಯಕ್ತಿಗಳಲ್ಲಿ ಜ್ವರ ಕಾಣಿಸಿಕೊಳ್ಳಲಿದೆ. 1 ರಿಂದ 5 ದಿನದರೆಗೆ ಜ್ವರ ಕಾಣಿಸಿಕೊಳ್ಳಲಿದ್ದು, ಬಳಿಕ ಚಿಕನ್‌ಪಾಕ್ಸ್ ರೀತಿಯಲ್ಲಿ ದೇಹದಲ್ಲಿ ಗುಳ್ಳೆ ಅಥವಾ ಕಜ್ಜಿ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಜ್ವರ ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳಲು ಪಿಯೂಷ್ ರಂಜನ್ ಸೂಚಿಸಿದ್ದಾರೆ.
ಮಂಕಿಪಾಕ್ಸ್ ಪ್ರಾಣಿಗಳಿಂದಲೂ ಮನುಷ್ಯನಿಗೆ ಹರಡಲಿದೆ. ಸದ್ಯ ಕೇರಳದಲ್ಲಿ ಒಂದು ಪ್ರಕರಣ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಹೀಗಾಗಿ ಕೇರಳದಲ್ಲಿ ತೀವ್ರ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಒಟ್ಟು 60 ದೇಶದಲ್ಲಿ 6,000 ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಈವರೆಗೆ ಮೂವರು ಮಂಕಿಪಾಕ್ಸ್‌ಗೆ ಬಲಿಯಾಗಿದ್ದಾರೆ. ಈ ಪ್ರಕರಣ ವೇಗವಾಗಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ವಆರೋಗ್ಯ ಸಂಸ್ಥೆ(WHO) ಸೌತ್ ಈಸ್ಟ್ ರೀಜನ್ ನಿರ್ದೇಶಕ ಡಾ. ಪೂನಮ್ ಕೆತ್ರಾಪಲ್ ಸಿಂಗ್ ಹೇಳಿದ್ದಾರೆ.
ಕೇರಳದಲ್ಲಿ ಮೊದಲ ಶಂಕಿತ Monkeypox ಪ್ರಕರಣ ಮತ್ತೆ
ಮಂಕಿಪಾಕ್ಸ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದ ಕಾರಣ ಜೂನ್ 23 ರಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞ ವೈದ್ಯರ ಜೊತೆ ಸಭೆ ನಡೆಸಿತ್ತು. ಈ ವೇಳೆ ತಜ್ಞರ ತಂಡ ಹಲವು ಶಿಫಾರಸು ಮಾಡಿದೆ. ಮಂಕಿಪಾಕ್ಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜುಲೈ 21ಕ್ಕೆ ಮತ್ತೆ ಮಹತ್ವದ ಸಭೆ ಕರೆಯಲಾಗಿದೆ.
ಕೇರಳದ 5 ಜಿಲ್ಲೆಗಳಲ್ಲಿ ಹೈ ಅಲರ್ಟ್
ಶಾರ್ಜಾದಿಂದ ತಿರುವನಂತಪುರಂಗೆ ಬಂದ ಪ್ರಯಾಣಿಕನಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ. ಹೀಗಾಗಿ ವೈರಸ್ ಸೋಂಕಿತ ವ್ಯಕ್ತಿಯ ಪಕ್ಕದಲ್ಲಿ ಕುಳಿತ ಹಾಗೂ ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ಐಸೋಲೇಶನ್‌ಗೆ ಸೂಚಿಸಲಾಗಿದೆ. ಇದರ ಜೊತೆಗೆ ಕೇರಳದ ತಿರುವನಂತಪುರಂ, ಕೊಲ್ಲಂ, ಪಟಣಂತಿಟ್ಟ, ಆಲಪುಝ ಹಾಗೂ ಕೊಟಯಂ ಜಿಲ್ಲೆಗಳಿಗಲ್ಲಿ ಅಲರ್ಟ್ ಘೋಷಿಸಲಾಗಿದೆ. ಶಾರ್ಜಾ ತಿರುವನಂತಪುರಂ ವಿಮಾನದಲ್ಲಿ 164 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಹೀಗಾಗಿ ಕೇರಳದಲ್ಲಿ ಇದೀಗ ಮತ್ತಷ್ಟು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗುವ ಆತಂಕ ಹೆಚ್ಚಾಗಿದೆ.
ಕೋಲ್ಕತ್ತಾದಲ್ಲಿ ಮೊದಲ ಶಂಕಿತ Monkeypox ಪ್ರಕರಣ, ಯುವಕ ಆಸ್ಪತ್ರೆಗೆ ದಾಖಲು
ವಿಮಾನದಲ್ಲಿ ಪ್ರಯಾಣಿಸದ ಹಲವರ ಫೋನ್ ನಂಬರ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಪೊಲೀಸರ ನೆರವಿನಿಂದ ಎಲ್ಲಾ ಪ್ರಯಾಣಿಕರನ್ನು ಪತ್ತೆ ಹಚ್ಚಿ ಐಸೋಲೇಶನ್‌ಗೆ ಒಳಪಡಿಸಲಾಗುವುದು. ಜ್ವರ ಕಾಣಿಸಿಕೊಂಡ ವ್ಯಕ್ತಿಗಳು ಕೋವಿಡ್ ಟೆಸ್ಟ್ ಜೊತೆಗೆ ಮಂಕಿಪಾಕ್ಸ್ ಟೆಸ್ಟ್ ಕೂಡ ಮಾಡಿಸಿಕೊಳ್ಳಬೇಕು ಎಂದು ಕೇರಳ ಆರೋಗ್ಯ ಸಚಿವೆ ವೀನಾ ಜಾರ್ಜ್ ಹೇಳಿದ್ದಾರೆ.