
ಕೊರೊನಾ ಮತ್ತೆ ಸದ್ದು ಮಾಡಲು ಶುರು ಮಾಡಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದು ಭಾರತದಲ್ಲಿ ಆತಂಕ ಮೂಡಿಸಿದೆ. ಈ ಮಧ್ಯೆ ಮತ್ತೆ ಮಾಸ್ಕ್ ಬಳಕೆಯನ್ನು ಕಡ್ಡಾಯ ಮಾಡಲಾಗ್ತಿದೆ. ಸರ್ಕಾರದಿಂದ ಸೂಕ್ತ ಕ್ರಮಗಳು ಜಾರಿಗೆ ಬರಲಿವೆ. ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗಿತ್ತು ಆದ್ರೆ ಕೊರೊನಾ ಸಂಪೂರ್ಣವಾಗಿ ತೊಲಗಿರಲಿಲ್ಲ.
ಕೊರೊನಾ (Corona) ಮತ್ತೆ ಹೆಚ್ಚಾಗ್ತಿರುವ ಸಂದರ್ಭದಲ್ಲಿ ದೀರ್ಘಕಾಲ ಕಾಡುವ ಕೊರೊನಾ ಲಕ್ಷಣ ಯಾವುದು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ರುಚಿ (Taste) ಮತ್ತು ವಾಸನೆ (Smell) ಯ ಸಾಮರ್ಥ್ಯ ಕಳೆದುಕೊಳ್ಳುವುದು ಅಥವಾ ಇಳಿಕೆ ದೀರ್ಘಕಾಲ ಕಾಡುವ ಕೊರೊನಾದ ಅತ್ಯಂತ ಪ್ರಚಲಿತ ಲಕ್ಷಣಗಳಲ್ಲಿ ಒಂದಾಗಿದೆ. ಹೊಸ ಅಧ್ಯಯನ (Study) ದಲ್ಲೂ ಇದು ಬೆಳಕಿಗೆ ಬಂದಿದೆ. ಅಧ್ಯಯನದ ಪ್ರಕಾರ, ಕೋವಿಡ್‌ನ ದೀರ್ಘಕಾಲೀನ ಪರಿಣಾಮದಿಂದಾಗಿ ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳು ವಾಸನೆಯನ್ನು ಗುರುತಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಸುಮಾರು ಶೇಕಡಾ 20 ರಷ್ಟು ರೋಗಿಗಳು ರುಚಿಯ ನಷ್ಟದಂತಹ ಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ.
ಯುನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ, ಯುಕೆ ತಂಡ ಕೋವಿಡ್ ನಿಂದ ದೀರ್ಘಕಾಲದವರೆಗೆ ಕಾಡುವ ರೋಗ ಲಕ್ಷಣಗಳನ್ನು ಪರಿಶೀಲಿಸಿದೆ. ಅಧ್ಯಯನದ ವರದಿ ಪ್ರಕಾರ, ದೀರ್ಘಕಾಲದ ಕೊರೊನಾ ಎಂಬುದು ಸೋಂಕಿನ ಸಮಯದಲ್ಲಿ ಅಥವಾ ನಂತರ ಬೆಳವಣಿಗೆಯಾಗುವ ಒಂದು ಸಂಕೀರ್ಣ ಸ್ಥಿತಿಯಾಗಿದೆ. ಇದ್ರ ರೋಗ ಲಕ್ಷಣಗಳು 12 ವಾರಕ್ಕೂ ಹೆಚ್ಚು ಕಾಲ ಇರುತ್ತವೆಯಂತೆ.
ದೀರ್ಘಕಾಲದ ಕೊರೊನಾ ಲಕ್ಷಣಗಳು: ತಲೆನೋವು, ಸ್ನಾಯು ನೋವು, ಆಯಾಸ ಮತ್ತು ರುಚಿ ಮತ್ತು ವಾಸನೆಯ ನಷ್ಟ ದೀರ್ಘಕಾಲದ ಕೊರೊನಾ ಲಕ್ಷಣವಾಗಿದೆ. ಕೊರೊನಾ ಆರಂಭಿಕ ಸೋಂಕಿನ ನಂತರ ಗೊಂದಲ, ಏಕಾಗ್ರತೆಯ ಕೊರತೆ ಮತ್ತು ಸ್ಮರಣಶಕ್ತಿಯ ನಷ್ಟ ತಿಂಗಳವರೆಗೆ ಇರುತ್ತದೆ. ಅಧ್ಯಯನ ತಂಡ ಯುಕೆಯಲ್ಲಿ ಕೊರೊನಾ ವೈರಸ್ ಸೋಂಕಿನ ಸಮೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಿದೆ. ಮಾರ್ಚ್ 2022 ರಲ್ಲಿ 3,60,000 ಕ್ಕೂ ಹೆಚ್ಚು ಜನರ ಮಾಹಿತಿಯನ್ನು ವಿಶ್ಲೇಷಿಸಿದೆ. ಒಟ್ಟು 10,431 ಮಂದಿಯ ಅಧ್ಯಯನ ನಡೆಸಿದೆ.
OMICRON BF.7, ಸೋಂಕು ತಗುಲೋ ಮುನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ರೋಗಿಗಳಿಗೆ ಚಿಕಿತ್ಸೆ ಹೇಗೆ?: ಕೊರೊನಾ ಬಗ್ಗೆ ನಿರಂತರ ಅಧ್ಯಯನ ನಡೆಯುತ್ತಿದೆ. ಅಧ್ಯಯನದ ಪ್ರಕಾರ, ಸೋಂಕಿಗೆ ಒಳಗಾದ ನಂತರ ರೋಗಿಗಳಿಗೆ ರುಚಿ ತಿಳಿಯೋದಿಲ್ಲ. ಏನನ್ನು ತಿನ್ನಬೇಕು, ಏನು ಮಾಡಬಾರದು ಎಂಬುದೇ ಅವರಿಗೆ ಅರ್ಥವಾಗುವುದಿಲ್ಲ. ಅಂಥವರಿಗೆ ರುಚಿ ಹಾಗೂ ವಾಸನೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆದಿದೆ. ಈ ಚಿಕಿತ್ಸೆಯಲ್ಲಿ ರೋಗಿಗಳಿಗೆ ಕನಿಷ್ಠ 20 ಸೆಕೆಂಡುಗಳ ಕಾಲ ಲವಂಗ, ನಿಂಬೆ, ಗುಲಾಬಿ ಮತ್ತು ನೀಲಗಿರಿ ಎಣ್ಣೆಯ ವಾಸನೆಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಇದು ಅವರ ರುಚಿ ಮತ್ತು ವಾಸನೆಯ ಪ್ರಜ್ಞೆಯನ್ನು ಮರಳಿ ತರಲು ಸಹಾಯ ಮಾಡಿತು.
ವಾಸನೆ ಮತ್ತು ರುಚಿಯನ್ನು ಗುಣಪಡಿಸಲು ಮನೆಮದ್ದುಗಳು :
ಓಂಕಾಳು : ಕರವಸ್ತ್ರದಲ್ಲಿ ಸ್ವಲ್ಪ ಓಂ ಕಾಳನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಪ್ರೆಸ್ ಮಾಡಿ ನಂತರ ಅದರ ವಾಸನೆ ತೆಗೆದುಕೊಳ್ಳಬೇಕು. ಅಜವೈನ್‌ನ ಪರಿಮಳವು ಶೀತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಬೆಳ್ಳುಳ್ಳಿ : ಕತ್ತರಿಸಿದ ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ ನಂತರ ನೀರನ್ನು ಫಿಲ್ಟರ್ ಮಾಡಿ ಮತ್ತು ಸ್ವಲ್ಪ ತಣ್ಣಗಾದ ನಂತರ ಚಹಾದಂತೆ ಕುಡಿಯಿರಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿದ್ರೆ ಪ್ರಯೋಜನ ಹೆಚ್ಚು.
ಪುದೀನಾ : ಬಾಯಿಯ ರುಚಿಯನ್ನು ಸುಧಾರಿಸುವಲ್ಲಿ ಪುದೀನಾ ಸಹ ಪ್ರಯೋಜನಕಾರಿಯಾಗಿದೆ. 10ರಿಂದ 15 ಪುದೀನ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಮತ್ತು ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ. ಕೆಲವೇ ದಿನಗಳಲ್ಲಿ ಸಮಸ್ಯೆ ಸುಧಾರಿಸಲು ಪ್ರಾರಂಭಿಸುತ್ತದೆ.
ಶುಂಠಿ : ದಿನವಿಡೀ ಮಧ್ಯೆ ಮಧ್ಯೆ ಸ್ವಲ್ಪ ಶುಂಠಿಯನ್ನು ಜಗಿಯುತ್ತಿರಬೇಕು. ಶುಂಠಿ ಟೀಯನ್ನು ಕೂಡ ನೀವು ಸೇವನೆ ಮಾಡಬಹುದು.
ಆದಷ್ಟು ಬೇಗ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಿ: ಸಾರ್ವಜನಿಕರಿಗೆ ಐಎಂಎ ವೈದ್ಯರ ಎಚ್ಚರಿಕೆ
ನಿಂಬೆಹಣ್ಣು : ಅರ್ಧ ನಿಂಬೆಹಣ್ಣಿನ ರಸವನ್ನು ಒಂದು ಲೋಟ ನೀರಿನಲ್ಲಿ ಮಿಕ್ಸ್ ಮಾಡಿ. ಅದಕ್ಕೆ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.