ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ಎಬಿಎಚ್‌ಎ)ಗೆ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲಾತಿ (ಪಿಎಚ್‌ಆರ್) ಜೋಡಣೆಯಲ್ಲಿ ಧಾರವಾಡ ಜಿಲ್ಲೆ ದೇಶದಲ್ಲೇ 2ನೇ ಸ್ಥಾನದಲ್ಲಿದ್ದಿದ್ದರೆ, ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ!
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ (ಡಿ.24) : ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ (ಎಬಿಎಚ್‌ಎ)ಗೆ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲಾತಿ (ಪಿಎಚ್‌ಆರ್) ಜೋಡಣೆಯಲ್ಲಿ ಧಾರವಾಡ ಜಿಲ್ಲೆ ದೇಶದಲ್ಲೇ 2ನೇ ಸ್ಥಾನದಲ್ಲಿದ್ದಿದ್ದರೆ, ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ!
ಜತೆಗೆ ಆಸ್ಪತ್ರೆಯ ಪಟ್ಟಿಯಲ್ಲಿ ಜಿಲ್ಲಾಸ್ಪತ್ರೆ ದೇಶಕ್ಕೆ ನಂ.1 ಸ್ಥಾನ ಪಡೆದಿದೆ. ಕಿಮ್ಸ್ 8ನೇ ಸ್ಥಾನದಲ್ಲಿದೆ. ಈ ನಡುವೆ ಜಿಲ್ಲಾದ್ಯಂತ ಎಬಿಎಚ್‌ಎಗೆ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲಾತಿ ಜೋಡಣೆ ಕಾರ್ಯ ಚುರುಕುಗೊಂಡಿದೆ.
Dental Scaling: ಹಲ್ಲು ಮುತ್ತಿನಂತೆ ಹೊಳೆಯಬೇಕು ಅಂದ್ರೆ ಇಷ್ಟ್ ಮಾಡಿ ಸಾಕು
2022ರ ಆಗಸ್ಟ್‌ನಿಂದ ಡಿ. 22ರ ವರೆಗೆ ಧಾರವಾಡ ಜಿಲ್ಲೆಯಲ್ಲಿ ಒಟ್ಟು 70,469 ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲೆ ಸಂಗ್ರಹಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎಚ್‌ಎಚ್‌ಎ) ದೇಶಾದ್ಯಂತ ಮಾಹಿತಿ ಸಂಗ್ರಹಿಸಿದೆ. ಎಬಿಎಚ್‌ಎಗೆ 1 ಲಕ್ಷಕ್ಕೂ ಅಧಿಕ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲಾತಿ ಜೋಡಣೆ ಮೂಲಕ ಬೆಂಗಳೂರು ನಗರ ಜಿಲ್ಲೆ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ.
ರೋಗಿಗಳ ರಕ್ತದ ಗುಂಪು, ಕಾಯಿಲೆ, ಚಿಕಿತ್ಸೆ ಕುರಿತು ಮಾಹಿತಿ ದಾಖಲಿಸಿಕೊಳ್ಳಲಾಗುತ್ತಿದೆ. ದೇಶಾದ್ಯಂತ ಈ ಪ್ರಕ್ರಿಯೆ ನಡೆಯುತ್ತಿರುವುದರಿಂದ ಬೇರೆ ರಾಜ್ಯ, ಹೊರಜಿಲ್ಲೆಗೆ ತೆರಳಿದರೂ ಅವರ ಚಿಕಿತ್ಸೆಯ ಮಾಹಿತಿ ಲಭ್ಯವಿರಲಿದೆ. ಇದರಿಂದ ಚಿಕಿತ್ಸೆ ನೀಡುವ ವೈದ್ಯರಿಗೆ ಸಹಾಯವಾಗಲಿದೆ. ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಇದರಂತೆ ರೋಗಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗ ಸರ್ಕಾರದ ಮಟ್ಟದಲ್ಲೂ ರೋಗಿಗಳ ವೈಯಕ್ತಿಕ ಮಾಹಿತಿ ಲಭ್ಯವಿರಲಿದೆ.
ದಾಖಲೆ ಸಂಗ್ರಹದ ಸಾಧನೆ:
ಧಾರವಾಡ ಜಿಲ್ಲೆಯ ಜಿಲ್ಲಾಸ್ಪತ್ರೆ, ಡಿಮಾನ್ಸ್, ಕಿಮ್ಸ್ ಹಾಗೂ ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ನೋಂದಣಿ ಕಾರ್ಯದ ಜತೆಗೆ ದಾಖಲೆಯನ್ನೂ ಸಂಗ್ರಹಿಸಲಾಗುತ್ತಿದೆ. ಆ. 1ರಿಂದ ಸೆ. 19ರ ವರೆಗೆ ದಾಖಲೆ ಸಂಗ್ರಹದ ಸಾಧನೆಗಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಆಯುಷ್ಮಾನ್ ಉತ್ಕೃಷ್ಟತಾ ಪುರಸ್ಕಾರ-2022 ಪ್ರಶಸ್ತಿಗೆ ಧಾರವಾಡ ಜಿಲ್ಲಾಸ್ಪತ್ರೆ ಭಾಜನವಾಗಿದೆ. ಇದರ ಬಳಿಕ ಕಾರ್ಯ ಮತ್ತಷ್ಟುಚುರುಕುಗೊಂಡಿದೆ.
ಡಿ. 22ರ ವರೆಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ 37,268, ಕಿಮ್ಸ್ ಆಸ್ಪತ್ರೆಯಲ್ಲಿ 21,015, ಡಿಮ್ಹಾನ್ಸ್‌ನಲ್ಲಿ 9901, ಕಲಘಟಗಿ ಆಸ್ಪತ್ರೆಯಲ್ಲಿ 943, ನವಲಗುಂದ ಆಸ್ಪತ್ರೆಯಲ್ಲಿ 842, ಕುಂದಗೋಳ ಆಸ್ಪತ್ರೆಯಲ್ಲಿ 500 ಸೇರಿ ಒಟ್ಟು 70,469 ಜನ ರೋಗಿಗಳ ದಾಖಲೆಯನ್ನು ಎಬಿಎಚ್‌ಎಗೆ ಜೋಡಿಸಲಾಗಿದೆ. ಅಳ್ನಾವರ, ಅಣ್ಣಿಗೇರಿ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರದ ಹಿನ್ನೆಲೆ ಅಲ್ಲಿ ಎನಿಎಚ್‌ಎಗೆ ರೋಗಿಗಳ ದಾಖಲೆ ಜೋಡಣೆ ಮಾಡಲಾಗುತ್ತಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ಎಬಿಎಚ್‌ಎಗೆ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲಾತಿ ಜೋಡಣೆ ಕಾರ್ಯ ವೇಗವಾಗಿ ನಡೆಯುತ್ತಿದೆ. ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು, ರೋಗಿಗಳ ಸಹಕಾರವೂ ಅಗತ್ಯವಾಗಿದೆ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ. ಶಿವಕುಮಾರ ಮಾನಕರ.
ಎಬಿಎಚ್‌ಎ ಆ್ಯಪ್ ಮೂಲಕವೂ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲೆ ಸಂಗ್ರಹ ಕಾರ್ಯ ಮಾಡಲಾಗುತ್ತಿದೆ. ಕೌಂಟರ್‌ಗಳಲ್ಲಿ ವೇಗವಾಗಿ ಕೆಲಸ ಮಾಡುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಐಟಿ ಪ್ರೋಗ್ರಾಮರ್ ಮಂಜುನಾಥ ಮಠಪತಿ ಮಾಹಿತಿ ನೀಡಿದ್ದಾರೆ.
ಆಯುಷ್ಮಾನ್ ಭಾರತಕ್ಕೆ ಡಿಜಿಟಲ್ ವೇಗದ ಸ್ಪರ್ಶ: ಸಚಿವ ಸುಧಾಕರ್
ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗೆ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲೆ ಜೋಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳ ನೋಂದಣಿ ವೇಳೆ ದಾಖಲೆ ಪಡೆಯಲಾಗುತ್ತಿದೆ. ಇದರಿಂದ ಅವರು ಬೇರೆ ಯಾವುದೇ ಆಸ್ಪತ್ರೆಗೆ ಹೋದರೂ ಸೂಕ್ತ ಚಿಕಿತ್ಸೆ ಸಿಗಲಿದೆ.
ಡಾ. ಶಶಿ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ
ಎಬಿಎಚ್‌ಎಗೆ ರೋಗಿಗಳ ವೈಯಕ್ತಿಕ ಆರೋಗ್ಯ ದಾಖಲಾತಿ ಜೋಡಣೆ ಕಾರ್ಯದಲ್ಲಿ ಧಾರವಾಡ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ದಾಖಲೆ ಜೋಡಣೆ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರಲ್ಲಿ ಇನ್ನು ಹೆಚ್ಚಿನ ಜಾಗೃತಿ ಮೂಡಿಸಲಾಗುವುದು.
ಡಾ. ಶಶಿಧರ ಕಳಸೂರಮಠ, ಆರೋಗ್ಯ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ
ಆಸ್ಪತ್ರೆ ರೋಗಿಗಳ ಸಂಖ್ಯೆ