ಸಿಕ್ಕಾಪಟ್ಟೆ ಟೇಸ್ಟ್ ಅಂತ ಜಂಕ್‌ಫುಡ್ (Junk Food) ಜಾಸ್ತಿ ತಿನ್ತೀರಾ ? ಪಾರ್ಟಿ ಪಬ್ ಅಂತ ಅಲ್ಕೋಹಾಲ್ (Alcohol) ಕೂಡಾ ಹೆಚ್ಚಾಗಿ ಹೊಟ್ಟೆ ಸೇರ್ತಿದ್ಯಾ ? ವರ್ಕೌಟ್ (Workout) ಮಾಡೋಕೆ ಮಾತ್ರ ಬೇಜಾರಪ್ಪ ಅಂತ ಸುಮ್ನಾಗ್ತೀರಾ ? ಹಾಗಿದ್ರೆ ನಿಮ್ಗೆ ಸ್ತನ ಕ್ಯಾನ್ಸರ್ (Breast Cancer)ಬರೋ ಛಾನ್ಸಸ್ ಹೆಚ್ಚಿದೆ. ಬೆಚ್ಚಿಬೀಳ್ಬೇಡಿ ನಾವ್ ಹೇಳ್ತಿರೋದು ನಿಜಾನೇ.
ಕ್ಯಾನ್ಸರ್‌ನೊಂದಿಗೆ ಬದುಕುವುದು ಸುಲಭದ ಮಾತಲ್ಲ. ಇದು ಸಾಕಷ್ಟು ಅಡ್ಡಪರಿಣಾಮಗಳಿಂದ ಕೂಡಿರುತ್ತದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಸಾಮಾನ್ಯ ಜೀವನವನ್ನು ಕಷ್ಟಕರವಾಗಿಸುತ್ತದೆ. ಜೆನೆಟಿಕ್ಸ್ ಮತ್ತು ಕುಟುಂಬದ ಇತಿಹಾಸದಂತಹ ಕೆಲವು ಅಂಶಗಳು ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೂ, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಸೂಕ್ತವಾದ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು.
ಸ್ತನ ಕ್ಯಾನ್ಸರ್ (Breast Cancer) ಎಂದಾಗ ಪ್ರತಿಯೊಬ್ಬ ಮಹಿಳೆ (Women)ಯರಲ್ಲೂ ಆತಂಕ ಮೂಡುವುದು ಸಹಜ. ವರ್ಷದಿಂದ ವರ್ಷಕ್ಕೆ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದೆ. ಕಳೆದ 5 ವರ್ಷದಲ್ಲಿ 7.5 ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ತುತ್ತಾಗಿದ್ದಾರೆ ಎಂದು ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆ ಹೇಳಿದೆ. ಸ್ತನ ಕ್ಯಾನ್ಸರ್ ಎನ್ನುವುದು ಒಂದು ಕ್ಯಾನ್ಸರ್ ಆಗಿದ್ದು ಅದು ಜೀವಕೋಶಗಳು ನಿಯಂತ್ರಣವಿಲ್ಲದೆ ದೇಹದ ಇತರ ಭಾಗಗಳಿಗೆ ಹರಡಿದಾಗ ಬೆಳವಣಿಗೆಯಾಗುತ್ತದೆ, ಇದು ಒಂದು ಅಥವಾ ಎರಡೂ ಸ್ತನಗಳಲ್ಲಿ ಪ್ರಾರಂಭವಾಗುತ್ತದೆ. ಇದು ಪ್ರಾಥಮಿಕವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆಯಾದರೂ, ಪುರುಷರು ಈ ಸ್ಥಿತಿಗೆ ಒಳಗಾಗುವುದಿಲ್ಲ.
Mother And Baby: ತಾಯಿ ತಣ್ಣೀರಿನಲ್ಲಿ ಸ್ನಾನ ಮಾಡಿದರೆ, ಮಗುವಿಗೆ ಶೀತವಾಗುತ್ತಾ?
ವೈದ್ಯಕೀಯ ಅಧ್ಯಯನಗಳ ಪ್ರಕಾರ 40ರಿಂದ 45 ವರ್ಷದ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಸ್ತನ ಕ್ಯಾನ್ಸರ್‌ಗೆ ಇಂಥದ್ದೇ ನಿಖರವಾದ ಕಾರಣವಿಲ್ಲ. ಹೀಗಿದ್ದೂ, ಋತುಬಂಧದ ಲಕ್ಷಣಗಳಿಗೆ ಹಾರ್ಮೋನ್ ಚಿಕಿತ್ಸೆ, ಸ್ತನ ಅಥವಾ ಎದೆಗೆ ವಿಕಿರಣ ಚಿಕಿತ್ಸೆ, ಬೊಜ್ಜು, ಮದ್ಯಪಾನ ಎಲ್ಲವೂ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಅಂಶಗಳಾಗಿವೆ. ಇದಲ್ಲದೆಯೂ ಪ್ರತಿನಿತ್ಯ ಜೀವನದ ಕೆಲವೊಂದು ಸಾಮಾನ್ಯ ಅಭ್ಯಾಸಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರರಾದ ಡಾ.ಚಂದ್ರಿಕಾ ಆನಂದ್ ತಿಳಿಸುತ್ತಾರೆ. ಅದೇನೆಂದು ತಿಳಿಯೋಣ.
ಸ್ತನ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುವ ಅಭ್ಯಾಸಗಳು
ಜಂಕ್ ಫುಡ್ ತಿನ್ನುವುದು: ಜೀವನಶೈಲಿ ಬದಲಾಗಿರುವ ಹಾಗೆಯೇ ಆಹಾರಶೈಲಿಯೂ ಬದಲಾಗಿದೆ. ಆರೋಗ್ಯಯುತ ಮನೆ ಆಹಾರವನ್ನು ಬಿಟ್ಟು ಹೆಚ್ಚಿನವರು ಜಂಕ್‌ಫುಡ್ (Junkfood)ಗಳನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ. ಇದು ದೇಹದಲ್ಲಿ ಹೆಚ್ಚುವರಿ ತೂಕವನ್ನು ಹೆಚ್ಚಿಸಬಹುದು. ಇಂಥಾ ಬೊಜ್ಜು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಆರೋಗ್ಯಕರ ತೂಕವನ್ನು ನಿರ್ವಹಿಸುವುದು ಸ್ತನ ಕ್ಯಾನ್ಸರ್ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸ್ತನ ಕ್ಯಾನ್ಸರ್‌ನಿಂದ ದೂರವಿರಲು ಬಯಸುವಿರಾದರೆ ಅತಿಯಾಗಿ ಜಂಕ್‌ಫುಡ್ ತಿನ್ನುವುದನ್ನು ನಿಲ್ಲಿಸಿ.
ಸ್ತನಗಳ ಉರಿಯೂತಕ್ಕೇನು ಕಾರಣ? ಲಕ್ಷಣಗಳ ಬಗ್ಗೆ ಗಮನವಿರಲಿ
ವ್ಯಾಯಾಮ ಮಾಡದಿರುವುದು: ನೀವು ವರ್ಕೌಟ್ (Workout)ಗಳನ್ನು ಮಾಡಲು ತುಂಬಾ ಸೋಮಾರಿಯಾಗಿದ್ದರೆ ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ಹೆಚ್ಚಿನ ಆರೋಗ್ಯವಂತ ವಯಸ್ಕರು ವಾರಕ್ಕೆ 150 ನಿಮಿಷಗಳ ಮಧ್ಯಮ ಏರೋಬಿಕ್ ಚಟುವಟಿಕೆ ಅಥವಾ 75 ನಿಮಿಷಗಳ ಶ್ರಮದಾಯಕ ಏರೋಬಿಕ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಜೊತೆಗೆ ವಾರಕ್ಕೆ ಕನಿಷ್ಠ ಎರಡು ಬಾರಿ ಶಕ್ತಿ ವೃದ್ಧಿಸುವ ವ್ಯಾಯಾಮವನ್ನು ಮಾಡಬೇಕು.
ಅಲ್ಕೋಹಾಲ್ ಕುಡಿಯುವುದು: ಅಲ್ಕೋಹಾಲ್ (Alcohol) ಮನಸ್ಸಿನ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಅಲ್ಕೋಹಾಲ್ ಸೇವನೆ ರೋಗಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಸ್ತನ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸುತ್ತದೆ. ಸೇವಿಸುವ ಆಲ್ಕೋಹಾಲ್ ಪ್ರಮಾಣದೊಂದಿಗೆ ಸ್ತನ ಕ್ಯಾನ್ಸರ್ ಅಪಾಯದ ಮಟ್ಟವು ಹೆಚ್ಚಾಗುತ್ತದೆ.
ಧೂಮಪಾನ ಮಾಡುವುದು: ಅಧ್ಯಯನಗಳ ಪ್ರಕಾರ ಧೂಮಪಾನ (Smoking) ಮಾಡುವ ಮಹಿಳೆಯರಿಗೆ ಹೆಚ್ಚಾಗಿ ಬೇಗನೇ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಧೂಮಪಾನವು ರೋಗನಿರ್ಣಯದ ನಂತರ ಸ್ತನ ಕ್ಯಾನ್ಸರ್‌ನಿಂದ ಸಾಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು: ವೈಯಕ್ತಿಕ ಆರೈಕೆಗಳಿಗೆ ಹೆಚ್ಚಾಗಿ ಎಲ್ಲರೂ ಸ್ಕಿನ್ ಕೇರ್ ಪ್ರಾಡಕ್ಟ್, ಸೌಂದರ್ಯವರ್ಧಕಗಳನ್ನು ಬಳಸಿಕೊಳ್ಳುತ್ತಾರೆ. ಆದರೆ, ಇವುಗಳನ್ನು ಅತಿಯಾಗಿ ಬಳಸುವುದರಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿದೆ.
ಗರ್ಭಾವಸ್ಥೆಯನ್ನು ವಿಳಂಬಗೊಳಿಸುವುದು: 35 ವರ್ಷಗಳ ನಂತರ ಗರ್ಭಧರಿಸುವ ಮಹಿಳೆಯರು ಮತ್ತು ಗರ್ಭಧಾರಣೆಯೇ ಇಲ್ಲದಿರುವ ಮಹಿಳೆಯರು ನಿರಂತರವಾಗಿ ಈಸ್ಟ್ರೊಜೆನ್ ಹಾರ್ಮೋನ್‌ಗೆ ಒಡ್ಡಿಕೊಳ್ಳುತ್ತಾರೆ. ಅವರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಯುವತಿಯರಿಗೆ 35 ವರ್ಷಕ್ಕಿಂತ ಮುಂಚಿತವಾಗಿ ಗರ್ಭಧರಿಸುವಂತೆ ಶಿಕ್ಷಣ ನೀಡಬೇಕು.
ಸ್ತನ್ಯಪಾನವನ್ನು ತಪ್ಪಿಸುವುದು: ಮಹಿಳೆ ಹಾಲುಣಿಸುವಾಗ ಈಸ್ಟ್ರೊಜೆನ್ ಮಟ್ಟಗಳು ಕಡಿಮೆಯಾಗಬಹುದು. ಸ್ತನ್ಯಪಾನ ಮಾಡುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯವು ಮಕ್ಕಳನ್ನು ಹೊಂದಿದ್ದರೂ ಸ್ತನ್ಯಪಾನ ಮಾಡದ ಮಹಿಳೆಯರಿಗಿಂತ 4.3% ಕಡಿಮೆಯಾಗಿದೆ.