
ನಿಮಗೊಂದು ವಿಷಯ ಗೊತ್ತಾ? ಇಡೀ ಭೂಮಿಯಲ್ಲಿ (Earth) ನೆಲ (Soil) ಇರೋದು 30% ಮಾತ್ರ. ಉಳಿದ 70% ನೀರಿನಿಂದ (Water) ಕೂಡಿದೆ. ಅಂದರೆ ಸಮುದ್ರ (Sea). ಆದರೆ, ಅದರಲ್ಲಿ ನಮಗೆ ಕುಡಿಯೋಕೆ ಸಾಧ್ಯವಾಗುವ ನೀರಿನ ಪ್ರಮಾಣ 3% ಮಾತ್ರ! ಇನ್ನೊಂದು ಸ್ವಾರಸ್ಯಕರ ವಿಷಯವೂ ನಿಮಗೆ ತಿಳಿದಿರಲಿ- ನಮ್ಮ ದೇಹದಲ್ಲಿ ಶೇ.70 ಭಾಗ ನೀರೇ ಇರೋದು!
ಇವೆರಡು ಸಂಗತಿಗಳು ಸಾಕಲ್ಲವೇ- ನೀರಿನ ಮಹತ್ವ ಏನಂತ ಗೊತ್ತಾಗೋಕೆ. ನೀರಿಲ್ಲದೆ ನಾವಿಲ್ಲ. ನೀರೇ ಎಲ್ಲ. ಸಂಸ್ಕೃತದಲ್ಲಿ ಜೀವನ ಎಂದರೆ ನೀರು. ಅದೆಷ್ಟು ಅರ್ಥಪೂರ್ಣ! ನಮ್ಮ ಜೀವನವಿಡೀ ನೀರಿನಿಂದ ಕೂಡಿದೆ. ಹೌದಾ ಅಲ್ವಾ ನೋಡಿ. ಹುಟ್ಟಿದ ಕೂಡಲೇ ಮಗುವನ್ನು ಸ್ವಚ್ಛ ಮಾಡಲು ನೀರು ಬೇಕು. ಬೆಳೆಯುತ್ತಾ ದೇಹಕ್ಕೆ ಪೋಷಕಾಂಶ ಸಿಗುವುದು ನೀರಿನಿಂದಲೇ. ಮದುವೆಯಾಗುವಾಗ ಧಾರೆ ಎರೆಯೋಕೆ ಅಥವಾ ಪಡೆದುಕೊಳ್ಳೋಕೂ ನೀರೇ ಬೇಕು. ಕೊನೆಗೆ ಚಟ್ಟದ ಮೇಲೆ ಹೋಗುವಾಗಲೂ ನೀರಿನಿಂದ ಸ್ನಾನ ಮಾಡಿಸದೆ ಕಳಿಸುವುದಿಲ್ಲ!
ಆನಂದವಾದಾಗಲೂ ನಮಗೆ ಬರುವುದು ಕಣ್ಣೀರು. ದುಃಖವಾದಾಗಲೂ ಬರುವುದು ಕಣ್ಣೀರು. ಇವೆರಡೇ ಭಾವನೆಗಳು ಮುಖ್ಯವಾಗಿ ಇರೋದು ಮಾನವ ಜಗತ್ತಿನಲ್ಲಿ. ಬದುಕು ಹರಿವ ನೀರಿನಂತೆ. ಇಲ್ಲಿ ಬದಲಾವಣೆ ಮಾತ್ರವೇ ಶಾಶ್ವತ. ಹರಿಯದ ನೀರು ಕೊಳಚೆಗಟ್ಟುತ್ತದೆ. ಹರುವ ನೀರು ಪವಿತ್ರವಾಗುತ್ತದೆ. ಬದುಕು ಸಹ ಹಾಗೇ.
ಪಂಚಭೂತಗಳು ಅಂತಾರೆ- ಆಕಾಶ (Sky), ವಾಯು (Air), ಅಗ್ನಿ (Fire), ನೀರು, ಭೂಮಿ. ಇದರಲ್ಲಿ ಆಕಾಶ, ವಾಯು, ಅಗ್ನಿಗಳು ಗಂಡು ದೇವತೆಗಳು. ಪೃಥ್ವಿ ಮತ್ತು ಜಲ ಹೆಣ್ಣು. ಜಗತ್ತಿನ ಯಾವುದೇ ನದಿಯ ಹೆಸರನ್ನು ತೆಗೆದುಕೊಂಡರೂ ಅದು ಹೆಣ್ಣಿನ ಹೆಸರು. ಈ ನದಿಗಳ ದಡಗಳಲ್ಲಿ ನಗರಗಳು ಹುಟ್ಟಿದವು, ನಾಗರಿಕತೆಗಳು ಬೆಳೆದವು. ಸಿಂಧೂ ನದಿ ನಾಗರಿಕತೆ ಎನ್ನುತ್ತಾರೆ. ಸಿಂಧು ಎಂಬ ನದಿಯ ನೀರಿನಿಂದ ಪೋಷಿತಗೊಂಡು ಹುಟ್ಟಿ ಬೆಳೆದ ನಾಗರಿಕತೆಯದು. ಹಾಗೇ ಗಂಗಾ, ಕಾವೇರಿ ಇತ್ಯಾದಿ. ಹುಟ್ಟಿಸುವವಳು, ಬೆಳೆಸುವವಳು ಹೆಣ್ಣು. ಅರ್ಥಾತ್ ನದಿ (River) ಅಥವಾ ನೀರು.
ಭೂಮಿ ಕ್ಷಮೆಗೆ ಇನ್ನೊಂದು ಹೆಸರು. ಮಾನವ ಮಾಡಿದ ಕೊಳಕನ್ನೆಲ್ಲ ಗರ್ಭದಲ್ಲಿ ಅಡಗಿಸಿಕೊಳ್ಳುತ್ತಾಳೆ. ಗಂಗಾನದಿಯಂತೆ. ಆಕೆ ಕೂಡ ಪಾಪಿಯನ್ನು ತೊಳೆದು ಶುದ್ಧೀಕರಿಸುತ್ತಾಳೆ. ಹೀಗಾಗಿ ಕ್ಷಮೆ ನೀರಿನ ಗುಣ ಕೂಡ ಹೌದು. ಹೆಣ್ಣಿನ ಹೃದಯದ ಭಾವ ಅದು. ನೀರು ಶುದ್ಧವಾಗಿದೆ ಎಂದರೆ ನಮ್ಮ ನಿಮ್ಮ ಪಾಪಗಳನ್ನು ನಾಶ ಮಾಡಲು ಆಕೆ ಸಿದ್ಧವಾಗಿದ್ದಾಳೆ ಎಂದರ್ಥ. ಕನ್ನಡದಲ್ಲೂ ನೀರೆ ಎಂದರೆ ಹೆಣ್ಣು. ಆಕೆ ನಾಚಿದರೆ ನೀರಾಗುತ್ತಾಳೆ- ಸಿಟ್ಟಿಗೆದ್ದರೆ ಬೆಂಕಿಯಾಗುತ್ತಾಳೆ.
ಇಂದು ವಿಶ್ವ ಜಲ ದಿನ(World Water Day)
ಇಂದು ವಿಶ್ವ ಜಲ ದಿನವಂತೆ. ಜಲಕ್ಕೊಂದು ದಿನ ಬೇಕೇ? ಪ್ರತಿದಿನವೂ ಜಲದಿನವೇ ಅಲ್ಲವೇ? ಹೌದು. ಆದರೆ ನೀರಿನ ಮಹತ್ವ ಅರ್ಥ ಮಾಡಿಕೊಂಡು, ನೆನಪಿಸಿಕೊಂಡು, ಅದನ್ನು ಜೀವನದಲ್ಲಿ ಅಳವಡಿಸಲು ಒಂದು ದಿನ ಇಟ್ಟರೆ ತಪ್ಪಲ್ಲ. ವರ್ಷದಿಂದ ವರ್ಷಕ್ಕೆ ನೀರಿನ ಬಳಕೆ ಹೆಚ್ಚಾಗುತ್ತಿದೆ. ಆದರೆ ಅದರ ಮರುಪೂರಣ ಬಗ್ಗೆ, ಅಂತರ್ಜಲ ಹೆಚ್ಚಿಸುವ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಶ್ರಮಿಸುತ್ತಿದೆ. ಸುಸ್ಥಿರ ಅಂತರ್ಜಲ ಅಭಿವೃದ್ಧಿಯ ಗುರಿಯೊಂದಿಗೆ ಪ್ರತಿವರ್ಷ 'ವಿಶ್ವ ಜಲದಿನ'ವನ್ನು ಆಚರಿಸಲಾಗುತ್ತಿದೆ.
ಸಿಕ್ಕಾಪಟ್ಟೆ ಬಿಸಿಲಪ್ಪಾ, ಚಿಲ್ ಆಗೋಕೆ ಐಸ್ ನೀರು ಕುಡಿಯುವುದು ಸುರಕ್ಷಿತವೇ ?
ನಿಮಗೆಷ್ಟು ನೀರು ಬೇಕು?
ನೀರಿನ ಅವಶ್ಯಕತೆಯ ಮಟ್ಟ ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನವಾಗಿರಬಹುದು. ನೀರಿನ ಅವಶ್ಯಕತೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ. ನೀರಿನ ಅವಶ್ಯಕತೆಯು ಅವಲಂಬಿಸಿರುವ ಅಂಶಗಳು ವ್ಯಕ್ತಿಯ ದೈಹಿಕ ಚಟುವಟಿಕೆ, ಸುತ್ತಲಿನ ತಾಪಮಾನ, ಆರೋಗ್ಯ ಪರಿಸ್ಥಿತಿ, ದೈಹಿಕ ಪರಿಸ್ಥಿತಿ, ವಯಸ್ಸು, ಲಿಂಗ ಹಾಗೂ ಇನ್ನಿತರ ಅಂಶಗಳು. ಪ್ರತಿ ದಿನವೂ ನಾವು ಉಸಿರಾಟ, ಬೆವರು, ಮೂತ್ರ ಮತ್ತು ಮಲ ವಿಸರ್ಜನೆಯ ಮೂಲಕ ನೀರನ್ನು ಕಳೆದುಕೊಳ್ಳುತ್ತಿರುತ್ತೇವೆ. ನಮ್ಮ ಶರೀರವು ಸರಿಯಾಗಿ ಕಾರ್ಯನಿರ್ವಹಿಸಬೇಕಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಾನೀಯಗಳು ಮತ್ತು ನೀರನ್ನು ಹೊಂದಿರುವ ಆಹಾರಗಳನ್ನು ಸೇವಿಸಿ ದೇಹದ ನೀರಿನ ಅವಶ್ಯಕತೆಯನ್ನು ಪೂರೈಸಬೇಕು. ಅಂದಾಜು ದಿನಕ್ಕೆ
12ರಿಂದ 13 ಕಪ್ ನೀರು ಮನುಷ್ಯನಿಗೆ ಅವಶ್ಯಕ. ಬಿಸಿ ಅಥವಾ ತೇವಭರಿತ ವಾತಾವರಣ ನಮ್ಮನ್ನು ಬೆವರುವಂತೆ ಮಾಡುತ್ತದೆ. ಇಂಥ ಸಂದರ್ಭಗಳಲ್ಲಿ ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ.
ನೀರಿನ ಆರೋಗ್ಯ ಪ್ರಯೋಜನಗಳು
ನೀರು ನಮ್ಮ ಶರೀರದ ಜೀವಕೋಶಗಳಲ್ಲಿ ಇರುವ ತ್ಯಾಜ್ಯಗಳನ್ನು ತೊಡೆದು ಹಾಕುತ್ತದೆ. ಜೀವಕೋಶಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹದ ತಾಪಮಾನವನ್ನು ಕಾಪಾಡುತ್ತದೆ. ನೀರು ಮೂತ್ರಪಿಂಡದಲ್ಲಿ ಕಲ್ಲಾಗಾದಂತೆ ಮತ್ತು ಮಲಬದ್ಧತೆ ಆಗದಂತೆ ತಡೆಯುತ್ತದೆ. ತ್ವಚೆಯ ಕಾಂತಿ ಹೆಚ್ಚುವಂತೆ ಮಾಡುವುದಕ್ಕೂ ನೀರು ಅಗತ್ಯವಾಗಿದೆ. ನರವ್ಯವಸ್ಥೆಯಲ್ಲಿಯೂ ನೀರು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಪರಿಚಲನಾ ವ್ಯವಸ್ಥೆ, ಉಸಿರಾಟದ ವ್ಯವಸ್ಥೆ, ಎಲ್ಲದರಲ್ಲೂ ನೀರು ಪ್ರಮುಖವಾಗಿ ಬೇಕು.
ಬೂಸ್ಟರ್ ವ್ಯಾಕ್ಸಿನ್ ಹಾಕಿದ್ರೆ Omicron ಭಯದ ಅಗತ್ಯವಿಲ್ಲ
ನೀರಿನ ತತ್ವಾರ ಎದುರಾಗಲಿದೆ
ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವರಿಸಿದ್ದರೂ ಜಗತ್ತಿನಾದ್ಯಂತ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. 2050ರ ವೇಳೆಗೆ ವಿಶ್ವದ ಜನಸಂಖ್ಯೆ ಸುಮಾರು 1000 ಕೋಟಿಯ ಸಮೀಪ ತಲುಪುವ ಸಾಧ್ಯತೆ ಇದೆ. ಪ್ರಸ್ತುತ ನೀರಿನ ಸಮಸ್ಯೆ ಜಟಿಲವಾಗಿರುವಾಗ 2-3 ದಶಕಗಳ ಬಳಿಕ ಸಮಸ್ಯೆಯ ತೀವ್ರತೆ ಊಹಿಸುವುದು ಕಷ್ಟ. ಮುಂದಿನ ದಶಕಗಳಲ್ಲಿ ಪ್ರಪಂಚದ ಶೇ.50ರಷ್ಟು ಜನತೆಗೆ ಶುದ್ಧ ಕುಡಿಯುವ ನೀರನ್ನು ನಿತ್ಯ ಒದಗಿಸುವುದು ಸಾಧ್ಯವೇ ಇಲ್ಲ ಎಂದು ಕೆಲ ಅಧ್ಯಯನಗಳು ಅಂದಾಜಿಸಿವೆ. ಇಂತಹ ಸವಾಲಿನ ಕಾರ್ಯದಲ್ಲಿ ವಿಶ್ವಸಂಸ್ಥೆ ಹೆಜ್ಜೆ ಇಡುತ್ತಿದೆ. ಕಡಿಮೆಯಾಗುತ್ತಿರುವ ಸಿಹಿ ನೀರಿನ ಪ್ರಮಾಣ, ಮಿತಿ ಮೀರಿದ ನೀರಿನ ಬಳಕೆ ಹಾಗೂ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರನ್ನು ಉಳಿಸುವ ಬಗ್ಗೆ ಪ್ರಪಂಚದಾದ್ಯಂತ ಅರಿವು ಮೂಡಿಸುವಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಇವರು ಕಾಫಿ ಜತೆ ಮಿಕ್ಸ್ ಮಾಡೋದು ಹಾಲಲ್ಲ, ಆಲ್ಕೋಹಾಲ್!
ನೈರ್ಮಲ್ಯ ಕೊರತೆ ಹಾಗೂ ಅಸುರಕ್ಷಿತ ಕುಡಿಯುವ ನೀರಿನ ಸೇವನೆ ಮಕ್ಕಳಲ್ಲಿ ಅತಿಸಾರ ಮತ್ತಿತರ ಕಾಯಿಲೆಗಳಿಗೆ ಪ್ರಮುಖ ಕಾರಣ. ಅಶುದ್ಧ ನೀರಿನ ಸೇವನೆಯಿಂದ ವಿಶ್ವಾದ್ಯಂತ ವಾರ್ಷಿಕ 3 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2040ರ ವೇಳೆಗೆ ಜಗತ್ತಿನಲ್ಲಿ ನೀರಿನ ಬೇಡಿಕೆ ಈಗಿರುವುದಕ್ಕಿಂತ ಶೇ.50ರಷ್ಟು ಹೆಚ್ಚಾಗಲಿದೆ. ಪ್ರಸ್ತುತ ಮೂರರಲ್ಲಿ ಒಬ್ಬರಿಗೆ ಕುಡಿಯಲು ಶುದ್ಧ ನೀರು ದೊರಕುತ್ತಿಲ್ಲ. ನೀರಿನ ಮಿತ ಬಳಕೆಯನ್ನು ಅನುಸರಿಸುವ ಜತೆಗೆ ಪೋಲು ತಪ್ಪಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು. ಮಣ್ಣನ್ನು ಭೂಮಿಗೆ ಇಂಗಿಸಲು ಹಾಗೂ ನೀರಿನ ಪುನರ್ಬಳಕೆಗೆ ಆದ್ಯತೆ ನೀಡಬೇಕು. ಸಸಿಗಳನ್ನು ನೆಡುವುದು, ಜಲ ಮೂಲಗಳನ್ನು ಸಂರಕ್ಷಿಸುವುದು ಭವಿಷ್ಯದಲ್ಲಿ ಸಹಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.