
ಕೆಟ್ಟ ಕೊಲೆಸ್ಟ್ರಾಲ್.. ಸದ್ಯ ಚರ್ಚೆಯಲ್ಲಿರುವ ವಿಷ್ಯಗಳಲ್ಲಿ ಇದೂ ಒಂದು. ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬ ಮಾತುಗಳನ್ನು ಹತ್ತರಲ್ಲಿ ಒಬ್ಬರ ಬಾಯಿಂದ ಕೇಳ್ತಿದ್ದೇವೆ. ಕೊಲೆಸ್ಟ್ರಾಲ್ ಹೆಚ್ಚಾಗ್ತಿದೆ ಎಂಬುದು ಗೊತ್ತಾಗ್ತಿದ್ದಂತೆ ವೈದ್ಯರು ಎಚ್ಚರಿಕೆ ನೀಡ್ತಾರೆ. ಬೇಡದ ಕೊಲೆಸ್ಟ್ರಾಲ್ ಕರಗಿಸಲು ಸಲಹೆ ನೀಡ್ತಾರೆ.
ಈ ಕೊಲೆಸ್ಟ್ರಾಲ್ (Cholesterol) ಮೇಣದಂತಹ ವಸ್ತುವಾಗಿದೆ. ಇದು ರಕ್ತದಲ್ಲಿ ಕಂಡುಬರುತ್ತದೆ. ನಂತ್ರ ಅಪಧಮನಿಗಳಲ್ಲಿ ಸಂಗ್ರಹವಾಗಲು ಶುರುವಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದ್ರೆ ಆರೋಗ್ಯ (Health) ಹದಗೆಡಲು ಶುರುವಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ಹೃದಯಾಘಾತ (Heart Attack) ದ ಅಪಾಯ ಹೆಚ್ಚಾಗಿ ಕಾಡುತ್ತದೆ. ಅಧಿಕ ಕೊಲೆಸ್ಟ್ರಾಲ್‌ನಿಂದಾಗಿ ಅಪಧಮನಿಗಳಲ್ಲಿ ರಕ್ತದ ಹರಿವು ಸುಲಭವಾಗಿ ಆಗುವುದಿಲ್ಲ. ಇದರಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಅನೇಕ ಬಾರಿ ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗ್ತಿದೆ ಎಂಬುದೇ ತಿಳಿಯೋದಿಲ್ಲ. ಹಾಗಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗೋದಿಲ್ಲ. ಸೂಕ್ತ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರಬಹುದು. ಆದ್ರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದನ್ನು ತಿಳಿಯೋದು ಹೇಗೆ? ನಾವಿಂದು ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದಾಗ ನಿಮಗೆ ಏನೆಲ್ಲ ಸಮಸ್ಯೆ ಶುರುವಾಗುತ್ತದೆ ಎಂಬುದನ್ನು ಹೇಳ್ತೇವೆ.
ಕೊಲೆಸ್ಟ್ರಾಲ್ ಹೆಚ್ಚಾದ ಸೂಚನೆ ನೀಡುತ್ತೆ ದೇಹದ ಈ ಭಾಗ :
ಅಧಿಕ ಕೊಲೆಸ್ಟ್ರಾಲ್ ಸಂಕೇತ ನೀಡುತ್ತೆ ಎದೆ ನೋವು : ನಿಮಗೆ ಪದೇ ಪದೇ ಎದೆಯಲ್ಲಿ ನೋವು ಕಾಣಿಸಿಕೊಳ್ತಿದೆ ಎಂದಾದ್ರೆ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಯಾಕೆಂದ್ರೆ ಹೃದಯಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗಿದ್ದರೆ ಎದೆಯಲ್ಲಿ ನೋವು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಕೆಲವು ಬಾರಿ ನೀವು ಎದೆಯನ್ನು ಮುಟ್ಟಿದಾಗ್ಲೂ ನಿಮಗೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ವಿಪರೀತವಾಗಿರುತ್ತದೆ.
ಕಾಲು ನೋವಾದ್ರೆ ನಿರ್ಲಕ್ಷ್ಯ ಬೇಡ : ಜನರು ಸಾಮಾನ್ಯವಾಗಿ ನಿರ್ಲಕ್ಷ್ಯ ಮಾಡುವ ನೋವುಗಳಲ್ಲಿ ಕಾಲು ನೋವು ಸೇರಿದೆ. ಕಾಲಿಗೆ ನೋವಿನ ಔಷಧಿ ತಿಕ್ಕಿ ಮಲಗುವವರಿದ್ದಾರೆ. ಆದ್ರೆ ಪ್ರತಿ ಬಾರಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅಧಿಕ ಕೊಲೆಸ್ಟ್ರಾಲ್ ಕಾರಣದಿಂದ ಕಾಲುಗಳ ಅಪಧಮನಿಗಳಿಗೆ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ. ಇದರಿಂದ ಪಾದಗಳಿಗೆ ಸರಿಯಾಗಿ ರಕ್ತ ಹೋಗುವುದಿಲ್ಲ. ರಕ್ತದ ಹರಿವು ಕಡಿಮೆಯಾಗಿದೆ ಎಂದಾಗ ನಿಮ್ಮ ಪಾದಗಳಲ್ಲಿ ನೋವ ಕಾಣಿಸಿಕೊಳ್ಳುತ್ತದೆ. ಅನೇಕ ಬಾರಿ ಪಾದದ ಚರ್ಮದ ಬಣ್ಣ ಬದಲಾದಂತೆ ಕಾಣಿಸಬಹುದು. ಕೆಲವರ ಪಾದಗಳು ತುಂಬಾ ತಣ್ಣಗಾಗುತ್ತವೆ. ಇದು ಕೂಡ ಅಧಿಕ ಕೊಲೆಸ್ಟ್ರಾಲ್ ಸೂಚನೆಯಾಗಿದೆ.
ನಿಮ್ ಹುಬ್ಬು ಕೂದಲು ಉದುರುತ್ತಿದ್ಯಾ? ಪಿಸಿಒಡಿ, ಥೈರಾಯ್ಡ್ ಕಾರಣನೂ ಆಗಿರ್ಬೋದು
ಹೃದಯದಲ್ಲಿ ಕಾಣಿಸಿಕೊಳ್ಳುತ್ತೆ ನೋವು : ಹೃದಯದಲ್ಲಿ ನೋವು ಹೆಚ್ಚಿದ್ದರೆ ಅದು ಕೂಡ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಂಕೇತವಾಗಿದೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯ ಕಾಡುತ್ತದೆ. ಹೃದಯದಲ್ಲಿ ನೋವು ಕಾಣಿಸಿಕೊಳ್ತಿದ್ದರೆ ತಕ್ಷಣ ಚಿಕಿತ್ಸೆ ಪಡೆಯುವುದು ಸೂಕ್ತ ಎನ್ನುತ್ತಾರೆ ತಜ್ಞರು.
ಆಗಾಗ ಹಾರ್ಟ್ ಟೆಸ್ಟ್ ಮಾಡಿಸ್ಕೊಳ್ಳಿ ಅನ್ನೋದ್ಯಾಕೆ ? ಎಷ್ಟು ಬಾರಿ ಮಾಡಿದ್ರೆ ಒಳ್ಳೇದು
ಇವರನ್ನು ಹೆಚ್ಚಾಗಿ ಕಾಡುತ್ತೆ ಕೊಲೆಸ್ಟ್ರಾಲ್ ? : ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗೆ ನಮ್ಮ ಆಹಾರ ಹಾಗೂ ಜೀವನ ಶೈಲಿಯೇ (Lifestyle) ಮುಖ್ಯ ಕಾರಣವಾಗುತ್ತದೆ. ನಾವು ಪೋಷಕಾಂಶ (Nutrients) ಕಡಿಮೆಯಿರುವ ಆಹಾರ ಸೇವನೆ ಮಾಡಿದಾಗ ಅಥವಾ ಜಂಕ್ ಫುಡ್ (Junk food) ಗಳನ್ನು ಅತಿಯಾಗಿ ಸೇವನೆ ಮಾಡಿದಾಗ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಶುರುವಾಗುತ್ತದೆ. ಇಷ್ಟೇ ಅಲ್ಲ ಧೂಮಪಾನ ಮಾಡುವವರು ಮತ್ತು ಆಲ್ಕೋಹಾಲ್ ಸೇವಿಸುವ ಜನರಿಗೂ ಅಧಿಕ ಕೊಲೆಸ್ಟ್ರಾಲ್ ಕಾಡುತ್ತದೆ. ಪ್ಯಾಕ್ ಮಾಡಲಾದ ವಸ್ತುಗಳ ಅತಿಯಾದ (Packed Food Items) ಸೇವನೆ ಕೂಡ ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆಗೆ ಕಾರಣವಾಗಬಹುದು. ದೈಹಿಕ ಚಟುವಟಿಕೆ (Physical Activity) ಕೂಡ ಮುಖ್ಯವಾಗುತ್ತದೆ. ಇಡೀ ದಿನ ಕುಳಿತು ಕೆಲಸ ಮಾಡುವವರು ಯಾವುದೇ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದೆ ಇದ್ದಾಗ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕಾಡುವುದು ಹೆಚ್ಚು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.