Health Tips : ಪ್ಯಾಂಟ್ ಹಿಂದಿನ ಕಿಸೆಯಲ್ಲಿ ಪರ್ಸ್ ಇಡ್ತೀರಾ? ಎಚ್ಚರ…

By Suvarna NewsFirst Published Feb 6, 2023, 2:13 PM IST
Highlights

ಪುರುಷರ ಜೇಬಿನಲ್ಲಿ ಏನು ಇರಲ್ಲ ಹೇಳಿ? ಪ್ಯಾಂಟ್ ಹಿಂದಿನ ಜೇಬು ಅಗತ್ಯ ವಸ್ತುಗಳನ್ನಿಡುವ ಕಪಾಟಾಗಿರುತ್ತೆ. ಅದ್ರಲ್ಲಿ ಎಲ್ಲವೂ ಸಿಗುತ್ತೆ. ಪ್ರತಿ ದಿನ ಬೇಕು ಅಂತಾ ಹಣದಿಂದ ಹಿಡಿದು ಪಾನ್ ವರೆಗೆ ಎಲ್ಲವನ್ನು ಹಿಂದಿನ ಜೇಬಿನಲ್ಲಿಟ್ಟು ತಿರುಗ್ತಿದ್ರೆ ಮುಂದೊಮ್ಮೆ ನೋವು ತಾಳಲಾರದೆ ಹಾಸಿಗೆ ಹಿಡಿಯಬೇಕಾಗುತ್ತೆ. 
 

ಪರ್ಸ್ ಇಡೋಕೆ ಹುಡುಗಿಯರು ಅಥವಾ ಮಹಿಳೆಯರು ಬ್ಯಾಗ್ ಬಳಸಿದ್ರೆ ಪುರುಷರು ಪ್ಯಾಂಟ್ ಅಥವಾ ಜೀನ್ಸ್ ಕಿಸೆ ಬಳಸ್ತಾರೆ. ಪ್ಯಾಂಟಿನ ಹಿಂದೆ ಹಾಗೂ ಮುಂದೆ ಎರಡೂ ಕಡೆ ಜೇಬಿರುತ್ತದೆ. ಜೇಬಿನಲ್ಲಿ ಪರ್ಸ್ ಜೊತೆ ಒಂದಿಷ್ಟು ಹಣ, ಮೊಬೈಲ್ ಸೇರಿದಂತೆ ವಿಸಿಟಿಂಗ್ ಕಾರ್ಡ್ ಕೂಡ ಇರುತ್ತೆ. ಕೆಲವರು ತೂಕ ನೋಡ್ಬೇಕಿದ್ರೆ ಜೇಬಿನಲ್ಲಿರುವ ವಸ್ತುಗಳನ್ನು ತೆಗೆದಿಟ್ಟು ತೂಕದ ಮಷಿನ್ ಏರೋದನ್ನು ನೀವು ನೋಡಿರಬಹುದು. ಯಾಕೆಂದ್ರೆ ಜೇಬಿನಲ್ಲಿ ಅಷ್ಟೊಂದು ವಸ್ತುಗಳನ್ನು ಅವರು ಇಟ್ಟುಕೊಂಡಿರ್ತಾರೆ. ಆದ್ರೆ ಜೇಬಿನಲ್ಲಿರುವ ಈ ವಸ್ತುಗಳೇ ಪುರುಷರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎನ್ನುವುದು ನಿಮಗೆ ಗೊತ್ತಾ? 

ನಿಮ್ಮ ಜೇಬಿ (Pocket) ನಲ್ಲಿರುವ ವಸ್ತು ಗಂಭೀರ ಖಾಯಿಲೆ (Disease) ಗೆ ನಿಮ್ಮನ್ನು ನೂಕಬಹುದು. ನಡೆಯಲು, ಎದ್ದೇಳಲು, ಕುಳಿತುಕೊಳ್ಳಲು ಸಮಸ್ಯೆಯಾಗ್ಬಹುದು. ನಾವು ತಮಾಷೆ ಮಾಡ್ತಿಲ್ಲ. ಕೆಲ ದಿನಗಳ ಹಿಂದೆ 30 ವರ್ಷದ ಹೈದ್ರಾಬಾದ್ ನಿವಾಸಿಯೊಬ್ಬನಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಆರಂಭದಲ್ಲಿ ಅದನ್ನು ಸಣ್ಣ ರಕ್ತನಾಳದ ಸಮಸ್ಯೆ ಎಂದು ತಪ್ಪಾಗಿ ಭಾವಿಸಲಾಗಿತ್ತಲ್ಲದೆ ಅದನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಆದ್ರೆ ದಿನ ಕಳೆದಂತೆ ನೋವು ಹೆಚ್ಚಾಗ್ತಾ ಹೋಯ್ತು. ಮೂರು ತಿಂಗಳವರೆಗೆ ಬಲ ಪೃಷ್ಠದಿಂದ ಕಾಲು ಮತ್ತು ಕಾಲ್ಬೆರಳುಗಳವರೆಗೆ ತೀವ್ರ ನೋವು ಕಾಣಿಸಿಕೊಂಡಿತ್ತು. ಅನೇಕ ಔಷಧಿ ಮತ್ತು ಚಿಕಿತ್ಸೆ ನಂತ್ರವೂ ನೋವು ಕಡಿಮೆಯಾಗ್ಲಿಲ್ಲ. ಕೊನೆಯಲ್ಲಿ ಇದು ಫ್ಯಾಟ್ ವಾಲೆಟ್ ಸಿಂಡ್ರೋಮ (Fat Wallet Syndrome) ಎಂದು ವೈದ್ಯರು ಪತ್ತೆ ಮಾಡಿದ್ರು. 

ಫ್ಯಾಟ್ ವಾಲೆಟ್ ಸಿಂಡ್ರೋಮ ಅಂದ್ರೇನು ಗೊತ್ತಾ?  : ಫ್ಯಾಟ್ ವಾಲೆಟ್ ಸಿಂಡ್ರೋಮ್‌ನಿಂದ ಬಳಲುವ ವ್ಯಕ್ತಿ  ನಿಂತುಕೊಳ್ಳಲು ಅಥವಾ ನಡೆಯುವುದಕ್ಕಿಂತ ಕುಳಿತುಕೊಳ್ಳುವಾಗ ಅಥವಾ ಮಲಗಿರುವಾಗ ಹೆಚ್ಚು ನೋವನ್ನು ಅನುಭವಿಸುತ್ತಾನೆ. ಹೈದ್ರಾಬಾದ್ ವ್ಯಕ್ತಿಗೆ ಇದಕ್ಕೆ ಸಂಬಂಧಿಸಿದಂತೆ ಎಂಆರ್ ಐ ಸ್ಕ್ಯಾನ್ ಸೇರಿದಂತೆ ಅನೇಕ ಚಿಕಿತ್ಸೆ ಮಾಡಲಾಯ್ತು. ಆದ್ರೆ ಬೆನ್ನು ಹುರಿ, ಕೆಳ ಬೆನ್ನಿನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿರುವುದು ಪತ್ತೆಯಾಗಲಿಲ್ಲ. ಇದರ ನಂತ್ರ ನರಕ್ಕೆ ಸಂಬಂಧಿಸಿದ ಪರೀಕ್ಷೆಯೊಂದನ್ನು ಮಾಡಲಾಯ್ತು. ಇದ್ರಲ್ಲಿ ರೋಗ ಪತ್ತೆ ಮಾಡಲು ವೈದ್ಯರು ಯಶಸ್ವಿಯಾದ್ರು. ಬಲಭಾಗದ ಸಿಯಾಟಿಕ್ ನರವು ತೀವ್ರವಾಗಿ ಹಾನಿಗೊಳಗಾಗಿದೆ ಎಂಬುದು ಗೊತ್ತಾಯ್ತು. ಆದ್ರೆ ಬಲ ಭಾಗದ ಸಿಯಾಟಿಕ್ ನರದ ಹಾನಿಗೆ ಕಾರಣವೇನು ಎಂಬುದು ವೈದ್ಯರಿಗೆ ಗೊತ್ತಾಗಿರಲಿಲ್ಲ. 

ಈ ವೇಳೆ ವ್ಯಕ್ತಿಯೇ ಜೇಬಿನ ವಿಷ್ಯ ಹೇಳಿದ್ದನಂತೆ. ಬಲ ಭಾಗದ ಪ್ಯಾಂಟ್ ಜೇಬಿನಲ್ಲಿ ಪರ್ಸ್,ಕಾರ್ಡ್, ಹಣ ಸೇರಿದಂತೆ ಅನೇಕ ವಸ್ತುಗಳನ್ನು ಇಟ್ಟುಕೊಳ್ಳುವುದಾಗಿ ಹೇಳಿದ್ದಾನೆ. ದಿನದಲ್ಲಿ ಸುಮಾರು 10 ಗಂಟೆಗೂ ಹೆಚ್ಚು ಕಾಲ ಈ ಎಲ್ಲವೂ ಜೇಬಿನಲ್ಲಿ ಇರುತ್ತವೆ ಎಂದು ವೈದ್ಯರಿಗೆ ಆತ ಮಾಹಿತಿ ನೀಡಿದ್ದ.

ತೂಕ ಇಳಿಸಿಕೊಂಡು, ಯಂಗ್ ಆಗಿ ಕಾಣಲು ಈ ವಿಶೇಷ ನೀಲಿ ಚಹಾ ಬೆಸ್ಟ್

ತೀವ್ರ ನೋವಿಗೆ ಕಾರಣವಾಗುತ್ತೆ ಫ್ಯಾಟ್ ವಾಲೆಟ್ ಸಿಂಡ್ರೋಮ : ಈ ಸಿಂಡ್ರೋಮದಲ್ಲಿ ನೋವು ತೀವ್ರವಾಗಿರುತ್ತದೆ. ಇದ್ರಿಂದಲೇ  ಸಿಯಾಟಿಕ್ ನರ ಕೂಡ ಹಾನಿಗೊಳಗಾಗಿತ್ತು. ಇದು ಸಿಯಾಟಿಕ್ ಅಭಿಧಮನಿಯ ಮೇಲೆ ನೇರವಾಗಿ ಒತ್ತಡ ಉಂಟುಮಾಡುತ್ತದೆ. ಇದ್ರಿಂದಾಗಿ ನೋವು ಹೆಚ್ಚಾಗುತ್ತದೆ.

ಈ ಸಿಂಡ್ರೋಮ ಬಗ್ಗೆ ವೈದ್ಯರು ಹೇಳೋದೇನು? : ಫ್ಯಾಟ್ ವ್ಯಾಲೆಟ್ ಸಿಂಡ್ರೋಮವನ್ನು ವೈದ್ಯಕೀಯ ಭಾಷೆಯಲ್ಲಿ ಪಿರಿಫಾರ್ಮಿಸ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಮೊದಲೇ ಹೇಳಿದಂತೆ ಪರ್ಸ್ ನಲ್ಲಿ ಬರೀ ಹಣವಿರೋದಿಲ್ಲ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಕೆಲ ಔಷಧಿ ಚೀಟಿ, ಮಾತ್ರೆ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಅನೇಕ ವಸ್ತುಗಳನ್ನು ಇಟ್ಟುಕೊಳ್ಳುವ ಕಾರಣ ಅದ್ರ ತೂಕ ಹೆಚ್ಚಾಗುತ್ತದೆ. ಅದು ನರಗಳ ಮೇಲೆ ಪರಿಣಾಮ ಬೀರುತ್ತದೆ. ಸಿಯಾಟಿಕಾ ಎಂಬುದು ಬೆನ್ನುಮೂಳೆಯ ಮೂಲಕ ಹಾದುಹೋಗುವ ಮತ್ತು ಸೊಂಟ ಮತ್ತು ಪಾದದ ಹಿಮ್ಮಡಿಗೆ ಹೋಗುವ ಅಭಿಧಮನಿಯಾಗಿದೆ. ಈ ಅಸ್ವಸ್ಥತೆಯಲ್ಲಿ  ಸೊಂಟ ಮತ್ತು ಪೃಷ್ಠದ ನೋವು ಪ್ರಾರಂಭವಾಗುತ್ತದೆ. ಪಿರಿಫಾರ್ಮಿಸ್ ಸ್ನಾಯು ನಿಮ್ಮ ಸಿಯಾಟಿಕ್ ನರವನ್ನು ಒತ್ತಲು ಪ್ರಾರಂಭಿಸಿದಾಗ ಪಿರಿಫಾರ್ಮಿಸ್ ಸಿಂಡ್ರೋಮ್ ಸಂಭವಿಸುತ್ತದೆ, ಇದು ಕೆಲವೊಮ್ಮೆ ಕೈಕಾಲುಗಳಲ್ಲಿ ಊತಕ್ಕೆ ಕಾರಣವಾಗುತ್ತದೆ. ಇದು ನಿಮ್ಮ ಪೃಷ್ಠದ ಮತ್ತು ನಿಮ್ಮ ಕಾಲಿನ ಹಿಂಭಾಗದಲ್ಲಿ ನೋವು ಅಥವಾ ಮರಗಟ್ಟುವಿಕೆಗೆ ಕಾರಣವಾಗಬಹುದು. ಕೆಲವರಿಗೆ ದೇಹದ ಒಂದು ಬದಿಯಲ್ಲಿ ಕಾಣಿಸಿಕೊಂಡ್ರೆ ಮತ್ತೆ ಕೆಲವರಿಗೆ ಎರಡೂ ಬದಿಯಲ್ಲಿ ಕಾಣಿಸಿಕೊಳ್ಳಬಹುದು. 

ಹೊತ್ತು ಗೊತ್ತಿಲ್ಲದ ಹೊತ್ತಲ್ಲಿ ಟಾಯ್ಲೆಟ್‌ಗೆ ಹೋಗೋದು ಅನಾರೋಗ್ಯದ ಲಕ್ಷಣ!

ಹೆಚ್ಚು ತೂಕದ ಪರ್ಸನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು ತುಂಬಾ ಸಮಯದವರೆಗೆ ಕುಳಿತು ಕೆಲಸ ಮಾಡುವವರಿಗೆ ಅಥವಾ ವಾಹನ ಚಲಾಯಿಸುವವರಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ. 
ಹಿಂದಿನ ಜೇಬಿನಲ್ಲಿ ಪರ್ಸ್ ಇಟ್ಟುಕೊಳ್ಳೋದು ಈಗಿನ ವಿಷ್ಯವಲ್ಲ. ಆದ್ರೆ ಅದು ಅಸ್ವಸ್ಥತೆಯನ್ನುಂಟು ಮಾಡುತ್ತದೆ. ಇದನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಅನೇಕ ಬಾರಿ ಇದು ದೇಹದ ಸಮತೋಲನವನ್ನು ಹಾಳು ಮಾಡುತ್ತದೆ ಮತ್ತು ಇದು ಸೊಂಟ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಭಾರಿ ಗಾತ್ರದ ಪರ್ಸನ್ನು ಕಚೇರಿಯಲ್ಲಿ ಅಥವಾ ವಾಹನ ಚಲಾಯಿಸುವ ಸಂದರ್ಭದಲ್ಲಿ ನಿಮ್ಮ ಮುಂಭಾಗದ ಪಾಕೆಟ್, ಜಾಕೆಟ್ ಅಥವಾ ಶರ್ಟ್ ನಲ್ಲಿ ಇಟ್ಟುಕೊಳ್ಳಿ. 

ಭಾರಿ ಗಾತ್ರದ ಪರ್ಸನ್ನು ಹಿಂದೆ ಇಟ್ಟುಕೊಳ್ಳದಂತೆ ಸಲಹೆ ನೀಡುವ ಜೊತೆಗೆ ನೋವು ನಿವಾರಕ ಮಾತ್ರೆ, ಔಷಧಿ ನೀಡುವುದು ಇದಕ್ಕೆ ಚಿಕಿತ್ಸೆಯಾಗಿದೆ. ಅಲ್ಲದೆ ಕೆಲವು ಸ್ನಾಯುಗಳನ್ನು ಹಿಗ್ಗಿಸುವಂತಹ ವ್ಯಾಯಾಮಗಳನ್ನು ಮಾಡುವಂತೆ ವೈದ್ಯರು ಸಲಹೆ ನೀಡ್ತಾರೆ.
 

click me!