* ತಂತ್ರಜ್ಞಾನ ಬಳಸಿ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ
* ಒಪ್ಪಂದದಿಂದ ರಾಜ್ಯಕ್ಕೆ ಲಾಭ: ಡಾ. ಕೆ. ಸುಧಾಕರ್
* ಎಸ್ಟೋನಿಯಾ ದೇಶದ ಎಲ್ಲ ಪ್ರಜೆಗಳು ಹೆಲ್ತ್ ರಿಜಿಸ್ಟ್ರಿ ಮಾಡಿಕೊಂಡಿದ್ದಾರೆ
ಬೆಂಗಳೂರು(ಏ.14): ವೈದ್ಯಕೀಯ ಶಿಕ್ಷಣ(Medical Education) ಮತ್ತು ಆರೋಗ್ಯ(Health) ಕ್ಷೇತ್ರದಲ್ಲಿ ತಂತ್ರಜ್ಞಾನದ ಮೂಲಕ ಸುಧಾರಣೆ ತರಲು ಎಸ್ಟೋನಿಯಾ ದೇಶದ ಜತೆ ರಾಜ್ಯ ಆರೋಗ್ಯ ಇಲಾಖೆ ಹೊಸ ಒಡಂಬಡಿಕೆಯನ್ನು ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್(Dr K Sudhakar) ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಎಸ್ಟೋನಿಯಾ ದೇಶದ ಭಾರತದ ರಾಯಭಾರಿ(Ambassador of the Republic of Estonia) ಕತ್ರಿನ್‌ಕಿವ್(Katrin Kivi) ನೇತೃತ್ವದ ಉನ್ನತ ನಿಯೋಗದ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಎಸ್ಟೋನಿಯಾ(Estonia) ಚಿಕ್ಕ ದೇಶವಾದರೂ ಅತಿ ಹೆಚ್ಚು ನವೋದ್ಯಮಗಳನ್ನು ಹೊಂದಿದ್ದು, ತಂತ್ರಜ್ಞಾನಕ್ಕೆ ಹೆಸರಾಗಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಿದೆ. ಹೀಗಾಗಿ ನಿಯೋಗದ ಭೇಟಿಯಿಂದ ರಾಜ್ಯಕ್ಕೆ ಲಾಭವಾಗಲಿದೆ ಎಂದರು.
ಕೊರೋನಾ ನಾಲ್ಕನೇ ಅಲೆ ಆತಂಕದ ಮಧ್ಯೆ ಗುಡ್‌ನ್ಯೂಸ್ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ!
ಎಸ್ಟೋನಿಯಾ ದೇಶದ ಎಲ್ಲ ಪ್ರಜೆಗಳು ಹೆಲ್ತ್ ರಿಜಿಸ್ಟ್ರಿ ಮಾಡಿಕೊಂಡಿದ್ದಾರೆ. ಆ ದೇಶದಲ್ಲಿ ಟೆಲಿಮೆಡಿಸಿನ್ ವ್ಯವಸ್ಥೆ ಇದೆ. 400 ವರ್ಷಗಳ ಹಳೆಯ ವಿಶ್ವವಿದ್ಯಾಲಯ ಕೂಡ ಇವೆ. ಇಂತಹ ದೇಶದ ಜತೆ ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ‘ಕಾರ್ಯಕ್ರಮಗಳ ವಿನಿಮಯ’ ಕುರಿತು ಒಡಂಬಡಿಕೆಯನ್ನು ಮಾಡಿಕೊಂಡಿದೆ. ಇದರಿಂದ ಆ ದೇಶದ ಆರೋಗ್ಯ ವ್ಯವಸ್ಥೆ ಬಗ್ಗೆ ಪರಿಚಯ ಸಿಗುವುದರ ಜತೆಗೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಕುರಿತು ಅವರಿಗೂ ತಿಳುವಳಿಕೆ ಸಿಗಲಿದೆ ಎಂದು ತಿಳಿಸಿದರು.
ಎಸ್ಟೋನಿಯಾದಲ್ಲಿ ಜೀನೊಮಿಕ್ ಲ್ಯಾಬ್ ಇದೆ. ವ್ಯಕ್ತಿಯ ಡಿಎನ್‌ಎ(DNA) ಮೂಲಕ ಯಾವ ವ್ಯಕ್ತಿಗೆ ಕ್ಯಾನ್ಸರ್, ಪಾರ್ಕಿನ್ಸನ್, ಸಾಂಕ್ರಾಮಿಕ ರೋಗಗಳು ಸೇರಿದಂತೆ ಯಾವ ಕಾಯಿಲೆ ಬರಬಹುದು ಎನ್ನುವುದನ್ನು ಸಂಶೋಧನೆ ಮಾಡಲಾಗುತ್ತದೆ. ಈ ಮೂಲಕ ಕಾಯಿಲೆಯನ್ನು ಬೇಗನೆ ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು, ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಮಾತುಕತೆ ನಡೆದಿದೆ ಎಂದು ಸಚಿವರು ವಿವರಿಸಿದರು.