Eye Health: ಕಣ್ಣುಗಳಲ್ಲಿ ಉಂಟಾಗುವ ಈ ಲಕ್ಷಣಗಳನ್ನು ಅಲಕ್ಷಿಸಬೇಡಿ

By Suvarna News  |  First Published Apr 13, 2022, 4:52 PM IST

Tips for eyes health: ಕಣ್ಣುಗಳು ನಮ್ಮ ಮನಸ್ಸಿನ ಭಾವನೆಗಳನ್ನು ಬಿಂಬಿಸುತ್ತವೆ ಎನ್ನಲಾಗುತ್ತದೆ. ಭಾವನಾತ್ಮಕ ನಿಲುವಿನಲ್ಲಿ ಇದು ನಿಜ. ಇದಕ್ಕೂ ಮಿಗಿಲಾಗಿ, ಕಣ್ಣುಗಳು ನಮ್ಮ ದೇಹದ ಅನಾರೋಗ್ಯವನ್ನು ಬಹಳ ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ. ಹೀಗಾಗಿ, ಕಣ್ಣುಗಳ ಬದಲಾವಣೆ ಕುರಿತು ಎಚ್ಚರಿಕೆಯಿಂದ ಇರಬೇಕು.
 


ಸಾಗರ್‌ ಜೈಸೀ ಆಂಖೋವಾಲಿ… ಎಂದು ಹೆಣ್ಣನ್ನು ಬಣ್ಣಿಸಿದ್ದಾನೆ ಕವಿ. ಆದರೆ, ಆ ಇಲ್ಲಿ ಹೆಚ್ಚು ಸೊಬಗು ಸಂದಿರುವುದು ಕಣ್ಣುಗಳಿಗೆ. ಹೌದು ಮುಖದ ಅಂದಚೆಂದಕ್ಕೆ ಕಣ್ಣುಗಳು (Eyes) ಕೊಡುಗೆ ನೀಡುತ್ತವೆ. ಕಣ್ಣುಗಳು ಬಾಹ್ಯ ಪ್ರಪಂಚಕ್ಕೆ ನಮಗಿರುವ ಕೊಂಡಿ. ಅವುಗಳ ಮಹತ್ವ ಅಷ್ಟೇ ಅಲ್ಲ, ಅವು ನಮ್ಮ ದೇಹದೊಳಗಿನ ಗುಟ್ಟನ್ನೂ ಬಿಟ್ಟುಕೊಡುತ್ತವೆ. ಕಣ್ಣುಗಳು ಅನಾರೋಗ್ಯವನ್ನು (Diseases) ಬಹಿರಂಗಪಡಿಸುತ್ತವೆ. ಹೀಗಾಗಿ, ಕಣ್ಣುಗಳಲ್ಲಾಗುವ ಬದಲಾವಣೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಎಷ್ಟು ಬೇಗ ಈ ಲಕ್ಷಣಗಳನ್ನು ಗುರುತಿಸುತ್ತೇವೋ ಅಷ್ಟೂ ನಮಗೆ ಒಳ್ಳೆಯದು. ಏಕೆಂದರೆ, ಕಣ್ಣುಗಳು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳ ಲಕ್ಷಣಗಳನ್ನು ಬಹಳ ಸ್ಪಷ್ಟವಾಗಿ ತೋರ್ಪಡಿಸುತ್ತವೆ.

•    ಮಧುಮೇಹ (Diabetes)
ಕೆಲವೊಮ್ಮೆ ಕಣ್ಣುಗಳು ಒಂದು ರೀತಿಯಲ್ಲಿ ಮತ್ತೇರಿದಂತೆ ತೋರುತ್ತವೆ. ಮಂಜಾಗಿ ಹಿಮ ಕಟ್ಟಿದಂತೆ ಭಾಸವಾಗಬಹುದು. ಸತತವಾಗಿ ಕೆಲವು ದಿನಗಳ ಕಾಲ ಹೀಗೆಯೇ ಇದ್ದರೆ ನೀವು ಮಧುಮೇಹದ ಪರೀಕ್ಷೆ ಮಾಡಿಸಬೇಕು. ಏಕೆಂದರೆ, ಇಂತಹ ಕಣ್ಣುಗಳು ಮಧುಮೇಹದ ಲಕ್ಷಣವನ್ನು ಸೂಚಿಸುತ್ತವೆ. ಟೈಪ್‌ -2 ಮಧುಮೇಹಿಗಳ ಕಣ್ಣುಗಳು ಹೀಗಾಗಬಹುದು. ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕ ಪ್ರಮಾಣದಲ್ಲಿ ಏರಿಕೆಯಾದಾಗ ರಕ್ತನಾಳಗಳ ಮೇಲೆ ಒತ್ತಡ ಹೇರುತ್ತವೆ. ಇದರ ಪರಿಣಾಮವಾಗಿ ಕಣ್ಣುಗಳ ಹಿಂಭಾಗದಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಅಲ್ಲಲ್ಲಿ ಕೆಂಪು, ಬಿಳಿಯ ಚುಕ್ಕೆಯಂತೆ ತೋರುತ್ತದೆ. ಈ ರೀತಿಯಲ್ಲಿ ಕೆಂಪು-ಬಿಳಿಯದಾಗಿ ಗೋಚರಿಸುವುದು ರಕ್ತದಲ್ಲಿ ಸಕ್ಕರೆ ಮಟ್ಟ ತೀವ್ರವಾಗಿ ಏರಿಕೆ ಆಗಿದೆ ಎನ್ನುವುದನ್ನು ತಿಳಿಸುತ್ತದೆ. ಈ ಸಮಯದಲ್ಲಿ ತಕ್ಷಣ ಎಚ್ಚರಿಕೆ ವಹಿಸಿ ಮಧುಮೇಹಕ್ಕೆ ಸೂಕ್ತ ಚಿಕಿತ್ಸೆ ಮಾಡಿಕೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಕಣ್ಣುಗಳ ದೃಷ್ಟಿ ಶಾಶ್ವತವಾಗಿ ನಾಶವಾಗಬಹುದು. ಹೀಗಾಗಿ, ಕಣ್ಣುಗಳ ಬಣ್ಣದಲ್ಲಾಗುವ ವ್ಯತ್ಯಾಸದ ಬಗ್ಗೆ ಸೂಕ್ಷ್ಮವಾಗಿ ಇರಬೇಕು.

Tap to resize

Latest Videos

•    ಕ್ಯಾನ್ಸರ್‌ (Cancer)
ಸ್ತನಗಳ ಕ್ಯಾನ್ಸರ್‌ ಲಕ್ಷಣ ಕೂಡ ಕಣ್ಣುಗಳಲ್ಲಿ ಕಾಣಬಹುದು. ಕ್ಯಾನ್ಸರ್‌ ಕಣಗಳು ದೇಹದ ಬೇರೆ ಬೇರೆ ಭಾಗಗಳಿಗೆ ಹರಡಲು ಆರಂಭವಾದಾಗ ಇದರ ಪರಿಣಾಮ ಕಣ್ಣುಗಳ ಮೇಲೂ ಉಂಟಾಗುತ್ತದೆ. ಕಣ್ಣುಗಳ ಮಧ್ಯಭಾಗದಲ್ಲಿರುವ ಇದರ ಲಕ್ಷಣ ಗೋಚರಿಸುತ್ತದೆ. ಒಂದೊಮ್ಮೆ ಕಣ್ಣುಗಳು ಮಂಜಾಗುತ್ತಿದ್ದರೆ, ನೋವು ಕಂಡುಬಂದರೆ, ಕಣ್ಣುಗಳಲ್ಲಿ ರಕ್ತನಾಳಗಳು ಎದ್ದು ತೋರುವಂತಾದರೆ ವೈದ್ಯರನ್ನು ತಕ್ಷಣ ಭೇಟಿ ಮಾಡಬೇಕು.

ಇದನ್ನೂ ಓದಿ: ನಿಮ್ಗೇನು ಕಾಯಿಲೆಯಿದೆ ಅನ್ನೋದನ್ನು ನಿಮ್ಮ ಕಣ್ಣೇ ಹೇಳುತ್ತೆ

•    ಅಧಿಕ ಕೊಬ್ಬು (High Cholesterol) 
ರಕ್ತದಲ್ಲಿ ಕೊಬ್ಬಿನ ಮಟ್ಟ ನಿಧಾನವಾಗಿ ಏರಿಕೆ ಆಗುತ್ತಿರುತ್ತದೆ. ಅದು ಕಣ್ಣುಗಳಲ್ಲಿಯೂ ಶೇಖರಣೆಯಾಗುತ್ತದೆ. ಪರಿಣಾಮವಾಗಿ, ಕಣ್ಣುಗಳ ನಾಲ್ಕೂ ಮೂಲೆಗಳಲ್ಲಿ ಬಿಳಿ ಹಾಗೂ ನೀಲಿ ಬಣ್ಣಗಳ ರಿಂಗ್‌ (Ring) ರಚನೆಯಾದಂತೆ ಕಾಣಿಸುತ್ತದೆ. ವಯಸ್ಸಾಗುತ್ತಿರುವ ಹಾಗೆಯೂ ಇಂತಹ ರಚನೆ ಗೋಚರಿಸಬಹುದು. ಆದರೆ, ರಕ್ತದಲ್ಲಿ ಶೇಖರಣೆಯಾದ ಕೊಬ್ಬೂ ಸಹ ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ಒಂದೊಮ್ಮೆ ತಮಗೆ ಈ ಲಕ್ಷಣ ಕಂಡುಬಂದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ಪರೀಕ್ಷೆ ಮಾಡಿಸುವುದು ಉತ್ತಮ. ಕೊಬ್ಬು ಸಂಗ್ರಹವಾಗುವುದು ಹೃದಯ ಮತ್ತು ಸ್ಟ್ರೋಕ್‌ ಸಮಸ್ಯೆಯನ್ನು ಹೆಚ್ಚಿಸುತ್ತದೆ. 

•    ಹಾನಿಯಾದ ರೆಟಿನಾ (Retina)
ರೆಟಿನಾ ಸುತ್ತಮುತ್ತ ಸಣ್ಣ ಸಣ್ಣ ಚುಕ್ಕೆಗಳಂತಹ ಗುರುತು ಕಂಡುಬರುತ್ತದೆ. ಇದನ್ನು ಐ ಫ್ಲೋಟರ್ಸ್‌ ಎನ್ನಲಾಗುತ್ತದೆ. ಇದು ಬಹಳ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಆದರೆ, ಈ ಚುಕ್ಕೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ ಕಡೆಗಣಿಸಬಾರದು. ಏಕೆಂದರೆ, ಇದು ರೆಟಿನಾಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು. ರೆಟಿನಲ್‌ ಟೈರ್‌ ದಟ್ಟವಾಗುತ್ತಿದ್ದರೆ ಕಣ್ಣುಗಳಿಗೆ ಭಾರೀ ಹಾನಿ ಉಂಟಾಗಬಹುದು. 

ಇದನ್ನೂ ಓದಿ: ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡುವುದು ಸಹ ಆರೋಗ್ಯಕ್ಕೆ ಅಪಾಯ

•    ಸೋಂಕು (Infection)
ಕಾರ್ನಿಯಾ ಭಾಗದಲ್ಲಿ ಕಂಡುಬರುವ ಬಿಳಿಯ ಚುಕ್ಕೆಗಳಂತಹ ರಚನೆಗಳು ಕಣ್ಣಿನ ಸೋಂಕನ್ನು ಬಿಂಬಿಸುತ್ತವೆ. ಈ ಸಮಸ್ಯೆ ಕನ್ನಡಕದ ಬದಲಾಗಿ ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆ ಮಾಡುವವರಲ್ಲಿ ಕಂಡುಬರುತ್ತದೆ. ಲೆನ್ಸ್‌ ಗಳಲ್ಲಿ ಬ್ಯಾಕ್ಟೀರಿಯಾ ಸುಲಭವಾಗಿ ಬೆಳೆಯುವುದರಿಂದ ಸೋಂಕು ಉಂಟಾಗಬಹುದು. 

•    ಹಳದಿ ರೋಗ (Jaundice)
ಕಣ್ಣುಗಳ ಬಿಳಿ ಭಾಗವು ಹಳದಿಯಾಗುವುದು ಕಾಮಾಲೆ ರೋಗದ ಲಕ್ಷಣ. ಕಾಮಾಲೆ ರೋಗ ಅಪಾಯಕಾರಿ. ಯಕೃತ್ತು ಸರಿಯಾಗಿ ಕೆಲಸ ಮಾಡದೆ ಇದ್ದಾಗ ಉಂಟಾಗುತ್ತದೆ.  

click me!