
ಗರ್ಭಧಾರಣೆ (pregnancy) ಮಹಿಳೆಯರ ಜೀವನದ ಮಹತ್ವದ ಘಟ್ಟ. ಹೆರಿಗೆ ಸಂದರ್ಭದಲ್ಲಿ ತಾಯಿ ಮರು ಜೀವ ಪಡೆಯುತ್ತಾಳೆ ಎಂದೇ ನಂಬಲಾಗಿದೆ. ಗರ್ಭಧಾರಣೆ ಸಮಯದಲ್ಲಿ ಅದ್ರಲ್ಲೂ ಚೊಚ್ಚಲ ಗರ್ಭಧಾರಣೆಯಲ್ಲಿ ತಾಯಿಯಾಗುವವಳಿಗೆ ನಾನಾ ಪ್ರಶ್ನೆಗಳು ಕಾಡ್ತಿರುತ್ತವೆ. ಗರ್ಭಾವಸ್ಥೆಯಲ್ಲಿ ಏನು ಮಾಡಿದ್ರೆ ಸರಿ, ಏನು ಮಾಡಿದ್ರೆ ತಪ್ಪು, ಏನು ತಿನ್ನಬೇಕು, ಏನು ತಿನ್ನಬಾರದು ಎಂಬೆಲ್ಲ ಪ್ರಶ್ನೆಗೆ ಆಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾಳೆ. ತಮ್ಮ ಮಕ್ಕಳ ಆರೋಗ್ಯ (health) ಹದಗೆಡಬಾರದು, ಆರೋಗ್ಯವಂತ ಮಗು ಜನಿಸಬೇಕು ಎನ್ನುವ ಕಾರಣಕ್ಕೆ ಬಹಳ ಎಚ್ಚರಿಕೆ ವಹಿಸುತ್ತಾಳೆ. ಗರ್ಭಾವಸ್ಥೆಯಲ್ಲಿ ದೊಡ್ಡ ಸೌಂಡ್ ನಿಂದ ಗರ್ಭದಲ್ಲಿರುವ ಮಗುವಿಗೆ ತೊಂದರೆ ಆಗುತ್ತೆ ಎನ್ನುವ ಕಾರಣಕ್ಕೆ ಥಿಯೇಟರ್ ಗೆ ಹೋಗದವರಿದ್ದಾರೆ. ಈಗ ಮಹಿಳೆಯೊಬ್ಬರು ಗರ್ಭಾವಸ್ಥೆಯಲ್ಲಿ ಮಿಕ್ಸರ್ (Mixer) ಹಾಗೂ ಗ್ರೈಂಡರ್ (Grinder) ಬಳಸಬಹುದಾ ಎಂದು ಪ್ರಶ್ನೆ ಕೇಳಿದ್ದರಂತೆ. ಅದಕ್ಕೆ ಡಾಕ್ಟರ್ಸೋಶಿಯಲ್ ಮೀಡಿಯಾ ಮೂಲಕ ಉತ್ತರ ನೀಡಿದ್ದಾರೆ.
ಬೆಂಗಳೂರು ಮೂಲದ ಪ್ರಸೂತಿ ತಜ್ಞ ಡಾ. ತನುಜ್ ಲಾವೇನಿಯಾ ರೇನ್, ತಮ್ಮ ಇನ್ಸ್ಟಾ ಖಾತೆಯಲ್ಲಿ, ಗರ್ಭಾವಸ್ಥೆಯಲ್ಲಿ ಮಿಕ್ಸರ್ ಗ್ರೈಂಡರ್ ಬಳಸಬಹುದೇ ಎಂದು ಗರ್ಭಿಣಿಯೊಬ್ಬರು ಆಸಕ್ತಿಕರ ಪ್ರಶ್ನೆ ಕೇಳಿದ್ದರು ಎಂದಿದ್ದಾರೆ. ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.
ಗರ್ಭಾವಸ್ಥೆಯಲ್ಲಿ ಮಿಕ್ಸರ್ ಗ್ರೈಂಡರ್ ಬಳಕೆ ಒಳ್ಳೆಯದೇ? : ಗರ್ಭಾವಸ್ಥೆಯಲ್ಲಿ ಮಿಕ್ಸರ್ ಹಾಗೂ ಗ್ರೈಂಡರ್ ಬಳಸಿದ್ರೆ ಅದು ಮಗುವಿಗೆ ಹಾನಿ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಅದರ ತರಂಗಗಳು ಗರ್ಭಾಶಯವನ್ನು ತಲುಪುವುದಿಲ್ಲ. ಹಾಗಾಗಿ ಗರ್ಭಿಣಿಯರು ಯಾವುದೇ ಚಿಂತೆ ಇಲ್ಲದೆ ಮಿಕ್ಸರ್ ಮತ್ತು ಗ್ರೈಂಡರ್ ಬಳಕೆ ಮಾಡಬಹುದು. ಇದ್ರಿಂದ ಮಗುವಿಗೆ ಯಾವುದೇ ಅಪಾಯವಾಗುವುದಿಲ್ಲ.
ಜೋರಾದ ಶಬ್ಧ ತಾಯಂದಿರಿಗೆ ಅನಾನುಕೂಲವಾದ್ರೂ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ಹಾನಿಯುಂಟು ಮಾಡುವುದಿಲ್ಲ. ಗರ್ಭದಲ್ಲಿ ಆಮ್ನಿಯೋಟಿಕ್ ದ್ರವ ಹೀರಿಕೊಳ್ಳುವ ಗುಣವಿರುತ್ತದೆ. ಅದು ಮಗುವನ್ನು ಬಾಹ್ಯ ಶಬ್ಧಗಳಿಂದ ರಕ್ಷಿಸುತ್ತದೆ. ಮಿಕ್ಸರ್ ಮತ್ತು ಗ್ರೈಂಡರ್ ಶಬ್ಧ ಕಂಪನ ಮೇಲ್ಮೈಗೆ ಮಾತ್ರ ಸೀಮಿತ ಆಗಿರುವ ಕಾರಣ, ಅದು ಮಗುವಿಗೆ ಯಾವುದೇ ರೀತಿಯಲ್ಲೂ ಅಪಾಯಕಾರಿಯಲ್ಲ.
ಸಂಶೋಧನೆ ಹೇಳೋದೇನು? : ಈ ಬಗ್ಗೆ ಸಂಶೋಧನೆ ಕೂಡ ನಡೆದಿದೆ. ಸಂಶೋಧನೆ ಪ್ರಕಾರ, ಕಡಿಮೆ ಶಬ್ಧದ ಗೃಹಪಯೋಗಿ ವಸ್ತುಗಳಿಂದ ಉಂಟಾಗುವ ಕಂಪನ ಭ್ರೂಣದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗರ್ಭಿಣಿಯರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದಾದ್ರೆ ಅವರು ಬೆಳಕಿನ ಕಂಪನ ಹೊಂದಿರುವ ಗೃಹಪಯೋಗಿ ವಸ್ತುಗಳನ್ನು ಅವರು ಬಳಸಬಹುದು ಎಂದು ಅಧ್ಯಯನ ಹೇಳಿದೆ.
ಕೆಲ ವೈದ್ಯರು ಮಿಕ್ಸರ್ – ಗ್ರೈಂಡರ್ ಬಳಸುವ ವೇಳೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಶಬ್ಧ ಕೇಳಿದಾಗ ಮಗು ಚಲಿಸಬಹುದು. ಇದು ಗರ್ಭಿಣಿಯರಿಗೆ ಭಯ ಹುಟ್ಟಿಸುತ್ತದೆ. ಹಾಗಂತ ಇದ್ರಿಂದ ಅಪಾಯವಿಲ್ಲವಾದ್ರೂ ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದಿದ್ದಾರೆ. ಮಿಕ್ಸಿ ಮತ್ತು ಗ್ರೈಂಡರ್ ಬಳಸುವುದರಿಂದ ಬೆನ್ನಿನ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಲ್ಲುವ ಭಂಗಿ ಬಗ್ಗೆ ಗರ್ಭಿಣಿಯರು ಗಮನ ಹರಿಸಬೇಕು. ಗ್ರೈಂಡರ್ ಆನ್ ಮಾಡಿದ ನಂತ್ರ ಅಲ್ಲಿಯೇ ನಿಲ್ಲಬೇಕಾಗಿಲ್ಲ. ನೀವು ವಿಶ್ರಾಂತಿ ತೆಗೆದುಕೊಳ್ಳಬಹುದು. ಮಿಕ್ಸಿ ಅಥವಾ ಗ್ರೈಂಡರ್ ಸೇರಿದಂತೆ ಭಾರವಾದ ಉಪಕರಣವನ್ನು ಎತ್ತಬೇಡಿ. ಇವು ಎಲೆಕ್ಟ್ರಿಕ್ ವಸ್ತು ಆಗಿರುವ ಕಾರಣ, ಕರೆಂಟ್ ಬಳಕೆ ವೇಳೆ ಕಾಳಜಿವಹಿಸಿ ಎಂದು ವೈದ್ಯರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.