ಐಆರ್‌ಡಿಎಐ ಪ್ರಕಾರ, ಉದ್ದೇಶಿತ ಮಹಿಳೆ ಅಥವಾ ದಂಪತಿಗಳು ವಿಮಾ ಕಂಪನಿಯಿಂದ 36 ತಿಂಗಳ ಅವಧಿಗೆ ಬಾಡಿಗೆ ತಾಯಿಯ ಪರವಾಗಿ ಸಾಮಾನ್ಯ ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿಸಬಹುದಾಗಿದೆ.
ಮುಂಬೈ (ಮೇ.14): ಮಹತ್ವದ ನಿರ್ಧಾರದಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಎಲ್ಲಾ ವಿಮಾ ಕಂಪನಿಗಳಿಗೆ ತಮ್ಮ ಆರೋಗ್ಯ ವಿಮಾ ಪಾಲಿಸಿಗಳ ಅಡಿಯಲ್ಲಿ ಬಾಡಿಗೆ ತಾಯ್ತನದ ವೆಚ್ಚವನ್ನು ಭರಿಸಲು ನಿರ್ದೇಶನವನ್ನು ನೀಡಿದೆ. ಅದರೊಂದಿಗೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬೇಕು ಎನ್ನುವ ಆಸೆ ಹೊಂದಿರುವವರಿಗೆ ಇದರಿಂದ ದೊಡ್ಡ ಮಟ್ಟದ ಸಹಾಯವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೂ ಹಣವಂತರು ಮಾತ್ರವೇ ಮಕ್ಕಳಿಲ್ಲದ ಸಂದರ್ಭದಲ್ಲಿ ಬಾಡಿಗೆ ತಾಯ್ತನ ಆಯ್ಕೆಯನ್ನು ಆರಿಸಿಕೊಳ್ಳುತ್ತಿದ್ದರು. ಆದರೆ, ಕೆಳ ಹಾಗೂ ಮಧ್ಯಮ ವರ್ಗದವರಿಗೆ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಹೊಂದುವ ಆಸೆ ಇದ್ದರೂ, ಇದರ ಅಪಾರ ವೆಚ್ಚದಿಂದ ಸುಮ್ಮನಾಗುತ್ತಿದ್ದರು. ಆದರೆ, ಈಗ ಸರೋಗಸಿಯನ್ನು ವಿಮಾ ಪಾಲಿಸಿಗಳ ಅಡಿಯಲ್ಲಿ ತರುವ ನಿರ್ಧಾರ ಮಾಡುವ ಮೂಲಕ ಮಕ್ಕಳನ್ನು ಹೊಂದುವ ಆಸೆಗೆ ನೀರೆರೆದಿದೆ. ಅಮ್ಮಂದಿರ ದಿನದಂದೇ ಐಆರ್‌ಡಿಎಐ ಈ ಮಹತ್ವದ ನಿರ್ಧಾರ ಮಾಡಿರುವುದು ವಿಶೇಷವಾಗಿದೆ.
ಐಆರ್‌ಡಿಎಐ ಹೊರಡಿಸಿದ ನಿರ್ದೇಶನವು ಎಲ್ಲಾ ಆರೋಗ್ಯ ವಿಮಾ ಪಾಲಿಸಿಗಳು "ಸರೊಗಸಿ ಸೇರಿದಂತೆ ಬಂಜೆತನಕ್ಕೆ ಸಂಬಂಧಿಸಿದ ಚಿಕಿತ್ಸೆಯ" ವೆಚ್ಚವನ್ನು ಒಳಗೊಂಡಿರಬೇಕು ಎಂದು ಹೇಳಿದೆ. ಇದರರ್ಥ ಆರೋಗ್ಯ ವಿಮಾ ಪಾಲಿಸಿಗಳು ಈಗ ಬಾಡಿಗೆ ತಾಯಿಯ ವೈದ್ಯಕೀಯ ಚಿಕಿತ್ಸೆ, ಹೆರಿಗೆ ಮತ್ತು ಪ್ರಸವಪೂರ್ವ ಆರೈಕೆಯ ವೆಚ್ಚ ಸೇರಿದಂತೆ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿರುತ್ತವೆ.
"ಸರೊಗಸಿ ಮತ್ತು ಫಲವತ್ತತೆ ಚಿಕಿತ್ಸೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ವಿಮೆದಾರರು ಗುರುತಿಸುವುದು ಮುಖ್ಯವಾಗಿದೆ. ಇತ್ತೀಚಿನ ಸುತ್ತೋಲೆಯು ಸಕಾರಾತ್ಮಕ ಹೆಜ್ಜೆಯಾಗಿದೆ ”ಎಂದು ರಾಘ್ನಾಲ್ ಇನ್ಶುರೆನ್ಸ್ ಬ್ರೋಕರ್ಸ್‌ನ ನಿರ್ದೇಶಕ ಮತ್ತು ಪ್ರಧಾನ ಅಧಿಕಾರಿ ಅಮಿತ್ ಗೋಯೆಲ್ ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವಾನಂತರದ ಅವಧಿಯಲ್ಲಿ ಉದ್ಭವಿಸಬಹುದಾದ ಯಾವುದೇ ಅನಿರೀಕ್ಷಿತ ವೈದ್ಯಕೀಯ ತೊಡಕುಗಳಿಂದ ಬಾಡಿಗೆ ತಾಯ್ತನದ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ಪಕ್ಷಗಳನ್ನು ರಕ್ಷಿಸಲು ತಮ್ಮ ಸಂಸ್ಥೆಯು ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
Malti Marie: ಮಗಳನ್ನು ಕಳೆದುಕೊಳ್ಳೋ ಭಯದಲ್ಲಿದ್ರಂತೆ ಪ್ರಿಯಾಂಕಾ ಚೋಪ್ರಾ
ಬಾಡಿಗೆ ತಾಯ್ತನವು ಒಂದು ವೈದ್ಯಕೀಯ ವಿಧಾನವಾಗಿದ್ದು, ಮಹಿಳೆಯೊಬ್ಬಳು, ಸ್ವಂತ ಮಗುವನ್ನು ಹೊಂದಲು ಸಾಧ್ಯವಾಗದ ಇನ್ನೊಬ್ಬ ವ್ಯಕ್ತಿ ಅಥವಾ ದಂಪತಿಗಳ ಪರವಾಗಿ ಗರ್ಭ ಧರಿಸಲು ಒಪ್ಪಿಕೊಳ್ಳುತ್ತಾಳೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ದಂಪತಿಗಳು ಫಲವತ್ತತೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಈ ವಿಧಾನವು ಜನಪ್ರಿಯತೆಯನ್ನು ಗಳಿಸಿದೆ. ಆದಾಗ್ಯೂ, ಬಾಡಿಗೆ ತಾಯ್ತನವು ದುಬಾರಿ ಪ್ರಕ್ರಿಯೆಯಾಗಬಹುದು ಮತ್ತು ವೈದ್ಯಕೀಯ ಚಿಕಿತ್ಸೆಯ ವೆಚ್ಚ ಕೂಡ ಅಧಿಕವಾಗಿರುವ ಕಾರಣ ಹೆಚ್ಚಿನವರು ಸರೊಗಸಿ ಆಯ್ಕೆಗೆ ಹೋಗುತ್ತಿಲ್ಲ. ಆರೋಗ್ಯ ವಿಮಾ ಪಾಲಿಸಿಗಳ ಅಡಿಯಲ್ಲಿ ಬಾಡಿಗೆ ತಾಯ್ತನವನ್ನು ಸೇರಿಸುವ ಐಆರ್‌ಡಿಎಐನ ಕ್ರಮವು ಪ್ರಕ್ರಿಯೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಮತ್ತು ಈ ಮಾರ್ಗದ ಮೂಲಕ ಮಕ್ಕಳನ್ನು ಹೊಂದಲು ಬಯಸುವ ಪೋಷಕರಿಗೆ ಸಹಕಾರಿಯಾಗಲಿದೆ.
ಸರೋಗಸಿ ಮೂಲಕ ಮಗು ಪಡೆದಿದ್ಯಾಕೆ? ಕೊನೆಗೂ ಮೌನ ಮುರಿದ ಪ್ರಿಯಾಂಕಾ