ಅಂತಾರಾಷ್ಟೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ: ಮಕ್ಕಳ ಮುಖದಲ್ಲಿ ನಗುವಷ್ಟೇ ಇರಲಿ!

By Kannadaprabha NewsFirst Published Feb 15, 2020, 3:42 PM IST
Highlights

ಒಂದು ಸಾರಿ ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಹಚ್ಚಿದ ಮೇಲೆ ವಿಶೇಷವಾದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ಹಸ್ತಾಂತರಿಸುವುದು ಅತಿ ಮುಖ್ಯ. ಚಿಕಿತ್ಸೆಗೆ ಒಳಗಾದ ಮೇಲೆ ವಯಸ್ಕರಿಗಿಂತಲೂ ಮಕ್ಕಳು ಬಹಳ ಬೇಗ ಹುಷಾರಾಗುತ್ತಾರೆ.

ಡಾ. ಅಭಿಲಾಷಾ ಸಂಪಗಾರ 
ಮಕ್ಕಳ ಕ್ಯಾನ್ಸರ್‌ ತಜ್ಞರು

ಅಂತರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆಯನ್ನು ಫೆಬ್ರುವರಿ 15ರಂದು ಆಚರಿಸಲಾಗುತ್ತದೆ. I deserve: Access to care anywhere, anytime  ಈ ಬಾರಿಯ ಧ್ಯೇಯ ವಾಕ್ಯ. ಜಗತ್ತಿನಾದ್ಯಂತ ಸರಿಸುಮಾರು ೩ ಲಕ್ಷ ಮಕ್ಕಳಲ್ಲಿ ಪ್ರತಿವರ್ಷ ಕ್ಯಾನ್ಸರ್ ರೋಗ ಪತ್ತೆ ಹಚ್ಚಲಾಗುತ್ತದೆ. ಭಾರತವೊಂದರಲ್ಲಿ ಮಾತ್ರ ೭೫ಸಾವಿರ ಮಕ್ಕಳು ಕ್ಯಾನ್ಸರ್ ಪೀಡಿತರು ಎಂದು ದೃಢಪಟ್ಟಿದೆ. ಸರಿಯಾದ ಸಮಯದಲ್ಲಿ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚುವುದು ಬಹಳ ಮುಖ್ಯ. ಇಂಥಾ ಮಕ್ಕಳಿಗೆ ಸೂಕ್ತ ಸೌಕರ್ಯಗಳಿರುವ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರೆ ಬಾಲ್ಯ ಕ್ಯಾನ್ಸರ್ ರೋಗವನ್ನು ವಾಸಿಮಾಡಬಹುದು. ಪಾಶ್ಚಿಮಾತ್ಯ ದೇಶದಲ್ಲಿ ಸರಿಸುಮಾರು 80% ರಷ್ಟು ಮಕ್ಕಳು ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿದ್ದಾರೆ.

‘ಕ್ಯಾನ್ಸರ್‌ ಗುಣಪಡಿಸಬಹುದು : ಭಯ, ಆತಂಕ ಬೇಡ’

ಭಾರತವೂ ಸೇರಿದಂತೆ ಅಭಿವೃದ್ದಿ ಹೊಂದುತ್ತಿರುವ ದೇಶಗಳ ಪೈಕಿ 50% ಕ್ಕಿಂತಲೂ ಕಡಿಮೆ ಮಕ್ಕಳು ಮಾತ್ರ ಈ ಅರ್ಬುದ ರೋಗದಿಂದ ಮುಕ್ತರಾಗುತ್ತಿದ್ದಾರೆ. ಇದಕ್ಕೆ ರೋಗ ನಿರ್ಣಯ ವಿಳಂಬ, ಕೈಗೆಟುಕದ ಚಿಕಿತ್ಸಾ ಕೇಂದ್ರಗಳು, ಅನಿಯಮಿತ ಚಿಕಿತ್ಸೆ ಇತ್ಯಾದಿ ಕಾರಣಗಳು. ಕ್ಯಾನ್ಸರ್ ನಿವಾರಣೆಯ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಜಾಗೃತಿ.

ಚಿಕ್ಕಮಕ್ಕಳಲ್ಲಿ ಬರುವ ಕ್ಯಾನ್ಸರ್‌ಗಳ್ಯಾವುವು?

ರಕ್ತ ಕ್ಯಾನ್ಸರ್, ದುಗ್ದರಸ ಗ್ರಂಥಿಯ ಕ್ಯಾನ್ಸರ್, ಮೆದುಳಿನ ಗಡ್ಡೆ ಕ್ಯಾನ್ಸರ್, ಕಿಡ್ನಿ ಭಾಗಕ್ಕೆ ಬರುವ ಕ್ಯಾನ್ಸರ್, ಮೂಳೆಯ ಕ್ಯಾನ್ಸರ್.

ಮೊದಲ ಹಂತದಲ್ಲಿ ಪತ್ತೆಹಚ್ಚಬಹುದಾದ ಬಹುಮುಖ್ಯ ಲಕ್ಷಣಗಳು

85%ರಷ್ಟು ಕ್ಯಾನ್ಸರ್ ಪೀಡಿತ ಮಕ್ಕಳು ಈ ಕೆಳಗಿನ ಯಾವುದಾದರೂ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.
1 ಬಹುದಿನಗಳ ಜ್ವರ.

2 ಹೊಟ್ಟೆ ಗಂಟು, ದೇಹದ ಯಾವುದಾದರೂ ಒಂದು ಭಾಗ ಊತಕ್ಕೆ ಒಳಗಾಗುವುದು.

3 ವಿವರ್ಣತೆ, ಶಕ್ತಿಹೀನತೆ, ತೂಕ ಕಡಿಮೆಯಾಗುವಿಕೆ.

4 ನಿರಂತರವಾದ ಮೂಳೆ ನೋವು.

5  ತಲೆನೋವು ಮತ್ತು ವಾಂತಿ.

6 ರಕ್ತಸ್ರಾವ.

7 ಕಣ್ಣು ಮಂಜಾಗುವುದು ಮತ್ತು ಕಣ್ಣಲ್ಲಿ ಬಿಳಿ ಚುಕ್ಕೆ.

ಭಯಂಕರ ಪೆಡಂಭೂತ ಬಾಲಕಿಯ ಬ್ಲಡ್‌ ಕ್ಯಾನ್ಸರ್ ಚಿಕಿತ್ಸೆಗೆ ಕೊಟ್ಟಿದ್ದು 3 ಲಕ್ಷ..!

ಈ ಮೇಲ್ಕಂಡ ಗುಣಲಕ್ಷಣಗಳು ಕಂಡುಬಂದಲ್ಲಿ ಮಕ್ಕಳ ಕ್ಯಾನ್ಸರ್ ತಜ್ಞರನ್ನು ಭೇಟಿಮಾಡಿ. ಒಂದು ಸಾರಿ ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಹಚ್ಚಿದ ಮೇಲೆ ವಿಶೇಷವಾದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಕ್ಕೆ ಹಸ್ತಾಂತರಿಸುವುದು ಅತಿ ಮುಖ್ಯ. ಚಿಕಿತ್ಸೆಗೆ ಒಳಗಾದ ಮೇಲೆ ವಯಸ್ಕರಿಗಿಂತಲೂ ಮಕ್ಕಳು ಬಹಳ ಬೇಗ ಹುಷಾರಾಗುತ್ತಾರೆ. ವಯಸ್ಕರಿಗೂ ಹಾಗೂ ಚಿಕ್ಕ ಮಕ್ಕಳಿಗೆ ಬೇರೆ ಬೇರೆ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ಪಾಲಕರು ಹಾಗೂ ಸಮಾಜದಲ್ಲಿರುವ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆಗಳನ್ನು ಹೋಗಲಾಡಿಸಿ ವಾಸ್ತವದ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ಭಗೀರಥ ಪ್ರಯತ್ನ ನಮ್ಮದಾಗಬೇಕು.

ಮೂಢನಂಬಿಕೆ : ಮಕ್ಕಳಿಗೆ ಕ್ಯಾನ್ಸರ್ ಬರುವುದಿಲ್ಲ.
ನಿಜಾಂಶ: ಮಕ್ಕಳಲ್ಲಿ ಕ್ಯಾನ್ಸರ್ ಕಾಣುವುದು ಅತೀ ವಿರಳವಾದರೂ ನವಜಾತ ಶಿಶುವಿನಿಂದ ಹಿಡಿದು ಯಾವುದೇ ವಯಸ್ಸಿನ ಗುಂಪಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮೂಢನಂಬಿಕೆ: ಕ್ಯಾನ್ಸರ್ ಅನುವಂಶಿಕವಾಗಿ ಮಕ್ಕಳಿಗೆ ಬರಬಹುದು.
ನಿಜಾಂಶ: ಕೆಲವು ಕ್ಯಾನ್ಸರ್ ಹೊರತುಪಡಿಸಿದರೆ ಎಲ್ಲಾ ಕ್ಯಾನ್ಸರ್ ರೋಗಗಳು ಅನುವಂಶಿಕವಲ್ಲ.

ಮೂಢನಂಬಿಕೆ: ಕ್ಯಾನ್ಸರ್ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುತ್ತದೆ.
ನಿಜಾಂಶ: ಸೊಂಕು ರಹಿತ ರೋಗ, ಸ್ಪರ್ಶ, ಆಲಿಂಗನ ಹಾಗೂ ಆಹಾರ ಹಂಚಿಕೊಳ್ಳುವುದರಿಂದ ಇದು ಹರಡುವುದಿಲ್ಲ.

ಮೂಢನಂಬಿಕೆ: ಕಿಮೋಥೆರಪಿ ಅತಿಯಾದ ನೋವು ಮತ್ತು ಅಡ್ಡಪರಿಣಾಮಗಳನ್ನು ಒಳಗೊಂಡಿರುತ್ತದೆ.
ನಿಜಾಂಶ: ಕಿಮೋಥೆರಪಿ ವಿಶೇಷವಾದ ಔಷಧೀಯ ಗುಣ ಹೊಂದಿರುವ ಕಾರಣ ಕ್ಯಾನ್ಸರ್ ಜೀವಕೋಶಗಳನ್ನು ನಾಶಪಡಿಸುತ್ತದೆ. ಚಿಕಿತ್ಸೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ.

ಪ್ರೊಟೀನ್‌ ಜಾಸ್ತಿ ಸೇವಿಸಿದರೆ ಕ್ಯಾನ್ಸರ್‌ ಬರುವ ಅಪಾಯ ಹೆಚ್ಚಂತೆ!

ಮೂಢನಂಬಿಕೆ: ಕ್ಯಾನ್ಸರ್ ಮರಳಿ ಬಂದೇ ಬರುತ್ತದೆ.
ನಿಜಾಂಶ: ಪ್ರಥಮ ಹಂತದಲ್ಲಿ ಚಿಕಿತ್ಸೆಗೆ ಒಳಪಟ್ಟಲ್ಲಿ ಪ್ರತಿಶತ 70ರಷ್ಟು ಮಕ್ಕಳಲ್ಲಿನ ರೋಗವನ್ನು ಸಂಪೂರ್ಣ ಗುಣಪಡಿಸಬಹುದು.

ಗ್ರಾಮೀಣ ಪ್ರದೇಶದಲ್ಲಿ 80%ಕಿಂತಲೂ ಹೆಚ್ಚು ಕ್ಯಾನ್ಸರ ಪೀಡಿತ ಮಕ್ಕಳು ಸರಿಯಾದ ಚಿಕಿತ್ಸೆಯಿಂದ ವಂಚಿತರಾಗಿರುತ್ತಾರೆ. ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ನಮ್ಮ ದೇಶದಲ್ಲಿ ತುಂಬಾ ವಿರಳ. ಮಹಾ ನಗರಗಳಲ್ಲಿ ಮಾತ್ರ ಕಾಣಸಿಗುತ್ತವೆ. ಖರ್ಚು-ವೆಚ್ಚಗಳು ದುಬಾರಿ. ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ಸರ್ಕಾರಿ ಯೋಜನೆಗಳಿವೆ. ಎನ್‌ಜಿಓಗಳಿಂದಲೂ ನೆರವು ಪಡೆಯಬಹುದು. ಸರ್ಕಾರದ ಯೋಜನೆಗಳಾದ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಆರೋಗ್ಯ ಭಾಗ್ಯ, ದೀನ ದಯಾಳ, ಜ್ಯೋತಿ ಸಂಜೀವಿನಿ ಇತ್ಯಾದಿಗಳು ಕ್ಯಾನ್ಸರ್ ಪೀಡಿದ ಮಕ್ಕಳ ಚಿಕಿತ್ಸೆಗೆ ಅಗತ್ಯ ನೆರವು ನೀಡುತ್ತವೆ. 
 

click me!