ದೇಶದಲ್ಲೇ ಮೊದಲ ಯಕೃತ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ದಾಖಲೆಗೆ ಪಾತ್ರನಾಗಿದ್ದ 20 ತಿಂಗಳ ಬಾಲಕ ಸ೦ಜಯ್ ಶಕ್ತಿ ಇದೀಗ ಸ್ವತಃ ವೈದ್ಯ! ನಿಜ, ದೇಶದ ವೈದ್ಯಕೀಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಘಟನೆಗೆ ಇದೀಗ 25 ವರ್ಷ ತುಂಬಿದ್ದು, ಈ ನಿಮಿತ್ತ ಡಾ.ಸ೦ಜಯ್ ಶಕ್ತಿಯನ್ನು ದೆಹಲಿಯಲ್ಲಿ ಸನ್ಮಾನಿಸಲಾಗಿದೆ.
ಕಾಂಚೀಪುರಂ: ದೇಶದಲ್ಲೇ ಮೊದಲ ಯಕೃತ್ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ದಾಖಲೆಗೆ ಪಾತ್ರನಾಗಿದ್ದ 20 ತಿಂಗಳ ಬಾಲಕ ಸ೦ಜಯ್ ಶಕ್ತಿ ಇದೀಗ ಸ್ವತಃ ವೈದ್ಯ! ನಿಜ, ದೇಶದ ವೈದ್ಯಕೀಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಘಟನೆಗೆ ಇದೀಗ 25 ವರ್ಷ ತುಂಬಿದ್ದು, ಈ ನಿಮಿತ್ತ ಡಾ.ಸ೦ಜಯ್ ಶಕ್ತಿಯನ್ನು ದೆಹಲಿಯಲ್ಲಿ ಸನ್ಮಾನಿಸಲಾಗಿದೆ. ತನಗೆ ಮರುಜೀವ ಕೊಟ್ಟ ವೈದ್ಯಕೀಯ ರಂಗಕ್ಕೆ ಸೇರುವ ಕನಸು ಹೊತ್ತು ಅದನ್ನು ಈಡೇರಿಸಿಕೊಂಡಿದ್ದ ಸಂಜಯ್ ಶಕ್ತಿ, ಮೊದಲು ಬೆಂಗಳೂರಿನಲ್ಲಿ ವೈದ್ಯಕೀಯ ಸೇವೆ ಆರಂಭಿಸಿ ಇದೀಗ ತಮಿಳುನಾಡಿನ ಕಾಂಚೀಪುರಂನಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. 10 ವೈದ್ಯರು ಮಾಡಿದ ಶಸ್ತ್ರಚಿಕಿತ್ಸೆಯಿಂದ ನಾನು ಮರುಜನ್ಮ ಪಡೆದಿದ್ದೇನೆ. ಅದೇ ಕಾರಣಕ್ಕೆ ನಾನೂ ಇನ್ನೊಬ್ಬರ ಜೀವ ಉಳಿಸುವ ವ್ಯಕ್ತಿಯಾಗಬೇಕೆಂದು ವೈದ್ಯನಾಗುವ ಕನಸು ಕಂಡಿದ್ದೆ. ಅದು ಈಗ ನನಸಾಗಿದೆ ಎಂದು ಡಾ. ಸಂಜಯ್ ಶಕ್ತಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಆರೋಗ್ಯ ಸಮಸ್ಯೆ: ಸಂಜಯ್ ಶಕ್ತಿಯ ಮೂಲ ಹೆಸರು ಕೇವಲ ಶಕ್ತಿ ಎಂದಾಗಿತ್ತು. ಶಕ್ತಿ ಹುಟ್ಟಿದಾಗ ಆತನಲ್ಲಿ ಜನನದ ವೇಳೆಯೇ ಬೈಲೈರಿ ಅಟ್ರೇಶಿಯಾ (biliary atresia) ಎಂಬ ಸಮಸ್ಯೆ ಕಾಣಿಸಿಕೊಂಡಿತ್ತು. ಅಂದರೆ ಯಕೃತ್‌ನಿಂದ ಪಿತ್ತಕೋಶಕ್ಕೆ ಪಿತ್ತರಸ ಸಾಗಿಸುವ ಮಾರ್ಗದಲ್ಲಿ ಅಡ್ಡಿ ಎದುರಾಗಿತ್ತು. ಈ ಸಮಸ್ಯೆ ನಿವಾರಿಸಲು 1998ರ ನ.15ರಂದು ದೆಹಲಿಯ ಅಪೋಲೋ ಆಸ್ಪತ್ರೆಯ ವೈದ್ಯರು ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ಶಕ್ತಿಯ ತಂದೆಯ ಯಕೃತ್‌ನ ಸಣ್ಣ ಭಾಗವನ್ನು ಕತ್ತರಿಸಿ ಅದನ್ನು ಶಕ್ತಿಯ ದೇಹಕ್ಕೆ ಸೇರಿಸಲಾಗಿತ್ತು. ಈ ವೇಳೆ ಶಕ್ತಿ 2 ತಿಂಗಳು ಕಾಲ ಆಸ್ಪತ್ರೆಯಲ್ಲಿ ಐಸಿಯುನಲ್ಲೇ ಚಿಕಿತ್ಸೆ ಪಡೆದಿದ್ದರು.
ಈ ಚಿಕಿತ್ಸೆ ದೇಶದಲ್ಲೇ ಮೊತ್ತ ಮೊದಲಾಗಿದ್ದ ಕಾರಣ ಅದು ದೇಶವ್ಯಾಪಿ ಸುದ್ದಿಯಾಗಿತ್ತು. ಈ ಹಂತದಲ್ಲಿ ಶಕ್ತಿಗೆ ಆಸ್ಪತ್ರೆಯ ಸಿಬ್ಬಂದಿ ಸಂಜಯ್ ಎಂದು ಹೆಸರು ನೀಡಿದ್ದರು. ಬಳಿಕ ಆತನನ್ನು ಸಂಜಯ್ ಶಕ್ತಿ ಎಂದು ಕರೆಯಲಾಗುತ್ತಿತ್ತು. ಹೀಗೆ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ಸಂಜಯ್ ಶಕ್ತಿಗೆ ಕೆಲವು ವರ್ಷಗಳಾದ ಬಳಿಕ ತಮ್ಮ ಹೊಟ್ಟೆಯ ಮೇಲೆ ಕಾಣಿಸಿಕೊಂಡ ಗಾಯದ ಗುರುತಿನ ರಹಸ್ಯ ಅರಿವಾಗಿತ್ತು. ತಮಗೆ ವೈದ್ಯಕೀಯ ಲೋಕ ಮರು ಜೀವ ನೀಡಿದ್ದನ್ನು ಅರ್ಥ ಮಾಡಿಕೊಂಡ ಸಂಜಯ್, ತಾವು ಕೂಡಾ ವೈದ್ಯರಾಗುವ ಕನಸು ಕಂಡಿದ್ದರು.
ಅದರಂತೆ 2021ರಲ್ಲಿ ವೈದ್ಯಕೀಯ ವೃತ್ತಿ ಪೂರ್ಣ ಗೊಳಿಸಿದ ಸಂಜಯ್ ಶಕ್ತಿ ಮೊದಲಿಗೆ ಬೆಂಗಳೂರಿನಲ್ಲಿ ಜೀವನ ಆರಂಭಿಸಿ ಬಳಿಕ ಇದೀಗ ತಮಿಳುನಾಡಿನ (Tamilnadu) ಕಾಂಚೀಪುರಂನಲ್ಲಿ ಮಕ್ಕಳ ತಜ್ಞರಾಗಿ ಸೇವೆ ನೀಡುತ್ತಿದ್ದಾರೆ. ದೇಶದ ಮೊದಲ ಯಕೃತ್ ಕಸಿ (liver transplant) ಚಿಕಿತ್ಸೆಗೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ.15ರಂದು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ಸಂಜಯ್ ಶಕ್ತಿ ( Sanjay Shakti) ಅವರನ್ನು ಸನ್ಮಾನಿಸಲಾಯಿತು.
ಇತ್ತ ಶಸ್ತ್ರಚಿಕಿತ್ಸೆಯಿಂದ ಪ್ರೇರಣೆ ಪಡೆದ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆ, ಇಲ್ಲಿಯವರೆಗೆ 4,300 ಯಕೃತ್ ಕಸಿಯನ್ನು ಯಶಸ್ವಿಯಾಗಿ ಮಾಡಿದೆ.