ದೇಶಾದ್ಯಂತ ಕೋವಿಡ್‌ ಕೇಸ್ ಹೆಚ್ಚಳ, ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸನ್ನದ್ಧತೆ ಪರಿಶೀಲನೆ

By Kannadaprabha NewsFirst Published Apr 11, 2023, 7:58 AM IST
Highlights

ದೇಶಾದ್ಯಂತ ಕೋವಿಡ್ ಕೇಸ್‌ನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ತಿದೆ. ಹೀಗಾಗಿ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು, ಮೂಲಸೌಕರ್ಯಗಳನ್ನು ಪರೀಕ್ಷಿಸಲು ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಎರಡು ದಿನಗಳ ಅಣಕು ಕಾರ್ಯಾಚರಣೆ ನಡೆಯುತ್ತಿದೆ.

ನವದೆಹಲಿ: ದೇಶಾದ್ಯಂತ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆಸ್ಪತ್ರೆಗಳ ಸನ್ನದ್ಧತೆ ಮತ್ತು ಮೂಲಸೌಕರ್ಯಗಳನ್ನು ಪರೀಕ್ಷಿಸಲು ಸೋಮವಾರ ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆಯನ್ನು ನಡೆಸಲಾಯಿತು.

2 ದಿನಗಳ ಅಣಕು ಕಾರ್ಯಾಚರಣೆಯನ್ನು (Mock drill) ಹಮ್ಮಿಕೊಳ್ಳಲಾಗಿದ್ದು, ಮಂಗಳವಾರವೂ ಸಹ ಕಾರ್ಯಾಚರಣೆ ನಡೆಯಲಿದೆ. ಇದೇ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ದೆಹಲಿಯಲ್ಲಿರುವ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ (Hospital) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರ್‌ಎಂಎಲ್‌ ಆಸ್ಪತ್ರೆಗೆ ಭೇಟಿ ನೀಡಿದ ಮಾಂಡವೀಯ ಅವರು, ಆಸ್ಪತ್ರೆಯಲ್ಲಿನ ಎಲ್ಲಾ ವಿಭಾಗಗಳ ಮುಖ್ಯಸ್ಥರ ಜೊತೆ ಸಭೆ (Meeting) ನಡೆಸಿದರು. ಅಲ್ಲದೇ ಈ ವೇಳೆ ಅವರು ವೈದ್ಯರು, ನರ್ಸ್‌, ಭದ್ರತಾ ಮುಖ್ಯಸ್ಥರು, ಸ್ಯಾನಿಟೈಸೇಶನ್‌ ಸೇವೆ ನೀಡುವವರನ್ನು ಭೇಟಿ ಮಾಡಿ ಸಲಹೆಗಳನ್ನು ಸ್ವೀಕರಿಸಿದರು.

Latest Videos

Covid Cases: ಕೋವಿಡ್‌ ಎದುರಿಸಲು ಸಿದ್ಧರಾಗಿ, ರಾಜ್ಯಗಳಿಗೆ ಕೇಂದ್ರ ಸೂಚನೆ

ಏ.7ರಂದು ಸಭೆ ನಡೆಸಿದ್ದ ಮಾಂಡವೀಯ ದೇಶದಲ್ಲಿನ ಕೋವಿಡ್‌ ಪರಿಸ್ಥಿತಿಯ ಅವಲೋಕನಕ್ಕಾಗಿ ಎಲ್ಲಾ ಆರೋಗ್ಯ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಣಕು ಕಾರ್ಯಾಚರಣೆ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ ಜಿಲ್ಲಾ ಆಡಳಿತಗಳ ಜೊತೆಗೆ ಸಭೆ ನಡೆಸಿ ಸನ್ನದ್ಧತೆಯ ಮಾಹಿತಿ ಸಂಗ್ರಹಿಸುವಂತೆಯೂ ಕೋರಿದ್ದರು.

5880 ಹೊಸ ಕೇಸ್‌, 14 ಸಾವು: ಪಾಸಿಟಿವಿಟಿ ದರ ಶೇ.6.91ಕ್ಕೆ ಏರಿಕೆ
ನಿನ್ನೆ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 5880 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಹೊಸ ಪ್ರಕರಣಗಳ ಪ್ರಮಾಣವು ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳು 35,199ಕ್ಕೆ ಏರಿಕೆಯಾಗಿದೆ. ಜೊತೆಗೆ ದೈನಂದಿನ ಪಾಸಿಟಿವಿಟಿ ದರವು ಶೇ.6.91ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಈವರೆಗೂ 4.47 ಕೋಟಿ ಮಂದಿಗೆ ಸೋಂಕು ತಗುಲಿದ್ದು ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿ 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೂ 220.67 ಕೋಟಿ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಲ್ಲಿ ಕೋವಿಡ್‌ನ ಮತ್ತಷ್ಟು ರೂಪಾಂತರ, ಸೋಂಕು ಹೆಚ್ಚಳ ಸಾಧ್ಯತೆ: WHO

ಮತ್ತೆ ಕೋವಿಡ್ ಭೀತಿ, ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ
ಇತ್ತೀಚಿನ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಎಂಟು ರಾಜ್ಯಗಳು ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ವರದಿ ಮಾಡುತ್ತಿವೆ. ಇವುಗಳಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ 10ಕ್ಕೂ ಹೆಚ್ಚು ಜಿಲ್ಲೆಗಳು ಶೇಕಡಾ 10ಕ್ಕಿಂತ ಹೆಚ್ಚು ಪಾಸಿಟಿವ್ ಕೇಸ್ ಹೊಂದಿವೆ. ಈ ಪೈಕಿ ಮೂರು ರಾಜ್ಯಗಳು ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿವೆ (Mask compulsory). ಅವು ಯಾವುದೆಲ್ಲಾ ಅನ್ನೋ ಮಾಹಿತಿ ಇಲ್ಲಿದೆ.    

ಕೇರಳ: ಗರ್ಭಿಣಿಯರು, ವೃದ್ಧರು, ಮಕ್ಕಳು ಮತ್ತು ವಯೋಸಹಜ ಕಾಯಿಲೆ ಇರುವವರಿಗೆ ಮಾಸ್ಕ್ ಕಡ್ಡಾಯವಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಕೇರಳದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್‌ ಸೋಂಕು ತುಸು ಹೆಚ್ಚೇ ಇದೆ. ಶನಿವಾರ ರಾಜ್ಯದಲ್ಲಿ 1,801 ಜನರಿಗೆ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ (Health minister) ವೀಣಾ ಜಾರ್ಜ್ ಶನಿವಾರ ಮಾಸ್ಕ್‌ ಕಡ್ಡಾಯಯ ಬಗ್ಗೆ ಆದೇಶ ಹೊರಡಿಸಿದ್ದಾರೆ.ರು.

ಪುದುಚೇರಿ: ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಪುದುಚೇರಿ ಆಡಳಿತವು ಶುಕ್ರವಾರ ಕೇಂದ್ರಾಡಳಿತ ಪ್ರದೇಶದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಕೊರೋನಾ ವೈರಸ್ ಪ್ರಕರಣಗಳ ಇತ್ತೀಚಿನ ಉಲ್ಬಣವನ್ನು ಎತ್ತಿ ಹಿಡಿದ ಜಿಲ್ಲಾಧಿಕಾರಿ ಇ ವಲ್ಲವನ್ ಅವರು,'ಮುಂದಿನ ದಿನಗಳಲ್ಲಿ ಕೋವಿಡ್ -19 ರ ಪ್ರಸರಣ ಹೆಚ್ಚಳದ ಅಪಾಯವನ್ನು ಕಡಿಮೆ ಮಾಡಲು ಆಡಳಿತವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹರಿಯಾಣ: ಹರಿಯಾಣ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಶುಕ್ರವಾರ ಹರ್ಯಾಣದಲ್ಲಿ 407 ಮಂದಿಗೆ ಸೋಂಕು ತಗುಲಿದೆ. ಮಾಹಿತಿಯ ಪ್ರಕಾರ, ಹರಿಯಾಣದ ಅರ್ಧದಷ್ಟು ಕೋವಿಡ್ ಪ್ರಕರಣಗಳು ಗುರುಗ್ರಾಮ್ ಜಿಲ್ಲೆಯಿಂದ ದಾಖಲಾಗಿವೆ ಎಂದು ರಾಜ್ಯದ ಆರೋಗ್ಯ ಇಲಾಖೆ ಶುಕ್ರವಾರ ಬುಲೆಟಿನ್‌ನಲ್ಲಿ ತಿಳಿಸಿದೆ. ಈ ವಾರ ಎರಡು ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿವೆ.

click me!