
ಮೂತ್ರ (Urine) ಮಾಡುವಾಗ ನೋವು (Pain), ಉರಿ(Burn)ಯಾಗುವುದು, ತಡೆದು ಮೂತ್ರ ವಿಸರ್ಜನೆಯಾಗುವುದು ಇವೆಲ್ಲ ಮೂತ್ರನಾಳದ ಸೋಂಕು (Urinary Tract Infection) ಅಥವಾ ಉರಿಮೂತ್ರದ ಅಸ್ತಿತ್ವವನ್ನು ಸೂಚಿಸುತ್ತವೆ. ಮಹಿಳೆಯರ (Women) ಮೂತ್ರನಾಳ ಅತ್ಯಂತ ಕಿರಿದಾಗಿರುವುದರಿಂದ ಸೋಂಕಿಗೆ ತುತ್ತಾಗುವ ಪ್ರಮಾಣ ಅತಿ ಹೆಚ್ಚು. ಇದಕ್ಕೆ ಕಾರಣಗಳು ಅನೇಕ. ಆದರೆ, ಇದರಿಂದ ಸಂತಾನೋತ್ಪತ್ತಿಯ (Fertility) ಮೇಲೂ ಪರಿಣಾಮಗಳು ಉಂಟಾಗಬಹುದು ಎನ್ನುತ್ತಾರೆ ತಜ್ಞರು.
ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲೂ ಮೂತ್ರನಾಳದ ಸೋಂಕು ಕಂಡುಬರಬಹುದು. ದೇಹದಿಂದ ಕಲ್ಮಷ ಹೊರಹಾಕುವ ಅಂಗಾಂಗಗಳಾದ ಕಿಡ್ನಿ (Kidney), ಮೂತ್ರಕೋಶ, ಲಿವರ್ (liver) ಗಳಿಗೂ ಮೂತ್ರನಾಳದ ಸೋಂಕು ಹಬ್ಬಬಹುದು. ಇದರ ಕೆಲವು ಲಕ್ಷಣಗಳೆಂದರೆ,
• ಪದೇ ಪದೆ ಮೂತ್ರ ವಿಸರ್ಜನೆ ಮಾಡಬೇಕೆಂದು ಅನಿಸುವುದು.
• ಮೂತ್ರದಿಂದ ಗಾಢವಾದ ವಾಸನೆ (Odor)
• ಮೂತ್ರ ಮಾಡುವಾಗ ಅಪಾರ ನೋವು, ಉರಿ
• ಬೆನ್ನುನೋವು (Back Pain) ಹಾಗೂ ಕೆಳಹೊಟ್ಟೆ ನೋವು
• ಮೂತ್ರದಲ್ಲಿ ರಕ್ತದಂತೆ ಗೋಚರಿಸುವುದು
• ಮೂತ್ರದ ಬಣ್ಣ (Color) ಬದಲಾಗುವುದು.
ಮೂತ್ರನಾಳದ ಸೋಂಕಿನಿಂದ ಸಂತಾನೋತ್ಪತ್ತಿಗೆ ಸಮಸ್ಯೆ ಎದುರಾಗಬಹುದು. ಮಹಿಳೆಯರಲ್ಲಿ ಫಲವತ್ತತೆ ಕಡಿಮೆಯಾಗಬಹುದು. ಕೆಲವು ಮಹಿಳೆಯರಲ್ಲಿ ಪದೇ ಪದೆ ಉರಿಮೂತ್ರ ಉಂಟಾಗುತ್ತದೆ. ಆ ಸಮಯದಲ್ಲಿ ಮೇಲಿನ ಮೂತ್ರನಾಳ ಹಾಗೂ ಇದಕ್ಕೆ ಸಂಬಂಧಿಸಿದ ಅಂಗಾಂಗಗಳಾದ ಕಿಡ್ನಿ, ಗರ್ಭಕೋಶ (Uterus), ಡಿಂಬನಾಳ(Fallopian Tubes)ಕ್ಕೂ ಸೋಂಕು ಹರಡಬಹುದು. ಈ ಸೋಂಕು ಒಂದೊಮ್ಮೆ ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದ್ದರೆ ಅಂದರೆ, ಕ್ಲಮೀಡಿಯಾ, ಸಿಫಿಲಸ್ ಮುಂತಾದ ಬ್ಯಾಕ್ಟೀರಿಯಾ (Bacteria) ಸೋಂಕಾಗಿದ್ದರೆ ಅದು ಪೆಲ್ವಿಕ್ ಇನ್ ಫ್ಲಮೇಟರಿ ಡಿಸೀಸ್ ಅಥವಾ ಪಿಐಡಿಗೆ ಕಾರಣವಾಗಬಹುದು. ಈ ಸಂದರ್ಭದಲ್ಲಿ ಡಿಂಬನಾಳಕ್ಕೆ ತೀವ್ರವಾಗಿ ಹಾನಿಯುಂಟಾಗುತ್ತದೆ. ಅಷ್ಟೇ ಅಲ್ಲ, ಮೂತ್ರಜನಕಾಂಗ ಅಥವಾ ಕಿಡ್ನಿಗೂ ತೊಂದರೆಯಾಗಬಹುದು. ಈ ಮೂಲಕ, ಒಟ್ಟಾರೆ ಆರೋಗ್ಯ ವ್ಯವಸ್ಥೆ ಹಾಳಾಗುತ್ತದೆ ಹಾಗೂ ಫಲವತ್ತತೆಯ ಮೇಲೂ ಪರಿಣಾಮವಾಗುತ್ತದೆ.
ಗರ್ಭಿಣಿಯರ ಮೂತ್ರನಾಳ ಸೋಂಕಿಗೇನು ಕಾರಣ?
ಮೂತ್ರನಾಳದ ಸೋಂಕಿನ ಕುರಿತು ಯಾವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂಬುದು ಸಾಮಾನ್ಯರಿಗೆ ತಿಳಿಯುವುದಿಲ್ಲ. ಒಂದು ಅಧ್ಯಯನದ ಪ್ರಕಾರ, ವರ್ಷಕ್ಕೆ ಅಂದರೆ 12 ತಿಂಗಳಿಗೆ ಮೂರು ಬಾರಿ ಸೋಂಕಿಗೆ ತುತ್ತಾಗುತ್ತಿದ್ದರೆ ಹೆಚ್ಚು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎನ್ನುವುದು ತಜ್ಞರ ಸಲಹೆ. ಏಕೆಂದರೆ, ಇ-ಕೊಲಿ (E-Coli) ಬ್ಯಾಕ್ಟೀರಿಯಾ ಮೂತ್ರ ವಿಸರ್ಜನಾ ನಾಳ ಪ್ರವೇಶಿಸಿ ಮೂತ್ರಕೋಶವನ್ನೂ ಸೋಂಕಿಗೆ ಒಳಪಡಿಸಿದ್ದಾಗ ಪದೇ ಪದೇ ಈ ಸಮಸ್ಯೆಯುಂಟಾಗುತ್ತದೆ. ಸೋಂಕು ದೀರ್ಘಕಾಲ ಹಾಗೆಯೇ ಇದ್ದರೆ ಫಲವತ್ತತೆ ಸಾಮರ್ಥ್ಯದ ಮೇಲೆ ಭಾರೀ ಪರಿಣಾಮವುಂಟಾಗುತ್ತದೆ.
ಅಸಲಿಗೆ, ಮೂತ್ರನಾಳದ ಸೋಂಕೊಂದೇ ಫಲವತ್ತತೆಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಪದೇ ಪದೆ ಮೂತ್ರಕೋಶವೂ ಸೋಂಕಿಗೆ ಒಳಗಾದರೆ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಹಲವು ಪ್ರಕರಣಗಳಲ್ಲಿ ಮಧುಮೇಹವೂ ಸತತ ಸಮಸ್ಯೆಗೆ ಕಾರಣವಾಗುವುದು ಕಂಡುಬಂದಿದೆ. ಹೀಗಾದಾಗಲೂ ಸಹ ಸಂತಾನೋತ್ಪತ್ತಿಯ ಮೇಲೆ ತೀವ್ರ ಪರಿಣಾಮ ಉಂಟಾಗುವುದು ಗ್ಯಾರೆಂಟಿ.
ನೊರೆ ನೊರೆ ಮೂತ್ರಕ್ಕೇನು ಕಾರಣ?
ಪರಿಹಾರವೇನು?
• ಸಾಕಷ್ಟು ನೀರು (Water) ಕುಡಿಯಬೇಕು. ಟಾಕ್ಸಿನ್ (Toxin) ಅಂಶ ಹೊರಹೋಗಲು ಅತ್ಯಧಿಕ ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೆಚ್ಚು ನೀರು ಸೇವನೆಯಿಂದ ಮೂತ್ರದ ಬಣ್ಣ ಬದಲಾಗುತ್ತದೆ, ಆಗ ಅದ ಆಸಿಡಿಕ್ ಅಂಶ ಕಡಿಮೆಯಾಗುತ್ತದೆ.
• ಒಳ ಉಡುಪು (Innerwear) ಸ್ವಚ್ಛ ಹಾಗೂ ಕಂಫರ್ಟ್ ಆಗಿರಲಿ. ಒಳ ಉಡುಪುಗಳ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಅಲ್ಲದೆ, ಅವು ತೀರ ಬಿಗಿಯಾಗಿರಬಾರದು. ಇದರಿಂದ ಅಲ್ಲಿ ತೇವಾಂಶ ಸೃಷ್ಟಿಯಾಗಿ ಬ್ಯಾಕ್ಟೀರಿಯಾ ನೆಲೆ ನಿಲ್ಲಲು ಅವಕಾಶವಾಗುತ್ತದೆ.
• ಲೈಂಗಿಕ ಕ್ರಿಯೆ (Sexual Intercourse) ಬಳಿಕ ಮೂತ್ರ ವಿಸರ್ಜನೆ ಮಾಡಲೇಬೇಕು. ಲೈಂಗಿಕ ಕ್ರಿಯೆ ಸಂದರ್ಭ ಪುರುಷರ ಜನನಾಂಗದಲ್ಲಿರುವ ಬ್ಯಾಕ್ಟೀರಿಯಾ ಮಹಿಳೆಯರ ಮೂತ್ರ ವಿಸರ್ಜನಾ ನಾಳಕ್ಕೆ ಸೇರಿಕೊಂಡಿರುವ ಸಾಧ್ಯತೆ ಹೆಚ್ಚು. ಲೈಂಗಿಕ ಕ್ರಿಯೆ ಬಳಿಕ ಮೂತ್ರ ಮಾಡುವುದರಿಂದ ಬ್ಯಾಕ್ಟೀರಿಯಾ ಅಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ.
• ಮೂತ್ರ ತಡೆದಿಟ್ಟುಕೊಳ್ಳಬೇಡಿ. ಮೂತ್ರ ಬಂದರೂ ವಿಸರ್ಜನೆ ಮಾಡದೆ ತಡೆದಿಟ್ಟುಕೊಂಡಿದ್ದರೆ ಕೆಳಹೊಟ್ಟೆಯಲ್ಲಿ ನೋವು ಬರುತ್ತದೆ. ಮೂತ್ರ ಮಾಡುವುದರಿಂದ ಟಾಕ್ಸಿನ್ ಹೊರಹೋಗುತ್ತದೆ ಹಾಗೂ ಮೂತ್ರಕೋಶದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.