ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದ್ದು ಹೇಗೆ?

By Kannadaprabha NewsFirst Published Jun 21, 2022, 9:20 AM IST
Highlights

*  ಇದು ಪ್ರಧಾನಿ ನರೇಂದ್ರ ಮೋದಿ ಅವಿರತ ಪ್ರಯತ್ನದ ಫಲ
*  2014ರ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ
*  2015, ಜೂ.21ರಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
 

ಬೆಂಗಳೂರು(ಜೂ.21):  ಸುಮಾರು 6 ಸಾವಿರ ವರ್ಷಗಳ ಇತಿಹಾಸವಿರುವ ‘ಯೋಗ’ಕ್ಕೆ ವಿಶ್ವ ಮಾನ್ಯತೆ ದೊರಕಿದ್ದು 2015ರಲ್ಲಿ. 2014ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಯೋಗದ ಮಹತ್ವದ ಕುರಿತು ಮಾತನಾಡಿದರು. ಭಾರತದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿರುವ ಯೋಗವನ್ನು ಜಗತ್ತು ಅಳವಡಿಸಿಕೊಳ್ಳಬೇಕಾಗಿರುವ ಮಹತ್ವದ ಕುರಿತು ವಿಷದವಾಗಿ ಎಲ್ಲ ದೇಶಗಳಿಗೆ ತಿಳಿಸಿಕೊಟ್ಟರು. ಬಹಳಷ್ಟು ದೇಶಗಳು ಇದಕ್ಕೆ ಬಂಬಲ ಸೂಚಿದವು. ಅದರ ಪರಿಣಾಮವಾಗಿ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿತು. ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿದ್ದರ ಕುರಿತಾಗಿ ಒಂದಷ್ಟು ಮಾಹಿತಿ ಇಲ್ಲಿದೆ.

ಮೋದಿ ಇದರ ರೂವಾರಿ

Latest Videos

ಜಗತ್ತಿನ ಪ್ರಭಾವಿ ನಾಯಕರುಗಳಲ್ಲಿ ಒಬ್ಬರಾದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮೊದಲ ಬಾರಿಗೆ ಯೋಗದ ಕುರಿತಾಗಿ ವಿಶ್ವ ಸಂಸ್ಥೆಯಲ್ಲಿ ಭಾಷಣ ಮಾಡಿದ ಅವರು, ಯೋಗದ ಪ್ರಮುಖ್ಯತೆ ಮತ್ತು ಅದರ ಉಪಯೋಗಗಳ ಕುರಿತಾಗಿ ಜಗತ್ತಿನ ಗಮನವನ್ನು ಸೆಳೆದರು. ಮೋದಿ ಅವರ ಮಾತಿಗೆ ಹಲವು ದೇಶಗಳು ದನಿಗೂಡಿಸಿದವು. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಯೋಗ ಭಾರತದ ಪ್ರಾಚೀನ ಸಂಪ್ರದಾಯ ನಮಗೆ ನೀಡಿದ ಬೆಲೆಕಟ್ಟಲಾಗದ ಉಡುಗೊರೆ. ಇದು ದೇಹ ಮತ್ತು ಮನಸ್ಸನ್ನು ವ್ಯಾಯಾಮದ ಮೂಲಕ ಒಂದುಗೂಡಿಸುತ್ತದೆ. ಮನಸ್ಸನ್ನು ನಿಯಂತ್ರಿಸಿಕೊಳ್ಳಲು ಮತ್ತು ಕೃತಕೃತ್ಯತೆಯನ್ನು ಪಡೆದುಕೊಳ್ಳಲು ಯೋಗ ಸಹಕಾರ ನೀಡುತ್ತದೆ.

Yoga Day: ಅಷ್ಟಾಂಗ ಯೋಗಕ್ಕೆ ವೈಜ್ಞಾನಿಕ ಚೌಕಟ್ಟು ಸೃಷ್ಟಿಸಿದ ಕೀರ್ತಿ ಮೈಸೂರಿನದು

ಇದು ಮನುಷ್ಯ ಮತ್ತು ಪರಿಸರದ ನಡುವೆ ಸಂಬಂಧವನ್ನು ಉಂಟು ಮಾಡುತ್ತದೆ. ಇದು ಜನರ ಜೀವನ ವಿಧಾನವನ್ನು ಬದಲಾಯಿಸುತ್ತದೆ. ಹಾಗಾಗಿ ವಿಶ್ವದ ಎಲ್ಲಾ ದೇಶಗಳು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಅವರ ಮಾತಿಗೆ ಹಲವು ದೇಶಗಳು ಬೆಂಬಲ ಸೂಚಿಸಿದವು. ಹಾಗಾಗಿ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವಂತೆ ಪ್ರಸ್ತಾವವನ್ನು ಸಾಮಾನ್ಯ ಸಭೆಯ ಎದುರು ಮಂಡಿಸಲಾಯಿತು. ಈ ಪ್ರಸ್ತಾವಕ್ಕೆ ಅಮೆರಿಕ, ಕೆನಡಾ, ಚೀನಾ ಸೇರಿ 177ಕ್ಕೂ ಅಧಿಕ ದೇಶಗಳು ಬೆಂಬಲ ಸೂಚಿಸಿದವು. ಈ ಹಿನ್ನೆಲೆಯಲ್ಲಿ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವಸಂಸ್ಥೆ ಘೋಷಣೆ ಮಾಡಿತು. ವಿಶ್ವ ಸಂಸ್ಥೆಯ ಈ ನಿರ್ಧಾರಕ್ಕೆ 175 ದೇಶಗಳು ತಮ್ಮ ಅನುಮೋದನೆಯನ್ನು ಸೂಚಿಸಿದವು.

ಭಾರತದ ಯೋಗಕ್ಕೆ 177 ದೇಶಗಳ ಬೆಂಬಲ

2014ರ ಸೆಪ್ಟೆಂಬರ್‌ನಲ್ಲಿ ಯೋಗ ದಿನಾಚರಣೆಯ ಕುರಿತಾಗಿ ಮೋದಿ ಅವರು ಮಾತನಾಡಿದಾಗ ಅದು ಕೇವಲ ಒಂದು ಪ್ರಸ್ತಾವವವಾಗಿತ್ತು. ವಿಶ್ವಸಂಸ್ಥೆ ಇದನ್ನು ಅಂಗೀಕಾರ ಮಾಡವುದರ ಹಿಂದೆ ಮೋದಿ ಅವರು ಸೇರಿದಂತೆ ಹಲವು ನಾಯಕರು ಶ್ರಮವಹಿಸಿದ್ದಾರೆ. ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸುವ ಮೊದಲು ಆರಂಭಿಕ ಹಂತಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಎಂಬ ಕರಡು ನಿರ್ಣಯದ ಕುರಿತು ಅನೌಪಚಾರಿಕ ಸಮಾಲೋಚನೆಗಳನ್ನು 2014ರ ಅ.14ರಂದು ನಡೆಸಲಾಯಿತು. ಇದಾದ 2 ತಿಂಗಳ ನಂತರ 2014ರ ಡಿಸೆಂಬರ್‌ 11ರಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿದ್ದ ಅಶೋಕ್‌ ಮುಖರ್ಜಿ ಅವರು ಈ ನಿರ್ಣಯದ ಕರಡನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಈ ಕರಡು ನಿರ್ಣಯಕ್ಕೆ 177 ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಿದವು. ಹಾಗಾಗಿ ಯಾವುದೇ ಮತದಾನವಿಲ್ಲದೇ ಇದನ್ನು ಅಂಗೀಕರಿಸಲಾಯಿತು.

ವಿಶ್ವಸಂಸ್ಥೆ ಒಪ್ಪಿಕೊಂಡಿದ್ದು ಏಕೆ, ಹೇಗೆ?

ಯೋಗ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಎಲ್ಲಾ ದೇಶಗಳು ಅರ್ಥಮಾಡಿಕೊಂಡಿದ್ದವು. ಯೋಗ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ಜಾಗತಿಕ ಆರೋಗ್ಯ ಎಂಬ ಕಲ್ಪನೆ ದೀರ್ಘಾವಧಿಯ ಅಭಿವೃದ್ದಿ ಸಹಾಯಕವಾಗುತ್ತದೆ. ಇದನ್ನು ಸಾಧಿಸಲು ಯೋಗ ಸಹಾಯ ಮಾಡುತ್ತದೆ ಎಂಬುದನ್ನು ಎಲ್ಲಾ ದೇಶಗಳು ಗಮನಿಸಿದ್ದವು. ಎಲ್ಲಾ ದೇಶಗಳಲ್ಲೂ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಯೋಗವು ಸಮಗ್ರ ವಿಧಾನವನ್ನು ಒದಗಿಸುತ್ತದೆ ಎಂಬುದನ್ನು ಗುರುತಿಸಲಾಗಿತ್ತು. ಯೋಗಾಭ್ಯಾಸಗಳನ್ನು ನಿರಂತರವಾಗಿ ಪಾಲನೆ ಮಾಡುವುದರಿಂದ ಆರೋಗ್ಯದಲ್ಲಿ ಮಹತ್ತರವಾದ ಪ್ರಗತಿಯನ್ನು ಕಾಣಬಹುದು ಎಂಬ ಉದ್ದೇಶದಿಂದ ಈ ನಿರ್ಣಯಕ್ಕೆ ಎಲ್ಲಾ ದೇಶಗಳು ಒಪ್ಪಿಗೆ ಸೂಚಿಸಿದವು. ಹಾಗಾಗಿ ವಿಶ್ವಸಂಸ್ಥೆ ಸರ್ವಾನುಮತದಿಂದ ಈ ನಿರ್ಣಯಕ್ಕೆ ಅನುಮೋದನೆಯನ್ನು ನೀಡಿತು.

ಜೂ.21ಕ್ಕೇ ಅಂ.ರಾ. ಯೋಗ ದಿನ ಏಕೆ?

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮೋದಿ ಅವರು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲು ಕರೆ ನೀಡಿದರು. ಈ ದಿನವನ್ನೇ ಯೋಗ ದಿನ ಆಚರಣೆಗೆ ಆಯ್ಕೆ ಮಾಡಿಕೊಳ್ಳಲು ವಿಶೇಷವಾದ ಕಾರಣವಿದೆ. ಇದು ಉತ್ತರ ಗೋಳಾರ್ಧದಲ್ಲಿ ಅತಿ ದೀರ್ಘ ದಿನ. ಬಹುತೇಕ ಭೂಭಾಗ ಉತ್ತರ ಗೋಳಾರ್ಧದಲ್ಲೇ ಇರುವುದರಿಂದ ಹೆಚ್ಚಿನ ದೇಶಗಳಲ್ಲಿ ಈ ದಿನ ದೀರ್ಘ ಹಗಲನ್ನು ಹೊಂದಿರುವ ದಿನವಾಗಿದೆ. ಅಷ್ಟೇ ಅಲ್ಲದೇ ಈ ದಿನದ ನಂತರ ಸೂರ್ಯನ ಚಲನೆ ಉತ್ತರಾಯಣದಿಂದ ದಕ್ಷಿಣಾಯನ ಕಡೆಗೆ ಚಲಿಸಲು ಆರಂಭಿಸುತ್ತಾನೆ. ಜೂ.21 ದಕ್ಷಿಣಾಯನ ಮತ್ತು ಉತ್ತರಾಯಣದ ನಡುವಿನ ಕಾಲವಾಗಿದೆ. ಅಲ್ಲದೇ ಈ ದಿನವೇ ಶಿವ ಯೋಗದ ಜ್ಞಾನವನ್ನು ಜನರಿಗೆ ನೀಡಲು ಆರಂಭಿಸಿದ ಎಂಬ ನಂಬಿಕೆಯೂ ಇದೆ.

Yoga Mat History: ಯೋಗ ಮ್ಯಾಟ್ ಬಳಕೆ ಶುರು ಮಾಡಿದ್ದು ಯಾರು ?

ವಿಶ್ವಸಂಸ್ಥೆಯ ಘೋಷಣೆ

2014ರ ಡಿಸೆಂಬರ್‌ನಲ್ಲಿ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಕರಡು ನಿರ್ಣಯಕ್ಕೆ ಅಮೆರಿಕ, ಬ್ರಿಟನ್‌, ಜರ್ಮನಿ, ಚೀನಾ ಸೇರಿದಂತೆ ಹಲವು ದೇಶಗಳ ನಾಯಕರು ಬೆಂಬಲ ಸೂಚಿಸಿದರು. ಸಾಮಾನ್ಯ ಸಭೆಯಲ್ಲಿದ್ದ 177 ದೇಶಗಳ ಬೆಂಬಲಿಗರು ಈ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದವು. ವಿಶ್ವಸಂಸ್ಥೆಯಲ್ಲಿ ಅತಿ ಹೆಚ್ಚು ರಾಷ್ಟ್ರಗಳ ಬೆಂಬಲದೊಂದಿಗೆ ಅಂಗೀಕಾರಗೊಂಡ ನಿರ್ಣಯ ಎಂಬ ಖ್ಯಾತಿಯೊಂದಿಗೆ ಈ ನಿರ್ಣಯ ಅನುಮೋದನೆ ಪಡೆಯಿತು. ವಿಶ್ವ ಸಂಸ್ಥೆ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತು. ಇದಕ್ಕೆ 175 ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿದವು. ಹಾಗಾಗಿ 2015ರ ಪ್ರತಿ ವರ್ಷವೂ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತಿದೆ.

ಮೊದಲ ವರ್ಷವೇ 20 ಕೋಟಿ ಜನರಿಂದ ಯೋಗ!

2015ರ ಜೂ.21ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಪ್ರಧಾನಿ ಮೋದಿ ಅವರು ವಿಶ್ವಾದ್ಯಂತ ಸುಮಾರು 20 ಕೋಟಿ ಜನರ ಜೊತೆ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ ಸುಮಾರು 37 ಸಾವಿರ ಮಂದಿ ಭಾಗಿಯಾಗಿದ್ದರು. 2ನೇ ಆಚರಣೆಯ ವೇಳೆ ಸುಮಾರು 30 ಸಾವಿರ ಮಂದಿ ಚಂಡೀಗಢದಲ್ಲಿ ಮೋದಿ ಅವರೊಂದಿಗೆ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದರು.
 

click me!