Cardiac Health: ಮಗುವನ್ನೂ ಬಿಡದ ಹೃದಯ ರೋಗ, ಕೇರ್‌ಫುಲ್ ಆಗಿರೋದು ಹೇಗೆ?

By Suvarna News  |  First Published Sep 29, 2022, 12:43 PM IST

ಮಕ್ಕಳಲ್ಲೂ ಹೃದಯ ರೋಗಗಳು ಹೆಚ್ಚುತ್ತಿರುವುದು ಇಂದಿನ ಪ್ರಮುಖ ಆತಂಕ. ಮಕ್ಕಳ ಹೃದ್ರೋಗಕ್ಕೆ ಕಾರಣ, ಆ ಸ್ಥಿತಿಯನ್ನು ನಿಭಾಯಿಸುವುದು, ಬೆಳೆಯುವ ಹಂತದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವುದನ್ನು ಎಲ್ಲ ಪಾಲಕರು ಅರಿತುಕೊಳ್ಳಬೇಕು.  
 


“ವೀಣಾಳ ಮಗುವಿಗೆ ಹೃದಯ ತೊಂದರೆ ಇತ್ತು. ಪ್ರತಿ ಹದಿನೈದು ದಿನಕ್ಕೊಮ್ಮೆ ಬಂದು ತಪಾಸಣೆ ಮಾಡಿಸಿ, ಔಷಧಿ ಪಡೆದುಕೊಂಡು ಹೋಗಬೇಕೆಂದು ಸೂಚಿಸಿದ್ದರು. ಆದರೆ, ಎರಡು ಬಾರಿ ಮಾತ್ರ ವೀಣಾ ಹಾಗೂ ಆಕೆಯ ಪತಿ ಮಗುವಿನ ತಪಾಸಣೆಗೆ ಬಂದಿದ್ದರು. ಮಗುವಿಗೆ ಏನಾಯಿತೆಂದು ತಿಳಿಯಲಿಲ್ಲ. ಬಹುಶಃ ಬದುಕಿರಲಿಕ್ಕಿಲ್ಲʼ ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆಯೊಂದರ ಮಕ್ಕಳ ವಿಭಾಗದಲ್ಲಿ ಕೆಲಸ ಮಾಡುವ ನರ್ಸ್. ಅವರಿಗದು ಸಾಮಾನ್ಯ. ಏಕೆಂದರೆ, ನಮ್ಮ ದೇಶದಲ್ಲಿ ಹೃದಯ ತೊಂದರೆ ಇರುವ ಬಹುತೇಕ ಮಕ್ಕಳು ಸೂಕ್ತ ಪರಿಶೀಲನೆ, ಔಷಧ, ಸಹಾಯವಿಲ್ಲದೆ ಅಸುನೀಗುತ್ತಾರೆ. ಆದರೆ, ಆರಂಭದಲ್ಲೇ ಗುರುತಿಸಿದರೆ ಹೃದಯ ರೋಗಗಳನ್ನು ದೀರ್ಘಾವಧಿ ಮೆಂಟೇನ್‌ ಮಾಡಿ, ಅವರ ಆರೋಗ್ಯ ಸುಧಾರಿಸಬಹುದು. ಮಕ್ಕಳ ಹೃದಯ ರೋಗ ತಜ್ಞತೆ ಇತ್ತೀಚೆಗೆ ದೇಶದಲ್ಲಿ ಪ್ರಮುಖ ವಿಭಾಗವಾಗಿ ಗುರುತಿಸಿಕೊಳ್ಳುತ್ತಿದೆ. ಕಾರಣ, ಮಕ್ಕಳಲ್ಲಿ ಹೃದಯ ತೊಂದರೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಪುಟ್ಟ ಪುಟ್ಟ ಮಕ್ಕಳು ಹೃದಯ ಸಮಸ್ಯೆಗಳಿಂದ ನರಳುವುದನ್ನು ನೋಡಲು ಸಾಧ್ಯವಾಗುವುದಿಲ್ಲ. ಅವರ ಸಮಸ್ಯೆಗೆ ಎಲ್ಲ ಕಡೆ ತಜ್ಞರ ಸಲಹೆಯೂ ಲಭ್ಯವಾಗುವುದಿಲ್ಲ. ಹೀಗಾಗಿ, ಮಕ್ಕಳಲ್ಲಿ ಹೃದಯ ರೋಗ ಇದ್ದರೆ ಅದು ಕುಟುಂಬಕ್ಕೆ ಹೊರೆಯಾಗುವ ಸಾಧ್ಯತೆಯೇ ಹೆಚ್ಚು. 

ಮಕ್ಕಳಲ್ಲಿ (Children) ಹಲವು ವಿಧದ ಹೃದ್ರೋಗಗಳು (Heart Problem) ಉಂಟಾಗಬಲ್ಲವು. ರುಮೆಟಿಕ್‌ (Rheumatic) ಹೃದಯ ತೊಂದರೆ ಮತ್ತು ಕವಾಸಕಿ (Kawasaki) ಎನ್ನುವ ಸಮಸ್ಯೆಗಳು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ರುಮೆಟಿಕ್‌ ಹೃದ್ರೋಗದಿಂದಾಗಿ ಶಾಲೆಗೆ ಹೋಗುವ ಮಕ್ಕಳಲ್ಲಿ ಪದೇ ಪದೆ ಜ್ವರ (Fever) ಬರಬಹುದು. ಮಕ್ಕಳಲ್ಲಿರುವ ಹೃದಯ ಸಮಸ್ಯೆಯನ್ನು ಗುರುತಿಸುವುದು ಆರಂಭದಲ್ಲಿ ತುಸು ವಿಳಂಬವಾಗಬಹುದು, ಕಷ್ಟವಾಗಬಹುದು. ಆದರೆ, ಮಕ್ಕಳನ್ನು ಸರಿಯಾಗಿ ಗಮನಿಸುತ್ತಿದ್ದರೆ ತಿಳಿಯಲು ಸಾಧ್ಯ. ಹೃದಯ ತೊಂದರೆಯಿಂದ ಮಕ್ಕಳ ಸಾಮಾಜಿಕ, ಶೈಕ್ಷಣಿಕ ಬದುಕಿಗೆ ಏಟು ಬೀಳುತ್ತದೆ. ಹೀಗಾಗಿ, ಅವುಗಳನ್ನು ಆರಂಭದಲ್ಲೇ ಗುರುತಿಸುವುದು, ಚಿಕಿತ್ಸೆ ಕೊಡಿಸುವುದು ಮುಖ್ಯ. 

World Heart Day 2022: ಕಾಲೇಜು ವಿದ್ಯಾರ್ಥಿಗಳಿಗೆ ಹೃದಯಾಘಾತ ತಡೆ ತರಬೇತಿ?

ಹೃದ್ರೋಗದ ಲಕ್ಷಣ
ಹೃದಯ ತೊಂದರೆ ಇದ್ದಾಗ ಕೆಲವು ಸಾಮಾನ್ಯ ಲಕ್ಷಣಗಳಿರುತ್ತವೆ. ಅವು, ಕಿರು ಉಸಿರಾಟ (Shortness of Breath), ನಿಧಾನ ಹೃದಯ ಬಡಿತ (Slow Heart Beat), ಅತಿವೇಗದ (Rapid) ಹೃದಯ ಬಡಿತ, ಅನಿಯಮಿತ (Irregular) ಹೃದಯ ಬಡಿತ, ಅತಿಯಾದ ಸುಸ್ತು, ಚಟುವಟಿಕೆ ಇಲ್ಲದಿರುವುದು, ಎದೆ ನೋವು (Chest Pain), ದುರ್ಬಲವಾಗಿರುವುದು. ಹಾಗೆಯೇ, ಚರ್ಮದ ಬಣ್ಣ (Skin Color) (ತುಟಿ, ಉಗುರು ಇತ್ಯಾದಿ) ತುಸು ಬೂದುನೀಲಿ ಅಥವಾ ತಿಳಿನೇರಳೆ ಬಣ್ಣದಲ್ಲಿರುವುದು. ಹೃದಯ ಬಡಿತ ತೀವ್ರವಾಗಿರುತ್ತದೆ. ತಲೆಸುತ್ತು ಬರುತ್ತದೆ ಮತ್ತು ಪದೇ ಪದೆ ಸುಸ್ತಾಗಿ ಮಲಗಬಹುದು. ಕೆಲವು ಅಸಹಜ ಲಕ್ಷಣಗಳೂ ಇರುತ್ತವೆ. 
ಗರ್ಭ ಧರಿಸಿದ ಮೊದಲು ಆರು ವಾರಗಳಲ್ಲಿ ಭ್ರೂಣದ ಹೃದಯ ಬಡಿತ ಆರಂಭವಾಗುತ್ತದೆ. ಪ್ರಮುಖ ರಕ್ತನಾಳಗಳು ಈ ಹಂತದಲ್ಲಿ ಬೆಳವಣಿಗೆ ಆಗಲು ತೊಡಗುತ್ತವೆ. ಹಾಗೆಯೇ ಕೆಲವು ಸಮಸ್ಯೆಗಳೂ ಈ ಹಂತದಲ್ಲಿಯೇ ಶುರುವಾಗಬಹುದು. ಇದಕ್ಕೆ ಹಲವು ಕಾರಣ. ಆನುವಂಶೀಯತೆ (Genetic), ವೈದ್ಯಕೀಯ ಸ್ಥಿತಿ (Medical Condition), ಕೆಲವು ಔಷಧ (Medicine), ಹವಾಮಾನ ಹಾಗೂ ಧೂಮಪಾನ (Smoke)ಗಳನ್ನು ಪ್ರಮುಖವಾಗಿ ಗುರುತಿಸಲಾಗಿದೆ. ಒಮ್ಮೆ ಮಗುವಲ್ಲಿ ಹೃದಯ ತೊಂದರೆ ಕಂಡುಬಂದರೆ, ವೈದ್ಯರ ಸಲಹೆಯಂತೆಯೇ ಮುಂದುವರಿಯಬೇಕು, ಸೆಕೆಂಡ್‌ ಒಪಿನಿಯನ್‌ ಪಡೆದುಕೊಳ್ಳಬಹುದಾದರೂ ವೈದ್ಯರ ಕಟ್ಟೆಚ್ಚರದಲ್ಲೇ ಮಗುವಿನ ಪ್ರತಿ ಚಟುವಟಿಕೆ ಇರುವಂತೆ ನೋಡಿಕೊಳ್ಳಬೇಕು. 

World Heart Day: ಸ್ತಂಭನವಾಗದಂತೆ ಇರಿ ಜೋಪಾನ

Tap to resize

Latest Videos

ಹುಟ್ಟುವಾಗ ಇಲ್ಲದ್ದು ಬೆಳೆಯುತ್ತ ಬಂತು
ಹುಟ್ಟುವಾಗ ಯಾವುದೊಂದೂ ಸಮಸ್ಯೆ ಇಲ್ಲದೆ ಬೆಳೆದ ಮಗು ಶಾಲೆಗೆ ಹೋಗುವ ಸಮಯದಲ್ಲಿ ಹೃದ್ರೋಗಿಯಾಗಬಹುದು. ಇದಕ್ಕೂ ಸಹ ಕಾರಣಗಳು ಅನೇಕ. ಮಕ್ಕಳಲ್ಲಿ ಹೃದಯ ತೊಂದರೆಯನ್ನು ದೂರವಿಡಲು ಅವರಲ್ಲಿ ಆರೋಗ್ಯಕರ ಜೀವನದ ಕುರಿತು ಅರಿವು ಮೂಡಿಸಬೇಕು. ಸ್ವತಃ ಪಾಲಕರು ಅದನ್ನು ಅನುಸರಿಸಬೇಕು. ಇಂದಿನ ಮಕ್ಕಳು ಜಂಕ್‌ ಫುಡ್‌ (Junk Food) ತಿಂದು ಕೊಬ್ಬು (Fat) ಹಾಗೂ ಬೊಜ್ಜುತನ (Obese) ಬೆಳೆಸಿಕೊಳ್ಳುತ್ತಿದ್ದಾರೆ ಎಂದರೆ ಪಾಲಕರ ಪಾತ್ರವೂ ಮುಖ್ಯವಾಗಿರುತ್ತದೆ. ನಿಯಮಿತ ವ್ಯಾಯಾಮ, ಸೈಕಲ್‌, ಈಜು, ಹೊರಾಂಗಣ ಆಟೋಟ, ಧನಾತ್ಮಕ ಚಿಂತನೆ, ಕಡಿಮೆ ಸ್ಕ್ರೀನ್‌ ಸಮಯ, ಉತ್ತಮ ಆಹಾರ (Healthy Food) ಪದ್ಧತಿ ಅನುಸರಿಸುವ ಮೂಲಕ ಮಕ್ಕಳಲ್ಲಿ ಹೃದಯ ಸಮಸ್ಯೆಯನ್ನು ದೂರವಿರಿಸಬಹುದು. 

click me!