ನ್ಯೂಯಾರ್ಕ್: ಖಿನ್ನತೆಗಾಗಿ ತೆಗೆದುಕೊಂಡ ಔಷಧಿ ವ್ಯಕ್ತಿಯನ್ನು ಇನ್ನಷ್ಟು ಖಿನ್ನತೆಗೆ ತಳ್ಳಿದ ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ. ಯಾರೂ ಕೂಡ ಹುಟ್ಟುತ್ತಲೇ ತಮಗಿಷ್ಟವಾದ ಬಣ್ಣವನ್ನು ಪಡೆಯುವುದಿಲ್ಲ. ಮನುಷ್ಯರಿಗೆ ಬರುವ ಬಣ್ಣ ವಂಶಪರಾಂಪರ್ಯವಾಗಿ ಪೋಷಕರ ಬಳುವಳಿಯಾಗಿ ಸಿಗುವುದು. ಚರ್ಮದ ಒಳಭಾಗದ ಮೆಲನಿನ್ ಕೂಡ ಮನುಷ್ಯರ ಬಣ್ಣವನ್ನು ನಿರ್ಧರಿಸುವುದು. ಆದರೆ ಹುಟ್ಟುತ್ತಾ ಬೆಳೆಯುತ್ತಾ ಚೆನ್ನಾಗಿದ್ದವ, ನೋಡಲು ಲಕ್ಷಣವಾಗಿದ್ದವನ ಬಣ್ಣ ಸಡನ್ ಆಗಿ ವಿಚಿತ್ರ ಬಣ್ಣಕ್ಕೆ ತಿರುಗಿದರೆ ಆತನ ಪರಿಸ್ಥಿತಿ ಹೇಗಾಗಬೇಡ.
ಹೌದು ಅಮೆರಿಕಾದಲ್ಲಿ(America) ಈ ಘಟನೆ ನಡೆದಿದೆ. ನೋಡಲು ಸುಮಾರಾಗಿದ್ದ ವ್ಯಕ್ತಿಯೊಬ್ಬ ಖಿನ್ನತೆ (depression) ನಿವಾರಣೆಗೆ ಔಷಧಿ ಸೇವಿಸಿದ ಬಳಿಕ ಆತನ ಚರ್ಮದ ಬಣ್ಣವೇ ಬದಲಾಗಿದೆ. ಬೆಳ್ಳಗೆ ಹಾಲಿನಂತಿದ್ದವ ಹಾವಿನಂತಾಗಿದ್ದಾನೆ. ಈತನ ಚರ್ಮ (Skin) ಬೂದು ಬಣ್ಣಕ್ಕೆ ತಿರುಗಿದ್ದು, ಹಾವಿನ ಚರ್ಮದಂತೆ (Snake skin) ಒಡಕು ಒಡಕಾಗಿದೆ. 34 ವರ್ಷದ ಟೈಲರ್ ಮೋಂಕ್ (Tylor Monk) ಎಂಬಾತ ತನ್ನ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರ ಬಳಿ ತಪಾಸಣೆ ನಡೆಸಿದ ಬಳಿಕ ಕಳೆದ ವರ್ಷ ಖಿನ್ನತೆ ನಿವಾರಣೆಗೆ ಔಷಧಿಯನ್ನು ಪಡೆದಿದ್ದ. ಇದಾದ ಬಳಿಕ ಮೋಂಕ್ ಚರ್ಮದ ಬಣ್ಣ ವಿಚಿತ್ರವಾಗಿ ಬದಲಾಗಿತ್ತು. ಇದನ್ನು ನೋಡಿದ ವೈದ್ಯರೇ ಈಗ ದಂಗಾಗಿದ್ದಾರೆ. ಈತನಿಗೆ ಒತ್ತಡ ನಿವಾರಣೆಗೆ ಪ್ರೊಕ್ಸಿಟೈನ್ (Fluoxetine) ಎಂಬ ಔಷಧಿಯನ್ನು ವೈದ್ಯರು ನೀಡಿದ್ದರು. ಒತ್ತಡ ನಿವಾರಣೆಗೆ ಅಥವಾ ಖಿನ್ನತೆಗೆ ಸಾಮಾನ್ಯವಾಗಿ ನೀಡಲಾಗುವ ಔಷಧಿ ಇದಾಗಿದೆ.
Cardiac Health: ಮಗುವನ್ನೂ ಬಿಡದ ಹೃದಯ ರೋಗ, ಕೇರ್‌ಫುಲ್ ಆಗಿರೋದು ಹೇಗೆ?
2021ರ ಮೇ ತಿಂಗಳಿನಿಂದ ಟೈಲರ್ ಈ ಔಷಧಿ ಸ್ವೀಕರಿಸಲು ಆರಂಭಿಸಿದ್ದರು. ಇದಾಗಿ ಒಂದು ವಾರಕ್ಕೆಲ್ಲಾ ಟೈಲರ್ ಪತ್ನಿಗೆ (Wife) ತನ್ನ ಗಂಡನ (Husband) ಚರ್ಮದ ಬಣ್ಣ ಬದಲಾಗುತ್ತಿರುವುದು ಗಮನಕ್ಕೆ ಬಂದಿದೆ. ಬಿಳಿಯಾಗಿದ್ದ ಟೈಲರ್ ಬಣ್ಣ, ಗಾಢ ಬೂದು ಬಣ್ಣಕ್ಕೆ ತಿರುಗಿದೆ. ಕೀಟ ನಿಯಂತ್ರಣ ಕ್ಷೇತ್ರ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಟೈಲರ್, ಈ ಔಷಧಿ (medicine) ಸೇವಿಸಿದರು ತನ್ನ ಮಾನಸಿಕ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದ ಹಿನ್ನೆಲೆಯಲ್ಲಿ ಈ ಔಷಧಿಯನ್ನು ಕೆಲವು ವಾರಗಳ ಕಾಲ ತೆಗೆದುಕೊಂಡು ನಂತರ ನಿಲ್ಲಿಸಿದ್ದಾರೆ. ಆದರೂ ಆತನ ಚರ್ಮದ ಬಣ್ಣ ಮಾತ್ರ ನಿರಂತರವಾಗಿ ಬದಲಾಗುತ್ತಾ ಹೋಗಿದೆ.
ಮೊದಲಿಗೆ ಈತನ ಕಿವಿಗಳ (ear) ಬಣ್ಣ ಬದಲಾಗಿದೆ. ನಂತರ ಶೀಘ್ರದಲ್ಲೇ ಅದು ಕತ್ತು (neck) ಹಾಗೂ ಮುಖದ ಭಾಗಕ್ಕೂ ಈ ಬಣ್ಣ ಹಬ್ಬಿದೆ. ಇಷ್ಟೇ ಅಲ್ಲದೇ ಇತರ ಕೆಲ ಅನಾರೋಗ್ಯಕಾರಿ ಲಕ್ಷಣಗಳು ಈತನಿಗೆ ಕಾಣಿಸಿಕೊಂಡಿವೆ. ಕಣ್ಣುಗಳಲ್ಲಿ ಉರಿಯ ಜೊತೆಗೆ, ಚರ್ಮ ಅಲ್ಲಲ್ಲಿ ಕೆಂಪಾಗಿದೆ, ಜೊತೆಗೆ ಚರ್ಮವೂ ಸೂಕ್ಷ್ಮವಾಗಿದ್ದು, ಸೂರ್ಯನ ಬೆಳಕಿಗೆ ಹೋದಂತೆಲ್ಲಾ ಚರ್ಮ ಸುಟ್ಟು ಹೋದಂತೆ ಕಾಣಿಸುತ್ತಿದೆ.
Jail Tourism: ತಪ್ಪು ಮಾಡ್ಬೇಕಿಲ್ಲ..ಹಣ ಪಾವತಿಸಿ, ಜೈಲುವಾಸ ಹೇಗಿರುತ್ತೆ ನೋಡಿ !
ಮೊದಲಿಗೆ ಈ ವಿಚಾರವನ್ನು ಟೈಲರ್ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಆದರೆ ನಂತರ ತನ್ನಿಬ್ಬರು ಸಹೋದ್ಯೋಗಿಗಳ ಬಳಿ ಮಾತನಾಡಿದ ನಂತರ ಟೈಲರ್ ತಾನು ನಿಜವಾಗಿಯೂ ಬೂದು ಬಣ್ಣಕ್ಕೆ ತಿರುಗುತ್ತಿದ್ದೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದಾದ ಬಳಿಕ ಟೈಲರ್, ಕಿಂಡರ್, ಲೂಸಿಯಾನ ಸೇರಿದಂತೆ ಹಲವು ಪ್ರದೇಶಗಳ ವಿಶೇಷ ತಜ್ಞರ ಬಳಿ ತನ್ನ ಈ ಚರ್ಮವನ್ನು ತೋರಿಸಿಕೊಂಡಿದ್ದು, ಇದನ್ನು ನೋಡಿದ ವೈದ್ಯರೇ ಒಂದು ಕ್ಷಣ ದಂಗಾಗಿದ್ದಾರೆ. ಆದರೆ ಇದು ಗಂಭೀರ ಕಾಯಿಲೆ ಆಗಿರಬಹುದು ಎಂಬುದನ್ನು ವೈದ್ಯರು ನಿರಾಕರಿಸಿದ್ದಾರೆ. ಆದರೆ ಇದು ಎಂತಹ ಕಾಯಿಲೆ ಎಂಬುದನ್ನು ಹೇಳುವಲ್ಲಿ ಅವರು ವಿಫಲರಾಗಿದ್ದಾರೆ.
ಇದರಿಂದಾಗಿ, 'ಇದ್ದಿದ್ದು ಹೋಯ್ತು ಮದ್ದಿನ ಗುಣದಿಂದ' ಎಂಬ ಗಾದೆ ಮಾತಿನಂತಾಗಿದೆ ಟೈಲರ್ ಪರಿಸ್ಥಿತಿ. ಸೌಂದರ್ಯ ಎಂಬುದು ಆತ್ಮವಿಶ್ವಾಸದ ಪ್ರತೀಕ, ಬಣ್ಣ ಹೋಗುವ ತನಕ ಗುಣ ಕೊನೆತನಕ ಎಂಬ ಲೊಕೋಕ್ತಿ ಇದೆ. ಅಂದರೆ ಬಣ್ಣಕ್ಕೆ ಮರುಳಾಗದೇ ಒಳ್ಳೆಯ ಗುಣಕ್ಕೆ ಮರುಳಾದರೆ ಅದು ಕೊನೆ ತನಕ ಇರುವುದು ಎಂಬುದು ಈ ಮಾತಿನ ಅರ್ಥ. ಅದು ನಿಜವೇ ಆದರೂ ಬಹುತೇಕರು ತಕ್ಷಣವೇ ಮರುಳಾಗುವುದು ಮನುಷ್ಯರ ಬಣ್ಣಕ್ಕೆ. ಕೆಲವೊಮ್ಮೆ ಸುಂದರ ಮುಖದ ಬಣ್ಣಗೇಡಿ ಗುಣಗಳು ನಂತರ ಭ್ರಮನಿರಸ ನೀಡುವುದು. ಆದರೂ ಜನ ಮೊದಲು ಬೆರಗಾಗುವುದು ಸೌಂದರ್ಯಕ್ಕೆ ಎಂಬುದು ಒಪ್ಪಿಕೊಳ್ಳಲೇಬೇಕಾದ ಸರ್ವಕಾಲಿಕ ಸತ್ಯ. ಹೀಗಿರುವಾಗ ಖಿನ್ನತೆಗೆ ತೆಗೆದುಕೊಂಡ ಔಷಧಿ ಈತನ ಬಣ್ಣಗೆಡಿಸಿದ್ದು, ಈತ ಮತ್ತಷ್ಟು ಖಿನ್ನತೆಗೆ ಜಾರುವಂತೆ ಮಾಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.