ಕೊರೋನಾ ಸೋಂಕು ತಡೆಗೆ ಸ್ಯಾನಿಟೈಸರ್ ಹೇಗೆ ಬಳಸ್ಬೇಕು ಗೊತ್ತಾ?

By Suvarna NewsFirst Published Mar 14, 2020, 3:18 PM IST
Highlights

ಕೈಗಳಿಗೆ ಸ್ಯಾನಿಟೈಸರ್ ತಾಗಿಸಿಕೊಂಡ ತಕ್ಷಣ ಕೊರೋನಾ ವೈರಸ್ ನಾಶವಾಗುತ್ತದೆ ಎಂಬ ನಂಬಿಕೆ ಬಹುತೇಕರಲ್ಲಿದೆ. ಆದ್ರೆ ಹೇಗೆ ಕೈಗಳನ್ನು ಕನಿಷ್ಠ 20 ಸೆಕೆಂಡ್‍ಗಳ ಕಾಲ ವಾಷ್ ಮಾಡ್ಬೇಕೋ  ಹಾಗೇ ಸ್ಯಾನಿಟೈಸರ್ ಅನ್ನು ಕೂಡ ಕೈಗಳಿಗೆ ಹಾಕಿ 20 ಸೆಕೆಂಡ್ ಉಜ್ಜಿದ್ರೆ ಮಾತ್ರ ಕೊರೋನಾ ವೈರಸ್ ನಾಶವಾಗುತ್ತವೆ.

ಕೊರೋನಾ ಕರಿನೆರಳು ಜಗತ್ತಿನೆಲ್ಲೆಡೆ ಚಾಚಿದೆ. ಕರ್ನಾಟಕದಲ್ಲೇ ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿರುವುದು ಸಹಜವಾಗಿ ರಾಜ್ಯದ ಜನರಲ್ಲಿ ಆತಂಕ ಹೆಚ್ಚಿಸಿದೆ. ಜೊತೆಗೆ ಈ ಸೋಂಕು ತಗಲುದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹ್ಯಾಂಡ್ ಸ್ಯಾನಿಟೈಸರ್ ಮೊರೆ ಹೋಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಿದ್ದು, ಕೆಲವು ಕಡೆ ಸ್ಯಾನಿಟೈಸರ್ ಕೊರತೆಯೂ ಎದುರಾಗಿದೆ ಎಂಬ ಮಾಹಿತಿಯಿದೆ. ಆದ್ರೆ ನೀರು ಮತ್ತು ಸೋಪ್ ಅಥವಾ ಹ್ಯಾಂಡ್‍ವಾಷ್ ಲಭ್ಯವಿರುವ ಸ್ಥಳದಲ್ಲೂ ಹ್ಯಾಂಡ್‍ವಾಷ್ ಯಾಕೆ ಬಳಸಬೇಕು? ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಹ್ಯಾಂಡ್ ಸ್ಯಾನಿಟೈಸರ್ ಹೆಚ್ಚಾಗಿ ಬಳಸುತ್ತಾರೆಂಬ ಕಾರಣಕ್ಕೆ ನೀರು ಮತ್ತು ಸೋಪ್‍ಗಿಂತಲೂ ಸ್ಯಾನಿಟೈಸರ್ ಹೆಚ್ಚು ಪರಿಣಾಮಕಾರಿ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಸೋಪ್ ಹಾಗೂ ನೀರಿನಿಂದ ಕೈಗಳನ್ನು ಸ್ವಚ್ಛಗೊಳಿಸುವುದು ಹ್ಯಾಂಡ್ ಸ್ಯಾನಿಟೈಸರ್ ಬಳಕೆಗಿಂತ ಹೆಚ್ಚು ಪರಿಣಾಮಕಾರಿ ಎಂದು ವೈದ್ಯಕೀಯ ತಜ್ಞರೇ ಒಪ್ಪಿಕೊಂಡಿದ್ದಾರೆ. ಇನ್ನು ಕೈಗಳಿಗೆ ಅಂಟಿಕೊಂಡಿರುವ ಕೊಳೆ ಅಥವಾ ಮಣ್ಣು ಕಣ್ಣಿಗೆ ಕಾಣಿಸುವಂತಿದ್ದರೆ, ಆಗ ನೀವು ಕೈಗಳನ್ನು ಸ್ಯಾನಿಟೈಸರ್‍ನಿಂದ ಸ್ವಚ್ಛಗೊಳಿಸುವುದಕ್ಕಿಂತ ಸೋಪ್ ಹಾಗೂ ನೀರು ಬಳಸಿ ತೊಳೆಯುವುದೇ ಹೆಚ್ಚು ಪರಿಣಾಮಕಾರಿ ಕೂಡ.

ಇನ್‌ಫೆಕ್ಷನ್‌ನಿಂದ ದೂರವಿರಲು ಬಳಸಬಹುದಾದ ಐದು ವಸ್ತುಗಳು!

ಶೇ.60 ಆಲ್ಕೋಹಾಲ್ ಇದ್ದರಷ್ಟೇ ಪರಿಣಾಮಕಾರಿ
ಸ್ಯಾನಿಟೈಸರ್ ಖರೀದಿಸುವಾಗ ಅದರಲ್ಲಿನ ಆಲ್ಕೋಹಾಲ್ ಪ್ರಮಾಣವನ್ನು ಪರೀಕ್ಷಿಸುವುದು ಅತ್ಯಗತ್ಯ. ಶೇ.60-70ರಷ್ಟು ಆಲ್ಕೋಹಾಲ್ ಹೊಂದಿರುವ ಸ್ಯಾನಿಟೈಸರ್ ಮಾತ್ರ ವೈರಸ್‍ಗಳನ್ನು ನಾಶಪಡಿಸಬಲ್ಲದು. ಆಯಿಲ್ ಬೇಸ್ಡ್  ಹಾಗೂ ಕಡಿಮೆ ಆಲ್ಕೋಹಾಲ್ ಅಂಶ ಹೊಂದಿರುವ ಅನೇಕ ಸ್ಯಾನಿಟೈಸರ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದ್ರೆ,ಇವುಗಳನ್ನು ಬಳಸೋದ್ರಿಂದ ಕೊರೋನಾ ವೈರಸ್ ನಾಶವಾಗೋದಿಲ್ಲ.

ಕೈಗಳು ಒದ್ದೆಯಾಗಿದ್ರೆ ವರ್ಕ್ ಆಗಲ್ಲ
ಒದ್ದೆಯಾಗಿರುವ ಕೈಗಳಿಗೆ ಸ್ಯಾನಿಟೈಸರ್ ಅಪ್ಲೈ ಮಾಡಿದ್ರೆ ಏನೂ ಪ್ರಯೋಜನವಿಲ್ಲ. ಕೈಗಳು ಒಣಗಿದ್ದಾಗ ಮಾತ್ರ ಸ್ಯಾನಿಟೈಸರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಅಮೆರಿಕನ್ ಸೊಸೈಟಿ ಫಾರ್ ಮೈಕ್ರೋಬಯಾಲಜಿ ಪಬ್ಲಿಕೇಷನ್ ಎಂಸ್ಪೇರ್‍ನಲ್ಲಿ 2019ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ನೀರಿನಂಶ ಇನ್‍ಫ್ಲುಯೆಂಜಾ ಎ ವೈರಸ್‍ಗೆ ರಕ್ಷಣೆ ನೀಡುವ ಮೂಲಕ ಸ್ಯಾನಿಟೈಸರ್ ಪ್ರಭಾವವನ್ನು ತಗ್ಗಿಸುತ್ತದೆ.

ಈ ಟಿಪ್ಸ್ ಪಾಲಿಸಿದ್ರೆ ಕೊರೋನಾ ಸೋಂಕು ಮಕ್ಕಳನ್ನು ತಾಕದು!

ಹೀಗೆ ಬಳಸಿದ್ರೆ ಮಾತ್ರ ಪರಿಣಾಮಕಾರಿ
ಸೋಪ್ ಮತ್ತು ನೀರು ಬಳಸಿ ಕೈಗಳನ್ನು ಕನಿಷ್ಠ 20 ಸೆಕೆಂಡ್ ತೊಳೆದ್ರೆ ಮಾತ್ರ ಕೈಯಲ್ಲಿರುವ ಕೊರೋನಾ ವೈರಸ್‍ಗಳು ನಾಶವಾಗುತ್ತವೆ ಎಂಬುದು ಬಹುತೇಕರಿಗೆ ಗೊತ್ತಿರುವ ವಿಚಾರ. ಕೆಲವರು 20 ಸೆಕೆಂಡ್‍ಗಳ ಕಾಲ ಕೈ ತೊಳೆಯುವ ಕರ್ಮ ಏಕೆ, ಸ್ಯಾನಿಟೈಸರ್ ಬಳಕೇನೆ ಅದಕ್ಕಿಂತ ಸುಲಭ ಎಂದು ಹೋದಲ್ಲಿ ಬಂದಲೆಲ್ಲ ಸ್ಯಾನಿಟೈಸರ್ ಅನ್ನು ಕೈಗೆ ತಾಗಿಸಿಕೊಳ್ಳುತ್ತಾರೆ. ಆದ್ರೆ ಸ್ಯಾನಿಟೈಸರ್ ನಿಮ್ಮ ಕೈಗಳಲ್ಲಿರುವ ವೈರಸ್‍ಗಳನ್ನು ನಾಶಪಡಿಸಬೇಕೆಂದ್ರೆ ನೀವು ಅದನ್ನು ಅಂಗೈ ಮೇಲೆ ಹಾಕಿಕೊಂಡು, ಆ ಬಳಿಕ ಎರಡು ಕೈಗಳಿಂದ ಉಜ್ಜಬೇಕು. ಹೀಗೆ ಮಾಡುವಾಗ ಬೆರಳುಗಳ ಸಂದಿ, ಕೈಯ ಮೇಲ್ಭಾಗಕ್ಕೂ ಜೆಲ್ ತಾಗುವಂತೆ ಚೆನ್ನಾಗಿ ಉಜ್ಜಿಕೊಳ್ಳಬೇಕು. ಜೆಲ್ ಸಂಪೂರ್ಣವಾಗಿ ಡ್ರೈ ಆಗುವ ತನಕ ಈ ಪ್ರಕ್ರಿಯೆಯನ್ನು ಮುಂದುವರಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 20 ಸೆಕೆಂಡ್‍ಗಳನ್ನಾದ್ರೂ ತೆಗೆದುಕೊಂಡ್ರೆ ಮಾತ್ರ ಸ್ಯಾನಿಟೈಸರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೋ 20 ಸೆಕೆಂಡ್ ಕೈ ತೊಳೆಯಬೇಕು ಎಂಬ ಕಾರಣಕ್ಕೆ ನೀವು ಸ್ಯಾನಿಟೈಸರ್ ಬಳಸುತ್ತಿದ್ರೆ ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಿ.

ಜಿಪುಣತನ ಬೇಡ
ಸ್ಯಾನಿಟೈಸರ್ ದುಬಾರಿ ಎಂಬುದೇನೂ ನಿಜ. ಹಾಗಂತ ಅದರ ಬಳಕೆಯಲ್ಲಿ ಜಿಪುಣತನ ತೋರಿದ್ರೆ ಕೊರೋನಾ ವೈರಸ್ ನಿಮ್ಮನ್ನು ಆವರಿಸಿದ್ರೂ ಆವರಿಸಬಹುದು. ಮನೆ ಅಥವಾ ಆಫೀಸ್‍ನಿಂದ ಹೊರಗಿರುವಾಗ ನಿಮ್ಮೊಂದಿಗೆ ಸ್ಯಾನಿಟೈಸರ್‍ನ ಪುಟ್ಟ ಬಾಟಲ್‍ವೊಂದನ್ನು ಮರೆಯದೆ ಕೊಂಡು ಹೋಗಿ. ಹಾಗೆಯೇ ಒಂದು ಹನಿ ಸ್ಯಾನಿಟೈಸರ್ ಕೈಗೆ ಹಾಕೊಂಡು ಇಡೀ ಕೈ ಉಜ್ಜಿಕೊಂಡ್ರೆ ಏನೂ ಪ್ರಯೋಜನವಿಲ್ಲ. ಎರಡು ಕೈಗಳ ಎಲ್ಲ ಭಾಗಗಳಿಗೂ ಸ್ಯಾನಿಟೈಸರ್ ತಾಗಬೇಕು ಹಾಗೂ ಅದು ಡ್ರೈ ಆಗುವ ತನಕ ಉಜ್ಜಬೇಕು.

ಕರೋನಾಕ್ಕೆ ಕರ್ನಾಟಕ ಬಂದ್, ಏನ್ ಮಾಡ್ಬೇಕು? ಏನ್ ಮಾಡಬಾರದು?

ಆಂಟಿ ಬ್ಯಾಕ್ಟೀರಿಯಲ್ ವೈಪ್ಸ್ ಕೆಲಸ ಮಾಡದು
ಎಲ್ಲ ಆಂಟಿ ಬ್ಯಾಕ್ಟೀರಿಯಲ್ ವೈಪ್ಸ್ ಕೊರೋನಾ ವೈರಸ್ ಅನ್ನು ಸಂಹರಿಸುತ್ತೆ ಎಂದು ಹೇಳಲಾಗದು. ಕೊರೋನಾ ವೈರಸ್ ವಿರುದ್ಧ ಹೋರಾಡುವಲ್ಲಿ ವೆಟ್ ವೈಪ್ಸ್‍ನಲ್ಲಿರುವ ಬೆಂಝಲ್ಕೊನಿಯಮ್ ಕ್ಲೋರೈಡ್ ಎಥಾನಲ್, ಹೈಡ್ರೋಜನ್ ಪೆರಾಕ್ಸೈಡ್ ಅಥವಾ ಸೋಡಿಯಂ ಹೈಪೋಕ್ಲೋರೈಟ್‍ಕ್ಕಿಂತ ಕಡಿಮೆ ಪರಿಣಾಮಕಾರಿ ಎಂಬುದನ್ನು 2020ರ ಫೆಬ್ರವರಿಯಲ್ಲಿ ಪ್ರಕಟವಾದ 22 ಅಧ್ಯಯನಗಳ ವಿಶ್ಲೇಷಣೆಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಕೆಲವರು ಬೇಬಿ ವೈಪ್ಸ್‍ಗಳಿಂದ ಕೈಗಳನ್ನು ಉಜ್ಜಿಕೊಂಡ್ರೆ ರೋಗಾಣುಗಳು ದೂರವಾಗುತ್ತವೆ ಎಂಬ ನಂಬಿಕೆ ಹೊಂದಿದ್ದಾರೆ. ಆದ್ರೆ ಇದು ಕೈ ತೊಳೆಯುವ ಅಥವಾ ಸ್ಯಾನಿಟೈಸರ್ ಮಾದರಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಏಕೆಂದ್ರೆ ಬೇಬಿ ವೈಪ್ಸ್‍ನಲ್ಲಿ ಆಲ್ಕೋಹಾಲೇ ಇಲ್ಲ. 

click me!