ಕ್ಯಾಲ್ಸಿಯಂ ಕೊರತೆ, ಕೈ, ತೋಳು, ಪಾದ ಕೀಲೂ ನೋವಿಗೂ ಕಾರಣವಾಗುತ್ತೆ

By Suvarna NewsFirst Published Sep 23, 2022, 2:25 PM IST
Highlights

ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಆಗೋ ಸಮಸ್ಯೆ ಒಂದೆರಡಲ್ಲ. ಗಂಟು ನೋವಿನಿಂದ ಹಿಡಿದು, ಕೈ, ಪಾದ, ತೋಳು ಎಲ್ಲವೂ ನೋವು ಶುರುವಾಗುತ್ತೆ. ಜೀವನವೇ ಸಾಕಪ್ಪಾ ಎನಿಸುವಷ್ಟು ಸತಾಯಿಸುತ್ತೆ. ಮೊದಲೇ ಎಚ್ಚೆತ್ತುಕೊಂಡರೆ ಸಮಸ್ಯೆಯಿಂದ ಮುಕ್ತರಾಗಬಹುದು.

ಮನುಷ್ಯನ ದೇಹದ ಬೆಳವಣಿಗೆಯಲ್ಲಿ ಕ್ಯಾಲ್ಸಿಯಂನ ಪಾತ್ರ ಪ್ರಮುಖವಾಗಿದ್ದು, ಶೇಕಡಾ 70ರಷ್ಟು ಮೂಳೆಗಳು ಕ್ಯಾಲ್ಸಿಯಂ, ಫಾಸ್ಫೇಟಿನಿಂದ ರೂಪಿತವಾಗಿದೆ. ಆದ್ದರಿಂದ ಮೂಳೆಗಳನ್ನು ಬಲವಾಗಿಡಲು ಕ್ಯಾಲ್ಸಿಯಂ ಸೇವನೆ ಬಹಳ ಮುಖ್ಯ. ಜೊತೆಗೆ ಕೂದಲು ಮತ್ತು ಉಗುರಿನ  ಪೋಷಣೆಗೂ ಇದು ಸಾಕಷ್ಟು ಪ್ರಯೋಜನಕಾರಿ. ಆದರೆ ಬದಲಾಗುತ್ತಿರುವ ಆಹಾರ ಪದ್ಧತಿ ಆರೋಗ್ಯಯುತ ಆಹಾರ ಜನರ ದೇಹವನ್ನು ಸೇರುತ್ತಿಲ್ಲ. ಜನರು ಹೆಚ್ಚು ಕ್ಯಾಲ್ಸಿಯಂ ಕೊರತೆಯನ್ನು ಎದುರಿಸುತ್ತಾರೆ. ಇದರಿಂದಾನೇ ಅಲ್ಲಿ, ಇಲ್ಲಿ ನೋವು ಅಂತ ವೈದ್ಯರನ್ನು ಎಡತಾಕೋದೂ ಹೆಚ್ಚಾಗಿದೆ. ಆ ಎಣ್ಣೆ, ಈ ಎಣ್ಣೆ ಅಂತ ಜಾಹೀರಾತಿಗೆ ಮರುಳಾಗಿ ಸುಖಾ ಸುಮ್ಮನೆ ದುಡ್ಡನ್ನೂ ಹಾಳು ಮಾಡಿಕೊಳ್ಳುತ್ತಾರೆ. ಅದು ಬಿಟ್ಟು ದೇಹಕ್ಕೆ ಅಗತ್ಯವಿರುವಷ್ಟು ಕ್ಯಾಲ್ಸಿಯಂ ಸೇರುವಂತೆ ನೋಡಿಕೊಂಡರೆ ಹಲವು ಸಮಸ್ಯೆಗಳಿಂದ ಮುಕ್ತರಾಗಬಹುದು.

1. ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುವ ಸಮಸ್ಯೆಗಳು..!

ಸ್ನಾಯು ನೋವು

ಕ್ಯಾಲ್ಸಿಯಂ ಕೊರತೆಯಿಂದ ನಮ್ಮಲ್ಲಿ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಅದರಲ್ಲಿ ಮುಖ್ಯವಾದದ್ದು ಸ್ನಾಯು ಸೆಳೆತ, ಇದು ಕ್ಯಾಲ್ಸಿಯಂ ಕೊರತೆ ಆರಂಭಿಕ ಲಕ್ಷಣ. ನಮ್ಮ ಕೈ-ಕಾಲುಗಳಲ್ಲಿ ನೋವು ಬರುತ್ತವೆ. ಕುಣಿತು, ಏಳುವಾಗ ಮೂಳೆಗಳು ವಿಪರೀತ ಎಳೆದಂತೆ ಆಗುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಕೆಲವೊಮ್ಮೆ ಕೈ (Hand), ತೋಳು, ಪಾದ (Foot), ಕಾಲು (Leg) ಮತ್ತು ಬಾಯಿಯ ಸುತ್ತ ಜೋಮು ಕೂಡ ಹಿಡಿಯುತ್ತದೆ.

Health Food: ಮಕ್ಕಳಿಗೆ ರಾಗಿ ನೀಡಿ, ಆರೋಗ್ಯ ಕಾಪಾಡಿ

ಚರ್ಮ, ಉಗುರು ಸಮಸ್ಯೆ, ಕೂದಲು ಉದುರುವಿಕೆ.

ಕ್ಯಾಲ್ಸಿಯಂ ಸಮಸ್ಯೆ ಚರ್ಮ ಮತ್ತು ಉಗುರುಗಳನ್ನೂ ಬಾಧಿಸುತ್ತದೆ. ಚರ್ಮ ಒಣಗಿದಂತಿದ್ದು, ಕೆರೆತ ಉಂಟಾಗಿ ಕಜ್ಜಿ ರೋವೂ ಶುರುವಾಗುತ್ತದೆ. ಇನ್ನು ಉಗುರುಗಳ ಬೆಳವಣಿಗೆ ಕುಂಠಿತವಾಗಿ, ಬಿಳಿ ಬಣ್ಣಕ್ಕೆ ತಿರುಗುತ್ತವೆ. ಜೊತೆಗೆ ಹಲ್ಲುಗಳಲ್ಲಿ ದುರ್ಬಲ ಬೇರು, ಅಸಹನೀಯತೆ ಉಂಟುಮಾಡುವ ಒಸಡು, ಶಿಥಿಲ ಹಲ್ಲು ಮತ್ತು ದಂತಕ್ಷಯದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗೂ ಕೂದಲು ಉದುರುವ (Hair Fall) ಸಮಸ್ಯೆ ಶುರುವಾಗುತ್ತದೆ.

2. ಕ್ಯಾಲ್ಸಿಯಂ ಕೊರತೆಗೆ ಪರಿಹಾರಗಳು

ಉತ್ತಮ ಆಹಾರ ಪದ್ಧತಿ

ಕ್ಯಾಲ್ಸಿಯಂ ಹೆಚ್ಚಿಸಲು ನಾವು ಮುಖ್ಯವಾಗಿ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ಸೇವಿಸಬೇಕು. ಅದರಲ್ಲಿ ಪ್ರಮುಖದದ್ದು ಸೋಯಾಬೀನ್. ಇದು ಸೋಯಾ ಹಾಲು ಸೇರಿ ಇತ್ಯಾದಿಗಳನ್ನು ಒಳಗೊಂಡಿದೆ. ಈ ಉತ್ಪನ್ನಗಳಲ್ಲಿ ವಿಟಮಿನ್ ಡಿ (Vitamin D) ಸಮೃದ್ಧವಾಗಿವೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಆಹಾರದಲ್ಲಿ ಹಸಿರು ಎಲೆ ತರಕಾರಿಗಳನ್ನು ಸೇರಿಸಿಕೊಳ್ಳಬಹುದು. ಪಾಲಕ್, ಎಲೆಕೋಸು, ಕೋಸುಗಡ್ಡೆ ಮತ್ತು ಲೆಟಿಸ್ ಇತ್ಯಾದಿಗಳನ್ನು ಒಳಗೊಂಡಿದೆ. ಈ ತರಕಾರಿಗಳು ಮೂಳೆಗಳ ರಚನೆಗೆ ಸಹಾಯ ಮಾಡುತ್ತವೆ. ಇದು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಅಲ್ಲಿ ನೋವು, ಇಲ್ಲಿ ನೋವು ಅಂತ ಸಿಕ್ಕಾಪಟ್ಟೆ ಕ್ಯಾಲ್ಸಿಯಂ ತಿಂತೀರಾ? ಹಾರ್ಟ್ ಅಟ್ಯಾಕ್ ಆಗ್ಬಹುದು ಜೋಕೆ !

ಹಾಲಿನ ಉತ್ಪನ್ನಗಳು (Milk Products), ಮೊಟ್ಟೆಗಳು
ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳಂತಹ (Dairy Products) ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇವು ಮೂಳೆಗಳನ್ನು ಗಟ್ಟಿಯಾಗಿಸುವ ಕೆಲಸ ಮಾಡುತ್ತವೆ. ಹಾಗೂ ಮೊಟ್ಟೆಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಮೊಟ್ಟೆಗಳು (Eggs) ಮೂಳೆಗಳನ್ನು ಬಲಪಡಿಸಲು ಕೆಲಸ ಮಾಡುತ್ತವೆ.

ಹಣ್ಣುಗಳು (Fruits)
ಕೆಲವು ಹಣ್ಣುಗಳಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುತ್ತದೆ. ಕಿತ್ತಳೆ (Orange), ಅನಾನಸ್, ಬಾಳೆಹಣ್ಣು (Banana), ಆವಕಾಡೊ, ಕಿವಿ, ಅಂಜೂರ ಹಣ್ಣುಗಳು, ಖರ್ಜೂರ ಮತ್ತು ಹಿಪ್ಪುನೇರಳೆ ಮುಂತಾದ ಹಣ್ಣುಗಳನ್ನು ಸೇವಿಸಬಹುದು.

ಒಟ್ಟಿನಲ್ಲಿ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗಲು ಕೃತಕ ಸಪ್ಲಿಮೆಂಟ್ಸ್ (Artificial Supplements) ತೆಗೆದುಕೊಳ್ಳುವ ಬದಲು, ಕ್ಯಾಲ್ಸಿಯಂ ಹೆಚ್ಚಿರುವ ಆಹಾರವನ್ನು ಅಗತ್ಯದಷ್ಟು ತಿಂದರೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನೋವಿನಿಂದ ಮುಕ್ತರಾಗಬಹುದು.

 

 

click me!