ಬಿಳಿ ಅಕ್ಕಿ ಅಥವಾ ಸೋನಾ ಮಸ್ಸೂರಿಯನ್ನು ನಾವು ಅದರ ರುಚಿಗಾಗಿಯೇ ಬಳಸುತ್ತೇವೆ ಹೊರತು ಅದರಲ್ಲಿ ಪೌಷ್ಟಿಕಾಂಶಗು ಹೆಚ್ಚೇನೂ ಇಲ್ಲ. ಹಾಗಿದ್ದರೆ ನಿಮ್ಮ ದೇಹದ ಕ್ಯಾಲೊರಿ ಕಂಟ್ರೋಲ್‌ನಲ್ಲಿ ಇಡಲು ಯಾವುದು ಸಹಕಾರಿ? ಬನ್ನಿ ತಿಳಿಯೋಣ.
ಅಕ್ಕಿ- ಸಾಮಾನ್ಯವಾಗಿ ಸೋನಾ ಮಸ್ಸೂರಿ ರೈಸ್ ದಕ್ಷಿಣ ಭಾರತೀಯರು ದಿನದಲ್ಲಿ ಮೂರು ಬಾರಿ ಸೇವಿಸುವ ಆಹಾರ. ಬೆಳಗ್ಗೆಯೂ ರೈಸ್ ಬಾತ್, ಇಡ್ಲಿ ವಡಾ ಎಂದು ಅದೇ ರೈಸ್. ಮಧ್ಯಾಹ್ನವೂ ಅನ್ನ ಸಾಂಬಾರ್ ಎಂದು ಅದೇ ರೈಸ್. ರಾತ್ರಿಯೂ ಚಪಾತಿ ಅನ್ನ ಪಲ್ಯ ಎಂದು ಅದೇ ರೈಸ್. ಆದರೆ ಅಕ್ಕಿಯಲ್ಲಿ ಇರುವುದು ಕಾರ್ಬೊಹೈಡ್ರೇಟ್. ಹೆಚ್ಚು ಅನ್ನ ಊಟ ಮಾಡಿದರೆ ದೇಹದಲ್ಲಿ ಕೊಬ್ಬು ಉಂಟಾಗಿ ತೂಕ ಹೆಚ್ಚಾಗುತ್ತದೆ ಎಂಬುದು ಅನ್ನ ಸೇವಿಸುವವರ ಸಮಸ್ಯೆ. ಹೀಗಾಗಿ ಅನ್ನವನ್ನು ಜೋಳ, ಗೋಧಿ, ರಾಗಿ ಇತ್ಯಾದಿ ಧಾನ್ಯಗಳಿಂದ ಸ್ಥಾನಪಲ್ಲಟ ಮಾಡುತ್ತಾರೆ. ಆದರೆ ಅನ್ನದ ಬದಲಿಗೆ ಯಾವುದೇ ಇತರ ಆಹಾರವನ್ನು ಸೇವಿಸಿದರೂ ಅನ್ನ ನೀಡುವ ತೃಪ್ತಿ ಹಾಗೂ ರುಚಿಯನ್ನು ಇನ್ನಾವುದೇ ಆಹಾರ ನೀಡಲು ಸಾಧ್ಯವಿಲ್ಲ. ಅನ್ನಕ್ಕೆ ಅನ್ನವೇ ಸಾಟಿ.
ಹಾಗಿದ್ದರೆ, ನಿಮಗೆ ಅನ್ನವನ್ನೂ ಊಟ ಮಾಡಬೇಕು, ಆದರೆ ದೇಹದಲ್ಲಿ ಕ್ಯಾಲೊರಿಯೂ ಹೆಚ್ಚಾಗಬಾರದು, ಕೊಬ್ಬು ತುಂಬಬಾರದು ಎಂದಿದ್ದರೆ ಏನು ಮಾಡಬೇಕು? ಆಗ ನೀವು ಬಿಳಿ ಅನ್ನದ ಬದಲಿಗೆ ಕುಚ್ಚಲಕ್ಕಿಯನ್ನು ಆಯ್ಕೆಮಾಡಬಹುದು. ಇದನ್ನು ಬ್ರೌನ್ ರೈಸ್, ಕೆಂಪಕ್ಕಿ ಎಂದೂ ಕರೆಯುತ್ತಾರೆ. ಬೇರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಹೆಚ್ಚು ಸಮಯ ತಗಲುತ್ತದೆ. ಚೆನ್ನಾಗಿ ಅಗಿದು ನುಂಗಬೇಕಾಗುತ್ತದೆ. ಕುಚ್ಚಲಕ್ಕಿಯನ್ನೇ ಹೋಲುವ ಬ್ರೌನ್ ರೈಸ್‌ನಲ್ಲಿ ಜೀವಾಂಕುರ ಪದರ, ಹೊಟ್ಟು, ಪಾರ್ಶ್ವ ಸಿಪ್ಪೆ ಹಾಗೆಯೇ ಇರುತ್ತದೆ. ಬ್ರೌನ್ ರೈಸ್ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಡಯಾಬಿಟಿಸ್ ದೂರ
ಕುಚ್ಚಲಕ್ಕಿ ಗೈಸಮಿಕ್ ಇಂಡೆಕ್ಸ್ (ಜಿಐ) ಅನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದಿಲ್ಲ. ದಿನಕ್ಕೆ ಎರಡು ಅಥವಾ ಮೂರು ಬಾರಿ ಈ ಅಕ್ಕಿಯಿಂದ ಮಾಡಿದ ಅನ್ನ ಸೇವನೆ ಮಾಡುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು 32%ನಷ್ಟು ಕಡಿಮೆ ಮಾಡಬಹುದಾಗಿದೆ. ಬಿಳಿ ಅನ್ನದಿಂದ ಮಧುಮೇಹದ ಅಪಾಯ 17%ರಷ್ಟು ಹೆಚ್ಚು ಎಂದು ಅಧ್ಯಯನಗಳು ತಿಳಿಸಿವೆ.
ಹೃದಯದ ಆರೋಗ್ಯ
ಕುಚ್ಚಲಕ್ಕಿ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿ ಡಯೆಟರಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಹೃದಯ ಕಾಯಿಲೆಯಿಂದ ಮರಣ ಹೊಂದುವ ಅಪಾಯ ಕೂಡ ಕಡಿಮೆ. ಬ್ರೌನ್ ರೈಸ್‌ನಲ್ಲಿ ಹೆಚ್ಚು ಪ್ರಮಾಣದ ಮೆಗ್ನೇಶಿಯಂ ಇದ್ದು ಇದರಿಂದ ಪಾರ್ಶ್ವವಾಯು ಹಾಗೂ ಹೃದಯ ಕಾಯಿಲೆಗೆ ಒಳಗಾಗುವ ಅಪಾಯ ತುಂಬಾ ಕಡಿಮೆ.
ಬೊಜ್ಜು ನಿವಾರಣೆಗೆ
ತೂಕ ಇಳಿಸುವ ಇಚ್ಛೆ ನಿಮ್ಮಲ್ಲಿ ಬಲವಾಗಿದ್ದು ಹಲವಾರು ಪ್ರಯತ್ನಗಳನ್ನು ಮಾಡಿಯೂ ವಿಫಲರಾಗಿದ್ದೀರಿ ಎಂದಾದಲ್ಲಿ ಒಮ್ಮೆ ಕುಚ್ಚಲಕ್ಕಿ ಸೇವಿಸಿ ನೋಡಿ. ಇದು ಕಡಿಮೆ ಪ್ರಮಾಣದಲ್ಲಿ ನಿಮಗೆ ಹೆಚ್ಚಿನ ಹೊಟ್ಟೆ ತುಂಬಿದ ಸಂತೃಪ್ತಿಯನ್ನು ಕೊಡುತ್ತದೆ. ಹೆಚ್ಚಿನ ಪ್ರಮಾಣದಲ್ಲೂ ಕಡಿಮೆ ಕ್ಯಾಲೊರಿಯನ್ನೇ ನೀಡುತ್ತದೆ. ದೇಹದ ಬೊಜ್ಜನ್ನು ಕಡಿಮೆ ಮಾಡಲು ಹೀಗೆ ಅದು ಸಹಕಾರಿಯಾಗಿದೆ.
ಸಂತಾನಶಕ್ತಿಗೆ ರಹದಾರಿ
ಕುಚ್ಚಲಕ್ಕಿಯಲ್ಲಿ ಸಾಕಷ್ಟು ಮ್ಯಾಂಗನೀಸ್ ಅಂಶವಿದೆ. ಇದು ದೇಹದಲ್ಲಿ ಕೊಬ್ಬು ಸಂಗ್ರಹಣೆಯಾಗದಂತೆ ಮಾಡುತ್ತದೆ. ದೇಹ ಚುರುಕಾಗಿರುತ್ತದೆ. ಸಂತಾನೋತ್ಪತ್ತಿ ವ್ಯೂಹದ ಚೋದಕಗಳನ್ನು ಮ್ಯಾಂಗನೀಸ್ ಪ್ರಚೋದಿಸುತ್ತದೆ. ಹೀಗೆ ಅದು ಸಂತಾನೋತ್ಪತ್ತಿ ಶಕ್ತಿಗೂ ಪೂರಕವಾಗಿದೆ.
ಜೀರ್ಣಕ್ರಿಯೆ ಸುಲಭ
ಜೀರ್ಣಕ್ರಿಯೆಗೆ ಸಹಕಾರಿಯಾಗುವಂಥದ್ದು ನಾರಿನಂಶ. ಕುಚ್ಚಲಕ್ಕಿಯಲ್ಲಿ ಸಾಕಷ್ಟು ನಾರಿನಂಶವಿದೆ. ಇದು ನಿಮ್ಮ ಜೀರ್ಣವ್ಯವಸ್ಥೆಯನ್ನು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಅಜೀರ್ಣ ಉಂಟಾಗದಂತೆ ತಡೆಯುತ್ತದೆ.
ಕ್ಯಾನ್ಸರ್ ಶಮನಕಾರಿ
ಬ್ರೌನ್ ರೈಸ್‌ನಲ್ಲಿ ನಾರಿನಂಶ ಹಾಗೂ ಆಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಸ್ತನ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳನ್ನು ಬುಡದಲ್ಲೇ ಚಿವುಟಿ ಹಾಕುತ್ತವೆ. ಸದಾ ಕುಚ್ಚಲಕ್ಕಿಯನ್ನೇ ಸೇವಿಸುವ ಕರಾವಳಿಯ ಜನ, ತುಂಬಾ ಆರೋಗ್ಯವಂತರಾಗಿ ಇರುವುದನ್ನು ನಾವು ಕಾಣಬಹುದು.
ಇದರ ಜೊತೆಗೆ ಸಾಕಷ್ಟು ತರಕಾರಿಯನ್ನು ಸೇವಿಸಬೇಕು. ಮದ್ಯಾಹ್ನದ ಊಟಕ್ಕೆ ಒಂದು ಬೌಲ್ ಅನ್ನ ಸೇವಿಸಿದರೆ, ಒಂದು ಬೌಲ್‌ನಷ್ಟು ತರಕಾರಿ ಸೇವಿಸುವುದು ಸರಿಯಾದ ಪ್ರಮಾಣ. ಅಂದರೆ ನೀವು ಅಕ್ಕಿ ಸೇವಿಸುವಷ್ಟೇ ತರಕಾರಿಯನ್ನೂ ಸೇವಿಸಿದರೆ ಪ್ರೊಟೀನ್ ಕೂಡ ನಿಮ್ಮ ದೇಹಕ್ಕೆ ಸಾಕಷ್ಟು ಪೂರೈಕೆಯಾಗುತ್ತದೆ, ಇನ್ನಷ್ಟು ಕಾರ್ಬೊಹೈಡ್ರೇಟ್ ಬೇಕೆಂಬ ದೇಹದ ಬೇಡಿಕೆಯನ್ನು ಈ ಪ್ರೊಟೀನ್ ತಡೆಗಟ್ಟುತ್ತದೆ.
ತೂಕ ಹೆಚ್ಚೋ ಭಯ ಬೇಡ... ಕಡಿಮೆ ಕ್ಯಾಲರಿ ಇರೋ ಈ ಸ್ವೀಟ್ಸ್ ಟ್ರೈ ಮಾಡಿ ನೋಡಿ..