ಕೋಪ ಬರ್ತಿದ್ಯಾ? ಹೀಗೆ ಕಂಟ್ರೋಲ್‌ ಮಾಡ್ಕೊಳಿ

Published : Jul 25, 2022, 05:08 PM IST
ಕೋಪ ಬರ್ತಿದ್ಯಾ? ಹೀಗೆ ಕಂಟ್ರೋಲ್‌ ಮಾಡ್ಕೊಳಿ

ಸಾರಾಂಶ

ಕೋಪ ಎಲ್ಲರಿಗೂ ಬರುತ್ತದೆ. ಅದನ್ನು ನಿಭಾಯಿಸುವುದರಲ್ಲಿ, ನಿಯಂತ್ರಣಕ್ಕೆ ತೆಗೆದುಕೊಂಡು ವರ್ತಿಸುವುದರಲ್ಲಿ ಮನುಷ್ಯನ ಚಾಣಾಕ್ಷತೆ ಅಡಗಿದೆ. ಕೋಪದ ನಿಯಂತ್ರಣಕ್ಕೆ ಏನೆಲ್ಲ ಮಾಡ್ಬೋದು ನೋಡಿಕೊಳ್ಳಿ. 

ಕೋಪ ಮನುಷ್ಯನ ಮೂಲ ಪ್ರಕೃತಿಯಲ್ಲೇ ಅಡಗಿರುವ ಗುಣ. ಆದರೆ, ಕೋಪ ಹೆಚ್ಚಾದರೆ ಹಾನಿಯೇ ಹೆಚ್ಚು. ಹೀಗಾಗಿ, ಅದರ ಆರಂಭವನ್ನು ಗುರುತಿಸಿ ಚಿಗುರಿನಲ್ಲಿಯೇ ಚಿವುಟಲು ಯತ್ನಿಸಬೇಕಾಗುತ್ತದೆ. ಸಣ್ಣದೊಂದು ಕಿರಿಕಿರಿಯಿಂದ ಆರಂಭವಾಗುವ ಕೋಪ ಕೊನೆಗೆ ಅಪಾಯಕಾರಿ ಮಟ್ಟದಲ್ಲಿ ಏರಬಹುದು. ಕೋಪವನ್ನು ನಕಾರಾತ್ಮಕ ಭಾವನೆ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ, ಕೋಪ ನಿಯಂತ್ರಿಸಿಕೊಳ್ಳುವುದಕ್ಕೆ ಭಾರೀ ಮಹತ್ವ ಇದೆ. ಹೇಗೆ ಕೋಪವನ್ನು ವ್ಯಕ್ತಪಡಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಸ್ವಭಾವವೂ ನಿರ್ಧರಿತವಾಗುತ್ತದೆ. ಕೋಪವನ್ನು ನಿಯಮಿತವಾಗಿ ಮಾನಿಟರ್‌ ಮಾಡಬೇಕು. ಆಗಾಗ ಕೋಪ ಬಂದು ಎಗರಾಡುವವರು ಅದನ್ನು ನಿಯಂತ್ರಿಸಿಕೊಳ್ಳಲು ಹಲವು ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಭಾವನೆಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಆಗಲೇ ಬದುಕಿನಲ್ಲೂ, ವರ್ತನೆಯಲ್ಲೂ ಬದಲಾವಣೆ ಸಾಧ್ಯವಾಗುತ್ತದೆ. ಕೋಪದ ನಿಯಂತ್ರಣ ಹಾಗೂ ತಡೆಗೆ ಅನೇಕ ತಂತ್ರಗಳನ್ನು ಅನುಸರಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಮಾನಸಿಕ ತರಬೇತಿ ನೀಡುವುದು, ಉತ್ತಮ ನಿದ್ರೆ, ಧ್ಯಾನ-ಪ್ರಾಣಾಯಾಮ ಮಾಡುವುದರಿಂದ ಹಿಡಿದು, ಅನೇಕ ರೀತಿಯ ಮಾರ್ಗಗಳನ್ನು ಈ ನಿಟ್ಟಿನಲ್ಲಿ ಅನುಸರಿಸಬಹುದು. ಇದಕ್ಕಾಗಿ, ಮೊಟ್ಟಮೊದಲನೆಯದಾಗಿ ನೀವು ಪ್ರತಿಕ್ರಿಯೆ ನೀಡುವುದಕ್ಕೂ ಪ್ರತಿಸ್ಪಂದಿಸುವುದಕ್ಕೂ ಇರುವ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. 

ಏನಿದು ಪ್ರತಿಸ್ಪಂದನೆ ಮತ್ತು ಪ್ರತಿಕ್ರಿಯೆ?
ಪ್ರತಿಕ್ರಿಯೆ (React) ನೀಡುವುದೆಂದರೆ ಮತ್ತೊಬ್ಬರ ಮಾತು ಅಥವಾ ವರ್ತನೆಗೆ ತಕ್ಷಣ ತಿರುಗಿ ಏನಾದರೂ ಹೇಳುವುದು ಅಥವಾ ಮಾಡುವುದು. ಆದರೆ, ಪ್ರತಿಸ್ಪಂದನೆ (Respond) ಎಂದರೆ ಕ್ಷಣಕಾಲ, ನಿಧಾನವಾಗಿ ಯೋಚಿಸಿ ವರ್ತಿಸುವುದು. ಪ್ರತಿಕ್ರಿಯೆ ತಕ್ಷಣಕ್ಕೆ ನಮ್ಮಿಂದ ಹೊರಡುವ ಕ್ರಿಯೆ. ಪ್ರತಿಸ್ಪಂದನೆ ನಾವು ಬುದ್ಧಿಬಲವನ್ನು (Mind) ಉಪಯೋಗಿಸಿ ಮಾಡುವ ಕ್ರಿಯೆ. ಹೀಗಾಗಿ, ಯಾವುದೇ ವಿಚಾರಕ್ಕೆ ಪ್ರತಿಸ್ಪಂದನೆ ಬೇಕೇ ಹೊರತು, ಪ್ರತಿಕ್ರಿಯೆ ಬೇಡ. ಪ್ರತಿಸ್ಪಂದಿಸುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಮೇಲೆ ನಿಮಗೆ ಭಾರೀ ನಿಯಂತ್ರಣ (Control) ದೊರೆತ ಅನುಭವ ಆಗುತ್ತದೆ. ಆಗ ನಿಮ್ಮಲ್ಲಿ ಕೋಪಕ್ಕೆ ಜಾಗ ಇರುವುದಿಲ್ಲ. ಹೆಚ್ಚಿನ ಉದ್ವೇಗವೂ ಆಗುವುದಿಲ್ಲ.

ಕೋವಿಡ್ ಎಫೆಕ್ಟ್: ಶಾಲಾ ಮಕ್ಕಳಲ್ಲಿ ಹೆಚ್ಚಾಗಿದೆ ಕೋಪ

•    ವಿಷುವಲೈಸೇಷನ್‌ (Visualisation)
ಕೋಪದ ಸನ್ನಿವೇಶಗಳನ್ನು ವಿಷುವಲೈಸೇಷನ್‌ ಮಾಡಿಕೊಳ್ಳುವ ಮೂಲಕ ಹತ್ತಿಕ್ಕಬಹುದು. ಇದೊಂಥರ ಮನಸ್ಸಿಗೆ ತರಬೇತಿ (Training) ನೀಡಿದಂತೆ. ಕೋಪಕ್ಕೆ ಕಾರಣವಾಗುವ ಸನ್ನಿವೇಶಗಳನ್ನು ಒಂದೆಡೆ ಬರೆದುಕೊಳ್ಳಿ. ಸಾಕಷ್ಟು ವಿವರವಾಗಿ ಬರೆದುಕೊಂಡರೆ ಅನುಕೂಲ. ವಿವರಣೆ ಮಾಡಿ ಬರೆಯುವುದರಿಂದ ಕೋಪದ ಭಾವನೆ (Feel) ಯಾಕಾಗಿ ಬರುತ್ತದೆ ಎನ್ನುವ ಅರಿವು ಮೂಡಲು ಸಮಯ ದೊರೆಯುತ್ತದೆ. ಆಗ ಅಲ್ಲಿ ಹೆಚ್ಚು ಸ್ಪಷ್ಟನೆಯೂ ಬರುತ್ತದೆ. ಮೊದಲು, ಕಡಿಮೆ ಕೋಪ ಉಂಟುಮಾಡುವ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳಿ. ಬಳಿಕ, ಹೆಚ್ಚು ಕೋಪಕ್ಕೆ ಕಾರಣವಾಗುವ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಬರೆಯಿರಿ. ಬರೆಯುತ್ತ ಬರೆಯುತ್ತ ನಿಮಗೇ ಸ್ಪಷ್ಟತೆ ದೊರೆಯುತ್ತದೆ.

•    ಹಠಮಾರಿ (Aggressive) ಧೋರಣೆಗಿಂತ ವಿಶ್ವಾಸಾರ್ಹ (Assertive) ದೃಢತೆ ಇರಲಿ
ವಿಶ್ವಾಸಾರ್ಹ ವರ್ತನೆಯಿಂದ ಕೋಪ ಕಡಿಮೆ ಆಗುತ್ತದೆ. ಏಕೆಂದರೆ, ಇಲ್ಲಿ ನೇರವಾದ (Strait Forward) ಭಾವನೆಗೆ ಅವಕಾಶ ದೊರೆಯುತ್ತದೆ. ವಿಶ್ವಾಸಾರ್ಹವಾಗಿ ನಡೆದುಕೊಳ್ಳುವುದರಿಂದ ಬೈಯುವ (Abusive) ಮತ್ತು ಕೆಟ್ಟ ಮಾತುಗಳನ್ನಾಡುವ ಸನ್ನಿವೇಶದಿಂದ ದೂರವಿರಲು ಸಾಧ್ಯ. ಆದರೆ, ಹಠಮಾರಿ ಧೋರಣೆ ತಳೆದರೆ ಕೋಪವೇ ಹೆಚ್ಚು. ನಿಮ್ಮ ಕೋಪದ ಬಗ್ಗೆ ಅರಿವಿದ್ದುಕೊಂಡು ವರ್ತಿಸುವುದನ್ನು ಅಭ್ಯಾಸ ಮಾಡಿಕೊಂಡರೆ ವಿಶ್ವಾಸಾರ್ಹ ನಡತೆಗೆ ಅವಕಾಶವಾಗುತ್ತದೆ. 

ನಂದೆ ಸಿಟ್ಟು ತಡೆಯಲಾಗೋಲ್ಲ ಅನ್ನೋರು ಇದನ್ನೋದಿ

•    ಧ್ಯಾನ (Meditation) ಮಾಡಿ, ಪ್ರಾರ್ಥನೆಯಲ್ಲಿ (Prayer) ತೊಡಗಿಸಿಕೊಳ್ಳಿ
ಆಳವಾದ ಉಸಿರಾಟದ ವ್ಯಾಯಾಮಗಳನ್ನು (Deep Breathing Exercise) ಮಾಡಿ. ಧ್ಯಾನದಿಂದ ಮನಸ್ಸು ಸಕ್ರಿಯವಾಗುತ್ತದೆ ಹಾಗೆಯೇ ಶಾಂತವಾಗುತ್ತದೆ. ಮಾಂಸಖಂಡಗಳಿಗೆ ರಿಲ್ಯಾಕ್ಸ್‌ (Relax) ದೊರೆಯುತ್ತದೆ. ಈ ಎಲ್ಲ ಕ್ರಿಯೆಗಳನ್ನು ನಡೆಸುವುದರಿಂದ ನಿಮ್ಮ ದೇಹದಲ್ಲಾಗುವ ಬದಲಾವಣೆಗಳನ್ನು ಗುರುತಿಸಿ. ಕೋಪ ಬಂದಾಗ ದೇಹದಲ್ಲಾಗುವ ಬದಲಾವಣೆ (Change) ಗುರುತಿಸಿ. ಇವೆರಡರ ವ್ಯತ್ಯಾಸದಿಂದ ನಿಮಗೇ ಯಾವುದು ಉತ್ತಮ ಎನ್ನುವ ಅರಿವಾಗುತ್ತದೆ. ಮನಸ್ಸು, ದೇಹಗಳ ಶುದ್ಧಿಗೆ ಯೋಗವು ಅತ್ಯುತ್ತಮ ಸಾಧನ ಎನ್ನುವುದು ಸಾಬೀತಾಗಿರುವಂಥದ್ದು. ಒತ್ತಡ ನಿವಾರಣೆಗೂ ಯೋಗ ಸಹಕಾರಿ. ಹೀಗಾಗಿ, ಅದನ್ನು ದೈನಂದಿನ ಭಾಗವಾಗಿಸಿಕೊಳ್ಳಿ.

•    ದೈಹಿಕ ಚಟುವಟಿಕೆ (Physical Activity), ನಿದ್ರೆ (Sleep)
ಬಿರುಸಿನ ನಡಿಗೆ, ಜಾಗಿಂಗ್‌, ವಾರಕ್ಕೆ ನಾಲ್ಕು ದಿನವಾದರೂ 30 ನಿಮಿಷಗಳ ವ್ಯಾಯಾಮ ಅಗತ್ಯ. ಉತ್ತಮ ನಿದ್ರೆಯಿಂದ ಒತ್ತಡ (Stress) ಕಡಿಮೆ ಆಗಿ ಮಿದುಳಿಗೆ ಸ್ನಾನವಾದಂತೆ ಆಗುತ್ತದೆ. ಕೋಪದ ನಿಯಂತ್ರಣಕ್ಕೆ ಇವೆಡರೂ ಮುಖ್ಯ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲದಲ್ಲಿ ಡಯಾಬಿಟಿಸ್ ರೋಗಿಗಳು ಈ ಸಣ್ಣ ಬಿರುಕನ್ನ ನಿರ್ಲಕ್ಷಿಸಿದರೂ ಕಾಲನ್ನೇ ಕತ್ತರಿಸಬೇಕಾಗಬಹುದು!
ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?