ನಗು ನೂರಾರು ರೋಗದಿಂದ ನಮ್ಮನ್ನು ರಕ್ಷಿಸುತ್ತದೆ. ಮನಸ್ಸಿನಿಂದ ಬರುವ ನಗು, ಸಂತೋಷದ ಜೊತೆ ಆರೋಗ್ಯ ವೃದ್ಧಿಸುತ್ತದೆ. ಈಗಿನ ದಿನಗಳಲ್ಲಿ ನಗು ಅಪರೂಪವಾಗಿದೆ. ಅನವಶ್ಯಕ ಒತ್ತಡ, ಸಂತೋಷನ್ನು ಕಸಿದುಕೊಂಡಿದೆ.
ಮನುಷ್ಯ ಅಂದ್ಮೇಲೆ ಸಮಸ್ಯೆ ಇದ್ದಿದ್ದೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ, ಚಿಂತೆ ಇರುತ್ತದೆ. ಮಕ್ಕಳಿಗೆ ಓದು, ಪರೀಕ್ಷೆ ಚಿಂತೆಯಾದ್ರೆ ದೊಡ್ಡವರಿಗೆ ನೌಕರಿ, ಹಣಕಾಸಿನ ಚಿಂತೆ. ಇನ್ನು ಗೃಹಿಣಿಯರಿಗೆ ಸಂಸಾರದ ಚಿಂತೆ. ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆ ಕಾಡುತ್ತದೆ. ಒಬ್ಬರಿಗೆ ಸಮಸ್ಯೆಯಾಗಿರುವ ವಿಷ್ಯ ಇನ್ನೊಬ್ಬರಿಗೆ ಸಮಸ್ಯೆ ಎನ್ನಿಸದೆ ಇರಬಹುದು. ಪ್ರತಿಯೊಬ್ಬರು ನೋಡುವ ದೃಷ್ಟಿಯೂ ಭಿನ್ನವಾಗಿರುತ್ತದೆ. ಚಿಂತೆ ಬಗ್ಗೆ ಚಿಂತಿಸುತ್ತಾ ಕೂತ್ರೆ ಆರೋಗ್ಯ ಹಾಳಾಗುತ್ತದೆ. ಸದಾ ಸಂತೋಷವಾಗಿರುವ ವ್ಯಕ್ತಿ ಬೇರೆಯವರ ಜೊತೆ ಉತ್ತಮ ಸಂಬಂಧ ಹೊಂದಿರುತ್ತಾನೆ. ಹಾಗೆ ಆತನ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಎಂದು ಅನೇಕ ಸಂಶೋಧನೆಗಳು ಕೂಡ ಹೇಳಿವೆ.
ಸದಾ ಖುಷಿಯಾಗಿರಬೇಕು, ಚಿಂತೆ ಇದ್ರೂ ಇಲ್ಲದಂತೆ ಬದುಕಬೇಕು, ಆರೋಗ್ಯ (Health) ಕಾಪಾಡಿಕೊಳ್ಳಬೇಕು ಎನ್ನುವವರು ಕೆಲವೊಂದು ಟಿಪ್ಸ್ (Tips) ಫಾಲೋ ಮಾಡ್ಬೇಕು. ನಾವಿಂದು ಯಾವ ಕೆಲಸ ಮಾಡಿದ್ರೆ ನಿಮ್ಮ ಮುಖದಲ್ಲಿ ನಗುವಿರುತ್ತೆ ಎಂಬುದನ್ನು ಹೇಳ್ತೆವೆ.
undefined
ಚಿಂತೆ ಚಿತೆಗೆ ದಾರಿ : ಇಂದು ದೊಡ್ಡದು ಎನ್ನಿಸಿದ ಸಮಸ್ಯೆ ನಾಳೆ ಚಿಕ್ಕದಾಗಿ ಕಾಣುತ್ತದೆ. ಕೆಟ್ಟ ಸಂದರ್ಭ ಎದುರಿಗೆ ಬಂದಾಗ ಭಯ (Fear) ಪಡುವ ಅಗತ್ಯವಿಲ್ಲ. ಅಧ್ಯಯನ, ಪರೀಕ್ಷೆ, ಮಕ್ಕಳನ್ನು ಬೆಳೆಸುವುದು, ಉದ್ಯೋಗ ಮತ್ತು ಕೌಟುಂಬಿಕ ವಾತಾವರಣ ಹೀಗೆ ಹಲವಾರು ಕಾರಣಗಳಿಗೆ ನಾವು ಆಗಾಗ್ಗೆ ಉದ್ವೇಗಕ್ಕೆ ಒಳಗಾಗುತ್ತೇವೆ. ಅನಗತ್ಯ ಭಯ ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ಟೆನ್ಷನ್ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಆಗಿದ್ದು ಆಗಲಿ ಎಂದು ಧೈರ್ಯವಾಗಿ ಎದುರಿಸುವ ಗುಣ ಬೆಳೆಸಿಕೊಳ್ಳಬೇಕು. ಟೆನ್ಷನ್ ದೂರವಾದ್ರೆ ತಾನಾಗಿಯೇ ನಗು ಮುಖದ ಮೇಲೆ ಮೂಡುತ್ತದೆ.
ನೀವೂ ಮಕ್ಕಳಾಗಿ : ನನ್ನದೊಂದೇ ದೊಡ್ಡ ಸಮಸ್ಯೆ ಎನ್ನುವ ರೀತಿಯಲ್ಲಿ ಇಡೀ ದಿನ ಗಂಟು ಮುಖ ಹಾಕಿಕೊಂಡು ಇರೋರಿದ್ದಾರೆ. ಆದ್ರೆ ಇದ್ರಿಂದ ಪ್ರಯೋಜವಿಲ್ಲ. ನೀವು ಮಕ್ಕಳಾಗ್ಬೇಕು. ಸಣ್ಣ ವಿಷ್ಯವನ್ನೂ ಎಂಜಾಯ್ ಮಾಡ್ಬೇಕು. ಪುಟ್ಟ ಪುಟ್ಟ ವಿಷ್ಯದಲ್ಲಿ ನಗುವನ್ನು ಹುಡುಕಬೇಕು. ಟೆನ್ಷನ್ ಆದ ತಕ್ಷಣ ಮನಸ್ಸನ್ನು ಸಕಾರಾತ್ಮಕ ಚಿಂತನೆಗೆ ಎಳೆದು ತರಬೇಕು. ನಮ್ಮ ಸುತ್ತಲಿರುವ ಜನರು, ಕುಟುಂಬಸ್ಥರು, ಸ್ನೇಹಿತರ ಖುಷಿಯಲ್ಲಿ ನೀವು ಪಾಲ್ಗೊಳ್ಳಬೇಕು.
ಈ ಕ್ಷಣ ಅನುಭವಿಸಿ : ನಿನ್ನೆ ಆಗಿದ್ದು, ನಾಳೆ ಆಗೋದರ ಬಗ್ಗೆ ಚಿಂತಿಸಿದ್ರೆ ಸಂತೋಷ ಎಂದಿಗೂ ಸಿಗಲು ಸಾಧ್ಯವಿಲ್ಲ. ಆಗಿದ್ದು ಆಗಿ ಹೋಗಿದೆ, ಆಗ ಬೇಕಾಗಿದ್ದು ಆಗಿಯೇ ಆಗುತ್ತೆ. ಹಾಗಿರುವಾಗ ಈ ಕ್ಷಣವನ್ನು ಏಕೆ ವ್ಯರ್ಥ ಮಾಡಿಕೊಳ್ತಿರಿ. ನನಗೆ ಇದು ಕೊನೆ ದಿನ ಎನ್ನುವ ರೀತಿಯಲ್ಲಿ ಆ ದಿನವನ್ನು ಎಂಜಾಯ್ ಮಾಡಿ.
ನಿಮಗಿಂತ ಕಷ್ಟದಲ್ಲಿರುವವರನ್ನು ನೋಡಿ ಕಲಿ : ನಮಗಿಂತ ಮೇಲಿನವರನ್ನು ನೋಡಿ ಮರಗುವ ಬದಲು ನಿಮಗಿಂತ ಕೆಳಗಿರುವವರನ್ನು ನೋಡಿ ಸಮಾಧಾನ ಪಟ್ಟುಕೊಳ್ಳಿ. ನಿಮಗಿಂತ ಕಷ್ಟದಲ್ಲಿ ಸಾಕಷ್ಟು ಜನರಿರುತ್ತಾರೆ. ಅವರಿಗಿಂತ ನೀವು ಅದೃಷ್ಟವಂತರು ಎಂದುಕೊಂಡು ಸಂತೋಷದಿಂದ ಸಮಯ ಕಳೆಯಲು ಪ್ರಯತ್ನಿಸಿ.
ನಿಮ್ಮ ನಿದ್ರೆ ಹಾಳು ಮಾಡೋ ಆಹಾರಗಳಿವು, ರಾತ್ರಿ ಇವುಗಳಿಂದ ದೂರವಿರಿ!
ಖುಷಿಯ ಹುಡುಕಾಟ : ಅನೇಕ ಬಾರಿ ನೀರಸ ಜೀವನ ನಿಮ್ಮ ಖುಷಿಯನ್ನು ಕಸಿದುಕೊಂಡಿರುತ್ತದೆ. ಖುಷಿ ಎಂದೂ ನಿಮ್ಮ ಬಳಿ ಬರೋದಿಲ್ಲ. ನೀವು ಸಂತೋಷವನ್ನು ಅರಸಿ ಹೋಗಬೇಕು. ನಿಮಗೆ ಎಲ್ಲಿ ಖುಷಿ ಸಿಗುತ್ತದೆ ಎಂಬುದನ್ನು ಪತ್ತೆ ಮಾಡಿ ಅಲ್ಲಿಗೆ ನೀವೇ ಹೋಗಬೇಕು. ನೃತ್ಯ, ಹಾಡು, ಓದು, ಆಟ ಹೀಗೆ ಯಾವುದನ್ನು ಮಾಡಿದ್ರೆ ನಿಮ್ಮ ಮನಸ್ಸು ಖುಷಿಯಾಗುತ್ತೆ ಎಂಬುದನ್ನು ಪತ್ತೆ ಮಾಡಿ ಅದಕ್ಕೊಂದಿಷ್ಟು ಸಮಯ ನೀಡಿ.
Lemon Leaves Benefits: ನಿಂಬೆ ಹಣ್ಣಿನಲ್ಲಿ ಮಾತ್ರವಲ್ಲ ಎಲೆಯಲ್ಲೂ ಇದೆ ಔಷಧಿ ಗುಣ
ಕೋಪ ಬಿಡಿ : ಕೋಪದಿಂದ ಅಲ್ಲಿನ ವಾತಾವರಣ ಮಾತ್ರವಲ್ಲ ನಿಮ್ಮ ಮನಸ್ಸು ಕೂಡ ಕಲುಷಿತಗೊಳ್ಳುತ್ತದೆ. ಕೋಪ ಕಡಿಮೆಯಾದ್ರೂ ಕುದಿಯುತ್ತಿರುವ ದೇಹ ತಣ್ಣಗಾಗಲು ಸಮಯ ಬೇಕಾಗುತ್ತದೆ. ಹಾಗಾಗಿ ಕೋಪ ನಿಯಂತ್ರಣ ಕಲಿಯಬೇಕು. ಮನಸ್ಸು ಶಾಂತವಾಗಿದ್ದರೆ, ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸುವ ಕಲೆ ತಿಳಿದ್ರೆ ನಿಮ್ಮ ಕೋಪ ತಾನಾಗಿಯೇ ಕಡಿಮೆಯಾಗುತ್ತದೆ. ಇದಕ್ಕೆ ನೀವು ಧ್ಯಾನದ ಸಹಾಯ ಪಡೆಯಬಹುದು.