
ಸಕ್ಕರೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಭಾರತದ ಪ್ರತಿ ಮನೆಗಳ ಬೆಳಗು ಟೀ ಅಥವಾ ಕಾಫಿಯಿಂದಲೇ ಪ್ರಾರಂಭವಾಗೋ ಕಾರಣ ಸಕ್ಕರೆ ಅಡುಗೆಮನೆಯ ಅತೀಮುಖ್ಯ ಆಹಾರ ಸಾಮಗ್ರಿಗಳಲ್ಲೊಂದು.ಇನ್ನು ನಾವು ಸಿಹಿಪ್ರಿಯರು ಕೂಡ.ಹಬ್ಬಹರಿದಿನ, ವಿಶೇಷ ಕಾರ್ಯಕ್ರಮ,ಅತಿಥಿಗಳ ಆಗಮನ ಹೀಗೆ ಏನೇ ಖುಷಿ ಕ್ಷಣಗಳಿದ್ರೂ ಅಲ್ಲಿ ಸಕ್ಕರೆ ಸೇರಿಸಿ ಮಾಡಿದ ಸಿಹಿ ತಿನಿಸು ಇದ್ದೇಇರುತ್ತೆ.ಆದ್ರೆ ಬಾಯಿಗೆ ರುಚಿ ನೀಡೋ ಸಕ್ಕರೆ ಆರೋಗ್ಯಕ್ಕೆ ಹಿತವಲ್ಲ ಎನ್ನೋದು ಎಲ್ಲರಿಗೂ ತಿಳಿದಿರೋ ಸತ್ಯ. ಅತಿಯಾದ ಸಕ್ಕರೆ ಸೇವನೆಯಿಂದ ಬೊಜ್ಜು, ಮಧುಮೇಹ, ಹುಳುಕು ಹಲ್ಲು ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾಗೋ ಸಾಧ್ಯತೆಯಿದೆ ಎಂಬುದು ಗೊತ್ತೇ ಇರೋ ಸಂಗತಿ. ಆದ್ರೆ ಹೊಸ ಅಧ್ಯಯನವೊಂದರ ಪ್ರಕಾರ ಬಾಲ್ಯದಲ್ಲಿ ಸಕ್ಕರೆಯಂಶವುಳ್ಳ ತಿನಿಸು ಹಾಗೂ ಪಾನೀಯಗಳ ಅತಿಯಾದ ಸೇವನೆಯಿಂದ ಪ್ರೌಢಾವಸ್ಥೆಯಲ್ಲಿ ನೆನಪಿನಶಕ್ತಿ ಕುಂಠಿತಗೊಳ್ಳುತ್ತದೆಯಂತೆ. ಅಂದ್ರೆ ಮಿದುಳಿನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರೋ ಸಾಮರ್ಥ್ಯವನ್ನು ಸಕ್ಕರೆ ಹೊಂದಿದೆ ಎನ್ನೋದು ಈ ಅಧ್ಯಯನದ ಸಾರ.
ಮೊಟ್ಟೆಯಲ್ಲಿ ತುಂಬಿದೆ ಪೌಷ್ಟಿಕಾಂಶ, ಮಕ್ಕಳಿಗಾಗಬಹುದು ಹೆಲ್ದೀ ಆಹಾರ
ಏನಿದು ಅಧ್ಯಯನ?
ಜಾರ್ಜಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ತಂಡ ನಡೆಸಿದ ಸಂಶೋಧನೆಯಲ್ಲಿ ಸಕ್ಕರೆಯಂಶವುಳ್ಳ ತಿನಿಸು ಹಾಗೂ ಪಾನೀಯಗಳ ಸೇವನೆಯಿಂದ ಹೊಟ್ಟೆ ಹಾಗೂ ಕರುಳಿನ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಾಣುಜೀವಿಗಳಲ್ಲಿ ಬದಲಾವಣೆಯಾಗುತ್ತದೆ. ಇದು ಮಿದುಳಿನ ನಿರ್ದಿಷ್ಟ ಪ್ರದೇಶದ ಕಾರ್ಯನಿರ್ವಹಣೆಯನ್ನು ಬದಲಿಸಬಲ್ಲದು ಎಂಬುದನ್ನು ಮೊಟ್ಟ ಮೊದಲ ಬಾರಿಗೆ ಈ ಅಧ್ಯಯನ ಸಾಬೀತುಪಡಿಸಿದೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿಸಕ್ಕರೆಯಂಶವುಳ್ಳ ಪಾನೀಯ ಮಿದುಳಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿರೋದು ಪತ್ತೆಯಾಗಿದೆ. ಈ ಪಾನೀಯವೇ ಹೊಟ್ಟೆಯಲ್ಲಿನ ಸೂಕ್ಷ್ಮಾಣುಜೀವಿಗಳ ಬದಲಾವಣೆಗೂ ಕಾರಣವಾಗಿರೋದನ್ನು ಸಂಶೋಧಕರು ದೃಢಪಡಿಸಿದ್ದಾರೆ. ಹಿಪ್ಪೋಕ್ಯಾಂಪಸ್ ಎಂಬ ಮಿದುಳಿನ ಭಾಗದ ಸ್ಮರಣಶಕ್ತಿ ಮೇಲೆ ಸಕ್ಕರೆ ಪ್ರಭಾವ ಬೀರುತ್ತದೆ ಹಾಗೂ ಹೊಟ್ಟೆಯಲ್ಲಿ ಪ್ಯಾರಾಬ್ಯಾಕ್ಟೀರೊಯ್ಡ್ಸ್ ಎಂಬ ಪ್ರಭೇದಕ್ಕೆ ಸೇರಿದ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ. ಜೀರ್ಣಾಂಗ ವ್ಯವಸ್ಥೆಗೂ ಮಿದುಳಿಗೂ ಸಂಬಂಧವಿದೆ. ಹೀಗಾಗಿ ಅತಿಯಾದ ಸಕ್ಕರೆ ಸೇವನೆಯಿಂದ ಹೊಟ್ಟೆಯಲ್ಲಾಗೋ ಬದಲಾವಣೆ ಭವಿಷ್ಯದಲ್ಲಿ ಮಿದುಳಿನ ಮೇಲೆ ಪರಿಣಾಮ ಬೀರುತ್ತೆ.
ತಟ್ಟು ಚಪ್ಪಾಳೆ ಪುಟ್ಟ ಮಗುವಿನಂತೆ!
ಸಕ್ಕರೆ ವಿಷಕಾರಿಯೇ?
ಹೌದು, ಸಕ್ಕರೆಗೆ ಬಿಳಿ ವಿಷಯೆಂಬ ಹೆಸರೇ ಇದೆ. ಸಕ್ಕರೆ ತಯಾರಿಕೆ ಸಂದರ್ಭದಲ್ಲಿ ಬಳಸೋ ರಾಸಾಯನಿಕಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲವು. ಕ್ಯಾನ್ಸರ್ನಂತಹ ರೋಗಕ್ಕೂ ಸಕ್ಕರೆಗೂ ನಂಟಿದೆ ಎಂಬುದನ್ನು ಕೆಲವು ಅಧ್ಯಯನಗಳು ಸಾಬೀತುಪಡಿಸಿವೆ. ಅಷ್ಟೇ ಅಲ್ಲ, ಸಕ್ಕರೆಯಿಂದ ದೂರವಿದ್ರೆ ದೇಹದಲ್ಲಿರೋ ಕ್ಯಾನ್ಸರ್ ಕಣಗಳು ಕೂಡ ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಸಕ್ಕರೆ ಸೇವನೆಯ ಅಡ್ಡಪರಿಣಾಮ ತಕ್ಷಣ ನಮ್ಮ ಗಮನಕ್ಕೆ ಬಾರದಿದ್ರೂ ನಿಧಾನವಾಗಿ ದೇಹದ ಆರೋಗ್ಯ ಕೆಡಿಸೋ ಸಾಮರ್ಥ್ಯ ಹೊಂದಿದೆ. ನಿತ್ಯ ಸಕ್ಕರೆ ಬಳಕೆಯನ್ನು ನಾವು ಎಷ್ಟು ಕಡಿಮೆ ಮಾಡುತ್ತೇವೋ ಅಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ವೃದ್ಧಾಪ್ಯದಲ್ಲಿ ಆರೋಗ್ಯಕರ ಜೀವನ ನಡೆಸಲು ಬಾಲ್ಯ ಹಾಗೂ ಯೌವನದಲ್ಲಿ ಸಕ್ಕರೆಯಿಂದ ಸಾಧ್ಯವಾದಷ್ಟು ದೂರವಿರೋದು ಉತ್ತಮ.
ಮಕ್ಕಳ ಆರೋಗ್ಯದ ಮೇಲೆ ಪರಿಣಾಮ
ಮಕ್ಕಳಿಗೆ ಅಡುಗೆಮನೆಯಲ್ಲಿ ಸದಾ ಆಕರ್ಷಿಸೋ ಡಬ್ಬಿಯೆಂದ್ರೆ ಅದು ಸಕ್ಕರೆ ಡಬ್ಬಿ. ದೋಸೆ, ಇಡ್ಲಿಯಿಂದ ಹಿಡಿದು ತಿನ್ನೋ ಪ್ರತಿ ಪದಾರ್ಥಕ್ಕೂ ಸಕ್ಕರೆ ಬೆರೆಸೋ ಅಭ್ಯಾಸ ಮಕ್ಕಳಿಗೆ ರೂಢಿ. ಆದ್ರೆ ಇಂಥ ಅಭ್ಯಾಸವನ್ನು ಹೆತ್ತವರು ಆದಷ್ಟು ಕಡಿಮೆ ಮಾಡಿಸಬೇಕು. ಸಕ್ಕರೆ ಹಾಗೂ ಸಕ್ಕರೆಯಂಶವುಳ್ಳ ಪಾನೀಯಗಳು, ಸಿಹಿ ತಿನಿಸುಗಳಿಂದ ಮಕ್ಕಳನ್ನು ದೂರವಿಟ್ಟಷ್ಟೂ ಅವರು ಆರೋಗ್ಯವಂತರಾಗುತ್ತಾರೆ.
ಜೇನು, ಲವಂಗ ಸೇವಿಸಿದರೆ ಆರೋಗ್ಯಕ್ಕಿಲ್ಲ ಆಪತ್ತು
ಬೆಲ್ಲದತ್ತ ಹೆಚ್ಚುತ್ತಿರೋ ಒಲವು
ಬೆಲ್ಲದ ಆರೋಗ್ಯಕಾರಿ ಗುಣಗಳನ್ನು ನಮ್ಮ ಪೂರ್ವಜರು ಚೆನ್ನಾಗಿಯೇ ಅರಿತಿದ್ದರು. ಇದ್ರಲ್ಲಿ ದೇಹದ ರೋಗನಿರೋಧಕಶಕ್ತಿ ಹೆಚ್ಚಿಸಿ ಅನೇಕ ಕಾಯಿಲೆಗಳನ್ನು ಗುಣಪಡಿಸೋ ಸಾಮರ್ಥ್ಯವೂ ಇದೆ. ಬೆಲ್ಲದಲ್ಲಿ ಕಬ್ಬಿಣಾಂಶ ಹೆಚ್ಚಿನ ಪ್ರಮಾಣದಲ್ಲಿರೋ ಕಾರಣ ಇದು ಎಲ್ಲ ವಯೋಮಾನದವರಿಗೂ ಆರೋಗ್ಯಕರ ಪದಾರ್ಥ. ಇತ್ತೀಚಿನ ದಿನಗಳಲ್ಲಿ ಬೆಲ್ಲದತ್ತ ಜನರ ಒಲವು ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಬೆಲ್ಲದ ಪುಡಿ ಕೂಡ ಮಾರುಕಟ್ಟೆಯಲ್ಲಿ ಲಭಿಸುತ್ತಿದ್ದು, ಟೀ, ಕಾಫಿಗೆ ಕೂಡ ಸಕ್ಕರೆ ಬದಲು ಬೆಲ್ಲ ಬಳಸೋ ಕ್ರಮ ಪ್ರಾರಂಭವಾಗಿದೆ. ದೋಸೆ, ಇಡ್ಲಿ ತಿನ್ನಲು ಮಕ್ಕಳಿಗೆ ಸಕ್ಕರೆ ಹಾಕೋ ಬದಲು ಜೋನಿ ಬೆಲ್ಲ ಬಳಸಿ. ಇದ್ರಿಂದ ರುಚಿ ಸಿಗೋ ಜೊತೆ ಸಕ್ಕರೆಯಿಂದ ಮಕ್ಕಳನ್ನು ದೂರವಿರಿಸಲು ಕೂಡ ಸಾಧ್ಯವಾಗುತ್ತೆ. ಸಕ್ಕರೆ ರುಚಿಗೆ ಬೇರೆ ಸಾಟಿಯಿಲ್ಲ ಅನ್ನೋದನ್ನು ಒಪ್ಪಿಕೊಳ್ಳೋಣ. ಆದ್ರೆ ಆರೋಗ್ಯಕ್ಕೆ ಹಿತವಲ್ಲದ ಸಿಹಿ ಅದೆಷ್ಟೇ ಸ್ವಾದಿಷ್ಟವಾಗಿದ್ರೂ ಅದ್ರಿಂದ ಅಂತರ ಕಾಯ್ದುಕೊಳ್ಳೋದು ನಮಗೇ ಒಳ್ಳೆಯದು ಅಲ್ಲವೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.