ನಮ್ಮ ದೇಹದಲ್ಲಿ ಹಾರ್ಮೋನುಗಳ ಪ್ರಭಾವ ಅಧಿಕ. ಅವುಗಳಿಂದಲೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿ ಇರಲು ಸಾಧ್ಯ. ಅವು ಸರಿಯಾಗಿ ಬಿಡುಗಡೆಯಾದರೆ ಮಾತ್ರ ನಾವೂ ಸರಿಯಾಗಿರಲು ಸಾಧ್ಯ. ಅವುಗಳ ಬಿಡುಗಡೆ ಮೇಲೆ ಪ್ರಭಾವ ಬೀರುವ ಕೆಲವು ಪೌಷ್ಟಿಕಾಂಶಗಳ ಬಗ್ಗೆ ಇಲ್ಲಿ ತಿಳಿಯೋಣ.
ಹಾರ್ಮೋನುಗಳು ನಮ್ಮ ದೇಹದ ಆಗುಹೋಗುಗಳ ಮೇಲೆ, ದೇಹಾರೋಗ್ಯದ ಮೇಲೆ, ಬೆಳವಣಿಗೆ ಅಷ್ಟೇ ಏಕೆ, ಕೊನೆಗೆ ನಮ್ಮ ವರ್ತನೆಯ ಮೇಲೂ ಪರಿಣಾಮ ಬೀರುತ್ತವೆ. ಹಾರ್ಮೋನುಗಳ ವ್ಯತ್ಯಾಸವಾದರೆ ದೇಹದಲ್ಲಿ ಎಲ್ಲವೂ ಅಸ್ತವ್ಯಸ್ತವಾಗುತ್ತದೆ, ಏರುಪೇರಾಗುತ್ತದೆ. ಒಟ್ಟಾರೆ ದೇಹವ್ಯವಸ್ಥೆ, ಸಂತಾನೋತ್ಪತ್ತಿ, ದೇಹ ಮತ್ತು ಮಿದುಳಿನ ಬೆಳವಣಿಗೆ, ಮನಸ್ಥಿತಿ ಎಲ್ಲದರ ಮೇಲೆ ಹಾರ್ಮೋನುಗಳು ನಿಯಂತ್ರಣ ಹೊಂದಿರುತ್ತವೆ. ಇವುಗಳಲ್ಲಿ ಚೂರು ಏರುಪೇರಾದರೂ ಅದನ್ನು ಗುರುತಿಸಿ, ಚಿಕಿತ್ಸೆ ಪಡೆದುಕೊಳ್ಳುವುದು ಸವಾಲಾಗುತ್ತದೆ. ಹಾರ್ಮೋನುಗಳ ಮೇಲೆ ಪ್ರಭಾವ ಬೀರುವ ಅಂಶಗಳಲ್ಲಿ ಪೌಷ್ಟಿಕಾಂಶಕ್ಕೆ ಅಗ್ರಸ್ಥಾನ. ವಿವಿಧ ಪೌಷ್ಟಿಕಾಂಶಗಳು ಹಾರ್ಮೋನುಗಳ ಸ್ರವಿಕೆ ಪ್ರಮಾಣ, ಗುಣಮಟ್ಟ ಮೇಲೆ ಪರಿಣಾಮ ಬೀರುತ್ತವೆ. ಹಾರ್ಮೋನುಗಳು ಪ್ರೊಟೀನ್ ಮತ್ತು ಪೆಪ್ಟೈಡ್ ಎಂದು ಕರೆಯಲ್ಪಡುವ ಅಮೈನೋ ಆಸಿಡ್ ಗಳ ಸಣ್ಣದೊಂದು ಸರಪಳಿಯಿಂದ ರಚನೆಯಾಗಿರುತ್ತವೆ. ದೇಹದಲ್ಲಿರುವ ವಿವಿಧ ಗ್ರಂಥಿಗಳು ಕೆಲವು ಹಾರ್ಮೋನುಗಳನ್ನು ಸ್ರವಿಸಿದರೆ, ಎಂಡೋಕ್ರೈನ್ ಗ್ರಂಥಿ ಎಂದು ಕರೆಯಲಾಗುವ ಕೋಶಗಳಿಂದ ಪ್ರಮುಖ ಕೆಲವು ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಪೌಷ್ಟಿಕಾಂಶಗಳು ಮತ್ತು ಹಾರ್ಮೋನಿನ ಸಂಬಂಧ ಬಹಳ ಕ್ಲಿಷ್ಟಕರವಾದದ್ದು. ಹಾಗಾದರೆ, ನಮ್ಮ ದೇಹಕ್ಕೆ ಅಗತ್ಯವಾದ ಕೆಲವು ಪೌಷ್ಟಿಕಾಂಶಗಳು ಯಾವ ಹಾರ್ಮೋನಿನ ಮೇಲೆ ಪ್ರಭಾವ ಬೀರುತ್ತವೆ ಎಂದು ನೋಡೋಣ.
• ಕಬ್ಬಿಣ (Iron)
ಕಿಶೋರಾವಸ್ಥೆಯಲ್ಲಿ (Puberty) ಬಿಡುಗಡೆಯಾಗುವ ಹಾರ್ಮೋನುಗಳು ರಕ್ತದ ಮಟ್ಟ ಹೆಚ್ಚಿಸಲು, ಪ್ರೊಟೀನ್ ಸಂಶ್ಲೇಷಣೆಗೆ ಕಾರಣವಾಗುತ್ತವೆ. ಒಂದೊಮ್ಮೆ ಬಾಲ್ಯಕಾಲದಲ್ಲಿ ಕಬ್ಬಿಣಾಂಶದ ಕೊರತೆಯಾದರೆ ಬೆಳವಣಿಗೆ, ಮೂಳೆಗಳ ಪಕ್ವತೆ (Maturation) ನಿಧಾನವಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮೂಳೆ (Bone) ಆರೋಗ್ಯದಲ್ಲಿ ಸಮಸ್ಯೆಯಾಗುತ್ತದೆ.
• ಸೆಲೆನಿಯಂ (Selenium)
ಸೆಲೆನಿಯಂ ಎನ್ನುವುದು ಅಗತ್ಯವಾದ ಮಿನರಲ್ (Mineral) ಆಗಿದ್ದು, ಥೈರಾಯ್ಡ್ (Thyroid) ಕಾರ್ಯಕ್ಷಮತೆಗೆ ಕೊಡುಗೆ ನೀಡುತ್ತದೆ. ಇದು ಆರೋಗ್ಯಕರ ಚರ್ಮ (Skin), ಮೂಳೆ ಮತ್ತು ವಿವಿಧ ಕೋಶಗಳ ಮೇಲೆ ಪ್ರಭಾವ ಬೀರುತ್ತದೆ. ಟೆಸ್ಟಸ್ಟಿರೋನ್ (Testostirone) ಹಾರ್ಮೋನ್ ನಿಯಂತ್ರಿಸುವ ಪ್ರೊಟೀನುಗಳ ಮೇಲೆ ಸೆಲೆನಿಯಂ ಪ್ರಭಾವ ಅಧಿಕ. ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೆಲೆನಿಯಂ ಇಲ್ಲದಿರುವಾಗ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ (Insulin) ಸ್ರವಿಕೆ ಸರಿಯಾಗಿ ಇರುವುದಿಲ್ಲ.
• ವಿಟಮಿನ್ ಡಿ (Vitamin D)
ವಿಟಮಿನ್ ಡಿ ಮೂಳೆಗಳ ಆರೋಗ್ಯಕ್ಕೆ ಬೇಕಾದ ಪ್ರಮುಖ ಪೌಷ್ಟಿಕಾಂಶ. ಇದು ಹಾರ್ಮೋನುಗಳ ಮೇಲೂ ಪ್ರಭಾವ ಹೊಂದಿದೆ. ಮೆಟಬಾಲಿಸಂ ಮತ್ತು ಆಹಾರ ಸೇವನೆಯ ಮೇಲೆ ನಿಯಂತ್ರಣ ಹೊಂದಿದೆ. ಕ್ಯಾಲ್ಸಿಯಂ, ಫಾಸ್ಪರಸ್ ಮತ್ತು ವಿಟಮಿನ್ ಡಿ ಸಂಯುಕ್ತವಾಗಿ ದೇಹದಲ್ಲಿ ಹಾರ್ಮೋನ್ ನಿಯಂತ್ರಿಸುತ್ತವೆ. ಲೈಂಗಿಕ (Sex) ಹಾರ್ಮೋನುಗಳ ಬಿಡುಗಡೆಗೂ ವಿಟಮಿನ್ ಡಿ ಅಗತ್ಯ. ಟೆಸ್ಟಸ್ಟಿರೋನ್ ಹಾರ್ಮೋನ್ ಸಮಮಟ್ಟದಲ್ಲಿರಲು ಸಹ ಇದು ಅತ್ಯಗತ್ಯ.
ಇದನ್ನೂ ಓದಿ: Health Tips : ಮಿತಿ ಮೀರಿ ನೀರು ಕುಡಿದ್ರೆ ನಿಂತೋಗುತ್ತೆ ಹಾರ್ಟ್
• ಕ್ಯಾಲ್ಸಿಯಂ (Calcium)
ಇದೊಂದು ಮಿನರಲ್ ಆಗಿದ್ದು, ದೇಹದ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಅನೇಕ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಕ್ಯಾಲ್ಸಿಯಂ ಅಗತ್ಯ. ಸಹಜ ರಕ್ತದೊತ್ತಡ ಮತ್ತು ರಕ್ತ ಹೆಪ್ಪುಗಟ್ಟಲು ಇದು ಮುಖ್ಯ. ಜೀರ್ಣಾಂಗದಲ್ಲಿರುವ ಆಹಾರದಿಂದ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುತ್ತದೆ. ಟೆಸ್ಟಸ್ಟಿರೋನ್ ಮತ್ತು ಈಸ್ಟ್ರೋಜೆನ್ (Estrogen) ಹಾರ್ಮೋನುಗಳ ಸ್ರವಿಕೆಗೆ ಇದು ಅತ್ಯಗತ್ಯ. ಪುರುಷರಲ್ಲಿ ಟೆಸ್ಟಸ್ಟಿರೋನ್ ಹಾರ್ಮೋನ್ ಮಾಂಸಖಂಡಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಮಹಿಳೆಯರಲ್ಲಿ ಈಸ್ಟ್ರೋಜೆನ್ ಹಾರ್ಮೋನ್ ಸಂತಾನಶಕ್ತಿ ಮತ್ತು ಲೈಂಗಿಕ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ.
• ಝಿಂಕ್ (Zink)
ಇನ್ಸುಲಿನ್ ಹಾರ್ಮೋನ್ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲಗೊಳಿಸುವಲ್ಲಿ ಪ್ರಮುಖವಾಗಿದೆ. ಝಿಂಕ್ ಅಂಶವು ದೇಹದಲ್ಲಿ ಹಾರ್ಮೋನ್ ಚಟುವಟಿಕೆಯನ್ನು ನಿಯಂತ್ರಣಗೊಳಿಸುತ್ತದೆ. ಇನ್ಸುಲಿನ್ ಸಹಜ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
ಇದನ್ನೂ ಓದಿ: HEALTH TIPS : ಮೊಸರಿನ ಜೊತೆ ಚಪಾತಿ ತಿಂದು ಆರೋಗ್ಯ ಕಾಯ್ದುಕೊಳ್ಳಿ
• ಒಮೆಗಾ-3 ಫ್ಯಾಟಿ ಆಸಿಡ್ (Omega -3 Fatty Acid)
ಇನ್ಸುಲಿನ್, ಟೆಸ್ಟಸ್ಟಿರೋನ್ ಮತ್ತು ಕಾರ್ಟಿಸೋಲ್ (Cortisol) ಹಾರ್ಮೋನುಗಳು ದೇಹದ ವಿವಿಧ ಕಾರ್ಯಗಳನ್ನು ನಿಯಂತ್ರಿಸುತ್ತವೆ. ಈ ಹಾರ್ಮೋನುಗಳು ನೀವು ಹೇಗೆ ಕಾಣುತ್ತೀರಿ ಮತ್ತು ಹೇಗೆ ಆರೋಗ್ಯಕರವಾಗಿ ಚಿಂತನೆ ಮಾಡುತ್ತೀರಿ ಎನ್ನುವುದರ ಮೇಲೆ ಪರಿಣಾಮ ಬೀರುತ್ತವೆ. ಈ ಹಾರ್ಮೋನುಗಳ ಸ್ರವಿಕೆ ಚೆನ್ನಾಗಿರುವಂತೆ ಒಮೆಗಾ-3 ಫ್ಯಾಟಿ ಆಸಿಡ್ ಅಂಶ ನೋಡಿಕೊಳ್ಳುತ್ತದೆ.