Hiccups Problem: ನಾಲಗೆಯನ್ನು ಹೊರ ಹಾಕಿದ್ರೆ ಬಿಕ್ಕಳಿಕೆ ನಿಲ್ಲುತ್ತೆ..!

By Suvarna NewsFirst Published Dec 25, 2021, 2:57 PM IST
Highlights

ಬಿಕ್ಕಳಿಕೆ (Hiccups) ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಆದರೆ ಈ ಬಿಕ್ಕಳಿಕೆಯಿಂದಲೇ ಹಲವು ಸಂದರ್ಭಗಳಲ್ಲಿ ಮುಜುಗರ, ಕಿರಿಕಿರಿ (Irritation)ಯೂ ಆಗುವುದುಂಟು. ಆಗಿದ್ರೆ, ಹಠಾತ್ ಬಿಕ್ಕಳಿಕೆ ಬಂದಾಗ ಇದನ್ನು ನಿಲ್ಲಿಸಲು ಏನು ಮಾಡಬಹುದು. ತಿಳಿಯೋಣ.

ಉಸಿರಾಟವು ಒಂದು ಸಹಜವಾದ ಪ್ರಕ್ರಿಯೆ. ಆದರೆ ಕೆಲವೊಮ್ಮೆ ಉಸಿರು ಎಳೆದುಕೊಳ್ಳುವಾದ ತಡವರಿಸಿದಂತಾಗುತ್ತದೆ. ಗಂಟಲಿನಿಂದ ಗಾಳಿ ರಿವರ್ಸ್ ಬಂದಂತಾಗುತ್ತದೆ. ಹಠಾತ್ತನೆ ಆಗುವ ಈ ಕ್ರಿಯೆಗೆ ಬಿಕ್ಕಳಿಕೆ ಎನ್ನುತ್ತಾರೆ. ಬಹುತೇಕ ಎಲ್ಲರೂ ಒಂದಲ್ಲ ಒಂದು ಸಾರಿ ಈ ಬಿಕ್ಕಳಿಕೆ ಸಮಸ್ಯೆಗೆ ಒಳಗಾಗಿರುತ್ತಾರೆ. ಬಿಕ್ಕಳಿಕೆ ಬರಲು ಆರಂಭಿಸಿದರೆ ಪ್ರತಿ ನಿಮಿಷದಲ್ಲಿ 2-3 ಸಾರಿ ಈ ಕ್ರಿಯೆ ಮರುಕಳಿಸುತ್ತಿರುತ್ತದೆ. ಕೆಲವೊಮ್ಮೆ ಈ ಬಿಕ್ಕಳಿಕೆ ಸಮಸ್ಯೆ ಕೆಲವೇ ನಿಮಿಷಗಳಲ್ಲಿ ಇಲ್ಲವಾಗುತ್ತದೆ. ಆದರೆ ಇನ್ನು ಕೆಲವೊಮ್ಮೆ ದೀರ್ಘ ಕಾಲದ ವರೆಗೆ ಹಾಗೆಯೇ ಇರುತ್ತದೆ. ನೀರು ಕುಡಿದರು ಕಡಿಮೆಯಾಗುವುದಿಲ್ಲ. ದೀರ್ಘಕಾಲದ ಬಿಕ್ಕಳಿಕೆ ಅಪಾಯಕಾರಿಯೂ ಹೌದು.

ಬಿಕ್ಕಳಿಕೆಗೆ ಕಾರಣಗಳೇನು..?

ಬಿಕ್ಕಳಿಕೆ ಒಂದು ಕಾಯಿಲೆಯಲ್ಲ. ಅನುವಂಶೀಯವಾಗಿ ಬರುವಂಥದ್ದಲ್ಲ. ಸಾಮಾನ್ಯವಾಗಿ ಎಲ್ಲರಲ್ಲೂ ಬಿಕ್ಕಳಿಕೆ ಕಾಣಿಸಿಕೊಳ್ಳುತ್ತದೆ. ಹೀಗಿದ್ದೂ ಕೆಲವೊಮ್ಮೆ ನಿರ್ಧಿಷ್ಟ ಕಾರಣಗಳಿಂದಾಗಿಯೇ ಬಿಕ್ಕಳಿಕೆ ಬರುವುದುಂಟು. ಮುಖ್ಯವಾಗಿ ಲಗುಬಗೆಯಲ್ಲಿ ತಿನ್ನುವಾಗ ಈ ರೀತಿ ಬಿಕ್ಕಳಿಕೆ ಬರುತ್ತದೆ. ಈ ಕಾರಣವಲ್ಲದೆ, ಹವಾಮಾನದ ಏರುಪೇರು ಸಹ ಬಿಕ್ಕಳಿಕೆಗೆ ಕಾರಣವಾಗುತ್ತದೆ. ದೇಹದಲ್ಲಿ ಆಮ್ಲಜನಕದ ಮಟ್ಟದಲ್ಲಿನ ಇಳಿಕೆಯೇ ಬಿಕ್ಕಳಿಕೆಗೆ ಪ್ರಾಥಮಿಕ ಕಾರಣ ಎಂದು ಆರೋಗ್ಯ ತಜ್ಞರು ನಂಬುತ್ತಾರೆ. 

ಮಾತ್ರವಲ್ಲದೆ, ಮದ್ಯಪಾನ, ಧೂಮಪಾನ ಮಾಡುವುದು, ದೈಹಿಕ, ಮಾನಸಿಕ ಒತ್ತಡದಿಂದಲೂ ಈ ಸಮಸ್ಯೆಯಾಗುತ್ತದೆ. ಕಾರ್ಬೋಹೈಡ್ರೇಟ್ ತುಂಬಿದ ಪಾನೀಯಗಳೂ ಈ ರೀತಿಯ ಬಿಕ್ಕಳಿಕೆಗೆ ಕಾರಣವಾಗುತ್ತದೆ. ಹಠಾತ್ತನೆ ಆತಂಕಕ್ಕೆ ಒಳಗಾಗುವುದರಿಂದಲೂ ಹೀಗಾಗುವುದುಂಟು. ಬಿಕ್ಕಳಿಕೆ ಒಂದು ಕಾಯಿಲೆಯಲ್ಲ. ಹೀಗಾಗಿ ಇದನ್ನು ಸುಲಭವಾಗಿ ಬಗೆಹರಿಸಬಹುದು. ಬಿಕ್ಕಳಿಕೆ ಇದ್ದಕ್ಕಿದ್ದಂತೆ ಪ್ರಾರಂಭವಾಗುತ್ತದೆ ಮತ್ತು ದೀರ್ಘಕಾಲದ ವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಅವುಗಳನ್ನು ನಿಯಂತ್ರಣದಲ್ಲಿಡಲು ಈ ರೀತಿ ಮಾಡಬಹುದು.

ಬಿಕ್ಕಳಿಸಿ, ಬಿಕ್ಕಳಿಸಿ ಸುಸ್ತಾಗಿದ್ಯಾ? ಇದಕ್ಕಿನ್ನು ಫುಲ್ ಸ್ಟಾಪ್ ಇಡಿ

ನೀರು ಕುಡಿಯಿರಿ: ಬಿಕ್ಕಳಿಕೆ (Hiccup)ಯನ್ನು ಗುಣಪಡಿಸಲು ಸಾಮಾನ್ಯವಾಗಿ ಎಲ್ಲರೂ ಅನುಸರಿಸುವ ಮಾರ್ಗವೆಂದರೆ ನೀರು (Water) ಕುಡಿಯುವುದು. ಬಿಕ್ಕಳಿಗೆ ಬಂದ ತಕ್ಷಣವೇ ತಣ್ಣೀರು ಅಥವಾ ಬಿಸಿನೀರು ಕುಡಿಯಿರಿ. ಕೆಲವು ಜನರಿಗೆ, ತಣ್ಣೀರು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ. ಇನ್ನು ಕೆಲವರಿಗೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ನಾಲಗೆಯನ್ನು ಹೊರಗೆ ಹಾಕಿ: ನೀರು ಕುಡಿದ ನಂತರ ಬಿಕ್ಕಳಿಕೆ ನಿಲ್ಲದಿದ್ದರೆ, ನಾಲಗೆ (Tongue)ಯನ್ನು ಹೊರ ಹಾಕಿ ಸ್ಪಲ್ಪ ಹೊತ್ತು ಹಾಗೆಯೇ ಇರಿ. ಈ ರೀತಿ ಮಾಡುವುದರಿಂದ ಗಂಟಲಿನ ಸ್ನಾಯುಗಳಲ್ಲಿ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ.

ಕುತ್ತಿಗೆಗೆ ಮಸಾಜ್ ಮಾಡಿ: ಬಿಕ್ಕಳಿಕೆ ಬಂದ ಕೂಡಲೇ ಹಿಂಬದಿಯಿಂದ ಕುತ್ತಿಗೆಯ ಸಮೀಪವಿರುವ ಪ್ರದೇಶವನ್ನು ಮಸಾಜ್ (Massage) ಮಾಡಬೇಕು. ಇದು ಗಂಟಲು-ಕುತ್ತಿಗೆಯ ಪ್ರದೇಶದಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಬಿಕ್ಕಳಿಸುವಿಕೆಯನ್ನು ನಿಲ್ಲಿಸುತ್ತದೆ.

ಎಣ್ಣೆ ಮಸಾಜ್ ನಿಂದ ಉತ್ತಮ ತ್ವಚೆಯ ಜೊತೆಗೆ ಆರೋಗ್ಯ

ಬೆಣ್ಣೆಯನ್ನು ಸೇವಿಸಿ: ಬಿಕ್ಕಳಿಗೆ ಬಂದಾಗ ಒಂದು ಚಮಚ ಬೆಣ್ಣೆ (Butter)ಯನ್ನು ಸೇವಿಸಿ. ಅಥವಾ. ಒಂದು ಚಮಚ ಸಕ್ಕರೆಯನ್ನು ಸೇವಿಸುವುದು ಸಹ ಬಿಕ್ಕಳಿಕೆ ನಿಲ್ಲಲು ಸಹಾಯ ಮಾಡುತ್ತದೆ. 

ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯಿರಿ: ಜೇನುತುಪ್ಪ (Honey)ದ ಸೇವನೆ ಸಹ ಬಿಕ್ಕಳಿಕೆ ನಿಲ್ಲಲು ನೆರವಾಗುತ್ತದೆ. ಅರ್ಧ ಗ್ಲಾಸ್ ನೀರಿಗೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಜೇನುತುಪ್ಪವು ವಾಗಾಸ್ ನರವನ್ನು ತಂಪುಗೊಳಿಸುತ್ತದೆ. ಇದರಿಂದ ನಿರಂತರ ಬಿಕ್ಕಳಿಕೆಗೆ ಪರಿಹಾರ ಸಿಗುತ್ತದೆ.

ಕೈಯನ್ನು ಮಸಾಜ್ ಮಾಡಿ: ಹೆಬ್ಬೆರಳಿನಿಂದ ಇನ್ನೊಂದು ಕೈಯ ಅಂಗೈಯನ್ನು ಮಸಾಜ್ ಮಾಡಿ. ಇದು ಬಿಕ್ಕಳಿಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.

ಕೈಗಳಿಂದ ಮೂಗನ್ನು ಮುಚ್ಚಿ: ಕೈಗಳ ಸಹಾಯದಿಂದ ಮೂಗನ್ನು ಮುಚ್ಚಿ. ಹೀಗೆ ಮಾಡುವುದರಿಂದ ಶ್ವಾಸಕೋಶದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಹೊರ ಹೋಗುತ್ತದೆ. ಹೀಗಾಗಿ ಸುಲಭವಾಗಿ ಬಿಕ್ಕಳಿಕೆ ನಿಲ್ಲುತ್ತದೆ.

ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಿರಿ: ಬಿಕ್ಕಳಿಗೆ ಬಂದ ತಕ್ಷಣ ಗಮನವನ್ನು ಬೇರೆಡೆಗೆ ಹರಿಸಿಕೊಳ್ಳಿ. ಅಡುಗೆ ಮಾಡುವುದು, ಆಟವಾಡುವುದು ಮೊದಲಾದ ಚಟುವಟಿಕೆಗಳತ್ತ ಗಮನ ಹರಿಸಿದಾಗ ಬಿಕ್ಕಳಿಗೆ ನಿಲ್ಲುತ್ತದೆ.

click me!