ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಸಂದರ್ಭದಲ್ಲಿ ಕೋಪಗೊಳ್ತಾನೆ. ಮನಸ್ಸಿನ ಭಾವನೆಯನ್ನು ಕೋಪದ ರೂಪದಲ್ಲಿ ಹೊರಗೆ ಹಾಕೋದು ಒಳ್ಳೆಯದೆ. ಆದ್ರೆ ಹೆಚ್ಚಿನ ಕೋಪ ಆರೋಗ್ಯ, ಸಂಬಂಧ ಎರಡನ್ನೂ ಹಾಳು ಮಾಡುತ್ತದೆ.
ಕೋಪ ಯಾರಿಗೆ ಬರೋದಿಲ್ಲ ಹೇಳಿ? ಕೋಪ ಒಂದು ರೀತಿಯ ಭಾವನೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಕೋಪವನ್ನು ಹೊರ ಹಾಕ್ತಾರೆ. ಕೋಪದಲ್ಲಿ ಮೂಗು ಕೊಯ್ದುಕೊಂಡ್ರೆ ಬರುತ್ತಾ ಎನ್ನುವ ಮಾತೊಂದಿದೆ. ಸಾಮಾನ್ಯವಾಗಿ ಕೋಪ ಬಂದ ಸಂದರ್ಭದಲ್ಲಿ ಮನುಷ್ಯ ಹೇಗೆ ನಡೆದುಕೊಳ್ತಾನೆ ಎಂಬುದು ಆತನಿಗೆ ಅರಿವಿರೋದಿಲ್ಲ. ಮನಸ್ಸು ಶಾಂತವಾದ್ಮೇಲೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಆದ್ರೆ ಸಮಯ ಮೀರಿರುತ್ತದೆ. ಕೆಲವರು ಕೋಪ ನಿಯಂತ್ರಿಸಿಕೊಳ್ಳುವ ಶಕ್ತಿ ಹೊಂದಿರುತ್ತಾರೆ. ಮತ್ತೆ ಕೆಲವರಿಗೆ ಅರೆ ಕ್ಷಣಕ್ಕೆ ಕೋಪ ಬರುತ್ತದೆ. ಸಣ್ಣ ಸಣ್ಣ ವಿಷ್ಯಕ್ಕೂ ಮನೆ, ಕಚೇರಿ ಎನ್ನದೆ ಎಲ್ಲೆಡೆ ರೇಗಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಕೋಪಿಷ್ಠ ಎನ್ನುವ ಹೆಸರನ್ನು ಪಡೆದಿರುತ್ತಾರೆ.
ಕೋಪ (Angry) ಮಾಡಿಕೊಂಡು ಪ್ರೀತಿ (Love) ಪಾತ್ರರ ಮೇಲೆ ಕೂಗಾಡಿ ನಂತ್ರ ಕ್ಷಮೆ ಕೇಳೋದು ಒಂದೆರಡು ಬಾರಿ ಚೆಂದ. ಆದ್ರೆ ಇದೇ ಸ್ವಭಾವ ಮುಂದುವರೆದ್ರೆ ಪ್ರೀತಿ ಮುರಿದು ಬೀಳುತ್ತದೆ. ಕೋಪದಲ್ಲಿ ಆಡಿದ ಮಾತಿನಿಂದ ದೊಡ್ಡ ದಂಡ ತೆರಬೇಕಾಗುತ್ತದೆ. ಮಾತು (Speech) ಮಾತಿಗೂ ಕೋಪ ಬರುತ್ತೆ, ಅನೇಕ ಅಮೂಲ್ಯ ವ್ಯಕ್ತಿ, ವಸ್ತುಗಳನ್ನು ನೀವು ಕೋಪಕ್ಕೆ ಬಲಿ ನೀಡಿದ್ದೀರಿ ಎಂದಾದ್ರೆ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಮುಖ್ಯ. ನಾವಿಂದು ಕೋಪವನ್ನು ಕಡಿಮೆ ಮಾಡಿ, ಸದಾ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳೋದು ಹೇಗೆ ಎಂಬುದನ್ನು ಹೇಳ್ತೇವೆ.
ಹಾಲಿನ ಬಣ್ಣ ಯಾಕೆ ಬಿಳಿಯಾಗಿರುತ್ತದೆ, ವೈಜ್ಞಾನಿಕ ಕಾರಣ ತಿಳ್ಕೊಳ್ಳಿ
ಕೋಪ ಶಾಂತಗೊಳಿಸಲು ಇಲ್ಲಿದೆ ಉಪಾಯ :
ಆ ಸ್ಥಳದಿಂದ ದೂರ ಹೋಗಿ : ಯಾವುದೇ ವ್ಯಕ್ತಿ ಮೇಲೆ ಕೋಪ ಬಂದ್ರೆ ಅಥವಾ ಯಾವುದೋ ಪರಿಸ್ಥಿತಿ ನಿಮಗೆ ಇಷ್ಟವಾಗಿಲ್ಲವೆಂದ್ರೆ ಆ ವ್ಯಕ್ತಿ ಮುಂದೆ ಅಥವಾ ಆ ಜಾಗದಲ್ಲಿ ನೀವಿರಬೇಡಿ. ಕೋಪವನ್ನು ಹಿಡಿದಿಟ್ಟುಕೊಳ್ತಾ ನೀವಿರುವ ಜಾಗವನ್ನು ಖಾಲಿ ಮಾಡಿ. ಸ್ವಲ್ಪ ಸಮಯ ಸ್ಥಳ ಬದಲಿಸಿ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ನಂತ್ರ ಶಾಂತವಾಗಿ ಪರಿಸ್ಥಿತಿಯನ್ನು ನೀವು ನಿಭಾಯಿಸಬಹುದು.
ಮೌನ (Silence) ಕ್ಕೆ ಶರಣಾಗಿ : ನಿಮಗೆ ಕೋಪ ಬಂದಿದೆ ಎಂದಾಗ ಮೌನವಾಗಿರಲು ಪ್ರಯತ್ನಿಸಿ. ಕೋಪ ಹೆಚ್ಚಾದಾಗ ತಪ್ಪುಗಳಾಗೋದು ಹೆಚ್ಚು. ಮೌನ ಬಂಗಾರವಿದ್ದಂತೆ. ನೀವು ಸುಮ್ಮನಿದ್ರೆ ನಿಮ್ಮ ಮುಂದಿರುವ ವ್ಯಕ್ತಿಗೆ ಮಾತಿಗೆ ಮಾತು ಬೆಳೆಸಲು ಸಾಧ್ಯವಾಗೋದಿಲ್ಲ. ಅವರು ಕೂಡ ನಿಧಾನವಾಗಿ ಮೌನಕ್ಕೆ ಶರಣಾಗ್ತಾರೆ. ಆಗ ಪರಿಸ್ಥಿತಿ ತಿಳಿಯಾಗುತ್ತದೆ. ಇಬ್ಬರೂ ಶಾಂತವಾದ್ಮೇಲೆ ನೀವು ಸಮಸ್ಯೆಯನ್ನು ಇತ್ಯರ್ಥಗೊಳಿಸಬಹುದು.
Health Tips : ಉರಿಮೂತ್ರ, ಮೂತ್ರದಲ್ಲಿ ರಕ್ತ… ಎಲ್ಲಾ ಸಮಸ್ಯೆ ನಿವಾರಿಸುತ್ತೆ ಅಕ್ಕಿ ನೀರು
ಮನಸ್ಸಿನಲ್ಲೇ ಲೆಕ್ಕ ಶುರು ಮಾಡಿ : ಕೋಪ ಬಂದ ತಕ್ಷಣ ಮನಸ್ಸು ಶಾಂತವಾಗ್ಬೇಕೆಂದ್ರೆ ನೀವು ಮನಸ್ಸಿನಲ್ಲಿಯೇ ಲೆಕ್ಕ ಶುರು ಮಾಡಿ. ನೀವು ಒಂದರಿಂದ ನೂರು ಅಥವಾ ನೂರರಿಂದ ಒಂದನ್ನು ಹೇಳಬಹುದು. ಇಲ್ಲವೆ ಮಗ್ಗಿ ಹೇಳಬಹುದು. ಇಲ್ಲವೆ ನಿಮ್ಮಿಷ್ಟದ ಯಾವುದೋ ಲೆಕ್ಕವನ್ನು, ಮಂತ್ರವನ್ನು ಹೇಳಬಹುದು.
ಸಂಗೀತ (Music) ಮದ್ದು : ಕೋಪ ಅತಿರೇಕಕ್ಕೆ ಹೋದಾಗ ಏನು ಮಾಡ್ಬೇಕು ತಿಳಿಯೋದಿಲ್ಲ. ಕೈನಲ್ಲಿರುವ ವಸ್ತು ಪುಡಿಯಾಗೋದಿದೆ. ಬಾಯಿಗೆ ಬಂದಂತೆ ಅನೇಕರು ಮಾತನಾಡುತ್ತಿರುತ್ತಾರೆ. ಇದೆಲ್ಲವೂ ಆಗ್ಬಾರದು ಅಂದ್ರೆ ನೀವು ಸಂಗೀತ ಕೇಳಿ. ಕೋಪ ಬರ್ತಿದ್ದಂತೆ ನಿಧಾನವಾದ ಸಂಗೀತ ಅಥವಾ ನಿಮ್ಮಿಷ್ಟದ ಹಾಡನ್ನು ನೀವು ಕೇಳಬೇಕು. ಕೋಪವನ್ನು ನಿಯಂತ್ರಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಕೇಳ್ತಿದ್ದಂತೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನಸ್ಸು ನಿಯಂತ್ರಣಕ್ಕೆ ಬರುತ್ತದೆ.
ಕೋಪ ನಿಯಂತ್ರಣಕ್ಕೆ ಈ ವಿಧಾನ ಬೆಸ್ಟ್ : ಕೋಪವನ್ನು ನಿಯಂತ್ರಿಸಿಕೊಳ್ಳುವುದು ಬಹಳ ಮುಖ್ಯ. ಕೋಪ ಬರ್ತಿದ್ದಂತೆ ನೀವು ಆಳವಾದ, ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ತಣ್ಣನೆಯ ನೀರನ್ನು ನಿಧಾನವಾಗಿ ಕುಡಿಯಿರಿ. ನೀವು ಹೀಗೆ ಮಾಡಿದ್ರೆ ನಿಮ್ಮ ಕೋಪ ಕಡಿಮೆಯಾಗಿ ಮನಸ್ಸು ಶಾಂತಗೊಳ್ಳುತ್ತದೆ.