ಸೊಪ್ಪು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದ್ರಲ್ಲೂ ಪಾಲಾಕ್, ದಂಟಿನ ಸೊಪ್ಪು, ಮೆಂತ್ಯ ಸೊಪ್ಪು ಸೇರಿದಂತೆ ಅನೇಕ ಸೊಪ್ಪುಗಳನ್ನು ಆಯಾ ಋತುವಿನಲ್ಲಿ ಸೇವನೆ ಮಾಡಿದ್ರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಚಳಿಗಾಲ ಶುರುವಾಗ್ತಿದ್ದಂತೆ ನೀವು ಈ ಸೊಪ್ಪಿನ ಸೇವನೆ ಆರಂಭಿಸಿದ್ರೆ ಒಳ್ಳೆಯದು.
ಚಳಿಗಾಲ ಶುರುವಾಗಿದೆ. ಬೆಳಿಗ್ಗೆ, ಸಂಜೆ ಶೀತ ಗಾಳಿ ಬೀಸ್ತಿದೆ. ಚಳಿಗಾಲದಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡೋದು ಬಹಳ ಮುಖ್ಯ. ಸಾಮಾನ್ಯವಾಗಿ ಚಳಿಗಾಲದಲ್ಲಿ ಸಾಕಷ್ಟು ಹಸಿರು ತರಕಾರಿಗಳನ್ನು ಹಾಗೆ ಹಸಿರು ಸೊಪ್ಪುಗಳನ್ನು ನಾವು ಮಾರುಕಟ್ಟೆಯಲ್ಲಿ ನೋಡಬಹುದು. ಈ ಹಸಿರು ಸೊಪ್ಪುಗಳಲ್ಲಿ ಮೆಂತ್ಯ ಸೊಪ್ಪು ಕೂಡ ಸೇರಿದೆ. ಚಳಿಗಾಲದಲ್ಲಿ ಸೊಪ್ಪುಗಳನ್ನು ಹೆಚ್ಚಾಗಿ ತಿನ್ನಬೇಕು. ಅದ್ರಲ್ಲೂ ನಿಮ್ಮ ಡಯೆಟ್ ನಲ್ಲಿ ಮೆಂತ್ಯ ಸೊಪ್ಪು ಇರ್ಲೇಬೇಕು. ಮೆಂತ್ಯ ಮೈ ಬೆಚ್ಚಗೆ ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ತಿನ್ನೋದು ಮುಖ್ಯ.
ಮೆಂತ್ಯ (Fenugreek) ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ಮೆಂತ್ಯ ಸೊಪ್ಪಿನಲ್ಲಿ ಕ್ಯಾಲ್ಸಿಯಂ (Calcium), ವಿಟಮಿನ್ ಎ, ವಿಟಮಿನ್ ಸಿ, ಪೊಟಾಶಿಯಂ, ಸೆಲೆನಿಯಂ, ಮ್ಯಾಂಗನೀಸ್, ವಿಟಮಿನ್ ಸಿ ಪೋಷಕಾಂಶಗಳು ಕಂಡುಬರುತ್ತವೆ. ಚಳಿಗಾಲ (winter ) ದಲ್ಲಿ ಮೆಂತ್ಯ ಸೊಪ್ಪನ್ನು ಸೇವನೆ ಮಾಡೋದ್ರಿಂದ ಏನೆಲ್ಲ ಲಾಭವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
ಮೆಂತ್ಯ ಸೊಪ್ಪು ಸೇವನೆ ಮಾಡೋದು ಹೇಗೆ ? : ಮೆಂತ್ಯ ಸೊಪ್ಪನ್ನು ನೀವು ನಾನಾ ರೀತಿಯಲ್ಲಿ ಸೇವನೆ ಮಾಡಬಹುದು. ಅನೇಕರು ಹಸಿ ಸೊಪ್ಪಿನ ಸಲಾಡ್ ಮಾಡಿ ಸೇವನೆ ಮಾಡ್ತಾರೆ. ಇದು ರುಚಿಯೂ ಹೌದು, ಆರೋಗ್ಯಕ್ಕೂ ಒಳ್ಳೆಯದು. ಇದಲ್ಲದೆ ನೀವು ಮೆಂತ್ಯ ಸೊಪ್ಪಿನ ಪಲ್ಯ, ಪರೋಠ ಮಾಡಿ ತಿನ್ನಬಹುದು.
ಮೆಂತ್ಯ ಸೊಪ್ಪು ಮಧುಮೇಹಿಗಳಿಗೆ ಒಳ್ಳೆಯ ಔಷಧಿ : ಮೆಂತ್ಯ ಸೊಪ್ಪಿನಲ್ಲಿ ಅಮೈನೋ ಆಮ್ಲ ಇರುತ್ತದೆ. ಇದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಮಧುಮೇಹಿಗಳು ಮೆಂತ್ಯ ಸೊಪ್ಪಿನ ರಸ ಸೇವನೆ ಮಾಡಬಹುದು. ಇಲ್ಲವೆ ಅದರ ಎಲೆಗಳನ್ನು ಸೇವಿಸಬಹುದು. ಎಲೆ ತಿನ್ನುವುದು ಮಧುಮೇಹಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಜೀರ್ಣಕ್ರಿಯೆಗೆ ವರದಾನ ಮೆಂತ್ಯ ಸೊಪ್ಪು : ಮೆಂತ್ಯ ಸೊಪ್ಪಿನ ಸೇವನೆಯಿಂದ ಜೀರ್ಣಾಂಗ ಸುಧಾರಿಸುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಈ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಮತ್ತು ಆಂಟಿ ಆಕ್ಸಿಡಂಟ್ ಗುಣವಿದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೂ ನೀವು ಮೆಂತ್ಯ ಸೊಪ್ಪನ್ನು ಸೇವನೆ ಮಾಡಬಹುದು.
ತೂಕ ಇಳಿಕೆಗೆ ನೆರವಾಗುತ್ತೆ ಮೆಂತ್ಯ ಸೊಪ್ಪು : ತೂಕ ಏರಿಕೆ ಈಗಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ಜನರು ಕೊಬ್ಬು ಕರಗಿಸಿಕೊಳ್ಳಲು ಡಯೆಟ್ ಮಾಡ್ತಾರೆ. ನೀವೂ ಡಯೆಟ್ ಮಾಡ್ತಿದ್ದರೆ ಅದ್ರಲ್ಲಿ ಮೆಂತ್ಯ ಸೊಪ್ಪನ್ನು ಸೇರಿಸಿಕೊಳ್ಳಿ. ಮೆಂತ್ಯ ಸೊಪ್ಪಿನಲ್ಲಿ ಫೈಬರ್ ಪ್ರಮಾಣ ಹೆಚ್ಚಿರುತ್ತದೆ. ಕ್ಯಾಲೊರಿ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ನೀವು ಮೆಂತ್ಯ ಸೊಪ್ಪಿನ ಸೇವನೆ ಮಾಡುವ ಮೂಲಕ ಬೊಜ್ಜನ್ನು ನಿಯಂತ್ರಣದಲ್ಲಿಡಬಹುದು.
ಮೂಳೆಗಳಿಗೆ ಬಲ ನೀಡುತ್ತೆ ಈ ಸೊಪ್ಪು : ಮೆಂತ್ಯ ಸೊಪ್ಪಿನಲ್ಲಿ ಪ್ರೋಟೀಮ್ ಅಂಶ ಹೆಚ್ಚಿದೆ. ಇದರ ಸೇವನೆಯಿಂದ ನಿಮ್ಮ ಮೂಳೆಗಳು ಬಲಪಡೆಯುತ್ತವೆ. ಚಳಿಗಾಲದಲ್ಲಿ ನೀವು ಮೆಂತ್ಯ ಸೊಪ್ಪನ್ನು ಸೇವನೆ ಮಾಡಿದ್ರೆ ಕೀಲು ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.
HEALTHY FOOD: ಮೂಲಂಗಿ ಜೊತೆ ಈ ಆಹಾರ ಸೇವಿಸಿ ಯಡವಟ್ಟು ಮಾಡ್ಕೊಳ್ಬೇಡಿ
ಕೂದಲ ಆರೋಗ್ಯಕ್ಕೆ ಮೆಂತ್ಯ ಸೊಪ್ಪು : ಬರೀ ಸೇವನೆಯಿಂದ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ನೀವು ಇದನ್ನು ಬಳಸಬಹುದು. ಮೆಂತ್ಯ ಸೊಪ್ಪಿನ ಎಲೆಗಳನ್ನು ಅರೆದು ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಅಷ್ಟೇ ಅಲ್ಲ ದಟ್ಟವಾದ ಮತ್ತು ಹೊಳೆಯುವ ಕೂದಲು ನಿಮ್ಮದಾಗುತ್ತದೆ. ಮೆಂತ್ಯ ಸೊಪ್ಪಿನಲ್ಲಿರುವ ಪೋಷಕಾಂಶ ನಿಮ್ಮ ಕೂದಲಿಗೆ ಒಳ್ಳೆಯದು.
Health Tips : ತ್ರಿದೋಷದಿಂದ ದೇಹದಲ್ಲಾಗುತ್ತೆ ಈ ಬದಲಾವಣೆ
ಚರ್ಮದ ಆರೋಗ್ಯಕ್ಕೆ ಬಳಸಿ ಮೆಂತ್ಯ ಸೊಪ್ಪು : ಮೆಂತ್ಯ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ಚರ್ಮದ ಕಲೆಗಳು ಕಡಿಮೆಯಾಗುತ್ತವೆ. ಮೆಂತ್ಯ ಸೊಪ್ಪನ್ನು ಸೇವನೆ ಮಾಡುವುದ್ರಿಂದ ಮೊಡವೆ ಸಮಸ್ಯೆಯಿಂದ ನೀವು ಪರಿಹಾರ ಕಾಣಬಹುದಾಗಿದೆ.