ಮಕ್ಕಳನ್ನು ಬೆಳೆಸೋದು ಸುಲಭದ ಕೆಲಸವಲ್ಲ. ಮನೆ, ಉದ್ಯೋಗದ ಜೊತೆ ಮಕ್ಕಳನ್ನು ಬೆಳೆಸುವ ಪಾಲಕರು, ಅಳುವ ಮಕ್ಕಳು ಬಾಯಿ ಮುಚ್ಚಿದ್ರೆ ಸಾಕು ಎನ್ನುವ ಕಾರಣಕ್ಕೆ ಇಲ್ಲವೆ ಮಕ್ಕಳಿಗೆ ಟೈಂ ಪಾಸ್ ಆಗ್ಲಿ ಎನ್ನುವ ಉದ್ದೇಶದಿಂದ ಟಿವಿ ಅಭ್ಯಾಸ ಮಾಡಿಸ್ತಾರೆ. ಆದ್ರೆ ಅದ್ರ ನಷ್ಟದ ಅರಿವು ಪಾಲಕರಿಗಿರೋದಿಲ್ಲ.
ಎಲ್ಲ ವಯೋಮಾನದವರೂ ಟಿವಿಯನ್ನು ಇಷ್ಟಪಟ್ಟು ನೋಡುತ್ತಾರೆ. ಅದರಲ್ಲಿ ಬರುವ ಮನರಂಜನೆ ಕಾರ್ಯಕ್ರಮ, ನ್ಯೂಸ್, ಕಾರ್ಟೂನ್, ಧಾರಾವಾಹಿಗಳು ಎಲ್ಲ ವಯಸ್ಸಿನವರನ್ನೂ ತನ್ನೆಡೆ ಸೆಳೆಯುತ್ತದೆ. ವಿಶೇಷವಾಗಿ ಪುಟ್ಟ ಮಕ್ಕಳು ಕೂಡ ಅದರಲ್ಲಿ ಬರುವ ಬಣ್ಣ ಬಣ್ಣದ ಚಿತ್ರಗಳನ್ನು ಕುತೂಹಲದಿಂದ ನೋಡುತ್ತಾರೆ. ಇನ್ನು ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಕಾರ್ಟೂನ್ ಗಳನ್ನು ನೋಡಲು ಆರಂಭಿಸುತ್ತಾರೆ. ಇಂತಹ ಮಾದ್ಯಮಗಳಿಂದ ಇಂದು ಮಕ್ಕಳ ಸ್ಕ್ರೀನ್ ಟೈಮ್ ಹೆಚ್ಚಾಗಿದೆ. ಇದಕ್ಕೆ ಮರುಳಾಗಿರುವ ಮಕ್ಕಳು ಆಡುವುದನ್ನೇ ಮರೆತಿದ್ದಾರೆ.
ಕೆಲಸದಲ್ಲಿ ನಿರತರಾಗಿರುವ ತಂದೆ ತಾಯಿಗಳಿಗೆ ಮಕ್ಕಳೊಂದಿಗೆ ಸಮಯ ಕಳೆಯುವುದು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ ಪಾಲಕರು ಮಕ್ಕಳನ್ನು ಟಿವಿ (TV) ಮುಂದೆ ಕೂರಿಸಿ ತಾವು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಅನೇಕ ಮಕ್ಕಳು (Children) ಟಿವಿ ನೋಡುತ್ತಲೇ ಊಟ, ತಿಂಡಿ ಮಾಡುತ್ತಾರೆ. ಮುಂದೆ ಇದೇ ಅಭ್ಯಾಸವಾಗಿ ಅವರು ಟಿವಿಗೆ ಎಡಿಕ್ಟ್ ಆಗುವಂತಾಗುತ್ತದೆ. ಇದು ಅವರ ಬುದ್ಧಿಶಕ್ತಿಯನ್ನು ಕಡಿಮೆಮಾಡುತ್ತದೆ.
ಮಗುವಿನ ಕೂದಲು ದಟ್ಟವಾಗಿ ಬೆಳೆಯೋಕೆ ಚಿಕ್ಕಂದಿನಲ್ಲೇ ತಲೆಗೆ ಈ ಎಣ್ಣೆ ಹಾಕಿ
ಮಕ್ಕಳಿಗೆ ಟಿವಿ ತೋರಿಸಬಹುದೇ? : ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಎಎಪಿ) ಹದಿನೆಂಟು ತಿಂಗಳ ಒಳಗಿನ ಮಕ್ಕಳಿಗೆ ಯಾವುದೇ ಸ್ಕ್ರೀನ್ ಗಳನ್ನು ತೋರಿಸಬಾರದು ಎಂದು ಸ್ಪಷ್ಟಪಡಿಸಿದೆ. ಹದಿನೆಂಟು ತಿಂಗಳಾಗದ ಮಕ್ಕಳಿಗೆ ಟಿವಿ, ಮಾನಿಟರ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮುಂತಾದ ಸ್ಕ್ರೀನ್ ಗಳನ್ನು ತೋರಿಸಬಾರದು. ದೊಡ್ಡ ಮಕ್ಕಳು ಕೂಡ ಇಂತಹ ಸ್ಕ್ರೀನ್ ಗಳನ್ನು ನೋಡದೇ ಇರುವುದು ಒಳ್ಳೆಯದು ಎಂದು ಎಎಪಿ ಹೇಳಿದೆ.
ಯಾವ ವಯಸ್ಸಿನ ಮಕ್ಕಳು ಟಿವಿ ನೋಡಬಹುದು? : 18 ರಿಂದ 24 ತಿಂಗಳ ಮಕ್ಕಳು ತಂದೆ ತಾಯಿಯರ ಜೊತೆ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ದಿನದಲ್ಲಿ ಕೆಲವು ನಿಮಿಷಗಳ ಕಾಲ ನೋಡಬಹುದು. ಇನ್ನು ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಉತ್ತಮ ಗುಣಮಟ್ಟದ ಅಪ್ಲಿಕೇಶನ್ ಗಳನ್ನು ದಿನಕ್ಕೆ ಒಂದು ಗಂಟೆ ನೋಡಬಹುದು.
Parenting Tips : ಮಕ್ಕಳ ವರ್ತನೆ ಬದಲಾಗ್ತಿದ್ಯಾ? ಏನಾಗಿರಬಹುದು ಪ್ರಾಬ್ಲಂ?
ಮಕ್ಕಳಿಗೆ ಎಷ್ಟು ಹೊತ್ತು ಟಿವಿ ತೋರಿಸಬಹುದು? : ಮಕ್ಕಳಿಗೆ ತಮ್ಮ ಸುತ್ತಮುತ್ತಲ ಪರಿಸರದಿಂದಲೇ ಅನೇಕ ರೀತಿಯ ಜ್ಞಾನ ಲಭಿಸುತ್ತದೆ. ಅಂತಹ ಮಕ್ಕಳಿಗೆ ಟಿವಿಯಂತಹ ಮಾದ್ಯಮಗಳು ಬೇಕಾಗುವುದಿಲ್ಲ. ಪಾಲಕರು ಮಕ್ಕಳ ಸ್ಕ್ರೀನ್ ಟೈಮಿಂಗ್ ಅನ್ನೂ ಸೀಮಿತಗೊಳಿಸಬೇಕು. ವೀಡಿಯೋ ಮನರಂಜನೆ ಮಕ್ಕಳ ಬುದ್ಧಿ ಮತ್ತು ಮಾನಸಿಕ ವಿಕಾಸಕ್ಕೆ ಜಂಕ್ ಫುಡ್ ಆಗಿ ಪರಿಣಮಿಸಿದೆ. ಏಕೆಂದರೆ ಟಿವಿ ಮುಂತಾದ ಮನರಂಜನಾ ಮಾದ್ಯಮದಿಂದ ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಧಕ್ಕೆಯಾಗುತ್ತದೆ.
ಚಿಕ್ಕ ಮಕ್ಕಳಿಗೆ ಟಿವಿ ತೋರಿಸುವುದರಿಂದ ಏನೂ ಲಾಭವಿಲ್ಲ. ಏಕೆಂದರೆ ಅವರಿಗೆ ಅದ್ಯಾವುದೂ ಅರ್ಥವಾಗುವುದಿಲ್ಲ. ಅದನ್ನು ಗ್ರಹಿಸುವ ಶಕ್ತಿ ಅವರ ಮೆದುಳಿಗೆ ಇರುವುದಿಲ್ಲ. ಅವರು ಕೇವಲ ಅದರಲ್ಲಿ ಮೂಡುವ ಬಣ್ಣಕ್ಕೆ ಆಕರ್ಷಿತರಾಗುತ್ತಾರೆ.
ಟಿವಿಯಿಂದ ಮಕ್ಕಳ ಭಾಷೆಯ ಬೆಳವಣಿಗೆ ನಿಧಾನವಾಗುತ್ತೆ : ನಾವು ಮಕ್ಕಳ ಜೊತೆ ಎಷ್ಟು ಮಾತನಾಡುತ್ತೇವೆಯೋ ಅಷ್ಟು ಬೇಗ ಮಕ್ಕಳು ಕೂಡ ಅದನ್ನು ಗ್ರಹಿಸುತ್ತಾರೆ ಮತ್ತು ತಾವು ಕೂಡ ಮಾತನಾಡಲು ಪ್ರಯತ್ನಿಸುತ್ತಾರೆ. ಎಎಪಿ ಹೇಳುವ ಪ್ರಕಾರ ಪಾಲಕರು ಮಕ್ಕಳೊಂದಿಗೆ ಆಡುವ ಸಮಯದಲ್ಲಿ ಪ್ರತಿ ಗಂಟೆಗೆ 940 ಪದಗಳನ್ನು ಮಾತನಾಡುತ್ತಾರೆ. ಅದೇ ಪಾಲಕರು ಮಕ್ಕಳನ್ನು ಟಿವಿಯ ಮುಂದೆ ಕೂರಿಸಿದಾಗ ಪದಗಳ ಸಂಖ್ಯೆ 770ಕ್ಕೆ ಕುಸಿಯುತ್ತದೆ. ಯಾವಾಗಲೂ ಟಿವಿಯನ್ನು ನೋಡುತ್ತಿರುವ ಮಕ್ಕಳಿಗೆ ಹೊರಗಿನ ಪ್ರಪಂಚದ ಅರಿವು ಇರುವುದಿಲ್ಲ. ಅವರು ಜನರೊಂದಿಗೆ ಸೇರಲು ಕೂಡ ಬಯಸೋದಿಲ್ಲ. ಚಿಕ್ಕ ಮಕ್ಕಳಂತೂ ಹೊರಗಿನ ಜನರನ್ನು ನೋಡಿದರೆ ಭಯಬೀಳುತ್ತಾರೆ. ಮನೆಯವರ ಹೊರತಾಗಿ ಯಾರ ಜೊತೆಯೂ ಅವರು ಸೇರುವುದಿಲ್ಲ. ಮಕ್ಕಳು ಕಾರ್ಟೂನ್ ಮುಂತಾದ ಟಿವಿ ಕಾರ್ಯಕ್ರಮಗಳನ್ನು ನೋಡುತ್ತಿದ್ದರೆ ಸ್ವಾಭಾವಿಕವಾಗಿಯೇ ಅವರು ಮಾತನಾಡುವುದನ್ನು ಕಡಿಮೆ ಮಾಡುತ್ತಾರೆ. ಆಗ ಮಕ್ಕಳು ಮಾತುಗಳನ್ನು ಕಲಿಯುವಲ್ಲಿ ಅಥವಾ ಸ್ಪಷ್ಟವಾಗಿ ಉಚ್ಛಾರ ಮಾಡುವಲ್ಲಿ ವಿಳಂಬವಾಗಬಹುದು. ಇದರಿಂದ ಅವರ ಬುದ್ಧಿಶಕ್ತಿಯೂ ಕೂಡ ನಿಧಾನವಾಗಿ ವಿಕಾಸವಾಗುತ್ತದೆ.