
ಮಹಾಮಾರಿ ಶಬ್ಧ ಕೇಳ್ತಿದ್ದಂತೆ ಜನರು ಭಯಗೊಳ್ತಾರೆ. ಇದಕ್ಕೆ ಕಾರಣ ಕೊರೊನಾ ಮಾಡಿದ ಅವಾಂತರ. ಇದ್ರಲ್ಲಿ ಅಮೆರಿಕಾ ಕೂಡ ಹೊರತಾಗಿಲ್ಲ. ಕೊರೊನಾದಿಂದ ಸಾಕಷ್ಟು ತೊಂದರೆ ಎದುರಿಸಿದ್ದ ಅಮೆರಿಕಾ (America)ದಲ್ಲಿ ಈ ವರ್ಷ ಒಂದಾದ್ಮೇಲೆ ಒಂದರಂತೆ ಆರೋಗ್ಯ ಸಮಸ್ಯೆ ಎದುರಾಗ್ತಿದೆ. ದಡಾರ, ಹಂಟಾ ವೈರಸ್ ನಂತ ಆಘಾತಕಾರಿ ಪ್ರಕರಣಗಳು ಮತ್ತು ಸಾವುಗಳು ಈ ದೇಶದಲ್ಲಿ ವರದಿ ಆಗ್ತಾನೇ ಇದೆ. ಏತನ್ಮಧ್ಯೆ, ತಜ್ಞರು ಈಗ ಅಮೆರಿಕಕ್ಕೆ ಹೊಸ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾಕ್ಕೆ ಮುಂದೆ ಕಾಡಲಿರುವ ವೈರಸ್, ಏವಿಯನ್ ಇನ್ಫ್ಲುಯೆನ್ಸ ವೈರಸ್. ವಾಸ್ತವವಾಗಿ, ಮಾರ್ಚ್ 2024 ರಿಂದ, H5N1 ಹಕ್ಕಿ ಜ್ವರವು ಅಮೆರಿಕನ್ ಡೈರಿ ಫಾರ್ಮ್ಗಳಲ್ಲಿ ವೇಗವಾಗಿ ಹರಡುತ್ತಿದೆ. 1,000 ಕ್ಕೂ ಹೆಚ್ಚು ಹೈನುಗಾರಿಕೆ ಹಿಂಡುಗಳು ಇದ್ರಿಂದ ಪರಿಣಾಮ ಬೀರಿವೆ. 70 ಮಾನವ ಸೋಂಕುಗಳು ವರದಿಯಾಗಿವೆ. ಒಂದು ಸಾವಿಗೆ ಇದೇ ವೈರಸ್ ಕಾರಣ ಎಂಬುದು ಬಹಿರಂಗವಾಗಿದೆ
H5N1 ಎಂದರೇನು? : ಏವಿಯನ್ ಇನ್ಫ್ಲುಯೆನ್ಸ A (H5N1) ಒಂದು ಸಾಂಕ್ರಾಮಿಕ ವೈರಸ್. ಇದು ಪ್ರಾಥಮಿಕವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ. ನಂತ್ರ ಸಸ್ತನಿಗಳು ಮತ್ತು ಮನುಷ್ಯರಿಗೂ ಸೋಂಕು ತರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ವೈರಸ್ ಮನುಷ್ಯರಿಗೆ ಹರಡಿದಾಗ, ತೀವ್ರ ಅನಾರೋಗ್ಯ ಕಾಡುತ್ತದೆ. ಪಕ್ಷಿಗಳು ಅಥವಾ ಪ್ರಾಣಿಗಳ ನೇರ ಸಂಪರ್ಕಕ್ಕೆ ಮನುಷ್ಯ ಬರುವುದರಿಂದ ಅಥವಾ ಕಲುಷಿತ ಪರಿಸರಕ್ಕೆ ಒಡ್ಡಿಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಇದು ಸಾಂಕ್ರಾಮಿಕವಾಗಿ ವೇಗವಾಗಿ ಹರಡುತ್ತದೆ. ಡೈರಿ ಮತ್ತು ಕೋಳಿ ಸಾಕಣೆದಾರರು ಹಾಗೂ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕಕ್ಕೆ ಬರುವ ಜನರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ವಿಶ್ವಾದ್ಯಂತ ಕಾಡು ಪಕ್ಷಿಗಳಲ್ಲಿ H5 ಹಕ್ಕಿ ಜ್ವರ ವ್ಯಾಪಕವಾಗಿ ಹರಡಿದೆ ಎಂದು ಯುಎಸ್ ಸಿಡಿಸಿ ತನ್ನ ವರದಿಯಲ್ಲಿ ತಿಳಿಸಿದೆ. ಇದು ಕೋಳಿ ಸಾಕಾಣಿಕೆ ಮತ್ತು ಅಮೆರಿಕದ ಡೈರಿ ಹಸುಗಳಲ್ಲಿ ಏಕಾಏಕಿ ರೋಗವನ್ನು ಉಂಟುಮಾಡುತ್ತಿದೆ. ಇತ್ತೀಚೆಗೆ, ಅಮೆರಿಕದ ಡೈರಿ ಮತ್ತು ಕೋಳಿ ಕೆಲಸಗಾರರಲ್ಲಿ ಹಲವಾರು ಮಾನವ ಪ್ರಕರಣಗಳು ವರದಿಯಾಗಿವೆ.
ಹಕ್ಕಿ ಜ್ವರ ದಶಕಗಳಿಂದಲೂ ಅಸ್ತಿತ್ವದಲ್ಲಿದ್ದರೂ, H5N1 ತಳಿಯು ವಿಶೇಷವಾಗಿ ಮಾರಕವಾಗಿದ್ದು, 2003 ರಿಂದೀಚೆಗೆ ಮಾನವ ಸಾವುಗಳಲ್ಲಿ ಶೇ 52 ರಷ್ಟು ಇದಕ್ಕೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಮಾನವರಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ಗಂಟಲು ನೋವು ಮತ್ತು ತೀವ್ರ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬರುತ್ತವೆ. ಕೆಲವು ಸಂದರ್ಭಗಳಲ್ಲಿ, ವೈರಸ್ ನ್ಯುಮೋನಿಯಾ ಅಥವಾ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು. ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ ಮಾರಕ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವೈರಸ್ ಬರದಂತೆ ತಡೆಯಲು ಏನು ಮಾಡ್ಬೇಕು? : ಈ ವೈರಸ್ ಕಂಡುಬರುವ ಪ್ರದೇಶಕ್ಕೆ ಅನವಶ್ಯಕವಾಗಿ ಹೋಗೋದನ್ನು ತಪ್ಪಿಸಿ. ಸೋಂಕಿತ ಪಕ್ಷಿಗಳು ಅಥವಾ ಪ್ರಾಣಿಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸಿ. ಹಸಿ ಮಾಂಸ ಸೇವಿಸುವುದನ್ನು ತಪ್ಪಿಸಿ. ಪಕ್ಷಿಗಳು ಅಥವಾ ಪಕ್ಷಿಗಳ ಮಲದ ಸಂಪರ್ಕಕ್ಕೆ ಬಂದ್ರೆ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ. ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೆಲಸ ಮಾಡುವ ಜನರಿಂದ ಅಂತರ ಕಾಯ್ದುಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ ಡೈರಿ ಹಸುಗಳು H5N1 ಸೋಂಕಿಗೆ ಒಳಗಾಗಿರುವುದರಿಂದ ಹಸಿ ಹಾಲು ಸೇವಿಸದಂತೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಎಚ್ಚರಿಕೆ ನೀಡಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.