ಕೊರೊನಾ ನಂತ್ರ ಜನರ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಾಣಿಸ್ತಿದೆ. ಲಸಿಕೆ ಪಡೆದ್ಮೇಲೆ ಜನರು ನಿರಂತರ ಕೆಮ್ಮು, ಪದೇ ಪದೇ ಕಾಡುವ ನೋವಿನ ಬಗ್ಗೆ ದೂರು ಹೇಳ್ತಿದ್ದಾರೆ. ಈ ಮಧ್ಯೆ ಹೃದಯಾಘಾತಕ್ಕೂ ಕೊರೊನಾ ನಂಟಿದೆ ಎಂಬುದು ಸ್ಪಷ್ಟವಾಗ್ತಿದೆ.
ಯುವಕರಲ್ಲಿ ಹೃದಯಾಘಾತದ ಸಾವು ಹೆಚ್ಚಾಗ್ತಿದೆ. ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದ ಸುದ್ದಿಯನ್ನು ಇನ್ನೂ ಜನರಿಗೆ ಅರಗಿಸಿಕೊಳ್ಳಲಾಗ್ತಿಲ್ಲ. ಕಾರಣ ಪುನೀತ್ ಫಿಟ್ನೆಸ್. ಬರೀ ಇವರು ಮಾತ್ರವಲ್ಲ ಫಿಟ್ ಆಂಡ್ ಫೈನ್ ಎನ್ನಿಸಿಕೊಂಡಿದ್ದ ಅನೇಕರು ಹೃದಯಾಘಾತದಲ್ಲಿ ಬಲಿಯಾಗ್ತಿದ್ದಾರೆ. ಡಾನ್ಸ್ ಮಾಡ್ತಾ, ಜಿಮ್ ಮಾಡ್ತಾ, ವರ್ಕ್ ಔಟ್ ಮಾಡ್ತಾ, ಮದುವೆಯಲ್ಲಿ ಹೀಗೆ ನಾನಾ ಕಡೆ ಅಚಾನಕ್ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಭಾರತದಲ್ಲಿ 40 ವರ್ಷ ವಯಸ್ಸಿನ ಕೆಳಗಿರುವ ಐವರು ವ್ಯಕ್ತಿಗಳಲ್ಲಿ ಒಬ್ಬರಿಗೆ ಹೃದಯಾಘಾತವಾಗ್ತಿದೆ.
ನಿಮಗೆ ಅಚ್ಚರಿಯಾಗ್ಬಹುದು, 2023ರ ಎರಡು ತಿಂಗಳಿನಲ್ಲಿ ಭಾರತ (India) ದಲ್ಲಿ ಹೃದಯಾಘಾತ (Heart Attack) ದ ಪ್ರಮಾಣ ಶೇಕಡಾ 20ರಷ್ಟು ಹೆಚ್ಚಾಗಿದೆ. ಮುಂಬೈ (Mumbai) ನ ಆಸ್ಪತ್ರೆಯೊಂದು ತನ್ನ ತುರ್ತು ವಿಭಾಗದಲ್ಲಿ ಹೃದಯಾಘಾತದ ಪ್ರಕರಣಗಳು ಕಳೆದ 2 ತಿಂಗಳಲ್ಲಿ 15 ರಿಂದ 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದೆ. ಇದು ಮುಖ್ಯವಾಗಿ 25 ವರ್ಷ ವಯಸ್ಸಿನ ಯುವ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಸ್ಪತ್ರೆ ಹೇಳಿದೆ. ಮಧುಮೇಹ (Diabetes) , ಜಡ ಜೀವನಶೈಲಿ, ವಾಯು ಮಾಲಿನ್ಯ, ಒತ್ತಡ, ಭಾರೀ ವ್ಯಾಯಾಮ ಮತ್ತು ಸ್ಟೀರಾಯ್ಡ್ ಗಳು ಯುವ ಹೃದಯಾಘಾತದ ಪ್ರಕರಣಗಳಿಗೆ ಕಾರಣವಾಗುವ ಪ್ರಮುಖ ಅಂಶವೆಂದು ವೈದ್ಯರು ಹೇಳ್ತಾರೆ. ಆದ್ರೆ ಈಗ ಈ ಹೃದಯಾಘಾತಕ್ಕೆ ಕೊರೊನಾ ಕಾರಣವೆಂದು ಹೇಳಲಾಗ್ತಿದೆ.
ಕ್ಯಾನ್ಸರ್ ಪೀಡಿತನ ದೇಹದ ಭಾಗ ಬಳಸಿ ಹೊಸ ಜನನಾಂಗ ಸೃಷ್ಟಿ, ಯಶಸ್ವೀ ಅಳವಡಿಕೆ
ಕೊರೊನಾ ನಂತ್ರ ಹೆಚ್ಚಾಗಿದೆ ಹೃದಯಾಘಾತ : ಹೃದಯಾಘಾತದ ಅಪಾಯವೂ ಕೊರೊನಾಗೆ ಸಂಬಂಧಿಸಿದೆ ಎಂದು ಡಬ್ಲ್ಯಹೆಚ್ ಒನ ಮಾಜಿ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ. ಕೋವಿಡ್ ನಂತರ ಹೃದಯಾಘಾತ, ಮಧುಮೇಹ, ಪಾರ್ಶ್ವವಾಯು ಅಪಾಯವು ಹೆಚ್ಚಾಗುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದವರು ಹೇಳಿದ್ದಾರೆ. ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡ ನಂತ್ರ ಕಾಡ್ತಿರುವ ಹೃದಯಾಘಾತ ಶೇಕಡಾ 4 – 5ರಷ್ಟು ಹೆಚ್ಚು ಎಂದು ಸೌಮ್ಯಾ ಹೇಳಿದ್ದಾರೆ. ಕೊರೊನಾ ರೋಗ, ಹೃದಯಾಘಾತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಲಸಿಕೆಯಿಂದ ರಚನೆಗೊಂಡ ಇಮ್ಯೂನಿಟಿಯನ್ನು ನಾಶಪಡಿಸುವಂತೆ ವೈರಸ್ ಬದಲಾಗುವುದು ಅಸಂಭವ. ಆದ್ರೆ ನಿರಂತರ ಪರೀಕ್ಷೆ ಅಗತ್ಯ ಎನ್ನುತ್ತಾರೆ ಸೌಮ್ಯ. ಕೋವಿಡ್ ಅಥವಾ ದೀರ್ಘ ಕೋವಿಡ್ ಹೃದಯ ನಾಳಗಳಲ್ಲಿ ನಿರಂತರ ಉರಿಯೂತವನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಹಿಂದೆ ವೈದ್ಯರು ಏನು ಹೇಳಿದ್ದರು? : ನವದೆಹಲಿಯ ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಸಂದರ್ಶಕ ಸಲಹೆಗಾರ ಡಾ. ಬಿಕ್ರಮ್ ಕೇಶರಿ ಮೊಹಾಂತಿ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಕೊರೊನಾ ದೇಹದ ಯಾವುದೇ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇದು ಮುಖ್ಯವಾಗಿ ಶ್ವಾಸಕೋಶ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ವೈರಲ್ ಸೋಂಕು ಉರಿಯೂತವನ್ನು ಉಂಟುಮಾಡುವ ಮೂಲಕ ಸಂಪೂರ್ಣ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ಮಯೋಕಾರ್ಡಿಟಿಸ್ ಎಂದು ಕರೆಯಲ್ಪಡುವ ಅಂಗಕ್ಕೆ ಹಾನಿಯಾಗುತ್ತದೆ ಎಂದು ಅವರು ಹೇಳಿದ್ದರು.
ದೇಶದಲ್ಲಿ ಈಗೆಷ್ಟಿದೆ ಕೊರೊನಾ? : ದೇಶದಲ್ಲಿ ಕೊರೊನಾ ಅಬ್ಬರ ಕಡಿಮೆಯಿದೆಯೇ ಹೊರತು ಅದು ಸಂಪೂರ್ಣವಾಗಿ ನಿಂತಿಲ್ಲ. ಕಳೆದ 24 ಗಂಟೆಯಲ್ಲಿ 164 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 2,257 ಕ್ಕೆ ಏರಿಕೆಯಾಗಿದೆ. ಮಂಗಳವಾರ ಬೆಳಿಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 5,30,771 ಕ್ಕೆ ಏರಿದೆ.
Egg Freezing ಎಂದರೇನು? ಗರ್ಭಧರಿಸುವ ಈ ವಿಧಾನದಿಂದ ಅಪಾಯ ಇದ್ಯಾ?
ಈ ಕಾರಣಕ್ಕೆ ಹೆಚ್ಚಾಗ್ಬಹುದು ಹೃದಯಾಘಾತ : ಅತಿ ಭಾರವನ್ನು ಎತ್ತುವುದು, ಟ್ರೆಡ್‌ಮಿಲ್‌ನಲ್ಲಿ ನಡೆಯುವುದು ಅಥವಾ ಶೀತ ವಾತಾವರಣದಲ್ಲಿ ಓಡುವುದು ಮುಂತಾದ ಅಭ್ಯಾಸ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಧಿಕ ಬಿಪಿ, ಮಧುಮೇಹ, ಬೊಜ್ಜು, ಧೂಮಪಾನಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು.