ನಿಮಗೆ ಕಿವಿ ಸರಿಯಾಗಿ ಕೇಳ್ಬೇಕಾ: ಹಾಗಿದ್ರೆ ಈ ತಪ್ಪುಗಳನ್ನ ಇಂದೇ ನಿಲ್ಲಿಸಿ...
ಮಾತನಾಡುವಾಗ ಸರಿ ಕೇಳಿಸಿಕೊಳ್ಳದೇ ಏನು ಅಂತ ಮತ್ತೆ ಕೇಳಿದ್ರೆ ಮೊದ್ಲು ಹೋಗಿ ಕಿವಿದು ಗುಗ್ಗೆ ತೆಗ್ದು ಬಾ ಅಂತ ಹೇಳೋದನ್ನಾ ನೀವು ಕೇಳಿರಬಹುದು. ಅಂದರೆ ಕಿವಿಯಲ್ಲಿರುವ ಗುಗ್ಗೆ ತೆಗೆದರೆ ಕಿವಿ ಸ್ಪಷ್ಟವಾಗಿ ಕೇಳಿಸುತ್ತದೆ ಎಂಬುದು ಬಹುತೇಕರ ಅಭಿಪ್ರಾಯ. ಆದರೆ ಸಂಶೋಧನೆಗಳ ಪ್ರಕಾರ ಹಾಗೂ ತಜ್ಞರ ವಿಶ್ಲೇಷಣೆಯ ಪ್ರಕಾರ ನಮಗೆ ಸರಿಯಾಗಿ ಕಿವಿ ಕೇಳಬೇಕು ಎಂದಿದ್ದರೆ. ಕಿವಿಯಲ್ಲಿರುವ ಗುಗ್ಗೆಯನ್ನು ತೆಗೆಯಲೇಬಾರದಂತೆ, ಕಿವಿಯ ಆರೋಗ್ಯಕ್ಕೆ ಕಿವಿಯೊಳಗಿರುವ ಈ ಗುಗ್ಗೆ ತುಂಬಾ ಅಗತ್ಯವಂತೆ.
ಸಾಮಾನ್ಯವಾಗಿ ಬಹುತೇಕರು ಸ್ನಾನ ಮಾಡಿ ಬಂದು ಕಿವಿ ಕ್ಲೀನ್ ಮಾಡ್ತಾರೆ, ಇಯರ್ ಬಡ್ ಬಳಸಿ ಕಿವಿ ಕ್ಲೀನ್ ಮಾಡ್ತಾರೆ. ಇದರ ಜೊತೆ ಹೇರ್‌ಪಿನ್ ಪಿನ್, ಪೆನ್ಸಿಲ್, ಸ್ಟ್ರಾ ಹೀಗೆ ಬೆಂಕಿ ಕಡ್ಡಿ,ಕೋಳಿಯ ಗರಿ ಹೀಗೆ ಕೈಗೆ ಏನು ಸಿಗುತ್ತೋ ಅದನ್ನು ಬಳಸಿ ಕಿವಿಯೊಳಗೆ ತುರಿಕೆಯುಂಟದಂತೆ ಆದಾಗಲೂ ಅನೇಕರು ಕಿವಿಯೊಳಗಿರುವ ಗುಗ್ಗೆ ತೆಗೆಯಲು ನೋಡುತ್ತಾರೆ. ಆದರೆ ಈಗಿನ ಹೊಸ ಅಧ್ಯಯನವೊಂದರ ಪ್ರಕಾರ ಕಿವಿ ನಮ್ಮ ಸರಿಯಾಗಿ ಕೇಳಬೇಕು ಎಂದರೆ ಕಿವಿಯೊಳಗೆ ಈ ಗುಗ್ಗೆ ಇರಲೇಬೇಕಂತೆ.
ಆದರೆ ಈ ಇಯರ್ ಬಡ್‌ಗಳು ಮಾತ್ರವಲ್ಲ ಕಿವಿಯಿಂದ ಗುಗ್ಗೆಯನ್ನು ತೆಗೆಯಲು ನಾವು ಬಳಸುವ ಎಲ್ಲಾ ವಸ್ತುಗಳಿಂದ ಕೂಡ ಮುಂದೆ ನಾವು ನಮ್ಮ ಕೇಳುವ ಸಾಮರ್ಥ್ಯವನ್ನೇ ಕಳೆದುಕೊಳ್ಳಬಹುದಂತೆ, ಇದರಿಂದ ಕಿವಿ ತಮಟೆಗೆ (ear drum) ಹಾನಿಯಾಗಿ ನಿಧಾನವಾಗಿ ನಾವು ಕೇಳುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಇದರ ಜೊತೆಗೆ ಅನೇಕರಿಗೆ ಕಿವಿಯಲ್ಲಿರುವ ಗುಗ್ಗೆ ತೆಗೆಯದೇ ಹೋದರೆ ಸಮಾಧಾನವೇ ಇರುವುದಿಲ್ಲ, ಕಿವಿಯನ್ನು ಸ್ವಚ್ಚಗೊಳಿಸುವ ಪ್ರಕ್ರಿಯೆಯೆ ಅವರಿಗೆ ಇನ್ನಿಲ್ಲದ ಸುಖ ತೃಪ್ತಿ ನೀಡುತ್ತದೆಯಂತೆ. ಆದರೆ ಇದರಿಂದ ವರ್ಷಗಳ ಕಾಲ ಯಾವುದೇ ಸಮಸ್ಯೆ ಆಗದೇ ಇರಬಹುದು, ಆದರೆ ಕ್ರಮೇಣ ತೊಂದರೆ ಶುರುವಾಗುತ್ತದೆ ಎನ್ನುತ್ತಾರೆ ಜೇಸನ್ ಎ. ಬ್ರಾಂಟ್. ಬ್ರಾಂಟ್ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರೆಲ್ಮನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ(Perelman School of Medicine) ಓಟೋರಿನೋಲಾರಿಂಗೋಲಜಿಯ (Otorhinolaryngology:ಕಿವಿ, ಮೂಗು, ಗಂಟಲು ಮತ್ತು ತಲೆ ಮತ್ತು ಕತ್ತಿಗೆ ಸಂಬಂಧಿತ ಅಧ್ಯಯನ) ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಜನರು ಆರೋಗ್ಯಕರವಾಗಿರಲು ಮತ್ತು ಸ್ವಚ್ಛವಾಗಿರಲು ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಭಾವಿಸುತ್ತಾರೆ ಆದರೆ ಅದು ಸತ್ಯವಲ್ಲ ಎಂದು ಜೇಸನ್ ಎ. ಬ್ರಾಂಟ್ ಹೇಳಿದ್ದಾರೆ. ನಮಗೆ ಕಿವಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದಾದರೆ ಕಿವಿಯಿಂದ ಗುಗ್ಗೆ ತೆಗೆಯಲು ಹೋಗಬಾರದು ಅದನ್ನು ಅದರಷ್ಟಕ್ಕೆ ಕಿವಿಯಲ್ಲೇ ಬಿಡಬೇಕು. ಅಲ್ಲದೇ ಹೀಗೆ ಅದನ್ನು ಕಿವಿಯಲ್ಲೇ ಬಿಡುವುದರಿಂದ ಯಾವುದೇ ಹಾನಿಯಿಲ್ಲ, ಈ ಕಿವಿ ಗುಗ್ಗೆಗಳು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇವು ಪ್ರಯೋಜನಕಾರಿಯಾಗಿವೆ ಎಂದು ಹೇಳುತ್ತಾರೆ ಬ್ರಾಟ್.
ಕಿವಿಯಲ್ಲಿ ಗುಗ್ಗೆ ಇದೆ ಎಂದರೆ ಅದೂ ಗಲೀಜು ಕೊಳಕು ಎಂದರ್ಥವಲ್ಲ, ಇದು ಕಿವಿಯ ಕ್ಯಾನಲ್‌ಗಳು ಕೆಲಸ ಮಾಡುವ ಸಾಮಾನ್ಯ ಕಾರ್ಯವಿಧಾನವಾಗಿದೆ. ಇವುಗಳು ಕಿವಿಯೊಳಗೆ ಯಾವುದೇ ಹಾನಿಕಾರಕ ವಸ್ತುಗಳು ಹೋಗದಂತೆ ತಡೆಯುತ್ತವೆ. ಹತ್ತಿಯ ಇಯರ್ ಬಡ್‌ಗಳು ಅಥವಾ ಇತರ ಯಾವುದೇ ಗುಗ್ಗೆ ತೆಗೆಯುವ ಸಾಧನಗಳು ಕಿವಿಯ ಗುಗ್ಗೆಯನ್ನು ತೆಗೆಯಲು ಸಾಧ್ಯವಿಲ್ಲ, ಇವುಗಳು ಕಿವಿಯ ಗುಗ್ಗೆಯನ್ನು ಮತ್ತಷ್ಟು ಒಳಗೆ ತಳ್ಳುತ್ತವೆ. ಅಲ್ಲದೇ ಅಲ್ಲೇ ಸ್ಟಕ್ ಆಗುವಂತೆ ಮಾಡುತ್ತವೆ. ಇದರಿಂದ ಕಿವಿಯ ತಮಟೆಗೆ ತೊಂದರೆಯಾಗುತ್ತದೆ ಎಂದು ಬ್ರಾಟ್ ಹೇಳುತ್ತಾರೆ. ಕಿವಿಸೋಂಕು, ಕಿವಿನೋವಿನಿಂದ ಆಸ್ಪತ್ರೆಗೆ ಬರುವ ಬಹುತೇಕರು ಕಿವಿಯ ಗುಗ್ಗೆ ತೆಗೆಯಲು ಹೋಗಿ ಅದನ್ನು ಮತ್ತಷ್ಟು ಕೆಳಕ್ಕೆ ತಳ್ಳಿದವರೆ ಆಗಿದ್ದಾರೆ ಎಂದು ಅವರು ಹೇಳುತ್ತಾರೆ.