
ಇಂದು ವೈದ್ಯರ ದಿನ. ವೈದ್ಯರು ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು ಸ್ಮರಿಸಿ ಅವರನ್ನು ಗೌರವಿಸುವ ಪವಿತ್ರ ದಿನ. ಕೋವಿಡ್ ಸಂಕಷ್ಟದ ಸಮಯದ ನಂತರ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಪಾತ್ರ ಏನು ಎಂಬುದು ಇಡೀ ಜಗತ್ತಿಗೆ ಮನವರಿಕೆಯಾಗಿದೆ. ನಮ್ಮ ಜೀವಗಳನ್ನು ಉಳಿಸುವ ಕರ್ತವ್ಯದ ಸಂದರ್ಭದಲ್ಲಿ ವೈದ್ಯರು ತಮ್ಮ ಪ್ರಾಣಗಳನ್ನೇ ಕಳೆದುಕೊಂಡ ಅನೇಕ ನಿದರ್ಶನಗಳನ್ನು ನಾವು ಕಂಡಿದ್ದೇವೆ. ಈ ಕಾರಣದಿಂದಲೇ ಹಿಂದಿನಿಂದಲೂ ನಮ್ಮ ದೇಶದಲ್ಲಿ ವೈದ್ಯರನ್ನು ದೇವರು ಎಂದೇ ಭಾವಿಸಿ ಗೌರವಿಸುವ ಉನ್ನತ ಸಂಪ್ರದಾಯವಿದೆ. ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಹಿಂದೆಂದಿಗಿಂತ ಈಗ ಹೆಚ್ಚು ಪ್ರಸ್ತುತ ಎಂಬುದು ನನ್ನ ಅನಿಸಿಕೆ.
ಡಾ.ಬಿಧಾನ್‌ಚಂದ್ರ ರಾಯ್ ಜನ್ಮದಿನ
ಜುಲೈ 1 ವೈದ್ಯ ರಂಗದ ಇತಿಹಾಸದಲ್ಲೇ ಮಹತ್ವದ ಸಾಧನೆ ಮೆರೆದಿರುವ ಭಾರತರತ್ನ ಡಾ.ಬಿಧಾನ್ ಚಂದ್ರ ರಾಯ್ ಅವರ ಜನ್ಮದಿನ. ನಿಸ್ವಾರ್ಥ ಸೇವೆ ಮತ್ತು ದೂರದರ್ಶಿತ್ವದಿಂದ ಸಾರ್ವಜನಿಕ ಆರೋಗ್ಯ ಸೇವೆಯ ಪರಿಭಾಷೆಯನ್ನೇ ಬದಲಿಸಿದ ಮಹಾ ಚೇತನ ಅವರು. ಹೀಗಾಗಿ ಅವರ ನೆನಪಿನಲ್ಲಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನ ವನ್ನಾಗಿ ಆಚರಿಸುತ್ತೇವೆ. ಶ್ರೇಷ್ಠ ವೈದ್ಯರಾಗಿ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ಡಾ.ಬಿ.ಸಿ.ರಾಯ್ ಸಲ್ಲಿಸಿದ ಸೇವೆ ಅಜರಾಮರ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎಂಬುದು ಅವರ ಕನಸಾಗಿತ್ತು.
National Doctors Day: ಇತಿಹಾಸ, ಪ್ರಾಮುಖ್ಯತೆ ಹೀಗಿದೆ...
ಜುಲೈ 1ರಂದೇ ನಿಧನ
ಕೋಲ್ಕತ್ತಾದಲ್ಲಿ ಆರ್.ಜಿ.ಆರ್. ಕೇರ್ ಮೆಡಿಕಲ್ ಕಾಲೇಜು, ಜಾಧವಪುರದಲ್ಲಿ ಟಿಬಿ ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ, ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಸಂಸ್ಥೆ, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿ ವೈದ್ಯಕೀಯ ಸೇವೆ ನೀಡಿದವರು ಬಿ.ಸಿ.ರಾಯ್. ಭಾರತೀಯ ಮಾನಸಿಕ ಆರೋಗ್ಯ ಸಂಸ್ಥೆ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಮತ್ತು ಕೋಲ್ಕತ್ತಾದಲ್ಲಿ ಮೊದಲ ಸ್ನಾತಕೋತ್ತರ ವೈದ್ಯಕೀಯ ಕಾಲೇಜು ಸ್ಥಾಪಿಸುವಲ್ಲಿ ಅವರ ಪಾತ್ರ ದೊಡ್ಡದು. ಕಾಕತಾಳೀಯ ಎಂಬಂತೆ ಬಿ.ಸಿ.ರಾಯ್ ಅವರು ಜುಲೈ 1 ರಂದೇ ಇಹಲೋಕ ತ್ಯಜಿಸಿದರು.
ಭಾರತೀಯ ವೈದ್ಯ ಪರಂಪರೆ ವಿಶ್ವಕ್ಕೆ ಮಾದರಿ. ಸಾವಿರಾರು ವರ್ಷಗಳ ಹಿಂದೆಯೇ ದೈಹಿಕ ಮಾತ್ರವಲ್ಲದೆ ಮಾನಸಿಕ ಚಿಕಿತ್ಸೆಯ ಮಹತ್ವವನ್ನು ಅರಿತು ಅಭ್ಯಾಸ ಮಾಡಿದ ಇತಿಹಾಸ ನಮ್ಮದು. ಚರಕ, ಸುಶೃತ, ಪತಂಜಲಿಯಂತಹ ಶ್ರೇಷ್ಟವೈದ್ಯಪಂಡಿತರು ದೇಹ ಅಂಗರಚನೆಯ ಕ್ಷಿಷ್ಟಕರ ವಿಷಯಗಳ ಬಗ್ಗೆಯೂ ಅಧ್ಯಯನ ನಡೆಸಿ ಶಸ್ತ್ರಚಿಕಿತ್ಸೆ ಬಗ್ಗೆಯೂ ಪಾಂಡಿತ್ಯ ಹೊಂದಿದ್ದರು ಎಂಬುದು ನಮ್ಮ ಹೆಗ್ಗಳಿಕೆ. ಆಯುರ್ವೇದ, ಯುನಾನಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಂತಹ ನಮ್ಮ ಪಾರಂಪರಿಕ ವೈದ್ಯ ಪದ್ಧತಿಗಳು ಇಂದು ಜಗತ್ತಿನ ಎಲ್ಲೆಡೆ ಬೇಡಿಕೆ ಪಡೆದಿರುವುದು ಕೂಡ ಹೆಮ್ಮೆಯ ವಿಷಯವಾಗಿದೆ.
ಮುಂಚೂಣಿ ಯೋಧರೆಂದು ಕರೆದ ಪ್ರಧಾನಿ
ಕೋವಿಡ್ ಸಾಂಕ್ರಾಮಿಕ ರೋಗ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ನಮಗೆ ಅನೇಕ ರೀತಿಯ ಪಾಠಗಳನ್ನು ಕಲಿಸಿದೆ. ದೇವಸ್ಥಾನ, ಮಸೀದಿ, ಚರ್ಚುಗಳ ಬಾಗಿಲು ಹಾಕಿದ್ದ ಸಂದರ್ಭದಲ್ಲೂ ಜನರ ಪಾಲಿನ ದೇವಾಲಯಗಳಂತೆ ಕೆಲಸ ಮಾಡಿದ್ದು ನಮ್ಮ ಆಸ್ಪತ್ರೆಗಳು ಮಾತ್ರ. ದೇವರಂತೆ ನಮ್ಮೆಲ್ಲರನ್ನು ಸಂರಕ್ಷಿಸಿದ್ದು ವೈದ್ಯರು ಮತ್ತು ವೈದ್ಯ ಸಿಬ್ಬಂದಿ. ಅತ್ಯಂತ ಸಂಕಷ್ಟದ ಸಮಯದಲ್ಲೂ ನಮ್ಮ ವೈದ್ಯರು ಕರ್ತವ್ಯ ಪ್ರಜ್ಞೆ ಮೆರೆದು ನಮ್ಮ ಜೀವ ಉಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಆದರಣೀಯ ಪ್ರಧಾನಿ ನರೇಂದ್ರ ಮೋದಿ ಅವರು ಇವರನ್ನು ಮುಂಚೂಣಿ ಯೋಧರು ಎಂದು ಕರೆದರು.
ಡಾ ಬಿಸಿ ರಾಯ್ ನೆಪದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ!
ಕೋವಿಡ್ ಆರಂಭದ ಸವಾಲಿನ ದಿನಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಸೀಮಿತ ಸೌಲಭ್ಯ ಮತ್ತು ವೈದ್ಯ ಉಪಕರಣಗಳನ್ನು ಬಳಸಿಕೊಂಡು ನಮ್ಮ ವೈದ್ಯರು ಮತ್ತು ಸಿಬ್ಬಂದಿ ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದ್ದು ಈಗ ಇತಿಹಾಸ. ಆ ಸವಾಲಿನ ದಿನಗಳನ್ನು ದಾಟಿ ಹಿಂತಿರುಗಿ ನೋಡಿದಾಗ ವೈದ್ಯಕೀಯ ರಂಗದ ನಮ್ಮ ಸಾಧನೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತಿದೆ. ತಂತ್ರಜ್ಞಾನದ ಸಮರ್ಥ ಬಳಕೆ, ದೇಶಿಯವಾಗಿ ಲಸಿಕೆ ಉತ್ಪಾದನೆ, ಪ್ರಯೋಗಾಲಯಗಳ ಸ್ಥಾಪನೆ, ಆಕ್ಸಿಜನ್, ಐಸಿಯು ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ, ಆಸ್ಪತ್ರೆಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಿ, ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಕೊರತೆ ನಿವಾರಿಸಿ ಮುಂದೆ ಕೋವಿಡ್‌ನಂತಹ ಯಾವುದೇ ಮಹಾಮಾರಿ ಬಂದರೂ ಎದುರಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಕಡಿಮೆ ಅವಧಿಯಲ್ಲಿ ಮಾಡಲಾಗಿದೆ.
ವೈದ್ಯ ಸಿಬ್ಬಂದಿ ನೇಮಕಾತಿ
ರಾಜ್ಯದಲ್ಲಿ ಮೊದಲ ಬಾರಿಗೆ ಎರಡೂವರೆ ಸಾವಿರಕ್ಕೂ ಹೆಚ್ಚು ವೈದ್ಯರು, ಐನೂರಕ್ಕೂ ಹೆಚ್ಚು ತಜ್ಞರು ಹಾಗೂ ಇತರೆ ವೈದ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಪ್ರಾಥಮಿಕ ಹಂತದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ಕೊರತೆಗಳನ್ನು ನಿವಾರಿಸಿ ಗುಣಮಟ್ಟಹೆಚ್ಚಿಸಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಮೂಲಕ ಪ್ರತಿಯೊಬ್ಬ ಪ್ರಜೆಗೂ ವಿಮೆ ಭದ್ರತೆ ನೀಡಲಾಗುತ್ತಿದೆ. ಇಷ್ಟಾದರೂ ಆಗಬೇಕಿರುವುದು ಇನ್ನು ಸಾಕಷ್ಟಿದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು, ಸಾಂಕ್ರಾಮಿಕವಲ್ಲದ ರೋಗಗಳನ್ನು ಮುಂಚಿತವಾಗಿ ಪತ್ತೆ ಹಚ್ಚಿ ಹೆಚ್ಚುತ್ತಿರುವ ಸಾವಿನ ಸಂಖ್ಯೆಗೆ ಕಡಿವಾಣ ಹಾಕಬೇಕು, ಗರ್ಭಿಣಿ ಮತ್ತು ಮಕ್ಕಳ ಸಾವಿನ ಪ್ರಮಾಣ ತಗ್ಗಿಸಬೇಕಿದೆ. ಹಿರಿಯ ನಾಗರೀಕರಿಗೆ ಆರೋಗ್ಯ ಭದ್ರತೆ ನೀಡಬೇಕಿದೆ, ಕೊರತೆ ಇರುವ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಸ್ಥಾಪನೆಯ ಗುರಿ ತಲುಪಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ನಮ್ಮ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ.
ಈ ಆಯುರ್ವೇದ ವೈದ್ಯರ ಶುಲ್ಕ 5 ರೂ ಮಾತ್ರ!
ದುಬಾರಿ ಶುಲ್ಕ ವಸೂಲಿ ದುರದೃಷ್ಟಕರ
ವೈದ್ಯ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿದ್ದರೂ ವೇತನಕ್ಕಾಗಿ ದುಡಿಯುತ್ತಿರುವುದು ವಾಸ್ತವ. ಆದರೆ ಕೆಲ ವೈದ್ಯರು ಅನವಶ್ಯಕವಾಗಿ ದುಬಾರಿ ಶುಲ್ಕ ವಸೂಲಿ ಮಾಡಿ ರೋಗಿಗಳಿಗೆ ಕಿರುಕುಳ ನೀಡುವ ಪ್ರಕರಣಗಳು ವರದಿಯಾಗುತ್ತಿರುವುದು ದುರದೃಷ್ಟಕರ. ಹೀಗಾಗಿ ಒಬ್ಬ ವೈದ್ಯನಾಗಿ ನನ್ನೆಲ್ಲಾ ವೈದ್ಯ ಮಿತ್ರರಲ್ಲಿ ನನ್ನದೊಂದು ವಿನಂತಿಯಿದೆ, ನಿಮ್ಮ ಕರ್ತವ್ಯದಲ್ಲಿ ವೃತ್ತಿಪರತೆ ಜತೆಗೆ ನಿಮ್ಮ ಬಳಿ ಬರುವ ರೋಗಿಗಳಿಗೆ ದಯೆ, ಅಂತಃಕರಣಗಳಿಂದ ಚಿಕಿತ್ಸೆ ನೀಡಿ. ಗುಣಮುಖರಾದ ರೋಗಿ ಹಿಂತಿರುಗುವಾಗ ಅವರ ಕಣ್ಣಿನಲ್ಲಿ ಕಾಣುವ ನಿಮ್ಮೆಡೆಗಿನ ಕೃತಜ್ಞತಾ ಭಾವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಮರೆಯಬೇಡಿ.
ಎಲ್ಲರಿಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು.
- ಡಾ.ಕೆ.ಸುಧಾಕರ್
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.