
ಡಾ.ಹರೀಶ್ ಇ, ಸರ್ಜಿಕಲ್ ಒನ್ನೋಲಾಜಿಸ್ಟ್, ಕೆ ಎಂ ಸಿ ಆಸ್ಪತ್ರೆ, ಬಿ ಆರ್ ಅಂಬೇಡ್ಕರ್ ವೃತ್ತ, ಮಂಗಳೂರು
ನಿತ್ಯದ ಬ್ಯುಸಿ ಜೀವನದಲ್ಲಿ ಕೆಲ ಆರೋಗ್ಯ ಸಮಸ್ಯೆ ಲಕ್ಷಣಗಳನ್ನು ತೋರದಿದ್ದರೆ ಗಮನಕ್ಕೆ ಬರುವುದಿಲ್ಲ. ಆದರೆ ಈ ಲಕ್ಷಣಗಳಿಲ್ಲದ ಸಮಸ್ಯೆ ಬಗ್ಗೆ ಗಮನ ಹರಿಸದಿದ್ದರೆ ರೋಗವಾಗಿ ಪರಿಣಮಿಸಿ ಜೀವಕ್ಕೆ ಕುತ್ತಾಗಬಹುದು. ಅಂತಹ ಸಮಸ್ಯೆಗಳಲ್ಲಿ ಥೈರಾಯ್ಡ್ ಸಮಸ್ಯೆ ಕೂಡ ಒಂದು. ಕುತ್ತಿಗೆಯಲ್ಲಿನ ಸಣ್ಣ ಚಿಟ್ಟೆ ಆಕಾರದ ಥೈರಾಯ್ಡ್ ಗ್ರಂಥಿಯು ಹಾರ್ಮೋನ್ ಉತ್ಪತ್ತಿ ಮೂಲಕ ದೇಹದ ಚಟುವಟಿಕೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಈ ಥೈರಾಯ್ಡ್ ಗ್ರಂಥಿ ಆರೋಗ್ಯಪೂರ್ಣವಾಗಿರುವಂತೆ ಕಾಳಜಿ ವಹಿಸುವುದು ಮುಖ್ಯ.
ಹೆಚ್ಚುತ್ತಿದೆ ಥೈರಾಯ್ಡ್ ಕ್ಯಾನ್ಸರ್: ಕಳೆದ ಕೆಲ ದಶಕಗಳಿಂದ ಥೈರಾಯ್ಡ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಈ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ. 2023ರ ಬೆಂಗಳೂರು ಕಿದ್ವಾಯಿ ಸ್ಮಾರಕ ಸಂಸ್ಥೆಯ ಒಮ್ಮೊಲಾಜಿ ವಿಭಾಗದ ವರದಿ ಪ್ರಕಾರ ಶೇ.11.6% ರಷ್ಟು ಮಹಿಳೆಯರಲ್ಲಿ ಹಾಗೂಶೇ.10.1% ಪುರುಷರಲ್ಲಿ ಥೈರಾಯ್ಡ್ ಕ್ಯಾನ್ಸರ್ ವರದಿಯಾಗಿದೆ. ಅದರಲ್ಲೂ ಕರಾವಳಿ ಭಾಗದ ಜನರಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಥೈರಾಯ್ಡ್ ಕ್ಯಾನ್ಸರ್‌ನ ಲಕ್ಷಣಗಳು ನಿಧಾನವಾಗಿ ಗೋಚರಿಸುವುದರಿಂದ ಗಮನಕ್ಕೆ ಬಾರದೆಯೇ ಸಮಸ್ಯೆ ಉಲ್ಬಣಗೊಳ್ಳುವುದು ಹೆಚ್ಚು. ಹೀಗಾಗಿ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಗಮನ ಹರಿಸುವುದು, ಆರಂಭದಲ್ಲೇ ಸಮಸ್ಯೆಯನ್ನು ಪತ್ತೆಹಚ್ಚಿ, ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.
ಥೈರಾಯ್ಡ್ ಇದ್ದವರು ಅದರ ನಿಯಂತ್ರಣಕ್ಕೆ ಏನು ತಿನ್ನಬೇಕು, ಇಲ್ಲಿದೆ ಸೂಕ್ತ ಆಹಾರ ಸಲಹೆ
ಥೈರಾಯ್ಡ್ ಕ್ಯಾನ್ಸರ್‌ನ ಲಕ್ಷಣಗಳೇನು?: ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಗೋಚರಿಸದಿದ್ದರೂ ಸಮಯ ಕಳೆದಂತೆ ಕೆಲ ರೋಗ ಲಕ್ಷಣಗಳನ್ನು ಪತ್ತೆಹಚ್ಚಬಹುದು.
• ಕುತ್ತಿಗೆಯಲ್ಲಿ ಸಣ್ಣ ಗಡ್ಡೆ, ಬಾವು ಕಾಣಿಸಿಕೊಳ್ಳುವುದು ಥೈರಾಯ್ಡ್ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣ
• ಧ್ವನಿಯಲ್ಲಿ ಬದಲಾವಣೆ, ದನಿ ಗಡುಸಾಗುವುದು
• ಆಹಾರ ನುಂಗುವ ವೇಳೆ ತಡೆಯುಂಟಾಗುವುದು, ಆಹಾರ ಸೇವನೆಯಲ್ಲಿ ಸಮಸ್ಯೆ
• ಶ್ವಾಸನಾಳದಲ್ಲಿ ಒತ್ತಡ ಹಿನ್ನಲೆ ಉಸಿರಾಟದ ಸಮಸ್ಯೆ
• ಕುತ್ತಿಗೆ ಗಂಟಲಲ್ಲಿ ನೋವು ಆರಂಭವಾಗಿ ಕಿವಿಯ ಭಾಗದಲ್ಲೂ ನೋವು ಕಾಣಿಸಿಕೊಳ್ಳುವುದು. ಕುತ್ತಿಗೆ ಭಾಗದಲ್ಲಿ ಊತ
• ಯಾವುದೇ ಸೋಂಕು ಇಲ್ಲದಿದ್ದರೂ ಕೆಮ್ಮು ಹೆಚ್ಚಾಗುವುದು
• ಕ್ಯಾನ್ಸರ್‌ನ ಮುಂದುವರೆದ ಹಂತದಲ್ಲಿ ತೀವ್ರ ಆಯಾಸ, ತೂಕದಲ್ಲಿ ದಿಢೀರ್ ಇಳಿಕೆ
ಥೈರಾಯ್ಡ್ ಕ್ಯಾನ್ಸರ್‌ಗೆ ಕಾರಣವೇನು?: ಈ ಸಮಸ್ಯೆಗೆ ನಿಖರ ಕಾರಣವಿಲ್ಲ. ಆದರೆ ಕೆಲವು ವಿಚಾರಗಳು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತವೆ.
• ಕುಟುಂಬದಲ್ಲಿ ಈ ಮೊದಲು ಥೈರಾಯ್ಡ್ ಕ್ಯಾನ್ಸರ್ ಇದ್ದಲ್ಲಿ, ಈ ಸಮಸ್ಯೆ ನಮ್ಮಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
• ಕತ್ತು ಹಾಗೂ ತಲೆಯ ಭಾಗದ ಮೇಲೆ ಅತಿಯಾದ ವಿಕಿರಣ(ರೇಡಿಯೇಶನ್) ಪ್ರಭಾವ ಬೀರುವುದರಿಂದ ಅದರಲ್ಲೂ ಚಿಕ್ಕವಯಸ್ಸಿನಲ್ಲಿ ಈ ರೀತಿಯ ರೇಡಿಯೇಶನ್‌ಗೆ ಗುರಿಯಾಗುವುದರಿಂದ ಕ್ಯಾನ್ಸರ್‌ನ ಸಾಧ್ಯತೆ ಅಧಿಕವಾಗಿರುತ್ತದೆ.
• ಐಯೋಡಿನ್ ಪ್ರಮಾಣದಲ್ಲಿ ಏರುಪೇರು
• ಥೈರಾಯ್ಡ್ ಗ್ರಂಥಿಯಲ್ಲಿ ಗೊಯ್ಸರ್ ಅಥವಾ ಪ್ರೊನಿಕ್ ಇನ್‌ಪ್ಲಮೇಶನ್ ಇದ್ದಲ್ಲಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು.
• ಆರ್‌ಇಟಿ ಹಾಗೂ ಬಿಆರ್‌ಎಫ್‌ನಂತಹ ವಂಶವಾಹಿನಿಯಲ್ಲಿನ ರೂಪಾಂತರಗಳು ಕಾರಣವಾಗಬಹುದು
• ಹಾರ್ಮೋನಲ್ಲಿನ ಏರುಪೇರಿನ ಕಾರಣ ಪುರುಷರಿಗಿಂತ ಮಹಿಳೆಯರಲ್ಲೇ ಥೈರಾಯ್ಡ್ ಕ್ಯಾನ್ಸರ್ ಪ್ರಮಾಣ ಹೆಚ್ಚು ಅತಿಯಾದ ತೂಕ, ದೈಹಿಕ ಚಟುವಟಿಕೆಯಿಲ್ಲದಿರುವುದು, ಧೂಮಪಾನ ಕೂಡ ಕಾರಣಗಳೇ
ಥೈರಾಯ್ಡ್ ಕ್ಯಾನ್ಸರ್‌ನಲ್ಲಿ ಹಲವು ವಿಧ
• ಪಾಪಿಲ್ಲರಿ ಥೈರಾಯ್ಡ್ ಕ್ಯಾನ್ಸರ್ - 80%-85% ಕಂಡುಬರುವ ಪ್ರಕರಣ
• ಫಾಲಿಕ್ಯುಲರ್ ಥೈರಾಯ್ಡ್ ಕ್ಯಾನ್ಸರ್- 10%-15% ಮಾತ್ರ ಪತ್ತೆಯಾಗುವ ಕ್ಯಾನ್ಸರ್
• ಮೆಡ್ಯುಲ್ಲರಿ ಥೈರಾಯ್ಡ್ ಕ್ಯಾನ್ಸರ್- ಬಹಳ ಅಪರೂಪದಲ್ಲಿ ಪತ್ತೆಯಾಗುವ ವಿಧ
• ಅನಾಪ್ಲಾಸ್ಟಿಕ್ ಥೈರಾಯ್ಡ್ ಕ್ಯಾನ್ಸರ್ - ಅಪರೂಪದ ಪ್ರಕರಣವಾದರೂ, ಮುಂದುವರೆದ ಹಂತದಲ್ಲಿ ಪತ್ತೆಯಾಗುವ ಸಾಧ್ಯತೆ ಹೆಚ್ಚು
• ರೇರ್ ವೇರಿಯಂಟ್ಸ್- ಇವು ಇಮ್ಯೂನ ಜೀವಕೋಶಗಳಿಂದ ಉತ್ಪತ್ತಿಯಾಗುತ್ತವೆ.
ಭಯ ಬೇಡ, ಗುಣಪಡಿಸಬಹುದು: ಕ್ಯಾನ್ಸರ್ ಎಂದಾಕ್ಷಣ ಆತಂಕ ಪಡುವುದಕ್ಕಿಂತ ಲಕ್ಷಣಗಳನ್ನು ಅರಿತು ಶೀಘ್ರ ಚಿಕಿತ್ಸೆಗೆ ಒಳಪಡಬೇಕು.ಥೈರಾಯ್ ಕ್ಯಾನ್ಸರ್‌ಗೆ ಕೂಡ ಶೀಘ್ರ ಚಿಕಿತ್ಸೆ ಆರಂಭಿಸುವ ಮೂಲಕ ಬಹುತೇಕ ಪ್ರಕರಣದಲ್ಲಿ ರೋಗವನ್ನು ಸಂಪೂರ್ಣ ಗುಣಪಡಿಸಬಹುದು. ಥೈರಾಯ್ಡ್ ಕ್ಯಾನ್ಸರ್ ಯಾವ ಹಂತದಲ್ಲಿದೆ, ಯಾವ ರೀತಿಯಲ್ಲಿ ಹರಡಿದೆ ಹಾಗೂ ರೋಗಿಯ ಆರೋಗ್ಯ ಲಕ್ಷಣದ ಮೇಲೆ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣ ಅಥವಾ ಪಾಶ್ವ ಥೈರಾಯ್ಡ್ ನ್ನು ತೆಗೆಯಬಹುದು. ರೇಡಿಯೋ ಆಕ್ಟಿವ್ ಐಯೋಡಿನ್ ಚಿಕಿತ್ಸೆ, ಹಾರ್ಮೋನ್ ಥೆರಪಿ, ಅಲ್ಫಾಸೌಂಡ್ ಪರೀಕ್ಷೆ ಕೂಡ ಚಿಕಿತ್ಸೆಯ ಭಾಗವಾಗಿವೆ.
ಎಲ್ಲವೂ ಸರಿ ಇದ್ದರೂ 30-40ರ ನಂತರ ಮಾಡಿಸಲೇಬೇಕಾದ 5 ಟೆಸ್ಟ್‌ಗಳು
ಹೇಗಿರಬೇಕು ಆಹಾರ, ಜೀವನ ಶೈಲಿ?: ಚಿಕಿತ್ಸೆಯ ಬಳಿಕ, ಹಾಗೂ ಚಿಕಿತ್ಸೆಯ ಸಮಯದಲ್ಲಿ ವೈದ್ಯರ ಸಲಹೆಯಂತೆ ಕೆಲ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಉತ್ತಮ ಪ್ರಮಾಣದ ನಿದ್ದೆ ಬಹುಮುಖ್ಯ. ಒತ್ತಡ ಕೆಲಸಗಳಿಂದ ಹಾಗೂ ಅನಾರೋಗ್ಯಕರ ಆಹಾರ ಸೇವನೆಯಿಂದ ದೂರವಿರಬೇಕು. ಹಸಿರು ತರಕಾರಿ ಸೇವೆನೆ, ಹಣ್ಣುಗಳ ಸೇವನೆ ಶಕ್ತಿ ನೀಡುವುದಲ್ಲದೇ, ತೂಕ ನಿರ್ವಹಣೆಗೂ ಸಹಕಾರಿ. ಆದಷ್ಟು ಜಿಡ್ಡು, ಎಣ್ಣೆ ಪದಾರ್ಥಗಳನ್ನು ದೂರವಿಡಿ, ಕಡಿಮೆ ಐಯೋಡಿನ್ ಡೈಯಟ್ ರೋಗಿಯ ಆರೋಗ್ಯದ ಸ್ಥಿತಿ ಆಧರಿಸಿ ವೈದ್ಯರ ಸಲಹೆ ಮೇರೆಗೆ ಅನುಸರಿಸಬೇಕಾಗುತ್ತದೆ. ಹೀಗಾಗಿ ಕೆಲ ಸಮಯದ ವರೆಗೆ ವೈದ್ಯರ ಸಲಹೆ ಪಾಲಿಸುವುದು ಮುಖ್ಯ. ಮಿತವಾದ ವ್ಯಾಯಾಮ ಕೂಡ ಮಾನಸಿಕ ಒತ್ತಡದಿಂದ ಹೊರಬರಲು ನೆರವಾಗುತ್ತದೆ. ಶೀಘ್ರ ರೋಗ ಪತ್ತೆ, ಆರೋಗ್ಯಕರ ಜೀವನ ಶೈಲಿ, ಸೂಕ್ತ ವಾದ ಚಿಕಿತ್ಸೆಯಿಂದ ಥೈರಾಯ್ಡ್ ಕ್ಯಾನ್ಸರ್ ಗುಣಪಡಿಸಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.