ಇದೆಂತಾ ಅಚ್ಚರಿ.! ವ್ಯಕ್ತಿಯ ದೇಹದಲ್ಲಿದ್ದ Kidney Stone ಕಂಡು ವೈದ್ಯರಿಗೇ ಶಾಕ್!

By Suvarna NewsFirst Published Dec 17, 2021, 5:15 PM IST
Highlights

ಹುಬ್ಬಳ್ಳಿ ಮೂಲದ ವ್ಯಕ್ತಿಯ ದೇಹದಲ್ಲಿತ್ತು 156 ಮೂತ್ರಪಿಂಡದ ಕಲ್ಲು
ವ್ಯಕ್ತಿಯ ದೇಹದಿಂದ ಹೊರತೆಗೆದ ದಾಖಲೆ ಪ್ರಮಾಣದ ಸ್ಟೋನ್ಸ್
ಹೈದರಾಬಾದ್ ನ ಆಸ್ಪತ್ರೆಯಲ್ಲಿ ನಡೆದ ಕೀಹೋಲ್ ಶಸ್ತ್ರ ಚಿಕಿತ್ಸೆ

ಹೈದರಾಬಾದ್ (ಡಿ. 17): ಕಿಡ್ನಿ ಸ್ಟೋನ್ (Kidney Stone) ಒಂದಾದ್ರೆನೇ ತಡ್ಕೊಳ್ಳೋಕೆ ಆಗಲ್ಲ.. ಅಂತದ್ರಲ್ಲಿ, ಇಲ್ಲೊಬ್ಬ ವ್ಯಕ್ತಿಯ ದೇಹದಿಂದ ದಾಖಲೆಯ 156 ಕಿಡ್ನಿ ಸ್ಟೋನ್ ಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಇಷ್ಟು ರಾಶಿ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲು ವೈದ್ಯರು ಬರೋಬ್ಬರಿ ಮೂರು ಗಂಟೆಗಳ ಕಾಲ ಹರಸಾಹಸ ಮಾಡಿದ್ದಾರೆ. ಹೈದರಾಬಾದ್ ನ (Hyderabad ) ಪ್ರಮುಖ ಆಸ್ಪತ್ರೆಯ ವೈದ್ಯರು 50 ವರ್ಷ ವಯಸ್ಸಿನ ಹುಬ್ಬಳಿ ಮೂಲದ ವ್ಯಕ್ತಿಯೊಬ್ಬನ ದೇಹದಿಂದ ಕೀ ಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಇಷ್ಟು ಪ್ರಮಾಣದ ಕಲ್ಲುಗಳನ್ನು ಹೊರತೆಗೆದಿದ್ದು, ಈ ಸ್ಟೋನ್ ಮ್ಯಾನ್ ನ ಕಂಡು ಸ್ವತಃ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ದೊಡ್ಡ ಶಸ್ತ್ರಚಿಕಿತ್ಸೆಯನ್ನು ಮಾಡದೇ ಲ್ಯಾಪ್ರೋಸ್ಕೋಪಿ (Laparoscopy) ಮತ್ತು ಎಂಡೋಸ್ಕೋಪಿ (Endoscopy) ಬಳಸಿ 156 ಸ್ಟೋನ್ ಗಳನ್ನು ಹೊರತೆಗೆದಿದ್ದಾರೆ. ಹುಬ್ಬಳ್ಳಿ (Hubli ) ನಿವಾಸಿಯಾಗಿರುವ ಶಾಲಾ ಶಿಕ್ಷಕ ಬಸವರಾಜ್ ಮಡಿವಾಳರ್ (Basavaraj Madiwalar) ಅವರ ಹೊಟ್ಟೆಯ ಬಳಿ ಹಠಾತ್ ಆಗಿ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಕೊಂಡಾಗ ಮೂತ್ರಪಿಂಡದಲ್ಲಿ ಕಲ್ಲುಗಳಾಗಿರುವುದು ಪತ್ತೆಯಾಗಿದೆ. ಸ್ಕ್ರೀನಿಂಗ್ ನಲ್ಲಿ ಕಿಡ್ನಿ ಸ್ಟೋನ್ ಗಳ ದೊಡ್ಡ ಗುಂಪುಗಳೇ ಕಾಣಿಸಿತ್ತು ಎಂದು ಆಸ್ಪತ್ರೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅದಲ್ಲದೆ, ಇಡೀ ದೇಶದಲ್ಲಿ ಲ್ಯಾಪ್ರೋಸ್ಕೋಪಿ ಹಾಗೂ ಎಂಡೋಸ್ಕೊಪಿ ಬಳಸಿ, ವ್ಯಕ್ತಿಯೊಬ್ಬನ ದೇಹದಿಂದ ತೆಗೆದ ಗರಿಷ್ಠ ಪ್ರಮಾಣದ ಕಿಡ್ನಿ ಸ್ಟೋನ್ ಗಳ ಸಂಖ್ಯೆ ಇದಾಗಿದೆ.

ರೋಗಿಯು ಈಗ ಆರೋಗ್ಯದಿಂದಿದ್ದು, ಅವರ ನಿತ್ಯ ಚಟುವಟಿಕೆಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಹೈದರಾಬಾದ್ ನ ಪ್ರೀತಿ ಮೂತ್ರಶಾಸ್ತ್ರ ಮತ್ತು ಕಿಡ್ನಿ ಆಸ್ಪತ್ರೆಯಲ್ಲಿ (Preeti Urology & Kidney Hospital) ಈ ಅಚ್ಚರಿಯ ಶಸ್ತ್ರಚಿಕಿತ್ಸೆ ನಡೆದಿದೆ. ಅದಲ್ಲದೆ, ರೋಗಿಯ ಮೂತ್ರಪಿಂಡ ಸಾಮಾನ್ಯವಾಗಿ ಇರುವಂಥ ಸ್ಥಳದಲ್ಲಿರಲಿಲ್ಲ. ಸಾಮಾನ್ಯ ವ್ಯಕ್ತಿಗಳಿಗೆ ಮೂತ್ರನಾಳದ ಸನಿಹದಲ್ಲಿಯೇ ಮೂತ್ರಪಿಂಡವಿರುತ್ತದೆ. ಆದರೆ, ಈ ವ್ಯಕ್ತಿಯ ಮೂತ್ರಪಿಂಡ ಹೊಟ್ಟೆಯ ಸಮೀಪದಲ್ಲಿತ್ತು. "ಅಸಹಜ ಸ್ಥಳದಲ್ಲಿ ಮೂತ್ರಪಿಂಡವಿರುವುದು ಯಾವುದೇ ಸಮಸ್ಯೆಗೆ ಕಾರಣವಾಗುವುದಿಲ್ಲವಾದರೂ, ಈ ಸ್ಥಳದಿಂದ ಕಲ್ಲುಗಳನ್ನುಹೊರತೆಗೆಯುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಪದೇ ಪದೇ ಹೊಟ್ಟೆ ಅಥವಾ ಬೆನ್ನು ನೋವು ಕಿಡ್ನಿ ಸ್ಟೋನ್ ಸೂಚನೆ ಇರಬಹುದು
ಬಹುಶಃ ಕಳೆದ ಎರಡು ವರ್ಷಕ್ಕಿಂತ ಹೆಚ್ಚಿನ ಕಾಲದಿಂದ ಅವರ ಮೂತ್ರಪಿಂಡದಲ್ಲಿ ಕಲ್ಲುಗಳು ಶೇಖರಣೆಯಾಗುತ್ತಿದೆ. ಆದರೆ, ಯಾವುದೇ ರೋಗ ಲಕ್ಷಣ ಅವರಲ್ಲಿ ಇದ್ದಿರಲಿಲ್ಲ. ಆದರೆ, ಹೊಟ್ಟೆಯ ಸಮೀಪ ಹಠಾತ್ ನೋವು ಕಾಣಿಸಿಕೊಂಡ ಬಳಿಕ ವ್ಯಕ್ತಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ಈ ವೇಳೆ ಅವರ ಕಿಡ್ನಿಯಲ್ಲಿ ಸಾಕಷ್ಟು ಪ್ರಮಾಣದ ಕಿಡ್ನಿ ಸ್ಟೋನ್ ಗುಂಪುಗಳು (large cluster) ಕಾಣಿಸಿದವು. ಅವರ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದ ಬಳಿಕ ದೊಡ್ಡ ಶಸ್ತ್ರ ಚಿಕಿತ್ಸೆಯ ಬದಲು ಲ್ಯಾಪ್ರೋಸ್ಕೋಪಿ ಹಾಗೂ ಎಂಡೋಸ್ಕೋಪಿ ಬಳಸಿ ಕಿಡ್ನಿಯಲ್ಲಿದ್ದ 156 ಕಲ್ಲುಗಳನ್ನು ಹೊರತೆಗೆಯಲು ಯಶಸ್ವಿಯಾಗಿದ್ದೇವೆ ಎಂದು ಆಸ್ಪತ್ರೆಯ ಯೂರಾಲಾಜಿಸ್ಟ್ (Urologist ) ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಚಂದ್ರಮೋಹನ್ (Dr. V Chandra Mohan) ಹೇಳಿದ್ದಾರೆ.

ಕಿಡ್ನಿಯಲ್ಲಿ ಕಲ್ಲುಗಳಿಗೇನು ಕೆಲಸ?
ತಪ್ಪು ಜೀವನಶೈಲಿಯೇ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳಲು ಕಾರಣ. ಮೂತ್ರಪಿಂಡದ ಕಲ್ಲುಗಳಿಗೆ ಕೆಲವು ಸಂಭಾವ್ಯ ಕಾರಣಗಳಿವೆ. ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯದೇ ಇರುವುದು, ಸಾಕಷ್ಟು ಕ್ಯಾಲ್ಸಿಯಂ ಪಡೆಯದೇ ಇರುವುದು, ಹೆಚ್ಚು ಸಕ್ಕೆ ಹಾಗೂ ಉಪ್ಪಿನ ಸೇವನೆ ಮಾಡುವುದು, ಬೀಜಗಳು, ಪಾಲಕ್ ಮತ್ತು ಚಾಕೋಲೆಟ್ ಗಳ ಅತಿಯಾದ ಸೇವೆನೆ ಅದರೊಂದಿಗೆ ದೇಹದ ಅಗತ್ಯಕ್ಕಿಂತ ಹೆಚ್ಚು ಪ್ರೊಟೀನ್ ಸೇವನೆಯಿಂದಲೂ ಮೂತ್ರಪಿಂಡದ ಕಲ್ಲುಗಳಾಗಬಹುದು. ಸಕ್ಕರೆ, ಅಧಿಕರಕ್ತದೊತ್ತಡ ಮತ್ತು ಬೊಜ್ಜು ಇರುವ ವ್ಯಕ್ತಿಗಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಂಡರೂ, ಇತ್ತೀಚಿನ ವರ್ಷಗಳಲ್ಲಿ ಆರೋಗ್ಯವಂತ ವ್ಯಕ್ತಿಗಳನ್ನೂ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಸಾಮಾನ್ಯವಾಗಿದೆ. 

click me!