ಬಿಯರ್ ಸೇವಿಸೋದು ಗೊತ್ತು, ಆದರೆ ಬಿಯರ್ ಮೆಡಿಟೇಶನ್ ಅಥವಾ ಬಿಯರ್ ಧ್ಯಾನ ಗೊತ್ತೆ?
ಒಂದು ಪಿಂಟ್ ಬಿಯರ್ ಒಳಗೆ ಹೋದ ಮೇಲೆ ಒಳಗೆ ಪರಮಾತ್ಮ ಸ್ವಲ್ಪ ಸ್ವಲ್ಪವೇ ಅವತರಿಸಲು ಶುರು ಮಾಡ್ತಾನೆ. ಆಗ ಇಂಗ್ಲಿಷ್ ಗೊತ್ತಿಲ್ಲದವರೂ ಇಂಗ್ಲಿಷಲ್ಲಿ ಮಾತಾಡಲು ಶುರು ಮಾಡ್ತಾರೆ.
ಎರಡನೇ ಪಿಂಟ್ ಬಿಯರ್ ಒಳಗೆ ಹೋದ ಮೇಲೆ ಪಕ್ಕದ ಟೇಬಲ್‌ನವರ ಜೊತೆ ಜಗಳ ಶುರುವಾಗುತ್ತದೆ. ಮೂರನೇ ಪಿಂಟ್ ಬಿಯರ್ ಸೇವಿಸಿದ ಮೇಲೆ ಬಾರಿನವರೇ ಒದ್ದು ಹೊರಹಾಕಬೇಕಾಗುತ್ತದೆ.
ಇದು ಬಿಯರ್ ಸೇವಿಸುವವರ ಸ್ಥಿತಿ ಅಂತ ಹೇಳಿದರೆ ಬೀರಬಲ್ಲರು ಬೇಜಾರ್ ಆಗಬಾರದು. ಹೆಚ್ಚಿನ ಹೀರ್‌ಬಲ್ಲರ ಕತೆ ಹೀಗೇ. ಆದರೆ ನಾಲ್ಕಾರು ಪಿಂಟ್ ಒಳಸೇವಿಸಿದರೂ ಅಲ್ಲಾಡದೆ ನಡೆದುಹೋಗುವವರೂ ಇದ್ದಾರೆ.
ಇಂಥ ಸ್ಥಿತಿಯಲ್ಲಿ, ಬಿಯರ್ ಸೇವಿಸಿದರೂ ಧ್ಯಾನ ಮಾಡಬಹುದು, ಧ್ಯಾನ ಮಾಡುತ್ತಲೂ ಬಿಯರ್ ಸೇವಿಸಬಹುದು, ಬಿಯರ್ ಮತ್ತು ಧ್ಯಾನಗಳನ್ನು ಒಟ್ಟೊಟ್ಟಿಗೇ ಸೇವಿಸಬಹುದು ಅಂತ ಯಾರಾದರೂ ಹೇಳಿದರೆ ಆತನನ್ನು ಮುಂಜಾನೆ ಆರು ಗಂಟೆಗೆ ಎರಡು ಪಿಂಟ್ ಬಿಯರ್ ಸೇವಿಸಿದವರನ್ನು ನೋಡುವಂತೆ ನೋಡಬೇಡಿ.
ಬಿಯರ್ ಮೆಡಿಟೇಶನ್ ಎಂಬುದು ನೀವೇ ಮಾಡಿ ನೋಡಬಹುದಾದ ಒಂದು ಧ್ಯಾನದ ವಿಧಾನ. ಸ್ಟೆಲ್ಲಾ ಆರ್ಟಾಯಿಸ್ ಎಂಬ ಬಿಯರ್ ಕಂಪನಿ ಇದಕ್ಕೆ ಹಾಗೊಂದು ಹೆಸರು ನೀಡಿತು. ಆದರೆ ಕೆಲವು ಬೌದ್ಧ ಸನ್ಯಾಸಿಗಳಲ್ಲಿ ಈ ವಿಧಾನ ಮೊದಲೇ ಪ್ರಚಲಿತದಲ್ಲಿ ಇತ್ತು ಎಂದು ಹೇಳಲಾಗುತ್ತದೆ. ಇದನ್ನು ನೀವು ಯಾವ ಗುರುವೂ ಇಲ್ಲದೇ ನಿಮ್ಮಷ್ಟಕ್ಕೇ ಕಲಿತು ಸಾಧಿಸಬಹುದು.
ಸಾಮಾನ್ಯವಾಗಿ ನೀವು ಬಿಯರ್ ಸೇವಿಸುವಾಗ ಏನು ಮಾಡುತ್ತೀರಿ ಅಂದರೆ ಸುತ್ತಲೂ ಗುಂಪು ಗದ್ದಲ ಸೃಷ್ಟಿಸುವ ಗೆಳೆಯರನ್ನು ಸಾಕಿಕೊಂಡಿರುತ್ತೀರಿ. ಅವರ ಗಲಾಟೆಯ ನಡುವೆ ನಿಮಗೆ ತನ್ಮಯವಾಗಿ ಏನನ್ನೂ ಯೋಚಿಸಲು ಸಾಧ್ಯ ಆಗುವುದೇ ಇಲ್ಲ. ಬಿಯರ್ ಸೆಷನ್ ಮುಗಿದ ಕೊನೆಯಲ್ಲಿ ನಿಮ್ಮಲ್ಲಿ ಉಳಿಯುವುದು ಕಹಿ ಭಾವನೆಯೊಂದೇ. ಇದರಲ್ಲಿ ಹಾಗಾಗದು.
ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ಮಾಡ್ಬಹುದು ಬಿಯರ್ ...
ಬಿಯರ್ ಧ್ಯಾನ ಮಾಡುವಲ್ಲಿ ನೀವೊಬ್ಬರೇ ಇರುವುದು ಅವಶ್ಯಕ. ಹಿತವಾದ, ಯಾರೂ ಕಿರಿಕಿರಿ ಮಾಡದ ವಾತಾವರಣವೂ ಅಗತ್ಯ. ಇದಕ್ಕೆ ಒಂದು ಪಿಂಟ್‌ಗಿಂತ ಹೆಚ್ಚಿನ ಬಿಯರ್ ಕೂಡ ಅಗತ್ಯವೂ ಇಲ್ಲ. ಬಿಯರ್‌ನ ಜೊತೆಗೆ ನೆಂಚಿಕೊಳ್ಳಲು ಏನಾದರೂ ಬೇಕು ಎಂದಿಲ್ಲ.
ಮೊದಲು ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ನಂತರ ಬಿಯರ್ ಬಾಟಲಿಯ ಮುಚ್ಚಳವನ್ನು ನಿಧಾನವಾಗಿ ಜಾಗ್ರತೆಯಿಂದ ತೆರೆಯಿರಿ. ಹೇಗೆ ತೆರೆಯಬೇಕು ಎಂದರೆ, ಮುಚ್ಚಳ ತೆರೆದಾಗ ಬಾಟಲಿಯಿಂದ ಹೊಮ್ಮುವ ನಸುವಾದ ಪರಿಮಳ, ನಿಮ್ಮ ಮೂಗನ್ನು ಪ್ರವೇಶಿಸಬೇಕು. ತುಂಬ ಮಂದಿಯ ನಡುವೆ ಇದ್ದಾಗ, ಬೇರೆ ಬೇರೆ ಲಿಕ್ಕರ್‌ಗಳ ನಡುವೆ ನಿ್ಮಮ ಮೂಗನ್ನು ಪ್ರವೇಶಿಸಿರದ ಬಿಯರ್‌ನ ಪರಿಮಳ ಈಗ ನಿಶ್ಚಿತವಾಗಿಯೂ ನಿಮ್ಮ ಮೂಗನ್ನು ಪ್ರವೇಶಿಸಿ ನಿಮ್ಮನ್ನು ಉಲ್ಲಾಸಗೊಳಿಸುತ್ತದೆ.
ನಂತರ ಅದನ್ನು ಗ್ಲಾಸಿಗೆ ಸುರುವಿ. ಬಳಿಕ ಅದನ್ನು ಎತ್ತಿಕೊಂಡು ಒಂದೇ ಗುಟುಕು ಸೇವಿಸಿ. ಅದು ಮೊದಲು ನಿಮ್ಮ ತುಟಿಯನ್ನು, ನಂತರ ನಾಲಿಗೆಯನ್ನು ಸ್ಪರ್ಶಿಸಿ ಮುಂದುವರಿಯುತ್ತದೆ. ನಂತರ ಅನ್ನನಾಳದಲ್ಲಿ ಸಾಗುತ್ತದೆ. ಈ ಎಲ್ಲಾ ಸ್ಪರ್ಶಗಳನ್ನೂ ಕಣ್ಣು ಮುಚ್ಚಿಕೊಂಡು ಆನಂದವಾಗಿ ಅನುಭವಿಸಿ. ಹೇಗೆ ನೀವು ಅದನ್ನು ಪರಿಭಾವಿಸಬೇಕು ಎಂದರೆ, ನೀವು ಹಿಂದೆ ಎಂದೂ ಇಂಥ ಬಿಯರ್ ಸೇವನೆಯ ಆನಂದದ ಅನುಭವವನ್ನು ಪಡೆದೇ ಇಲ್ಲವೋ ಎಂಬಂತೆ ಇರಬೇಕು.
ಬಿಯರ್ ಧ್ಯಾನವೆಂದರೆ ಮತ್ತೇನಲ್ಲ, ಬಿಯರ್ ಸೇವಿಸುವ ಪ್ರತಿಯೊಂದು ಕ್ಷಣವನ್ನೂ ಅನುಭವಿಸುವುದು, ಅದರಲ್ಲಿ ತನ್ಮಯನಾಗುವುದು. ಧ್ಯಾನದ ಸಂದರ್ಭದಲ್ಲೂ ಇದೇ ಆಗುತ್ತದೆ, ನೀವು ಉಸಿರು ಎಳೆದುಕೊಳ್ಳುವ ಮತ್ತು ಹೊರಬಿಡುವ ಪ್ರತಿಯೊಂದು ಕ್ಷಣವನ್ನೂ ನೀವು ಸವಿಯುತ್ತಾ ಇರುತ್ತೀರಿ. ಅಲ್ಲಿ ಆ ಕ್ಷಣವಲ್ಲದೆ ಇನ್ನೇನೂ ಇರುವುದಿಲ್ಲ. ಲೋಕದ ನೂರೆಂಟು ಚಿಂತೆಗಳೂ ಇರುವುದಿಲ್ಲ. ನಾವು ಆ ಕ್ಷಣದಲ್ಲಿ ನಾವಾಗಿ ಮಾತ್ರ ಇರುತ್ತೇವೆ. ಲೋಕದ ಎಲ್ಲ ಹಂಗುಗಳನ್ನು ತೊರೆದು, ಬಿಯರ್ ಒಳಗಿಳಿಯುವ ಒಂದು ದೇಹವಾಗಿ ಮಾತ್ರ ಇರುತ್ತೇವೆ. ಹತ್ತೆಂಟು ಕಡೆ ಹರಿದಾಡುವ ನಿಮ್ಮ ಮನಸ್ಸು ಈ ಬಿಯರ್ ಸೇವನೆಯಲ್ಲಿ ತಲ್ಲೀನವಾಗಿರುತ್ತದೆ.
ಧ್ಯಾನವೆಂದರೆ ಬೇರೇನೂ ಅಲ್ಲ, ಆ ಕ್ಷಣದಲ್ಲಿ ನಾವಾಗಿರುವುದು. ಅದೇ ದೊಡ್ಡ ಸಾಧನೆ. ಅದಕ್ಕೂ ಮೀರಿದ್ದು ಬೇರೇನೂ ಇಲ್ಲ.