
ಭಾರತದಲ್ಲಿ ಕಳೆದ ಮೂರು ವರ್ಷಗಳಿಂದ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ವಿಪರೀತವಾಗಿದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು, ವೃದ್ಧರವರೆಗೆ ಎಲ್ಲ ವಯಸ್ಸಿನವರಿಗೂ ಈ ಹೃದಯಾಘಾತ ಕಾಣಿಸಿಕೊಳ್ತಿದೆ. ಕಚೇರಿ ಕೆಲಸ ಮಾಡುವಾಗ, ಜಿಮ್ ಮಾಡ್ತಿರುವಾಗ, ಡಾನ್ಸ್ ಮಾಡ್ತಿರುವಾಗ, ಊಟ ಮಾಡ್ತಿರುವ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ನಾವು ಕೇಳ್ತಿರುತ್ತೇವೆ. ಇಂದು ಆರಾಮವಾಗಿ ಓಡಾಡಿಕೊಂಡಿದ್ದ ವ್ಯಕ್ತಿ ನಾಳೆ ಇರ್ತಾನೆ ಎನ್ನುವ ಗ್ಯಾರಂಟಿ ಇಲ್ಲ. ಹೃದಯದ ಬಗ್ಗೆ ಈಗ ಭಯ ಶುರುವಾಗಿದೆ.
ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ವಿಗೆ ಕೆಟ್ಟ ಜೀವನ ಶೈಲಿ, ನಿದ್ರೆ ಕೊರತೆ, ಕಳಪೆ ಆಹಾರ ಹಾಗೂ ಕುಟುಂಬದ ಇತಿಹಾಸ ಕಾರಣ ಎಂದು ವೈದ್ಯರು ಹೇಳ್ತಾರೆ. ಯಾವುದೇ ವ್ಯಕ್ತಿಗೆ ಹೃದಯಾಘಾತ ಆಗುವ ಮೊದಲು ಕೆಲವೊಂದು ಸಂಕೇತ ಸಿಗುತ್ತದೆ. ಒಂದು ತಿಂಗಳ ಮೊದಲೇ ವ್ಯಕ್ತಿಗೆ ದೇಹ ಸಿಗ್ನಲ್ ನೀಡಿರುತ್ತದೆ. ಬಹುತೇಕರು ಇದನ್ನು ನಿರ್ಲಕ್ಷ್ಯ ಮಾಡುವ ಕಾರಣ ಜೀವ ಬಿಡಬೇಕಾಗುತ್ತದೆ.
ಈ ಹಾಲು ಕುಡಿದ್ರೆ ಕ್ಯಾನ್ಸರ್ ದೂರ, ಹೆಚ್ಚುತ್ತೆ ಇಮ್ಯೂನ್ ಸಿಸ್ಟಮ್, ಆರೋಗ್ಯಕ್ಕೆ ಜೈ ಎನ್ನಿ!
ಈಗ ವಿಶ್ವ ಆರೋಗ್ಯ ಸಂಸ್ಥೆ (WHO ) ಹೃದಯಾಘಾತ ಮತ್ತು ಪಾರ್ಶ್ವವಾಯ ಬರುವ ಮೊದಲು ಯಾವೆಲ್ಲ ರೋಗ ಲಕ್ಷಣ ಕಾಣಿಸುತ್ತದೆ ಎನ್ನುವ ಬಗ್ಗೆ ಟ್ವೀಟ್ ಮಾಡಿದೆ.
ಹೃದಯಾಘಾತದ ಲಕ್ಷಣ : ಹೃದಯದಲ್ಲಿ ರಕ್ತದ ಹರಿವು ಕಡಿಮೆಯಾದಾಗ ಅಥವಾ ರಕ್ತ ಹೆಪ್ಪುಗಟ್ಟುವಿಕೆ ಪ್ರಾರಂಭವಾದಾಗ ಒಬ್ಬ ವ್ಯಕ್ತಿಯು ಹೃದಯಾಘಾತಕ್ಕೆ ಒಳಗಾಗುತ್ತಾನೆ. ರಕ್ತವು ಹೃದಯಕ್ಕೆ ಸರಿಯಾಗಿ ತಲುಪದಿದ್ದರೆ, ಹೃದಯಾಘಾತ ಸಂಭವಿಸುತ್ತದೆ.ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಪ್ರಕಾರ, ಹೃದಯಾಘಾತಕ್ಕೆ ಒಳಗಾಗುವ ಮೊದಲು, ಎದೆಯ ಮಧ್ಯ ಭಾಗದಲ್ಲಿ ನೋವು ಅಥವಾ ಅಸ್ವಸ್ಥತೆ ಕಾಡುತ್ತದೆ. ಕುತ್ತಿಗೆ ಮತ್ತು ಬೆನ್ನು ನೋವು, ಬೆನ್ನು ಮತ್ತು ತೋಳುಗಳಲ್ಲಿ ವಿಚಿತ್ರವಾದ ನೋವು ಮತ್ತು ಬಿಗಿತ, ನೋವಿನ ಜೊತೆಗೆ ಆಯಾಸ, ತಲೆತಿರುಗುವಿಕೆ, ಹೆಚ್ಚಿದ ಹೃದಯ ಬಡಿತ, ಸಣ್ಣ ತಲೆ ನೋವು ಹಾಗೂ ಬೆವರಿನ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪುರುಷರು ಮತ್ತು ಮಹಿಳೆಯರಲ್ಲಿ ರೋಗ ಲಕ್ಷಣ ಭಿನ್ನವಾಗಿರುತ್ತವೆ.
ಶುರುವಾಯ್ತು ಕೆಎಫ್‌ಡಿ ಅಬ್ಬರ, ಇರಲಿ ಎಚ್ಚರ..!
ಪಾರ್ಶ್ವವಾಯು ಲಕ್ಷಣ : ಮುಖ, ತೋಳು, ಕಾಲು ಅಥವಾ ದೇಹದ ಒಂದು ಬದಿಯಲ್ಲಿ ಹಠಾತ್ ದೌರ್ಬಲ್ಯ ಅಥವಾ ಮರಗಟ್ಟುವಿಕೆ. ಗೊಂದಲ. ಮಾತನಾಡಲು ಸಮಸ್ಯೆ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದು, ದೃಷ್ಟಿ ಸಮಸ್ಯೆ. ಒಂದು ಅಥವಾ ಎರಡೂ ಕಣ್ಣಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ನಡೆದಾಡಲು ಸಮಸ್ಯೆ. ದೇಹವನ್ನು ಬ್ಯಾಲೆನ್ಸ್ ಮಾಡಲು ಕಠಿಣತೆ. ವಿಪರೀತ ತಲೆ ನೋವು, ಮೂರ್ಛೆ ಮತ್ತು ಪ್ರಜ್ಞಾಹೀನತೆ ಲಕ್ಷಣಗಳು ಕಾಣಿಸುತ್ತವೆ.
ವರದಿ ಪ್ರಕಾರ, ಕಳೆದ ವರ್ಷ ಹಠಾತ್ ಸಾವಿನ ಅಂಕಿಅಂಶಗಳನ್ನು ತೆಗೆದುಕೊಂಡರೆ, ಅವುಗಳಲ್ಲಿ ಶೇಕಡಾ 14 ರಷ್ಟು ಹೃದಯಾಘಾತದಿಂದ ಸಂಭವಿಸಿದೆ. ಆದರೆ 2022 ರಲ್ಲಿ 56 ಸಾವಿರ ಜನರು ಹಠಾತ್ ಸಾವನ್ನಪ್ಪಿದ್ದಾರೆ. ಅದರಲ್ಲಿ ಶೇಕಡಾ 57 ರಷ್ಟು ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಅಂಕಿಅಂಶವು ಕ್ಯಾನ್ಸರ್‌ನಿಂದ ಸಾವನ್ನಪ್ಪಿದವರಿಗಿಂತ ಹೆಚ್ಚು. 2022 ರಲ್ಲಿ 32 ಸಾವಿರದ 140 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದು 2021 ವರ್ಷಕ್ಕಿಂತ ಹೆಚ್ಚು. ಭಾರತದಲ್ಲಿ ಅತಿ ಹೆಚ್ಚು ಜನರು ಹೃದಯಾಘಾತದಿಂದ ಸಾಯುವ ರಾಜ್ಯ ಮಹಾರಾಷ್ಟ್ರ. ಎರಡನೇ ಸ್ಥಾನದಲ್ಲಿ ಕೇರಳ ಇದೆ.
ಪುರುಷರನ್ನು ಹೆಚ್ಚು ಕಾಡುತ್ತೆ ಹೃದಯಾಘಾತ : ವರದಿ ಪ್ರಕಾರ, ಹೃದಯಾಘಾತದಿಂದ ಸಾವನ್ನಪ್ಪಿದ ಪುರುಷರ ಸಂಖ್ಯೆ, ಮಹಿಳೆಯರಿಗಿಂತ ಹೆಚ್ಚಿದೆ. ಪುರುಷರ ಸಂಖ್ಯೆ 28 ಸಾವಿರ ಇದ್ದರೆ ಮಹಿಳೆಯರ ಸಂಖ್ಯೆ ಸುಮಾರು 22 ಸಾವಿರ ಇದೆ. ಆರೋಗ್ಯಕರ ಜೀವನ ಶೈಲಿ, ಸರಿಯಾದ ನಿದ್ರೆ, ದೈಹಿಕ ವ್ಯಾಯಾಮ ಮತ್ತು ಉತ್ತಮ ಆಹಾರ ಹೃದಯವನ್ನು ಆರೋಗ್ಯವಾಗಿಡುತ್ತದೆ. ಆದ್ರೆ ಅತಿಯಾದ ವ್ಯಾಯಾಮ ಕೂಡ ಆರೋಗ್ಯಕ್ಕೆ ಹಾನಿಕರ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.