
ಮಳೆಗಾಲ ಎಷ್ಟು ಆಹ್ಲಾದಕರವೋ ಅಷ್ಟೇ ಅಪಾಯಕಾರಿ. ಮಳೆಗಾಲದಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳು ಸೇರಿವೆ. ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದೆ ಹೋದ್ರೆ ಇದು ಮಾರಣಾಂತಿಕವಾಗಬಹುದು. ಮಳೆಗಾಲದಲ್ಲಿ ಕೊಳಕು ನೀರು ಸಂಗ್ರಹವಾಗುವುದರಿಂದ ಲಕ್ಷಾಂತರ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸುತ್ತವೆ. ಇದು ಕೆಲವೇ ದಿನಗಳಲ್ಲಿ ಡೆಂಗ್ಯೂ, ಮಲೇರಿಯಾ, ಚಿಕೂನ್‌ಗುನ್ಯಾ, ಕಾಮಾಲೆ ಸೇರಿದಂತೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಚಿಕ್ಕ ಮಕ್ಕಳು ಮತ್ತು ವೃದ್ಧರು ಈ ರೋಗಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ. ಏಕೆಂದರೆ ಅವರ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಮಳೆಗಾಲದಲ್ಲಿ ಕಾಡುವ ಅತ್ಯಂತ ಸಾಮಾನ್ಯವಾದ ರೋಗವೆಂದರೆ ಡೆಂಗ್ಯೂ. ಇದು ಪ್ರತಿವರ್ಷ ಸಾವಿರಾರು ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಇದು ಅಪಾಯಕಾರಿ. ಏಕೆಂದರೆ ಡೆಂಗ್ಯೂನ ಆರಂಭಿಕ ಲಕ್ಷಣಗಳು ಬೇಗ ಪತ್ತೆಯಾಗುವುದಿಲ್ಲ. ಸೊಳ್ಳೆ ಕಚ್ಚಿದ ನಾಲ್ಕು ದಿನಗಳ ನಂತರ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಬಹುತೇಕ ಲಕ್ಷಣಗಳು ಸಾಮಾನ್ಯ ಜ್ವರದಂತೆ ಇರುವ ಕಾರಣ ಪತ್ತೆ ಹಚ್ಚುವುದು ಕಷ್ಟ. ನಿಮ್ಮ ಮನೆಯಲ್ಲಿಯೂ ಮಕ್ಕಳಿದ್ದರೆ, ಡೆಂಗ್ಯೂನ ಈ ಲಕ್ಷಣಗಳನ್ನು ಗುರುತಿಸಿ ಹಾಗೆ ತಕ್ಷಣ ಚಿಕಿತ್ಸೆ ನೀಡಿ.
ಡೆಂಗ್ಯೂ ಲಕ್ಷಣಗಳು :
ಜ್ವರ – ಕೆಮ್ಮು : ಮಗುವಿನ ಮೂಗು ಕಟ್ಟಿದ್ದು, ಕೆಮ್ಮಿನ ಜೊತೆಗೆ ತೀವ್ರ ಜ್ವರ ಕಾಣಿಸಿಕೊಂಡ್ರೆ ಅದು ಡೆಂಗ್ಯೂನ ಲಕ್ಷಣವೂ ಆಗಿರಬಹುದು. ಈ ರೋಗ ಲಕ್ಷಣಗಳು ಜ್ವರಕ್ಕೆ ಹೋಲುತ್ತವೆಯಾದರೂ 24 ಗಂಟೆಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ವರ್ತನೆಯಲ್ಲಿ ಬದಲಾವಣೆ : ವಯಸ್ಕರು ತಮಗೆ ಏನಾಗ್ತಿದೆ ಎಂಬುದನ್ನು ನಿಖರವಾಗಿ ಕೇಳ್ತಾರೆ. ಆದ್ರೆ ಚಿಕ್ಕ ಮಕ್ಕಳಿಗೆ ಅದನ್ನು ಹೇಳಲು ಬರುವುದಿಲ್ಲ. ಹಾಗಾಗಿ ಅವರ ವರ್ತನೆಯಲ್ಲಿ ನೀವು ಬದಲಾವಣೆಯನ್ನು ಗುರುತಿಸಿ, ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಮಕ್ಕಳು ಡೆಂಗ್ಯೂವಿನಿಂದ ಬಳಲುತ್ತಿದ್ದರೆ ಕೆರಳುತ್ತಾರೆ. ಕೋಪಗೊಳ್ತಾರೆ. ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುವುದಲ್ಲದೆ ಊಟವನ್ನು ತ್ಯಜಿಸುತ್ತಾರೆ.
ಜೀರ್ಣಾಂಗದಲ್ಲಿ ಸಮಸ್ಯೆ : ಮಕ್ಕಳು ಹೊಟ್ಟೆ ನೋವು ಎಂದಾಗ ಪಾಲಕರು ಅದನ್ನು ನಿರ್ಲಕ್ಷ್ಯಿಸುತ್ತಾರೆ. ವಾಂತಿ, ಹೊಟ್ಟೆ ನೋವು, ವಾಕರಿಗೆ ಗ್ಯಾಸ್ಟ್ರಿಕ್ ಲಕ್ಷಣವೆಂದುಕೊಳ್ತಾರೆ. ಆದ್ರೆ ಇದು ಡೆಂಗ್ಯೂ ಲಕ್ಷಣವೂ ಆಗಿರುವ ಸಾಧ್ಯತೆಯಿದೆ. ಡೆಂಗ್ಯೂ ಕಾಣಿಸಿಕೊಂಡಾಗ ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ.
ದೇಹದಲ್ಲಿ ವಿಪರೀತ ನೋವು : ಡೆಂಗ್ಯೂ ಬಂದ ಮಗು, ಕೀಲುಗಳು, ಬೆನ್ನು ಮತ್ತು ತಲೆಯಲ್ಲಿ ತೀವ್ರವಾದ ನೋವನ್ನು ಅನುಭವಿಸುತ್ತಾರೆ. ಮಗುವಿಗೆ ಎಲ್ಲಿ ನೋವು ಬರ್ತಿದೆ ಎಂಬುದನ್ನು ಅವರ ಜೊತೆ ಮಾತನಾಡಿ ತಿಳಿದುಕೊಳ್ಳಿ. ನಂತ್ರ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ.
ಚರ್ಮದ ದದ್ದು : ಮಕ್ಕಳಲ್ಲಿ ಡೆಂಗ್ಯೂನ ಸಾಮಾನ್ಯ ಲಕ್ಷಣವೆಂದರೆ ಚರ್ಮದ ದದ್ದು ಅಥವಾ ಕೆಂಪು ದದ್ದು. ಇದು ದಡಾರದಂತಹ ತೇಪೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಕ್ಕಳ ಮೈ ಮೇಲೆ ದದ್ದು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡ್ಬೇಡಿ. ಚರ್ಮದ ಮೇಲೆ ನಿರಂತರ ತುರಿಕೆ ಕಾಣಿಸಿಕೊಳ್ತಿದ್ದರೆ ಅದು ಕೂಡ ಡೆಂಗ್ಯೂನ ಮತ್ತೊಂದು ಲಕ್ಷಣವಾಗಿದೆ.
ರಕ್ತಸ್ರಾವ : ಡೆಂಗ್ಯೂನಿಂದ ಪ್ಲೇಟ್ಲೆಟ್ ಗಳ ಸಂಖ್ಯೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಮಕ್ಕಳ ಒಸಡುಗಳು ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ತಕ್ಷಣದ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿರುತ್ತದೆ. ಪಾಲಕರ ನಿರ್ಲಕ್ಷ್ಯ ಮಾರಣಾಂತಿಕವಾಗ್ಬಹುದು. ಕೆಲವು ಸಂದರ್ಭಗಳಲ್ಲಿ ಇದು ಹೆಮರಾಜಿಕ್ ಜ್ವರದ ಲಕ್ಷಣವಾಗಿರಬಹುದು. ಈ ಎಲ್ಲ ಲಕ್ಷಣಗಳು ಮಗುವಿಗೆ ಕಾಣಿಸಿಕೊಳ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದು ಮಕ್ಕಳಿಗೆ ಬರಬಾರದೆಂದ್ರೆ ಮನೆ ಹಾಗೂ ಮನೆ ಸುತ್ತಮುತ್ತಲ ಸ್ವಚ್ಛತೆಗೆ ಗಮನ ನೀಡಿ. ಸೊಳ್ಳೆಗಳು ಬರದಂತೆ ನೋಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.