ಅಪಘಾತ ಸಂಭವಿಸಿದ 24 ಗಂಟೆಗಳೊಳಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಯೋಜನೆಯು ತಕ್ಷಣವೇ ಸಂತ್ರಸ್ತರ 7 ದಿನಗಳ ಚಿಕಿತ್ಸೆಯ ವೆಚ್ಚವನ್ನು ಅಥವಾ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಒದಗಿಸುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
ನವದೆಹಲಿ (ಜ.7): ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜನವರಿ 7 ರಂದು ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಹೊಸ ಯೋಜನೆಯನ್ನು ಘೋಷಿಸಿದರು. ಅಪಘಾತ ಸಂಭವಿಸಿದ 24 ಗಂಟೆಗಳ ಒಳಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಯೋಜನೆಯು ತಕ್ಷಣವೇ ಸಂತ್ರಸ್ತರ 7 ದಿನಗಳ ಚಿಕಿತ್ಸೆಯ ವೆಚ್ಚವನ್ನು ಅಥವಾ ಗರಿಷ್ಠ 1.5 ಲಕ್ಷ ರೂಪಾಯಿ ವೆಚ್ಚವನ್ನು ಭರಿಸಲಿದೆ ಎಂದು ತಿಳಿಸಿದ್ದಾರೆ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೃತಪಟ್ಟರೆ ಮೃತ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದಿದ್ದಾರೆ.“ನಾವು ಈ ನಗದು ರಹಿತ ಯೋಜನೆಯನ್ನು ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ನಡೆಸಿದ್ದೇವೆ. ನಾವು ಯೋಜನೆಯಲ್ಲಿ ಕೆಲವು ದೌರ್ಬಲ್ಯಗಳನ್ನು ಗಮನಿಸಿದ್ದೇವೆ. ನಾವು ಅವುಗಳನ್ನು ಸುಧಾರಿಸುತ್ತಿದ್ದೇವೆ ಮತ್ತು ಇದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ' ಎಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಲವು ರಾಜ್ಯಗಳ ಸಾರಿಗೆ ಸಚಿವರನ್ನು ಭೇಟಿ ಮಾಡಿದ ನಂತರ ಗಡ್ಕರಿ ಮಾತನಾಡುತ್ತಿದ್ದರು. “ನಮ್ಮ ಪ್ರಮುಖ ಆದ್ಯತೆ ರಸ್ತೆ ಸುರಕ್ಷತೆಯಾಗಿತ್ತು. 2024 ರಲ್ಲಿ 1.8 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ 30,000 ಜನರು ಹೆಲ್ಮೆಟ್ ಧರಿಸದೇ ಸಾವನ್ನಪ್ಪಿದ್ದಾರೆ. ಮತ್ತೊಂದು ಗಂಭೀರ ವಿಷಯವೆಂದರೆ ಮಾರಣಾಂತಿಕ ಅಪಘಾತಗಳಿಗೆ ಬಲಿಯಾದವರಲ್ಲಿ 66% 18-34 ವರ್ಷ ವಯಸ್ಸಿನವರು. ನಮ್ಮ ಶಾಲೆಗಳು ಮತ್ತು ಕಾಲೇಜುಗಳಲ್ಲಿ ದೋಷಪೂರಿತ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಂದ 10,000 ಮಕ್ಕಳು ಸಾವನ್ನಪ್ಪಿದ್ದಾರೆ' ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.
“ಚಾಲನಾ ಪರವಾನಗಿ ಇಲ್ಲದವರಿಂದ ಉಂಟಾದ ಅಪಘಾತಗಳು ಸುಮಾರು 3,000 ಸಾವುಗಳಿಗೆ ಕಾರಣವಾಗಿವೆ. ನಮ್ಮ ಸಭೆಯ ಪ್ರಮುಖ ಅಜೆಂಡಾಗಳಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರಗಳು ಕೂಡ ಆಗಿತ್ತು. ನಮ್ಮ ದೇಶದಲ್ಲಿ 22 ಲಕ್ಷ ಚಾಲಕರ ಕೊರತೆ ಇದೆ. ಅದಕ್ಕಾಗಿ ಹೊಸ ನೀತಿಯನ್ನೂ ರೂಪಿಸಿದ್ದೇವೆ ಎಂದು ಅವರು ಹೇಳಿದರು.
ಗಡ್ಕರಿ ಅವರು ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆಯೂ ಮಾತನಾಡಿದರು. “ಸ್ಕ್ರಾಪಿಂಗ್‌ನಿಂದಾಗಿ ನಮ್ಮ ಆಟೋಮೊಬೈಲ್ ಕ್ಷೇತ್ರವು ಆಳವಾಗಿ ಬೆಳೆಯುತ್ತದೆ. ಏಕೆಂದರೆ ಅಲ್ಯೂಮಿನಿಯಂ, ತಾಮ್ರ, ಉಕ್ಕು ಮತ್ತು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಲಾಗುತ್ತದೆ, ”ಎಂದು ಅವರು ಹೇಳಿದರು.
“ಮಾರುತಿ ಸುಜುಕಿಯ ಸ್ಕ್ರ್ಯಾಪಿಂಗ್ ಕೇಂದ್ರವು ಈ ಕೆಲವು ಭಾಗಗಳನ್ನು ಜಪಾನ್‌ಗೆ ರಫ್ತು ಮಾಡುತ್ತಿದೆ. ಬಿಟುಮೆನ್ ಗೆ ಟೈರ್ ಪೌಡರ್ ಹಾಕಲಾಗುತ್ತಿದೆ. ಹಾಗಾಗಿ ಇದು ವೃತ್ತಾಕಾರದ ಆರ್ಥಿಕತೆಯಾಗಲಿದೆ. ಸ್ಕ್ರಾಪಿಂಗ್ ನೀತಿಯು ದೇಶದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು 18,000 ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಜಿಎಸ್‌ಟಿಯನ್ನು ಗಳಿಸಲಿವೆ ಎಂದು ಗಡ್ಕರಿ ಹೇಳಿದರು.
ಭಾರತದ ಆಟೋಮೊಬೈಲ್ ಉದ್ಯಮವು ಸುಮಾರು ನಾಲ್ಕು ತಿಂಗಳ ಹಿಂದೆ ವಿಶ್ವದ ಮೂರನೇ ಅತಿ ದೊಡ್ಡ ಉದ್ಯಮ ಎನಿಸಿಕೊಂಡಿದೆ. ಜಪಾನ್‌ಅನ್ನು ಈ ವಿಚಾರದಲ್ಲಿ ಹಿಂದೆ ಹಾಕಿದೆ.2014ರಲ್ಲಿ ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ನಮ್ಮ ಆಟೋಮೊಬೈಲ್ ಉದ್ಯಮದ ಗಾತ್ರ 7 ಲಕ್ಷ ಕೋಟಿ ರೂ. ಇಂದು ಅದು 22 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು.